Saturday, December 26, 2009

ಅವಳು ಸಂತೋಷ ಪಡುವಳೇ?

ಬುದ್ಧಿವಂತ ಹುಡುಗ. ಒಳ್ಳೆಯ ಕೆಲಸ; ಅಪ್ಪ-ಅಮ್ಮನಿಂದ ದೂರದೂರಿನಲ್ಲಿ ಕೆಲಸ. ಆದರೆ, ಕನಿಷ್ಠ ತಿಂಗಳಿಗೊಮ್ಮೆ ಮನೆಗೆ ಹೋಗಿ ತಂದೆ-ತಾಯಿಯೊಡನೆ ಸಮಯ ಕಳೆದು ಮುಂಬರುವ ತಿಂಗಳ ಮನೆಯ ಪ್ರಯಾಣವನ್ನು ಕಾತರದಿಂದ ಕಾಯುತ್ತಿದ್ದ. ಕೆಲಸಕ್ಕೆ ಸೇರಿದಂದಿನಿಂದಲೂ ಪ್ರತಿ ದಿನ ಕತ್ತೆ ದುಡಿದಂತೆ ದುಡಿಯುತ್ತಿದ್ದ - ಜಗತ್ತಿನಲ್ಲಿ ಬದುಕಲು ಅಗತ್ಯವಾದ ಕಪಟ ಅವನು ಅರಿಯನು. ಜೀವನ ಒಂದು ಚಕ್ರದಂತೆ ಏನು ಬದಲಾವಣೆ ಇಲ್ಲದೆ ಹಾಗೆಯೇ ಸಾಗಿತ್ತು.

ಕೆಲಸಕ್ಕೆ ಸೇರಿ ೧ ವರ್ಷವಾಗಿತ್ತು - ಕೆಲಸ ತಕ್ಕ ಮಟ್ಟಿಗೆ ನಡೆಯುತ್ತಿತ್ತು. ಒಂದು ಒಳ್ಳೆಯ ಹುಡುಗಿಯನ್ನು ನೋಡಿದ್ದಾನೆ - ಅಪ್ಪ-ಅಮ್ಮಂಗೆ ಇಷ್ಟಾ ಆಗ್ತಾಳೆ ಅಂತ ಅವನಿಗೆ ಗೊತ್ತು - ಆದರೂ ಒಂದು ತೆರನೆಯ ಭಯ. ಭಯಕ್ಕೆ ಆಧಾರವಿಲ್ಲ - ಆದರೂ ಭಯ. ಸರಿಯಾದ ಸಮಯ ಬರಲೆಂದು ಕಾಯುತ್ತಿದ್ದ ಈ ವಿಷಯವನ್ನು ಅವರಿಗೆ ತಿಳಿಸುವುದಕ್ಕೆ! ಅಪ್ಪ-ಅಮ್ಮ ಖುಷಿಯಾಗಿರಬೇಕು ಅನ್ನುವ ಹರ-ಸಾಹಸ ಮಾಡುತ್ತಿದ್ದ ಹುಡುಗ - ವಿಶಿಷ್ಟ ಸಾಮಾನುಗಳ ಸುರಿಮಳೆಯೇ ಮಾಡುತ್ತಿದ್ದ. ಅಪ್ಪ-ಅಮ್ಮನ್ನ ದೇಶ-ವಿದೇಶ ತಿರುಗಾಡಿಸಿದ. ಆದರೆ ಅವನು ಹಲವಾರು ಬಾರಿ ಕೆಲಸದ ಮೇಲೆ ದೂರ ಪ್ರದೇಶಗಳಿಗೆ ಹೋಗುತ್ತಿದ್ದ - ಬಹಳ ಬಾರಿ ದೂರವಾಣಿಯ ಮೂಲಕ ಸಹ ಮಾತನಾಡಲಾಗುತ್ತಿರಲಿಲ್ಲ ಅವನಿಗೆ. ಬಹಳ ದಿನಗಳ ನಂತರ ಒಂದು ದಿನ ಅವನು ಮನೆಗೆ ಬಂದಿದ್ದ. ಮನೆಯಿಂದ ಕೆಲಸ ಮಾಡುವ ಸೌಲಭ್ಯ ಇದ್ದ ಕಾರಣ ಕೆಲಸವನ್ನು ಜೋತೆಗೆತ್ತಿಕೊಂಡು ಬಂದಿದ್ದ. ರಜೆಯ ದಿನವೂ ಕೆಲಸ ಮಾಡುತ್ತ ಅವನಿಗೆ ಅಪ್ಪ-ಅಮ್ಮನೊಡನೆ ಸರಿಯಾಗಿ ಮಾತನಾಡಲು ಸಹ ಆಗಲಿಲ್ಲ; ಇನ್ನೇನು ಇನ್ನೊಂದು ಘಂಟೆಯಲ್ಲಿ ತಿರುಗಿ ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಅವನೊಡನೆ ಮಾತನಾಡಲು ಬಂದಳು... ಮಾತು-ಕಥೆ ನಡೆದದ್ದು ಹೀಗೆ...

ಅಮ್ಮ,"ಮಗಾ... ಯಾಕೋ ನಿಂಜೊತೆ ಇ ಸಲ ಮಾತಾಡ್ಲಿಕ್ಕೆ ಆಗ್ಲೇ ಇಲ್ಲ ನೋಡು... ಅಷ್ಟು ಕೆಲ್ಸಾನಾ? "

ಮಗ,"ಹೂನಮ್ಮ... ಬಹಳ ಕೆಲ್ಸಾ. ಮುಗಿಯೋದೇ ಇಲ್ಲ ಅನ್ನೋ ಅಷ್ಟು ಇದೆ."

ಅಮ್ಮ, ಕಸಿವಿಸಿಯಾಗಿ ನುಡಿದಳು,"ಈ ಕೆಲಸ ಮುಗಿಸಿಕೊಂಡೆ ಬರಬಹುದಿತ್ತಲ್ಲ? ಮನೆಗೆ ಬಂದಿದ್ದಿಯ - ಸ್ವಲ್ಪ ಸುಧಾರಿಸಿಕೊಳ್ಳಲೂ ಆಗಲಿಲ್ಲ ನಿನಗೆ ಈ ಬಾರಿ. ಹೋದ ಬಾರಿಯೂ ಹೀಗೆ ಹೇಳಿದ್ದೆ ನೀನು..."

ಮಗ,"ಕಂಪನಿಯವರು ಕೊಟ್ಟ ಕಾಸಿಗೆ ತಕ್ಕಂತೆ ದುಡಿಸಿಕೊಳ್ಳುತ್ತಾರೆ..."

ಅಮ್ಮ,"ದುಡಿಯಬೇಕು ನಿಜ... ಆದರೆ, ನಿನ್ನ ಅನ್ಯ ಮುಖ್ಯ ಕೆಲಸಗಳಿಗೇ ನಿನಗೆ ಸಮಯ ಸಿಗದಂತಾದರೆ ಅದೆಂತಹ ಕೆಲಸ ಮಗಾ?"

ಮಗ,"ನೀನು ಹೇಳುತ್ತಿರುವುದು ಸರಿಯಮ್ಮಾ. ಆದರೆ, ನಾವು ನಮ್ಮ ಇಂದಿನ ಬದುಕುವ ಶೈಲಿಗೆ ಅನುಗುಣವಾಗಿ ನಮ್ಮ ಖರ್ಚು-ವೆಚ್ಚಗಳು ಹೆಚ್ಚಿವೆ. ತಕ್ಕಂತೆ, ಅದನ್ನು ನಿಭಾಯಿಸಲು ಹೆಚ್ಚು ಕೆಲಸ ಮಾಡಬೇಕು."

ಅಮ್ಮ,"ನೆಮ್ಮದಿ ಇಲ್ಲದೆ, ದೇಹವನ್ನು ಅತಿವ್ರವಾಗಿ ದಂಡಿಸಿಕೊಳ್ಳುವುದರಿಂದ ನಿನ್ನ ಆರೋಗ್ಯ ಹದಗೆಟ್ಟಿ ಹೋಗುವುದು... ಯಾರ ಸಂತೋಷಕ್ಕಾಗಿ ಇದು?"

ಮಗ,"ನಿನ್ನ ಹಾಗು ಅಪ್ಪನಿಗಾಗಿ, ಅಮ್ಮ. ನೀನು-ಅಪ್ಪ ಇನ್ನಷ್ಟು ಜಗತ್ತನ್ನು ಸುತ್ತಿ ಆನಂದಿಸಬೇಕು; ಇರುವ ಹೊಸ ತಂತ್ರಜ್ಞಾನವನ್ನು ಸವಿಯಬೇಕು ಅನ್ನೋದು ನನ್ನ ಬಯಕೆ... ಯಾಕೆ, ನಿನಗೆ ಇದು ಸರಿ ಅನ್ಸಲ್ವಾ ಅಮ್ಮ?"

ಅಮ್ಮ,"ನನ್ನ ಕಂದಾ, ನಮಗಾಗಿ ನೀನು ಇಷ್ಟು ಕಷ್ಟ ಪಟ್ಟರೆ ನಮ್ಮಗೇ ನೆಮ್ಮದಿ ಸಿಗುವುದೇ? ಇಲ್ಲ... ಬದುಕಲು ನಾವು ಮಾಡಿಟ್ಟ ಸವಲತ್ತುಗಳು ತಕ್ಕ ಮಟ್ಟಿಗೆ ಇವೆ. ಆದರೆ ನಮಗೆ ನಿಜವಾದ ಸಂತೋಷ ನಿನ್ನನ್ನು ಕಂಡಾಗ, ನಿನ್ನೊಡನೆ ಮಾತನಾಡಿದಾಗ ಆಗೊತ್ತೆ. ಬೇರೆ ಯಾವುದು ಸಹ ನಮಗೆ ಬೇಡ. ಬೇಕಾಗಿರುವುದು ನಿನ್ನ ಸಾಮೀಪ್ಯ - ಇದು ಸಾಧ್ಯವಾಗದ ಪಕ್ಷದಲ್ಲಿ, ನಿನ್ನ ದನಿಯನ್ನಾದರು ಕೇಳಿಸು - ಅದನ್ನು ಕೇಳಿದರೆ ನನಗೆ ಒಂದು ತೆರನೆಯ ಸಮಾಧಾನ ಆಗುತ್ತದಪ್ಪ."

ಮಗ ಮಾತನಾಡಲಿಲ್ಲ. ಎನೆನ್ನಬೇಕೆಂದು ಅವನಿಗೆ ತೋಚಲಿಲ್ಲ.

ಅಮ್ಮ ಮಾತನ್ನು ಮುಂದೆ ವರೆಸಿದಳು,"ನಿನ್ನ ಮದುವೆಯ ವಿಷಯ ಮಾತನಾಡಬೇಕಿತ್ತು. ಯಾವುದಾದರು ಹುಡುಗಿಯನ್ನು ನೋಡಿದ್ದೀಯಾ?"

ಮತ್ತೆ ಮೌನ ಆವರಿಸಿತು. ಮಗ, ತನ್ನ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಹದಿನೈದು ನಿಮಿಷಗಳಾಗಿದ್ದವು.

ಅಮ್ಮ ಮಾತನ್ನು ಬೆಳೆಸಿದಳು,"ಹುಡುಗಿ ಹೇಗಿದ್ದಾಳೆ ನೋಡೋಕ್ಕೆ?"

ಮಗ,"ಅವಳ ಹೆಸರು ಅನನ್ಯಾ... ನನ್ನ ಸಹೋದ್ಯೋಗಿ. ಒಳ್ಳೆಯ ಹುಡುಗಿ. ಇದನ್ನು ನಿಮಗೆ ಸರಿಯಾದ ಸಮಯಕ್ಕೆ ಹೇಳೋಣ ಅಂತ ಕಾಯ್ತಿದ್ದೆ..."

ಅಮ್ಮ,"ಚೆನ್ನಾಗಿದೆ ಹೆಸರು... ನಾವು ಅವಳನ್ನು ನೋಡಬೇಕಲ್ಲ"

ಮಗನ ಮುಖ ಸಂತಸದಿಂದ ಅರಳಿತು.

ತುರಿಮಣೆ-ತರಕಾರಿಗೂ ರಸ್ತೆ-ಲಾರಿಗೂ ಏನು ಸಂಬಂಧ?!

ಏನು ಸಂಬಂಧ ಅಂತೀರಾ? ಇದೆ! ಆದರೆ ಅದನ್ನು ತುರೆಮಣೆ ಉಪಯೋಗಿಸಿದವರೇ ಹೇಳಬಹುದು. ಹೇಗೆ ಅಂತೀರಾ?

ಒಮ್ಮೆ ಬದನೇಕಾಯಿಯನ್ನು ತುರೆಮಣೆಯ ಮೇಲೆ ಚಕ್ರಾಕೃತಿಯಾಗಿ ಕೊಯ್ದು ನೋಡಿ - ಪ್ರತಿಯೊಂದು ಹೊಡೆತದಲ್ಲಿ ಒಂದು ತುಂಡು ಆಗಬೇಕು; ಮತ್ತೊಮ್ಮೆ ಕೊಯ್ಯಿರಿ... ಆಗುವ ಶಬ್ಧವನ್ನು ಹುಷಾರಾಗಿ ಆಲಿಸಿ... ಈಗ ನೀವು ಒಂದು ಕಾರೊಂದರಲ್ಲಿ ಹೋಗುತ್ತಿದ್ದಿರ ಅಂದುಕೊಳ್ಳಿ... ಅಂದುಕೊಳ್ಳುವುದೇಕೆ, ಹೋಗಿಯೇ ಬಿಡಿ. ಯಾವುದಾದರು ರಾಷ್ಟ್ರೀಯ ಹೆದ್ದಾರಿಯನ್ನು ಹಿಡಿದು ಘಂಟೆಗೆ ೬೦ ಕಿ.ಮೀ. ಅನ್ನು ಮೀರಿದ ವೇಗದಲ್ಲಿ ಚಲಿಸಿ. ಹೀಗೆ ಹೋಗುತ್ತಿರುವಾಗ, ಎದುರುಗಡೆಯಿಂದ ಬರುತ್ತಿರುವ ಲಾರಿಗಳು ನಿಮ್ಮ ಗಾಡಿಯನ್ನು ದಾಟುತ್ತಿರುವಾಗ ಆಗುವ ಶಬ್ಧವನ್ನು ಗಮನಿಸಿ. ವ್ಯತ್ಯಾಸ ನಿಮಗೆ ಗೊತ್ತಾಗಿಬಿಡುವುದು.

Monday, December 21, 2009

ಹ್ಯಾಂಗ ಬೇ...?

ಪ್ರದೇಶದಿಂದ ಪ್ರದೇಶಕ್ಕೆ ಕನ್ನಡ ಭಾಷೆಯಲ್ಲಿ ಬಹಳಷ್ಟು ವ್ಯತ್ಯಾಸ ಕಾಣಬಹುದು. ಇಂತಹದ್ದೊಂದು ಅಚ್ಚರಿಯ ಸಂಗತಿ ನಾನು ಚಿಕ್ಕವನಿದ್ದಾಗ ನಡೆದಿತ್ತು. ಬೇಸಿಗೆಯ ರಜೆಯ ಸಮಯ ಅಜ್ಜಿಯ ಮನೆಗೆ ಹೋಗುವುದೆಂದರೆ ವಿಜಯ ಹಾಗು ನನಗೆ ಬಹಳ ಸಂತಸದ ಸಂಗತಿ. ಅಮ್ಮ ನಮ್ಮಿಬ್ಬರನ್ನು ಧಾರವಾಡದಲ್ಲಿರುವ ಅಜ್ಜಿಯ ಮನೆಗೆ ಕರೆದೊಯ್ದು ಕೆಲ ದಿನ ಅಲ್ಲಿ ನಮ್ಮೊಡನೆ ಇದ್ದು ಹರಿಹರಕ್ಕೆ ಹಿಂದಿರುಗುವುದು ಸಾಮಾನ್ಯವಾಗಿತ್ತು. ಅಜ್ಜಿಯ ಮನೆಯಲ್ಲಿ ನಮ್ಮ ಅತ್ತೆ - ಮಾಮಾ ಜೊತೆ ಕಾಲ ಕಳೆಯಲು ಸಿಗುತ್ತಿದ್ದುದು ನಮಗೆ ಖುಷಿಯ ಸಂಗತಿಯಾಗಿತ್ತು. ಹೀಗೆ ಒಂದು ದಿನ ಅತ್ತೆಯೊಡನೆ ತರಕಾರಿ ಮಾರುಕಟ್ಟೆಗೆ ಹೋದಾಗ ಅತ್ತೆ ತರಕಾರಿ ಕೊಳ್ಳುತ್ತಿದ್ದನ್ನು ಗಮನಿಸುತ್ತಿದ್ದೆ...
ಅತ್ತೆ, ತರಕಾರಿ ಮಾರುವವಳನ್ನು ಕುರಿತು, "ಹಾಗಲ ಕಾಯಿ ಹ್ಯಾಗೆ?"
ತರಕಾರಿಯವಳು ಸುಮಾರು ೨೫ ~ ೩೦ ವರ್ಷ ವಯಸ್ಸಿನ ಹೆಂಗಸು. ಅದಕ್ಕವಳು, "ಎಷ್ಟು ಬೆಕಬೆ?", ಅಂದಳು.
ಇದನ್ನು ಕೇಳಿ ನನಗೆ ಏನು ಅರ್ಥವಾಗಲಿಲ್ಲ -ಆದರೆ ಯಾಕೋ ಅದು ವಿಚಿತ್ರ ಎನಿಸಿತು. ಹಾಗಲಕಾಯಿ ತುಟ್ಟಿಯಾಯಿತು ಎಂದು ಅತ್ತೆ ಮುನ್ನಡೆದರು.
ಬೇರೆಯ ತರಕಾರಿಯವಳನ್ನು ಕುರಿತು ಅತ್ತೆ, "ಹ್ಯಾಂಗ್ ಬೇ ಈ ಬೆಂಡೀಕಾಯ್?"
ತರಕಾರಿಯವಳು, "ಪಾವ್ ಕಿಲೋ ಯಾಡ್ ರುಪಾಯಿ"
ಅತ್ತೆ, "ಅರ್ಧ ಕಿಲೋ ಬೇಕ್ - ಹ್ಯಾಗ್ ಕೊಡ್ತಿ ?"
ತರಕಾರಿಯವಳು, "ನಾಲ್ಕು ರುಪಾಯಿಗೆ ಅರ್ಧ ತಗೋ ಬೇ"
ಅತ್ತೆ, "ಅರ್ಧ ಕಿಲೋ ಮೂರು ರೂಪಾಯಿ ಇಲ್ಲ?"
ತರಕಾರಿಯವಳು, "ತಗೋರಿ..."

ಸ್ವಲ್ಪ ಹೊತ್ತಿನಲ್ಲಿ ಪೂರ್ತಿ ಮಾರುಕಟ್ಟೆಯನ್ನು ಜಾಲಾಡಿ ಆಗಿತ್ತು. ಮನೆಗೆ ಮರಳಿದೆವು.
ಆಮೇಲೆ ಸ್ವಲ್ಪ ಧೈರ್ಯ ಮಾಡಿ ಅತ್ತೆಯನ್ನು ಕೇಳಿದೆ, "ಏನಬೆ... ಅಂತ ಅಂದ್ರೆ ಏನು?"

ನನ್ನ ವಿಚಾರ ಧಾರೆ ಯಾವೆಡೆ ಸಾಗುತ್ತಿದೆ ಎಂದು ಅರಿತ ಅವರು ಹೀಗೆಂದರು,"ಇಲ್ಲಿ ಅಬ್ಬೆ ಅಂದ್ರೆ ನಿಮ್ಮಲ್ಲಿ ಅಮ್ಮ ಅಂದ ಹಾಗೆ!"

ಸ್ವಲ್ಪ ಸಮಾಧಾನವಾಯಿತು - ಅಬ್ಬೆ ಅಂದ್ರೆ ನಾನು ಮೊದಲು ಅಂದುಕೊಂಡ ಹಾಗೆ ಬೈಗುಳ ಅಲ್ಲ ಅಂದು ಗೊತ್ತಾಗಿ.
ಕನ್ನಡ-ಹಿಂದಿ-ಇಂಗ್ಲಿಷ್ ಎಲ್ಲವನ್ನು ಮೊಸರುಬಜ್ಜಿ ಮಾಡಿದ ಹಾಗೆ ಕಲೆಸಿ ಮಾತಾಡುವ ಮಂದಿ ಅಕ್ಕ ಪಕ್ಕ ಇದ್ದಿದ್ದರಿಂದಲೋ ಏನೋ ನನಗೆ ಈ ಸಂದೇಹ ಬಂದಿದ್ದು.

Monday, December 14, 2009

ಅವನು ನಿನಗೆ ಗೊತ್ತಾ??

ನವೆಂಬೆರ್ - ಡಿಸೆಂಬರ್ ೨೦೦೭ ಇರಬೇಕು ಅದು... ಸರಿಯಾಗಿ ನೆನಪಿಲ್ಲ ಆದರೆ ರಜೆ ಇದ್ದ ಕಾರಣ ಮನೆಗೆ ಹೋಗುತ್ತಿದ್ದದ್ದು ನೆನಪಿದೆ. ಇಬ್ಬರು ಸಹಪಾಠಿಗಳು, ವಿಜಯ ಹಾಗು ನಾನು ಬೆಂಗಳೂರಿನ ಬಸ್ ತಂಗುದಾಣದಲ್ಲಿ ನಮ್ಮ ಬಸ್ಸು ಬರುವ ಹಾದಿಯನ್ನು ಕಾಯುತ್ತ ಕುಳಿತಿದ್ದೆವು. ಎಂದಿನಂತೆ, ಜನ ತುಂಬಿ ತುಳುಕಾಡುತ್ತಿದ್ದ ಆ ಜಾಗ ನನ್ನ ಕಣ್ಣುಗಳಿಗೆ ಏನು ಹೊಸತನ್ನು ತಂದಿರಲಿಲ್ಲ. ಅಷ್ಟರಲ್ಲಿ ನಮ್ಮ ಬಸ್ಸು ಬಂದೇ ಬಿಟ್ಟಿತು. ಬೇಸರ ಕಳೆದು ಈಗ ಸುಮ್ಮನೆ ಮಲಗಬಹುದು ಅಂದುಕೊಂಡು ಬಸ್ಸು ಹತ್ತಲು ಅಣಿಯಾದೆ. ಅಷ್ಟರಲ್ಲಿ ನಡೆದ ಈ ಘಟನೆ ನನಗೆ ಅಚ್ಕಾರಿಯನ್ನು ಮೂಡಿಸಿತು.

ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...
ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#& ಅಲ್ಲ?"
ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."
ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "
"ನಾನು *&%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."
"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"
"ಹೌದು... ನೀವು?"
.....
ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"
ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?
ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"
ಅವಳು, "ಇಲ್ಲಪ್ಪ... ಅವನು ಅಷ್ಟು ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.

ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...

Friday, December 4, 2009

ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!

ಹಬ್ಬದ ಸಮಯದಲ್ಲಿ ಕರ್ನಾಟಕ ಸಾರಿಗೆಯಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಿ ಆ ಆಸನಗಳಲ್ಲಿ ಸುಖವಾಗಿ ಕೂತು ನೀವು ಹೋಗುವುದಾಗಿ ಕನಸು ಕಾಣುತಿದ್ದ ಪಕ್ಷದಲ್ಲಿ, ಎದ್ದೇಳಿ!

೧೬-ನವಂಬರ್-೨೦೦೯-ದೀಪಾವಳಿ ಹಬ್ಬದ ಸಮಯ. ವಿಜಯ ಹಾಗು ನಾನು ಹರಿಹರಕ್ಕೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು - ಎಲ್ಲೆಡೆ ಜನಜಾತ್ರೆ. ನಮ್ಮನ್ನು ಹರಿಹರಕ್ಕೆ ಕರೆದೊಯ್ಯುವ ಕರ್ನಾಟಕ ಸಾರಿಗೆ ಬಸ್ಸು ಸುಮಾರು ೧ ಘಂಟೆ ತಡವಾಗಿ ಬಂದಿತು. ಮುಂಚಿತವಾಗಿ ಎರಡು ಆಸನಗಳನ್ನು ನಾವು ಕಾಯ್ದಿರಿಸಿದ್ದರಿಂದ ನಮ್ಮ ಪ್ರಯಾಣ ಸುಗಮವಾಗಿ ಆಗುವುದೆಂಬ ನಂಬಿಕೆ ನನ್ನದಾಗಿತ್ತು. ಬಸ್ಸು ತನ್ನ ಸಾಮಾನ್ಯ ಜಾಗಕ್ಕೆ ಹೋಗಿ ನಿಲ್ಲದೆ, ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಅದನ್ನು ಗುರುತಿಸಿ ಹತ್ತುವುದು ತುಸು ಕಷ್ಟವೇ ಆಯಿತು. ಹೇಗೋ ಮಾಡಿ ಬಸ್ಸನ್ನು ಹತ್ತಿದೆವು - ಶುರುವಾಯಿತು ನಮ್ಮ ಕಠಿಣಪರೀಕ್ಷೆ.

ಪೂರ್ತಿಯಾಗಿ ಕಾಯ್ದಿರಿಸಲ್ಪಟ್ಟ ಈ ಬಸ್ಸು ಆಗ ತಾನೆ ಬಂದಿದ್ದು, ತುಂಬಿ ತುಳುಕಾಡುತ್ತಿದ್ದನ್ನು ಕಂಡು ನನಗೆ ಸ್ವಲ್ಪ ಆಶ್ಚರ್ಯವಾಯಿತು. ಟಿಕೇಟನ್ನು ತಗೆದು ಸೀಟ್ ನಂಬರ್ ಹುಡುಕತೊಡಗಿದ ವಿಜಯನಿಗೆ ಇನ್ನೊಂದು ಅಚ್ಚರಿ ಕಾದಿತ್ತು - ಆ ಬಸ್ಸಿನಲ್ಲಿ ಇದ್ದ ಸೀಟುಗಳ ವಿನ್ಯಾಸ ನಾವು ಕಾಯ್ದಿರಿಸಿದ್ದ ವಿನ್ಯಾಸಕ್ಕೆ ಹೋಲುತ್ತಿರಲಿಲ್ಲ. ಅದರ ಪರಿಣಾಮವಾಗಿ ಹಲವಾರು ಮುಂಗಡ ಸೀಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ (ವಿಶೇಷವಾಗಿ ಆಜು-ಬಾಜು ಸೀಟು ಪಡೆಯಬೇಕಾದವರಿಗೆ - ನಮ್ಮನೂ ಸೇರಿಸಿ) ತೊಂದರೆ ಖಚಿತವಾಗಿತ್ತು. ಆದರೂ ಇಷ್ಟು ಜನ ಆ ಬಸ್ಸಿನಲ್ಲಿ ಇದ್ದದ್ದನ್ನು ನೋಡಿ ಸ್ವಲ್ಪ ದಿಗಿಲೇ ಆಯಿತು.

ದೀಪಾವಳಿಯ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ನಾನು ಹಾಗು ವಿಜಯ ಒಂದು ತಿಂಗಳು ಮೊದಲೇ ವಿಚಾರ ಮಾಡಿದ್ದರೂ, ಪ್ರಯಾಣಕ್ಕೆ ಬೇಕಾದ ಟಿಕೆಟ್ ಗಳನ್ನ ಮುಂಚಿತವಾಗಿ ಕಾಯ್ದಿರಿಸುವುದನ್ನು ಮರೆತಿದ್ದೆವು (ಮರೆತಿದ್ದೆವು ಅನ್ನುವುದಕ್ಕಿಂತ, ಆಲಸ್ಯದಿಂದ "ಮಾಡಿದರಾಯಿತು ಬಿಡು!" ಎಂದು ಸುಮ್ಮನಿದ್ದೆವು). ಏರಾವತ, ರಾಜಹಂಸ ಬಸ್ಸುಗಳು ಸಿಗದೆ, ಇದ್ದ ಕೆಲವೇ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೀಟನ್ನು ಕಾಯ್ದಿರಿಸಿದ್ದೆವು.

ಕಂಡಕ್ಟರ್ ಸಾಹೇಬರು ನಮ್ಮ ಟಿಕೇಟನ್ನು ಪರಿಶೀಲಿಸಿ ನಮ್ಮನು ನಮ್ಮ 'ಹೊಸ' ಆಸನಗಳತ್ತ ಕೂರಲು ಹೇಳಿದನು. ಕೂತುಕೊಂಡದ್ದಾಯಿತು. ಆದರೆ ನಮ್ಮ ಸಾಮಾನನ್ನು ಇಡುವುದು ಎಲ್ಲಿ? ಕಣ್ಣನ್ನು ಮೇಲೆ ಹಾಯಿಸಿದರೆ ಎಲ್ಲೂ ಜಾಗ ಕಾಣುತ್ತಿಲ್ಲ! ಅಲ್ಲಿ-ಇಲ್ಲಿ ಎಂದು ಸ್ವಲ್ಪ ಜಾಗ ಮಾಡಿ ಸಾಮಾನು ತುರುಕಿದ್ದಾಯಿತು. ಇನ್ನೇನು ಮಲಗುವುದು ಅನ್ನುವಷ್ಟರಲ್ಲಿ ಗೊತ್ತಾಯಿತು - ಬಸ್ಸು ತುಂಬಿತ್ತು ಆದರೆ ಆದರಿಲ್ಲಿ ಇದ್ದ ಅರ್ಧಕ್ಕರ್ಧ ಜನ ಕಾಯ್ದಿರಿಸಿದ ಆಸನಗಳ ಮೇಲೆ ಕಾಯ್ದಿರಿಸಿದ ತಿಕೆಟಿಲ್ಲದೆ ಕೂತಿದ್ದರು. ಸರಿಯಾದ ಟಿಕೇಟು ಉಳ್ಳವರು ಬಸ್ಸು ಹತ್ತಲು ಹೊಡೆದಾಡುತ್ತಿದ್ದರು! ಸ್ವಲ್ಪ ಸಮಯದಲ್ಲಿ ಬಸ್ಸು ಜನರಿಂದ ತುಂಬಿ ಹೋಯಿತು. ನನಗೆ ಕೂರಲು ಸಹ ಕಷ್ಟವಾಗಿತ್ತು. ಜನರು ಮೈಗೆ ಮೈ ತಿಕ್ಕಿ, ನಿರಂತರವಾಗಿ ಅಲುಗಾಡುತ್ತಿದ್ದುದರಿಂದ ನಿದ್ದೆ ಎಂಬುದು ಕನಸಾಗಿ ಬಿಟ್ಟಿತ್ತು. ಕಂಡಕ್ಟರ್ ಹಾಗು ಜನರ ಮಾತು-ಕಥೆ ಹೀಗೆ ನಡೆಯಿತು (ಇಲ್ಲಿ ಸರಿಯಾದ ಮುಂಗಡ ಟಿಕೇಟು ಪಡೆದ ಪ್ರಯಾಣಿಕರನ್ನು 'ಸ-ಪ್ರಯಾಣಿಕ' ಹಾಗು ಅನ್ಯ ಪ್ರಯಾಣಿಕರನ್ನು 'ತ-ಪ್ರಯಾಣಿಕ' ಎಂದು ಕರೆದಿದ್ದೇನೆ) :

ಒಬ್ಬ ಸ-ಪ್ರಯಾಣಿಕ ಕಂಡಕ್ಟರ್ ಅನ್ನು ಕುರಿತು, "ರೀ, ಕಂಡಕ್ಟರ್! ನಂಗೆ ಕೂಡೋಕ್ಕೆ ಆಗ್ತಿಲ್ಲ - ಸೀಟು ಮುರಿದು ಹೋಗಿದೆ!"
ಅದಕ್ಕೆ ಕಂಡಕ್ಟರ್,"ಸಾರ್, ಡಿಪೋದವರು ಈ ಬಸ್ಸ ಬಿಟ್ಯಾರ್ ರೀ... ನಾ ಏನ್ ಮಾಡ್ಲಿ ? ಇದು ಎಕ್ಸ್-ಟ್ರಾ ಬಸ್ಸ ರೀ - ಆದ್ರೂ ಸಾಕಾಗಂಗಿಲ್ಲ ರೀ"
ಇನ್ನೊಬ್ಬ ಸ-ಪ್ರಯಾಣಿಕ,"ನೀವು ಅನ್-ರಿಜರ್ವಡ್ ಜನರನ್ನ ಯಾಕೆ ಒಳಗೆ ಬಿಟ್ಕೊಂಡ್ರಿ??"
ಕಂಡಕ್ಟರ್,"ಏನ್ ಮಾಡಲ್ ರೀ ನಾನು? ಜನಾ ಭಾಳ ಇದ್ದಾರೆ ಬಸ್ಸುಗಳು ಸಾಕಾಗ್ತಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!"
ತ-ಪ್ರಯಾಣಿಕಳೊಬ್ಬಳು ಸಣ್ಣ ಮಗುವೊಂದನ್ನು ಹಿಡಿದುಕೊಂದು ಬಸ್ಸು ಬಿಡುವಸ್ಟರಲ್ಲಿ ಹತ್ತಿದ್ದಳು - ಕಂಡಕ್ಟರ್ ಸಾಹೇಬರು ಮೊದಲೇ "ಇಲ್ಲಿ ಸೀಟು ಇಲ್ಲ!" ಎಂದು ಹೇಳಿದ್ದರೂ, "ನೋಡಿ ಸ್ವಾಮಿ... ಮಗು ಇದೆ ಜೊತೆಯಲ್ಲಿ"... ಎಂದು ಆರ್ತನಾದ ಹಾಡತೊಡಗಿದಳು.
ಸ-ಪ್ರಯಾಣಿಕರೊಬ್ಬರು ತಮ್ಮ ಲಗೇಜು ಇಡಲು ಜಾಗವಿಲ್ಲದೆ ತ-ಪ್ರಯಾಣಿಕರೊಬ್ಬರ ಲಗೇಜನ್ನು ಸ್ವಲ್ಪ ಸರಿಸಲು ಹೋದಾಗ ತ-ಪ್ರಯಾಣಿಕರು ಕುಂಡಿ-ಕೊಯ್ದ ಹಂದಿಯಂತೆ ಅರಚಾಡಿದರು. ಕಂಡಕ್ಟರ್ ಮೂಕ ಪ್ರೇಕ್ಷಕರಾಗಿ ಉಳಿದು ಬಿಟ್ಟಿದ್ದರು.
ತ-ಪ್ರಯಾಣಿಕರಿಗೆ ಹೀಗೆ ಪ್ರಯಾಣ ಮಾಡಿ ಅಭ್ಯಾಸ ನೋಡಿ. ತಮ್ಮ ಕೈಲಿದ್ದ ಚೀನಾ ಮೊಬೈಲನ್ನು ಜೋರಾಗಿ ಬೇನಾಮಿ ಹಾಡೊಂದನ್ನು ಅರಚಲು ಬಿಟ್ಟು ಜೋರಾಗಿ ಲೋಕಾಭಿರಾಮದ ಮಾತುಗಳನ್ನು ಮಾತನಾಡಲು ಪ್ರಾರಂಭಿಸಿದರು.

ತ-ಪ್ರಯಾಣಿಕರಿಗೆ ತಾವು ಕಳೆದುಕೊಳ್ಳೋದು ಏನೂ ಇರಲಿಲ್ಲ. ಸ-ಪ್ರಯಾಣಿಕರಿಗೆ ಸರಿಯಾಗಿ ಸೀಟು ಸಿಗದೇ, ನಿದ್ದೆ ಇಲ್ಲದೆ ಹೆಚ್ಚು ದುಡ್ಡು ಕೊಟ್ಟು ಟಿಕೇಟು ಪಡೆದು ಹುಚ್ಚರಾದೆವು ಅನ್ನೋದು ಖಾತ್ರಿಯಾಯಿತು. ಕಂಡಕ್ಟರ್ ಸಾಹೇಬರು ನಿಂತು ಪ್ರಯಾಣ ಮಾಡಿದರು.

ಇದೆಲ್ಲ ಹೀಗೆ ಯಾಕಾಯಿತು ಅಂತ ಸ್ವಲ್ಪ ಸಮಯ ವಿಚಾರ ಮಾಡಿದೆ -
೧. ಬೆಂಗಳೂರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಇದ್ದಾರೆ
೨. ಜನರಿಗೆ 'ನಾನು-ಇವನ-ತಲೆ-ತುಳಿದರು-ಪರವಾಗಿಲ್ಲ" ಅನ್ನೋ ಭಾವನೆ
೩. ಸರಿಯಾದ ಸಮಯಕ್ಕೆ ಟಿಕೇಟು ಪಡೆಯದ ನಮ್ಮಂತಹ ಪ್ರಯಾಣಿಕರು

ಏನೇ ಹೇಳಿ, ಕರ್ನಾಟ ಸಾರಿಗೆ ಬಸ್ಸಿನಲ್ಲಿ ಹಬ್ಬದ ಸಮಯದಲ್ಲಿ ರಾತ್ರಿಯ ಪ್ರಯಾಣ ನರಕವಾಗೋದು ಬಹುತೇಕ ಸತ್ಯ!

Thursday, December 3, 2009

ನಗುವಿನ ನಾನಾರ್ಥಗಳು...

ನಾನು ಗಂಭೀರವಾಗಿ ಮಾತನ್ನು ಶುರು ಮಾಡಿದೆ, "ನೋಡಿ, ಇವತ್ತು ಶನಿವಾರ. ಕೆಲಸದ ಅನಿವಾರ್ಯತೆಯಿಂದಾಗಿ ನಾವು ಇಂದು ಆಫೀಸಿಗೆ ಬರಬೇಕಾಗಿದೆ. ಇನ್ನು ಮುಂದೆ ಹೀಗಾಗಬಾರದು ಅಂದ್ರೆ ನಾವು ನಮ್ಮ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು. ಈ ಕೆಲಸ ಇನ್ನೆರಡು ಘಂಟೆಗಳಲ್ಲಿ ಮುಗಿಸಬಹುದು ಅಂತ ನನಗೆ ಗೊತ್ತು. ಈಗ ಸಮಯ ೫:೩೦. ೬ ಆಗಲು ಇನ್ನರ್ಧ ಘಂಟೆ ಇದೆ. ಇನ್ನು ಆಫೀಸಿನಲ್ಲಿ ಇರಲು ಹೋಗಬೇಡಿ.. ನಾಳೆ ಬಂದು ಕೆಲಸ ಮುಗಿಸಿ"

ಅಲ್ಲಿ ನಿಂತು ನನ್ನ ಮಾತನ್ನು ಆಲಿಸುತ್ತಿದ್ದ ಸಹೋದ್ಯೋಗಿಯೊಬ್ಬಳು ಕಿಸಕ್ಕನೆ ನಕ್ಕಳು...

ನಗುವಿನಲ್ಲಿ ಮುಗ್ಧತೆ ಇದ್ದರೂ ಅದರ ಹಿಂದಿದ್ದ ಮಾತನಾಡದ ಪದಗಳನ್ನು ನಾನು ಅವಳ ಕಣ್ಣಿನಲ್ಲಿ ಕಂಡೆ - "ನಮಗಿನ್ನೂ ರಜಾ ದಿನದಂದು ಸಾಯಂಕಾಲ ೬ ಘಂಟೆಯ ಮೇಲೆ ಇದ್ದು ಕೆಲಸ ಮಾಡುವಷ್ಟು ತಲೆ ಕೆಟ್ಟಿಲ್ಲ"