Wednesday, May 26, 2010

ನಮ್ಮೂರ ನೆನಪುಗಳು - ೨

ಕೆ.ಬಿ. ಮೆಸ್

ನಾನು ಬಿ.ಈ. ಓದುತ್ತಿದ್ದಾಗ ಮೊದಲ ಕೆಲವು ತಿಂಗಳು ಮನೆಯಿಂದ ಊಟದ ಡಬ್ಬಿಯನ್ನು ಒಯ್ಯುತ್ತಿದ್ದೆ; ಆದರೆ ಬಿಸಿ-ಬಿಸಿ ಊಟ ಮಾಡಲು ಆಗುತ್ತಿರಲಿಲ್ಲ, ಮನೆಯಿಂದ ಡಬ್ಬವನ್ನು ಎತ್ತಿಕೊಂಡು ಹೋಗಬೇಕಾಗುತ್ತಿತ್ತು. ಕರಿಬಸವೇಶ್ವರ (ಕೆ.ಬಿ.) ಮೆಸ್ ಸೇರಿಕೊಂಡೆ. ಕೆ.ಬಿ. ಮೆಸ್ ನಮ್ಮ ಕಾಲೇಜಿನಿಂದ ಕೆಲವೇ ನೂರು ಮೀಟರ್ ದೂರದಲ್ಲಿತ್ತು. ಮಧ್ಯಾಹ್ನದ ಹೊತ್ತು ನಾನು, ಸೂರಿ ಹಾಗು ಹಲವರು ನಮ್ಮ ತರಗತಿಯವರು ಕೂಡಿ ಮೆಸ್ ಗೆ ಹೋಗೋದು ವಾಡಿಕೆಯಾಗಿತ್ತು. ಊಟದ ಸಮಯವೆಂದರೆ ಹೆಚ್ಚುಕಡಿಮೆ ಪೂರ್ತಿ ಕಾಲೇಜೇ ರೋಡಿನ ಮೇಲೆ ಇರ್ತಿತ್ತು; ಹಲವಾರು ಮಿತ್ರರು ಸಿಗುತ್ತಿದ್ದರು ಹಾಗು ಮಿತ್ರೇತರರು ಕಣ್ಣಿಗೆ ಬೀಳುತ್ತಿದ್ದರು. ದಾವಣಗೆರೆಯ ಮಧ್ಯಾಹ್ನದ ಬಿಸಿಲು ಸ್ವಲ್ಪ ತೀಕ್ಷ್ಣವಾಗೇ ಇರುತ್ತಿತ್ತು; ಆದರೆ ಹೊಟ್ಟೆಯ ಹಸಿವು ಇದನ್ನು ಮೀರಿಸುತ್ತಿತ್ತು!

ಕೆ.ಬಿ. ಮೆಸ್ಸಿನ ಊಟ ಬಹಳ ವಿಶೇಷವಾದುದ್ದೇನಲ್ಲ - ಎರಡು ತೆಳ್ಳನೇಯ ಹಾಗು ಸಣ್ಣ (ಹಪ್ಪಳಕ್ಕೆ ಪೈಪೋಟಿ ನೀಡುವಂತಹ) ಮೈದಾ ಚಪಾತಿಗಳು, ಎರಡು ಪಲ್ಯಗಳು (ಸಾಮಾನ್ಯವಾಗಿ ಒಂದು ಕಾಳಿನ ಪಲ್ಯ ಇದ್ದೇ ಇರುತ್ತಿತ್ತು), ಕರಿಂಡಿ / ಬದನೇಕಾಯಿ ಚಟ್ನಿ, ೫೦ ಮಿ.ಲೀ. ಗೂ ಕಡಿಮೆ ಹುಳಿ ಮೊಸರು, ಸೋಡಾಯುಕ್ತ ಅನ್ನ, ಕುದಿಯುವ ಸಾರು (ಮೂಲಂಗಿ ನಮ್ಮಲ್ಲಿ ಹೇರಳ ಹಾಗು ಸೋವಿ - ಇನ್ನು ಯಾವ ಸಾರು ಅಂತ ನಿಮಗೆ ಬಾಯಿ ಬಿಟ್ಟು ಹೇಳೋದು ಬೇಡ ಅಂದ್ಕೊಂಡಿದ್ದೀನಿ), ಉಪ್ಪಿನಕಾಯಿ, ಉಪ್ಪು - ಅಷ್ಟೆ! ಅದೆಷ್ಟೋ ಬಾರಿ ಪಲ್ಯದಲ್ಲಿ ಕಲ್ಲನ್ನು ಕಡೆದಿದ್ದೇನೆ - ಒಂದು ಹಲ್ಲು ಈ ಮೆಸ್ಸಿನಲ್ಲಿಯೇ ಕೆಡಿಸಿಕೊಂಡೆ ಎಂದರೆ ತಪ್ಪೇನಾಗದು. ಎರಡನೇಯ ಬಾರಿ ಪಲ್ಯ ನೀಡಲು ಹಿಂದೆ-ಮುಂದೆ ಮಾಡುತ್ತಿದ್ದರು ಮೆಸ್ಸಿನ ತಾತಾ. ಕೆಲವೊಮ್ಮೆ ಮೊಸರು ಅತಿ ಹುಳಿಯಾಗಿ ಬಿಟ್ಟು ಬಂದದ್ದೂ ಇದೆ. ತಾತಾ ಒಂದು ನೋಟು ಪುಸ್ತಕದಲ್ಲಿ ನಮ್ಮ ಲೆಕ್ಕವನ್ನು ಬರೆದಿಡುತ್ತಿದ್ದರು. ಮೊದಮೊದಲು ನನ್ನ ತಮ್ಮನ ಹಾಗು ನನ್ನ ಲೆಕ್ಕವನ್ನು ಏರುಪೇರು ಮಾಡಿದರಾದರು, ಕ್ರಮೇಣ ಅದನ್ನು ಸರಿ ಪಡೆಸಿದರು.

ಊಟ ತಿನ್ನಲು ಅಡ್ಡಿಯಿರಲಿಲ್ಲ - ಹೊಟ್ಟೆಗೆ ಇದನ್ನರಗಿಸಲು ಕಷ್ಟಪಡಬೇಕಾಗುತ್ತಿರಲಿಲ್ಲ; ಹಾಗಾಗಿ ಮೆಸ್ ನ ತಾತ/ಮಗನ ಜೋಡಿ ಸಹ ಖುಶ್, ನಾವು ಖುಶ್! ಪ್ರತಿ ಊಟದ ಬೆಲೆ ೧೧-೧೩ ಇತ್ತು; ತಿಂಗಳಿನ ಮೊತ್ತವನ್ನು ತಿಂಗಳು ಶುರುವಾಗುತ್ತಿದ್ದಂತೆ ಕೊಡಬೇಕಿತ್ತು. ಅಂದರೆ ತಿಂಗಳಿಗೆ (ಸಾಮಾನ್ಯವಾಗಿ ೨೧ ದಿನಗಳು) ೨೫೦ ಕ್ಕು ಹೆಚ್ಚು ಖರ್ಚು ಆಗುತ್ತಿರಲಿಲ್ಲ. ಪ್ರತಿಯೊಂದು ರೂಪಾಯಿಗು ಬೆಲೆ ಇತ್ತು - ನೆನಸಿಕೊಂಡರ ಖುಶಿಯಾಗೊತ್ತೆ. ಇಂದು ಒಂದು ಒಳ್ಳೆಯ ಬುಫೆಗೆ ಹೋದರೆ ಕನಿಷ್ಟ ೨೫೦+ತೆರಿಗಗಳು ಖಂಡಿತ; ಊಟದಲ್ಲಿ ನಿಮಗೇನು ಬೇಕು, ಎಷ್ಟು ಬೇಕು ಅಷ್ಟನ್ನು ಸ್ವಾಹ ಅನ್ನಬಹುದು; ಕಲ್ಲು ಹುಡುಕಿದರೂ ಸಿಗದು. ಆದರೆ, ಕೆ.ಬಿ. ಮೆಸ್ಸಿನಲ್ಲಿದ್ದ ಮಜ ಇಲ್ಲೆಲ್ಲಿ?

Monday, May 24, 2010

ನಮ್ಮೂರ ನೆನಪುಗಳು - ೧

ಈ ಬಾರಿ ಹರಿಹರಕ್ಕೆ ಹೋದಾಗ ಶಾಲೆ ಹಾಗು ಕಾಲೇಜು ದಿನಗಳಲ್ಲಿ ಕಳೆದ ಸವಿ ನೆನಪುಗಳು ಮನಸ್ಸಿನಲ್ಲಿ ಮರುಕಳಿಸಿ ಬಹಳ ಸಂತಸವೆನಿಸಿತು. ಕೆಲ ನನಪುಗಳನ್ನು ಇಲ್ಲಿ ಬರೆದಿದ್ದೇನೆ; ಓದಿ ಆನಂದಿಸಿ -

ಬೆಳಗಿನ ಜಾವ ಬಸ್ಸನ್ನೇರುವ ಸರ್ಕ್ ಸ್:
ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುತ್ತಿದ್ದ ಪ್ರತಿ ದಿನದ ಸಾಹಸದ ಕೆಲಸ ಇದು! ನಮ್ಮೂರಿನಿಂದ (ಅಂದರೆ, ಹರಿಹರ) ಕಾಲೇಜಿಗೆ ನೇರವಾಗಿ ಹೋಗುವ ಒಂದು ಬಸ್ಸು ಇತ್ತು (ಈಗ ಸಹ ಇದೆ ಎಂದು ನನಗೆ ಕೇಳಿ ಬಂದಿದೆ). ಈ ಬಸ್ಸು ಬೆಳಗಿನ ಜಾವ ೭ - ೭.೧೫ರ ಒಳಗಡೆ ಹರಿಹರ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಈ ಒಂದು ಬಸ್ಸನ್ನು ಅವಲಂಬಿಸಿದ್ದವರು ಹಲವಾರು ವಿದ್ಯಾರ್ಥಿಗಳು - ಪೀ.ಯೂ. ಕಾಲೇಜಿನಿಂದ ಹಿಡಿದು ಅನೇಕ ಡಿಗ್ರೀ ಕಾಲೇಜಿನ ಜನ ಇದನ್ನು ಹತ್ತೋರು. ಜನರ ಸಂಖ್ಯೆ ೩ ಬಸ್ಸುಗಳಿದ್ದರೂ ಸಾಕಾಗದಷ್ಟು ಇರುತ್ತಿತ್ತು. ಸೀಟು ಸಿಗುವ ವಿಷಯ ಆಚೆಯಿರಲಿ, ನಿಲ್ಲಲು ಜಾಗ ಸಿಗುವುದೇ ಒಂದು ದೊಡ್ಡ ಸಾಹಸವಾಗಿರುತ್ತಿತ್ತು. ಬಸ್ಸು ಹತ್ತಿರದ ಒಂದು ಹಳ್ಳಿಯೊಂದರಿಂದ ಬರುತ್ತಿದ್ದರಿಂದ ಅದರಲ್ಲಿ ಮೋತೀವೀರಪ್ಪ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ತುಂಬಿರುತ್ತಿದ್ದರು. ಉಳಿದ ಕೆಲವೇ ಸೀಟುಗಳಿಗಾಗಿ ನೂಕುನುಗ್ಗಲಾಟವಾಗುತ್ತಿತ್ತು. ಬಸ್ಸು ದೂರದಿಂದಲೇ ಬರುವುದನ್ನು ಗಮನಿಸಿ ಹುಡುಗರು ಬಸ್ಸಿನೋಡನೆ ಓಡಿ ಅದನ್ನೇರಲು ಸಜ್ಜಾಗುತ್ತಿದ್ದರು. ಬಸ್ಸು ಹತ್ತಿರ ಬಂತು ಅಂದಾಕ್ಷಣ ಅದರಲ್ಲಿಂದ ಇಳಿಯುವ ಜನರನ್ನು ಗಮನಿಸದೆ ನುಗ್ಗುತ್ತಿದ್ದರು. ಆ ಬಸ್ಸೋ ಒಂದು ಚಕ್ಕಡಿಗಾಡಿಗಿಂತಲೂ ಮೆಲ್ಲಗೆ ಚಲಿಸುತ್ತಿತ್ತು. ೧೨೦ ಕ್ಕೂ ಹೆಚ್ಚು ಜನರನ್ನು ಆ ಹಳೆಯ ಗಾಡಿ ಹೊತ್ತುಕೊಂಡು ಸಾಗುವಂತೆ ಮಾಡುತ್ತಿದ್ದ ಚಾಲಕನು ನಿಜವಾಗಿಯೂ ಚೆನ್ನಾಗಿ ಬಸ್ಸನ್ನು ಓಡಿಸುತ್ತಿದ್ದನೆನ್ನಬೇಕು.

ಬಸ್ಸನ್ನು ಏರುವುದು ಒಂದು ಸಾಹಸವಾದರೆ, ಅದರಲ್ಲಿ ನಿಲ್ಲುವುದು ಇನ್ನೊಂದು ಸಾಹಸ. ಒಬ್ಬರಿಗೊಬ್ಬರು ಮೈಯನ್ನು ಅಂಟಿಸಿ ನಿಲ್ಲದೆ ಬೇರೆಯ ವಿಧಿಯೇ ಇರಲಿಲ್ಲ. ಗಾಳಿಯಾಡದೆ, ಎಲ್ಲ ಬೆವೆತ ಮೈಗಳಿಂದ ಎಲ್ಲರ ಅಂಗಿಗಳು ಹಸಿ. ಬಸ್ಸಿನ ಸ್ಥಿತಿಯು ಅಷ್ಟೇನು ಚೆನ್ನಾಗಿರಲಿಲ್ಲ - ಮುರಿದು ಹೋದ ಕಿಟಕಿಗಳು, ಮುರಿದು ಬೀಳುವ ಅಂಚಿನಲ್ಲಿದ್ದ ಫೂಟ್-ರೆಸ್ಟ್, ತುಂಡಾಗಿದ್ದ ಬಸ್ಸಿನ ಮೇಲ್ಭಾಗ. ಇಷ್ಟೆಲ್ಲವಿದ್ದರೂ ಜನರು ಪ್ರತಿ ದಿನ ಈ ಬಸ್ಸಿಗಾಗಿ ಕಾಯುತ್ತಿದ್ದರು!

ಇಷ್ಟೆಲ್ಲ ಕಷ್ಟ ಪಡುವುದು ಬೇಕಿತ್ತೆ? ಸುಮ್ಮನೆ ದಾವಣಗೆರೆಗೆ ನೇರವಾಗಿ ಹೋಗಲು ಸೌಕರ್ಯವಿರಲಿಲ್ಲವೆ ಎಂದು ನಿಮಗೆ ಅನ್ನಿಸಿರಬಹುದು. ನಿಜ, ಬಸ್ಸುಗಳು ಸಾಕಷ್ಟು ಇದ್ದುವಾದರು, ನೇರವಾಗಿ ಕೇವಲ ಬಸ್ ಪಾಸನ್ನು ತೋರಿಸಿ ಕಾಲೇಜಿನವರೆಗೆ ಹೋಗಬಹುದಾದಂತಹ ಬಸ್ಸು ಇದು ಏಕಮಾತ್ರವಾಗಿತ್ತು. ೩ ರೂಪಾಯಿ ಉಳಿತಾಯವಾಗುತ್ತಿತ್ತು! ಒಂದು ವಾರ್ಷಿಕ ಪಾಸು ಸುಮಾರು ೭೦೦ ರೂಪಾಯಿಗಳಿಗೆ ಬಂದು ಬಿಡುತ್ತಿತ್ತು.

ಈಗ, ಮನಸ್ಸು ಬಂದಾಗ ಅಂತರ್ಜಾಲದಲ್ಲಿ ವಾಲ್ವೋ ಬಸ್ಸಿನ ಟಿಕೇಟನ್ನು, ೭೦೦ ರೂಪಾಯಿ ಕೊಟ್ಟು, ಕೊಂಡು ಪಯಣಿಸುತ್ತೇವೆ ಆದರೆ ಮುರುಕಲು ಬಸ್ಸಿನ ಮೇಲೆ ಮಿತ್ರರೊಡನೆ ಹರಟುತ್ತ ಸಾಗುವಾಗ ಸಿಗುತ್ತಿದ್ದ ಆನಂದ ಈಗ ವಿರಳ...

Thursday, May 13, 2010

ಹಾಳು ಹರಟೆ

ಸುಮ್ಮನೆ ಕೂತು ಏನೂ ಮಾಡದೆ ಹಾಗೆಯೆ ವಿಚಾರಗಳ ಲಹರಿಯನ್ನು ಮನದಲ್ಲಿ ಹರಿಬಿಟ್ಟು ಬಹಳ ದಿನಗಳಾಗಿದ್ದುವು; ಇಂದು ಸ್ವಲ್ಪ ಸಮಯ ಮಾಡ್ಕೊಂಡು ಕೂತಿದ್ದೀನಿ. ಎದ್ದು ಕಾಣುವ ಸಿಂಗಲ್ ಫ಼್ಯಾಮಿಲೀ ಪ್ಯಾಕ್ ಹೊಟ್ಟೆಯನ್ನು ನೇವರಿಸುತ್ತ ಅದನ್ನು ಕರಗಿಸುವ ಹಗಲುಗನಸುಗಳನ್ನು ಕಂಡದ್ದಾಯಿತು. ಸ್ವಲ್ಪ ಸಮಯದ ಕೆಳಗೆ ಅಮ್ಮ ಹಾಗು ಅಮ್ಮನ ತೊಡೆಯ ಮೇಲೆ ಮಲಗಿದಾಗ ಸಿಗುವ ಸಂತಸದ ಅರಿವನ್ನು ಮತ್ತೆ ಮೂಡಿಸಿದ ಒಂದು ಬ್ಲಾಗನ್ನು ಓದಿದೆ. ಚೆನ್ನಾಗಿದೆ - ನೀವು ಸಹ ಅದನ್ನು ಓದಿ ಆನಂದಿಸಬಹುದು : http://sampada.net/blog/harish-athreya/09/05/2010/25300