Wednesday, January 26, 2011

ಮಿತ್ರರೊಡನೆ ವಾಸ

ಮಿತ್ರರೊಡನೆ ಒಂದೇ ಮನೆಯಲ್ಲಿ ವಾಸಿಸುವ ಮಜವೇ ಬೇರೆ. ಅಂತಹ ಕೆಲ ಸ್ವಾರಸ್ಯಕರ ಸನ್ನಿವೇಶಗಳು ಇಲ್ಲಿವೆ - ಕೆಲವು ಕೇಳಿದ್ದವು, ಕೆಲವು ಅನುಭವಿಸಿದ್ದವು. ಕೆಲ ಕಡೆ, ಓದುಗರಲ್ಲಿ ಸ್ವಾರಸ್ಯ ಹೆಚ್ಚಿಸಲು ವಿಷೇಶ ಪದಗಳನ್ನು ಹಾಕಲಾಗಿದೆ.


ಫ್ಲಶ್!

ಅಪರೂಪಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಕೈಯಿಂದ ಬಟ್ಟೆಯನ್ನು ಅಟ್ಯಾಚ್ಡ್ ಬಾತ್ರೂಮಿನಲ್ಲಿ ತೊಳೆದರೆ ಏನಾಗಬಹುದು? ಊಹಿಸಿ :) ಏನಾದರು "ಅನಾಹುತ" ಆಗಲೇ ಬೇಕಲ್ಲವೇ? ಬೆನ್ನು ನೋಯಿಸಿಕೊಂಡು, ಬಟ್ಟೆ ತಿಕ್ಕಿ, ನೀರಿನಲ್ಲಿ ೨ ಬಾರಿ ತೊಳೆದು, ಬಟ್ಟೆಯನ್ನು ಹಿಂಡಿ ತಗೆದಿಟ್ಟು ಇನ್ನೇನು ಮುಗಿಯಿತು, ಈ ನೀರನ್ನು ಎಸೆಯಬೇಕು ಅನ್ನುವಷ್ಟರಲ್ಲಿ ಸುಸ್ತಾಗಿಬಿಟ್ಟಿರುತ್ತದೆ. ಆ ನೀರಿನಲ್ಲಿ ಇನ್ನೇನಾದರೂ ಉಳಿದಿದೆಯೆ ಎಂದು ನೋಡಲೂ ಸಹ ಮನಸ್ಸಿರುವುದಿಲ್ಲ. "ನೀರನ್ನು ಇನ್ನೇನು ಕಮೋಡಿನಲ್ಲಿ ಸುರಿದರೆ ಎರಡು ಕೆಲಸಗಳಾಗುತ್ತವೆ - ನೀರು ಎಸೆದಂತಾಗುತ್ತದೆ ಹಾಗು ಗಲೀಜಾದ ಕಮೋಡನ್ನು ಅಪರೂಪಕ್ಕೆ ಸ್ವಲ್ಪ ಮಟ್ಟಿಗೆ ತೊಳೆದಹಾಗಾಗುತ್ತದೆ", ಎಂಬ ಅತಿ ಜಾಣ್ಮೆಯ ಕಿಡಿ ಮನಸ್ಸಿನಲ್ಲಿ ಬಿದ್ದಾಗ ಎಲ್ಲ ಶುರುವಾಗುತ್ತದೆ. ಒಳಒಳಗೆ ಆದ ಸಂತೋಷದ ಗುಂಗಿನಲ್ಲಿ ಬಕೀಟನ್ನು ಎತ್ತಿ ನೀರನ್ನು ಕಮೋಡಿಗೆ ಸುರಿಯಲು ಶುರು ಮಾಡಲಾಗಿದೆ - ಅಷ್ಟರಲ್ಲಿ, ಅದೋ, ಅಲ್ಲಿ ಹೋಯಿತು ಆ ಅರ್ಧ ತೋಳಿನ ಬನಿಯಾನು... ಮೊನ್ನೆ ತಂದ ಕರ್ಚೀಫು... ಕಮೋಡು ಇವರಿಬ್ಬರನ್ನು "ಸ್ವಾಹಾ" ಅನ್ನುತ್ತಿದ್ದ ಹಾಗೆ, ಮೈ ಮೇಲಿನ ಧ್ಯಾನ ಮತ್ತೆ ಮರಳಿ ಬಕೀಟನ್ನು ಆಚೆ ಸರೆಸಿ, ಅದರಲ್ಲಿ ಉಳಿದ ಸ್ವಲ್ಪ ನೀರಿನಲ್ಲಿ ಇನ್ನೇನಾದರು ಇದೆಯೇ ಎಂದು ನೋಡಿದಾಗ ಏನೂ ಇರುವುದಿಲ್ಲ. ಹೋಗಿದ್ದು ಹೋಯಿತು, ಇನ್ನೇನು ಕಮೋಡಿನಲ್ಲಿ ಕೈ ಹಾಕುವುದು ಬಾಕಿ!

ಇವತ್ತಿನ ತಿಂಡಿ ಮ್ಯಾಗೀ!!

ಸಾಮಾನ್ಯವಾಗಿ ಯಾವುದೇ ತಿಂಡಿ ತಯಾರು ಮಾಡಲು ೩೦ ನಿಮಿಶಗಳಿಗಿಂತ ಹೆಚ್ಚು ಸಮಯ ಬೇಕಾಗುವುದಿಲ್ಲ - ಆದರೆ ಸಮಯ ಯಾರ ಹತ್ತಿರ ಇದೆ? ವಾರದಲ್ಲಿ ೩-೪ ದಿನ ಮ್ಯಾಗಿ ಸರ್ವೇಸಾಮನ್ಯ!

ನಾಳೆ ಬೆಳಿಗ್ಗೆ ನನ್ನ ಬೇಗನೆ ಎಬ್ಬಿಸು

ಬೆಳಗಿನ ಜಾವ (ಅಂದರೆ ೭ ಘಂಟೆಯ ಮೇಲೆ - ೭ ಘಂಟೆ ಆಗುವ ಮುಂಚಿನ ಸಮಯ "ಮಧ್ಯರಾತ್ರಿ"ಯಲ್ಲಿ ಬರುತ್ತದೆ! ) ಎಷ್ಟೇ ಬಾರಿ ಅಲಾರ್ಮ್ ಹೊಡೆದುಕೊಂಡರೂ ಕೈ ಅಲಾರ್ಮನ್ನು ಬಂದ್ ಮಾಡುತ್ತದೆಯೇ ವಿನಹ ದೇಹ ಮಂಚವನ್ನಗಲಿ ಕದಲುವುದಿಲ್ಲ. ಇಂತಹ ಸಮಯದಲ್ಲಿ ಒಬ್ಬರು ಇನ್ನೊಬ್ಬರನ್ನು ಎದ್ದೇಳಿಸಲು ಹೇಳಿ ಮಲಗುವುದು ಸರ್ವೇಸಾಮಾನ್ಯ. ಇದಾದ ಮೇಲೆ, ಇಬ್ಬರೂ ಏಳುವುದು ೮ ಘಂಟೆ ಆದ ಮೇಲೆಯೇ!

ನನ್ನ ಸಾಕ್ಸ್ ಎಲ್ಲಿ?!

ಅವನು (ಹೆಸರು ’ವಿನೋದ’ ಅಂತ ಅಂದ್ಕೊಳ್ಳಿ) ಮನೆ ಹೊಕ್ಕಾಗ ಸಮಯ ಸಾಯಂಕಾಲದ ೭ ಘಂಟೆ. ವಿನೋದನಿಗೆ, ಪ್ರತಿ ಅವಿವಾಹಿತ ಯುವಕನಂತೆ , ಏನನ್ನೂ ಮುಂಚಿತವಾಗಿ ಜೋಡಿಸಿ ಅಭ್ಯಾಸವಿಲ್ಲ. ಕಾಲಿಗೆ ತೊಡಿಸಿದ ಕಾಲುಚೀಲಗಳು (ಸಾಕ್ಸ್) ಹೊರಗಿನ ಕೋಣೆಯಲ್ಲಿ ಒಂದು ವಾರದಿಂದ ತಯಾರಾಗಿ ನಾನಾ ತೆರನೇಯ ಸುವಾಸನೆಗಳನ್ನು ಹೊಮ್ಮಿಸುತ್ತಲಿರುವ ವಿಧವಿಧ ಬಣ್ಣಗಳಿಂದ ಕೂಡಿದ ಗುಂಪೊಂದನ್ನು ಸೇರುವುದರಲ್ಲಿದೆ. ಈ ಸುವಾಸನೆ ಎಲ್ಲರ ಗಮನವನ್ನು ಕನಿಷ್ಟ ೩-೪ ದಿನಗಳಿಂದ ಸೆಳೆಯುತ್ತಲೇ ಇದೆ; ಇನ್ನೊಂದು ದಿನ ಕಳೆದರೆ, ಮೇಲಿನ ಮನೆಯವರು ಸತ್ತ ಇಲಿಯನ್ನು ಹುಡುಕಿಕೊಂದು ನಮ್ಮ ಮನೆಯ ಬಾಗಿಲನ್ನು ತಟ್ಟಿದರೆ ಆಶ್ಚರ್ಯವೇನಿಲ್ಲ. ರಾತ್ರಿ ಕಳೆದು ಬೆಳಗಾಗುತ್ತದೆ - ವಿನೋದನಿಗೆ ಬೆಳಗಿನ ಜಾವ ಬೇಗನೆ ಎದ್ದು ಆಫೀಸಿಗೆ ಹೋಗಬೇಕಾದ ಸಮಯ; ಅಪರೂಪಕ್ಕೆ ಸ್ನಾನ ಮಾಡಲಾಗಿದೆ ಇಂದು. ಎಂದಿನಂತೆ ಕ್ಯಾಬ್ ಬಂದು ಇವರಿಗಾಗಿ ಕಾಯುತ್ತಿದೆ... ಆದರೆ, ಕಾಲಿಗೆ ತೊಡಿಸಲು ಕಾಲುಚೀಲಗಳೆಲ್ಲಿ???

Monday, January 24, 2011

ಮೇಡಂನ ಬೆಚ್ಚಿ-ಬೀಳಿಸಿದ ಪ್ರಸಂಗ

ಮೇಡಂ ನ ಬೆಚ್ಚಿ-ಬೀಳಿಸಿದ ಪ್ರಸಂಗ

ಬಿ.ಈ. ತರಗತಿಗಳಲ್ಲಿ ಮಾಡಿದ ಹಲವಾರು ’ಅತಿ’ ಜಾಣ್ಮೆಯ ಕೆಲಸಗಳಲ್ಲಿ ನನಗಿಂದು ನೆನಪಿಗೆ ಬಂದದ್ದು ಈ ಸನ್ನಿವೆಷ.

ಸಾಯಂಕಾಲದ ೩ ಘಂಟೆಯಾಗಿದೆ. ಕಾಲೇಜಿನ ಎರಡನೇಯ ಅಂತಸ್ತಿನ ಕೊಠಡಿಗಳು ಸೂರ್ಯನ ಶಾಖಕ್ಕೆ ಸುಡುವ ಕಾವಲಿಯಂತೆ ಕಾದು, ಊಟ ಮಾಡಿ ಪಾಠ ಕೇಳಲು ಕುಳಿತ ವಿದ್ಯಾರ್ಥಿಗಳು ತೂಕಡಿಸುವಂತೆ ಮಾಡಿತ್ತು. ತೆರೆದ ಕಿಟಕಿಗಳು (ತೆರೆಯುವುದಿನ್ನೇನಿದೆ - ಗಾಜಿನ ಕಿಟಕಿಗಳಿಗೆ ಗಾಜೇ ಇಲ್ಲ), ಕಿಟಕಿಗಳಿಂದ ಒಳಚಿಮ್ಮುತ್ತಿದ್ದ ಸೂರ್ಯನ ಕಿರಣಗಳು, ಹಳೇಯ (ಆದರೆ ಗಟ್ಟಿಮುಟ್ಟಾದ) ಬೆಂಚುಗಳು, ದೂರದಲ್ಲಿ ಪೋಡಿಯಂ ಮೇಲೆ ತರಗತಿಯತ್ತ ಬೆನ್ನು ಮಾಡಿ ಬೋರ್ಡಿನ ಮೇಲೆ ,ಮಗ್ನವಾಗಿ, ಚಾಕ್ ಬಳಸಿ ಬರೆಯುತ್ತಿದ್ದ ಮೇಡಂ, ಇತ್ಯಾದಿ, ಇತ್ಯಾದಿ... ಇವೆಲ್ಲವನ್ನು ನೋಡುತ್ತ, ಪಾಠದೆಡೆ ಗಮನ ನೀಡದೆ ಅತೃಪ್ತನಂತೆ ಹೊರ ಹೋಗಲು ಕಾಯುತ್ತಿದ್ದೆ. ನನ್ನ ಜೊತೆ ಸೂರಿ; ಇಬ್ಬರೂ ಸೇರಿ ನಮ್ಮ ಡಿಪಾರ್ಟಮೆಂಟಿನ ಫೋರಂ ಕೆಲಸದ ನಿಮಿತ್ತ ಹೊರಹೋಗಬೇಕಿತ್ತು; ಆದರೆ ಹೋಗುವುದು ಹೇಗೆ? ೩.೩೦ ಗೆ ನಾವು ಹೋಗಬೇಕು - ತರಗತಿ ಶುರುವಾಗುತ್ತಿದ್ದಂತೆಯೆ ಮೇಡಂನ್ ಜೊತೆ ನಾವಿಬ್ಬರು ಇದರ ಕುರಿತು ಮಾತನಾಡಿದ್ದೆವು - ೩.೩೦ಗೆ ನಾವು ಹೊರ ಹೋಗುವುದಾಗಿ ತಿಳಿಸಿದ್ದೆವು; ಆದರೆ ಸಮಯ ಈಗ ೩.೪೦ ಆಗಿ ಹೋಗಿದೆ! ಮೇಡಂ ಇತ್ತ ತಿರುಗುತ್ತಿಲ್ಲವೇಕೆ? ನಮ್ಮನ್ನು ಹೋಗಲು ಹೇಳುತ್ತಿಲ್ಲ - ಏಕೆ? ತಲೆಯಲ್ಲಿ ಹಲವಾರು ಇಂತಹ ವಿಚಾರಗಳ ಸರಮಾಲೆಯೇ ಸುತ್ತುತಿವೆ.

ಅಷ್ಟರಲ್ಲಿ ಸೂರಿ ನನ್ನನ್ನು ಕುರಿತು ಸಣ್ಣ ದನಿಯಲ್ಲಿ ಪಿಸುಗುಟ್ಟುತ್ತಾನೆ,
"ವಿನಿ! ಅವಿನಾಶ್ ಸರ್ ಕರೆದಿದ್ರಲ್ಲ ಫೋರಂ ಕೆಲಸಕ್ಕೆ? ಹೋಗೋಣ? ಮೇಡಂನ್ ಕೇಳು!"
ನಾನು, "ಸರಿ - ಸ್ವಲ್ಪ ಕಾಯೋಣ" ಅಂದೆ. ಮನಸ್ಸಿನಲ್ಲಿ ಕಾಯುವ ಇಷ್ಟ ಕಿಂಚಿತ್ತೂ ಇಲ್ಲ - ಆದರೆ ಮೇಡಂ ಯಾಕೆ ತಿರ್ಗ್ತಿಲ್ಲಾ ಗೋಡೆ ಬಿಟ್ಟು?

ಅಟೆಂಡರ್ ಒಬ್ಬರು ಬಂದರು ತರಗತಿಯೊಳಗೆ. ಅವಿನಾಶ್ ಸರ್ ಕರೆ ಕಳುಹಿಸಿರಬೇಕು ಅಂತ ಅಂದುಕೊಂಡು ಖುಶಿಯಾಯಿತು. ಅವರು ಒಳಬಂದವರೇ ಸೀದಾ ಮೇಡಂನ ಡೆಸ್ಕಿಗೆ ಹೋಗಿ ಮೇಡಂಗೆ ಕರೆ ನೀಡಿದರು. ಮೇಡಂ, ಅಟೆಂಡರ್ ತಂದ ಕಾಗದದ ಮೇಲೆ ಸಹಿ ಹಾಕಿ ಕಳುಹಿಸಿಬಿಟ್ಟರು... ಅರೆ! ನಮ್ಮನ್ನು ಕರೆಯಲು ಯಾರೂ ಬರಲಿಲ್ಲವೆ? ಛೆ! ಸಮಯ ೪ ಘಂಟೆ!

ಇನ್ನು ತಡೆಯುವುದರಲ್ಲಿ ಅರ್ಥವಿರಲಿಲ್ಲ. ಅಷರಲ್ಲಿ ಸೂರಿ ಮತ್ತೊಮ್ಮೆ ಕೇಳಿದ,
"ವಿನಿ, ಇಗ ಕೇಳೋಣ?"
ನಾನು,"ಸರಿ, ಮೇಡಂನ ಕೇಳ್ತಿನಿ", ಅಂದೆ.

ಮೇಡಂ ಇನ್ನೂ ಬೋರ್ಡಿನತ್ತ ಮುಖ ಮಾಡಿ ಬರೆಯುತ್ತಲೇ ಇದ್ದಾರೆ. ನಾನು ನನ್ನ ಜಾಗದಿಂದ ಎದ್ದು ಮೇಡಂನತ್ತ ಸದ್ದು ಮಾಡದೆ ಧಾವಿಸತೊಡಗಿದೆ. ತಪ್ಪನ್ನೇನು ಮಾಡಿರದಿದ್ದರೂ, ತರಗತಿಯನ್ನು ತಪ್ಪಿಸಿ ಹೋಗಲು ಅನುಮತಿ ಕೇಳಲು ಹೊರಟಾಗ, ಮನಸ್ಸಿನಲ್ಲಿ ಒಂದು ತೆರನೇಯ ದುಗುಡ - ಆತಂಕ. ನಾನು ಇನ್ನೇನು ಪೋಡಿಯಂ ಹತ್ತಿರ ಬಂದೆ ಎನ್ನುವಷ್ಟರಲ್ಲಿ ಎಲ್ಲರ ಗಮನ ನನ್ನತ್ತ; ಆದರೆ ಮೇಡಂ ಮಾತ್ರ ತಿರುಗುವ ಮನಸ್ಸನ್ನು ಇನ್ನು ಮಾಡಿಲ್ಲ. ಎಂತಹ ವಿಪರ್ಯಾಸ! ಮೆಲ್ಲನೆ ಮೇಡಂನ ಕರೆದೆ. ಆದರೆ ಅವರಿಂದ ಉತ್ತರ ಬರಲಿಲ್ಲ. ಬೋರ್ಡಿನ ಮೇಲೆ ಚಾಕ್ ಕೆರೆಯುವ ಸದ್ದು ಹುಡುಗರ ಗುಜುಗುಜುವಿನೊಡನೆ ಬೆರೆತು ಹೊಮ್ಮುತ್ತಿದೆ. ಮೇಡಂ ಮಾತ್ರ - ಊಹುಂ - ಆಲಿಸುತ್ತಿಲ್ಲ. ಅವರ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ.

ಸದ್ದು ಮಾಡುವ ಇಷ್ಟ ನನಗಿರಲಿಲ್ಲ (ತಪ್ಪು ಮಾಡಲು ಮೂಲ ಕಾರಣ!). ಮೆಲ್ಲನೆ ಪೋಡಿಯಂ ಹತ್ತಿದೆ. ಮೇಡಂನ ಪಕ್ಕ ಬಂದು ನಿಂತೆ. ಕೈ ಚಾಚಿದರೆ ಮುಟ್ಟುವಷ್ಟು ದೂರ. ಮೇಡಂ ನನ್ನನ್ನು ಇನ್ನೂ ಗಮನಿಸಿಲ್ಲ... ಇದನ್ನು ನಾನೂ ಗಮನಿಸಿಲ್ಲ.

ಬಾಯಿ ತೆರೆದೆ, "ಮೇಡಂ...."

ತರಗತಿಯಲ್ಲೆಲ್ಲೆಡೆ ಮಂದ ಗುಜುಗುಜು ಮಿಶ್ರಿತ ನಗು ತೇಲುತಿದೆ...

ಮೇಡಂ ನಾನು ಕರೆದಾಕ್ಷಣ ಬೆಚ್ಚಿ ಬಿದ್ದು, ಹೆದರಿಕೆಯಿಂದ ಕೂಡಿದ ಕಣ್ಣುಗಳಿಂದ ನನ್ನನು ನೋಡಿ ಚಾಕ್ ಇಲ್ಲದ ಕೈಯನ್ನು ತಮ್ಮ ಎದೆಗವಚಿ ತಮ್ಮ ಜೀವನದಲ್ಲಾದ ಈ ವಿಚಿತ್ರ ಶಾಕ್ನ್ ನಿಂದ ಹೊರ ಬರಲು ಯತ್ನಿಸಿದರು. ಯಶಸ್ಸನ್ನು ಕಂಡರೆನ್ನಿಸುತ್ತದೆ. ಅಷ್ಟರಲ್ಲಿ ನಾನು, "ನಾನು ಹಾಗು ಸುರೇಶ್ ಅವಿನಾಶ್ ಸರ್ ಅನ್ನು ಫೋರಂ ವಿಶಯವಾಗಿ ಈಗ ಭೆಟ್ಟಿಯಾಗಬೇಕು - ನಾವು ತರಗತಿಯಿಂದಾಚೆ ಹೋಗಬಹುದೆ?", ಎಂದು ಉಸುರಿಯಾಗಿತ್ತು.

ಮೇಡಂ ಇನ್ನು ಶಾಕ್ ನಲ್ಲಿ, ತಮ್ಮ ಗೋಣನ್ನು "ನನಗೆ ಸಮ್ಮತಿ ಇದೆ" ಎನ್ನುವ ರೀತಿಯಲ್ಲಿ ಅಲುಗಾಡಿಸಿದ್ದೇ ತಡ, ಅವರಿಗೆ ಧನ್ಯವಾದಗಳನ್ನರ್ಪಿಸಿ, ನಾನು ಮಾಡಿದ ಅವಾಂತರ ನೆನೆದುಕೊಳ್ಳುತ್ತ, ಸೂರಿಯೊಡನೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ನಮ್ಮೋಡನೆ ಕೊನೇಯ ಬೆಂಚಿನಲ್ಲಿ ಕುಳಿತಿದ್ದ ಸಹಪಾಠಿಗಳು ತಾವೂ ತರಗತಿಯಿಂದ ಹೊರ ಬರುವುದು ಹೇಗೆ ಎಂದು ಕೇಳಿದರಾದರೂ, ನಾನು ನನ್ನ ಈ ವರ್ತನೆಯಿಂದ ಪ್ರಭಾವಿತನಾಗಿದ್ದು, ನನ್ನ ತಲೆಯನ್ನು ಕೆರೆಯುತ್ತ "ಫೋರಂ ಕೆಲಸ" ಎಂದು ಹೇಳಿ ಅಲ್ಲಿಂದ ಹೊರಟೆ. ಪಾಪ, ಮೇಡಂ. :)