Wednesday, March 7, 2012

ನನಗೆ ನೀಡಿದ ಉಡುಗೊರೆ ನೀನು

ಸೂರ್ಯನ ಕಿರಣಗಳು ಕಿಟಕಿಯಿಂದ ಇಣುಕಿ ತನ್ನ ಸ್ಟಡಿ-ಟೇಬಲ್ ಮೇಲೆ ಬೀಳುತ್ತಿರುವುದು ಹೊಸತೇನಲ್ಲ. ಆದರೆ,ಇವತ್ತು ಯಾಕೋ ಇದರಲ್ಲಿ ಏನೋ ವಿಶೇಷವಾದದ್ದು ಕಂಡವಳಂತೆ ಮಂದಹಾಸ ಬೀರಿದಳು ಜ್ಯೋತಿ.ಛಳಿಗಾಲದ ಆಗಮನವಾಗಿತ್ತು. ಹಬೆಯಾಡುತ್ತಿರುವ ಕಾಫಿಯ ಲೋಟವನ್ನು ಭದ್ರವಾಗಿ ತನ್ನೆರಡು ಪುಟ್ಟ ಕೈಗಳಲ್ಲಿ ಹಿಡಿದು, ಮೆಲ್ಲನೆ ಹಿತವಾದ ಕಾಫಿಯನ್ನು ಹೀರುತ್ತ  ಮನೆಯನ್ನೆಲ್ಲ ತಿರುಗಿದಳು. "ಎಂದೂ ಇಲ್ಲದ ಸೋಮಾರಿಗೆ ಇಂದು ಅಂತಹದ್ದೇನು ಉತ್ಸಾಹ ಹುಟ್ಟಿತೋ?", ಅಂತ ಮನಸ್ಸಿನಲ್ಲಿ ತನಗೆ ತಾನೇ ಪ್ರಶ್ನೆಯನ್ನು ಹಾಕುತ್ತ, ಮನೆಯ ಕಿಟಕಿಗಳನ್ನೆಲ್ಲ ತೆರೆಯುತ್ತ ಮುನ್ನಡೆದಳು. ಇಂದೇನು ವಿಶೇಷವಂತೂ ಅಲ್ಲ - ಹಬ್ಬದ ದಿನವಲ್ಲ; ಅಪ್ಪ-ಅಮ್ಮ ಮನೆಗೆ ಬರ್ತೀನಿ ಅಂತೇನು ಹೇಳಿಲ್ಲ. ಸಾಮನ್ಯವಾದ "ಸಂಡೇ". ಗೆಳತಿಯರ್ಯಾರೂ ಫೋನ್ ಸಹ ಮಾಡಿಲ್ಲ. "ನನ್ನ ತಲೇಲಿ ಏನೋ ಎಡವಟ್ಟಾಗಿದೆ!",ಅಂತ ತನಗೆ ತಾನೇ ಮೆಲ್ಲನೆ ಉಸುರುತ್ತ ಅಂದಿನ "ಕ್ಲೀನಿಂಗ್" ಕಾರ್ಯಕ್ಕೆ ಕೈ ಹಾಕಿದಳು.

ಸಾಮಾನ್ಯವಾಗಿ ಎಲ್ಲಾ ಕೆಲಸಗಳು ಮುಗಿದು ಮಧ್ಯಾಹ್ನದ "ಬ್ರಂಚ್" ಆಗುವಷ್ಟರಲ್ಲಿ ೧ ಘಂಟೆ ಆಗಿ ಹೋಗ್ತಿತ್ತು. ಆದರೆ ಇವತ್ತು ಯಾಕೋ ಸಮಯ ನಿಂತೇ ಹೋಗಿದೆ ಏನೋ ಅಂತ ಅನ್ನಿಸಿತು ಅವಳಿಗೆ. ಸಮಯ ನೋಡಿದ್ರೆ ಇನ್ನು ಬೆಳಗಿನ ಜಾವ ೯ ಘಂಟೆ ಮಾತ್ರ ಆಗಿದ್ದನ್ನು ನೋಡಿ ಸ್ವಲ್ಪ ಕಿರಿಕಿರಿಯಾಗಿ, ಹುಸಿಮುನಿಸನ್ನು ಪಕ್ಕದ ರೂಮಿನಲ್ಲಿ ಮಲಗಿದ್ದ ತಂಗಿಯ ಮೇಲೆ ತೀರಿಸಿಕೊಳ್ಳುವ ಮನಸ್ಸಾಯಿತು. ತಂಗಿಯನ್ನು ಕುರಿತಾಗಿ,"ಲೇ, ಸೋಂಬೇರಿ... ಬಿಸಿಲು ನೆತ್ತಿಗೇರಿದ್ರೂ ನೀನು ಮಾತ್ರ ಬೇಡ್ದಲ್ಲಿ ಬಿದ್ಕೊಂಡು ನಿನ್ನ ಶಾಹರುಖ್ ಖಾನ್ ಕನಸುಗಳನ್ನ ಕಾಣೋದು ಬಿಡೋಲ್ವಲ್ಲೆ! ಎದ್ದೇಳು - ಮನೆ ಕ್ಲೀನ್ ಮಾಡ್ಬೇಕು!", ಎಂದು ಅಬ್ಬರಿಸಿದಳು.

"ತಿಂಡಿ ರೆಡಿ ಆಗಿದೆ ನಾ?...", ಅಂತ ಮೆಲ್ಲನೆ ಉಸುರಿದಳು ತಂಗಿ, ಪ್ರೀತಿ. ತನ್ನ ಎಂ.ಬೀ.ಏ. ವ್ಯಾಸಂಗದ ನಿಮಿತ್ತ ಮನಸ್ಸಿಲ್ಲದಿದ್ದರೂ ಪ್ರತಿ ದಿನ ೨-೩ ಘಂಟೆಗೇ ಮಲಗುವ ಪೈಕಿಯಾದ ಅವಳು , ಇನ್ನು ನಿದ್ದೆಗಣ್ಣಿನಲ್ಲೇ ಮಿಸ್ಕಾಡದೆ ಉಸುರಿದಳು.

"ತಿಂಡಿಯೇನು ಆಕಾಶದಿಂದ ಉದುರೋತ್ತಾ? ಮಾಡ್ಬೇಕು ಇನ್ನು. ಮೊದಲು ಎದ್ದು ನನಗೆ ಸ್ವಲ್ಪ ಕಸ ತಗೆಯೋಕ್ಕೆ ಸಹಾಯ ಮಾಡು...", ಅವಳ ಮಾತಿನಲ್ಲಿ ಅವಳಿಗೇ ಅಚ್ಚರಿ ಬರಿಸುವಂತಹ ಗಾಂಭೀರ್ಯವಿತ್ತು.

ಸ್ವಲ್ಪ ಹೊತ್ತು ತಂಗಿಯಿಂದ ಏನು ಪ್ರತಿಕ್ರಿಯೆ ಬರದದ್ದನ್ನು ಗಮನಿಸಿ, ಸುಮ್ಮನೆ ಅಲ್ಲೇ ನಿಂತು ಬಿಟ್ಟಳು ಅವಳು.

"ಪ್ರೀತೀ, ಸ್ವಲ್ಪ ಸಹಾಯ ಮಾಡ್ತಿಯಾ...?", ಅಂತ ಅವಳು ಮಾತು ಮುಗಿಸುವಷ್ಟರಲ್ಲಿ ಬೆಡ್ಡಿನ ಮೇಲೆ ಧಿಡೀರನೆ ಎದ್ದು ಕೂತ ಪ್ರೀತಿ, "ಏನಕ್ಕಾ ನಿನ್ ಕಿರಿಕಿರಿ. ಪ್ರತೀ ದಿನ ನಿದ್ದೆಯಿಲ್ಲ ನನಗೆ. ಅದರಲ್ಲಿ ಇವತ್ತು ಅಪರೂಪಕ್ಕೆ ಒಳ್ಳೆ ಕನಸು ಬಿಳ್ತಿತ್ತು - ಕಲ್ ಹಾಕ್ಬಿಟ್ಟೆ ನೀನು!

ಸುಮ್ನೆ ಹೋಗಿ ಮಲ್ಕೊಳ್ಳೋದಬಿಟ್ಟು ನನ್ ಜೀವ ಯಾಕ್ ತಿಂತೀಯಾ? ಭಾವ ಇದ್ದಿದ್ರೆ...", ಅಂದವಳೇ ಕಲ್ಲಾಗಿಬಿಟ್ಟಳು.

ಒಂದು ಕ್ಷಣಾರ್ಧದಲ್ಲಿ ಎಲ್ಲೆಡೆಯೂ ಮೌನ ಆವರಿಸಿತ್ತು. ಇಬ್ಬರೂ ಮಾತನಾಡಲಿಲ್ಲ. ಜ್ಯೋತಿಯ ಕಣ್ಣುಗಳಿಂದ ಕಂಬನಿಗಳೆರದು ಕೆನ್ನೆಯನ್ನು ಜಾರಿ ನೆಲಕ್ಕೆ ಬಿದ್ದವು. ಅಂದು ಜಗದೀಶನ ಹುಟ್ಟುಹಬ್ಬವಾಗಿತ್ತು.

ಜ್ಯೋತಿಯ ಗಂಡ ಜಗದೀಶ ತೀರಿಕೊಂಡು ೩ ವರ್ಷಗಳು ಉರುಳಿಹೋಗಿದ್ದುವು. ಅವನು ಬದುಕಿದ್ದಾಗ ಅವನ ಕಣ್ಣಲ್ಲಿ ಒಂದೇ ಒಂದು ದಿನ ಸಹ ಕಣ್ಣಿರು ಕಂಡವಳಲ್ಲ ಜ್ಯೋತಿ; ಮಾತು ಕಡಿಮೆಯಾದರೂ, ನಗುನಗುತ್ತ ಸಂತೋಷದಿಂದ ಇರುವ ಪೈಕಿ. ಕಷ್ಟಗಳಿರಲಿಲ್ಲ ಅಂತೇನಿಲ್ಲ; ಆದರೆ ಚಿಂತೆ ಅಥವಾ ಸಿಟ್ಟು ಮಾಡಿಕೊಳ್ಳುವುದು ಅವನ ಪ್ರವೃತ್ತಿಯಾಗಿರಲಿಲ್ಲ. ಸಂಯಮ ಹಾಗು ನಂಬಿಕೆಯಿಂದ ಕೂಡಿದ ವ್ಯಕ್ತಿ. ಅದೇ ಪ್ರವೃತ್ತಿ ಪ್ರೀತಿಯ ಪ್ರಾಣ ಉಳಿಸಿತ್ತು.

"ಅಕ್ಕಾ, ಸಾರಿ ಅಕ್ಕಾ! ನಿನ್ನ ಬೇಜಾರ್ ಮಾಡ್ಸೋ ಉದ್ದೇಶ ಇರ್ಲಿಲ್ಲ ನಂದು. ಭಾವ ನೆನ್ಪಾದ್ರು. ಸಾರಿ....", ಎಂದವಳೇ ಎದ್ದು ಬಂದು ಅಕ್ಕನನ್ನು ತಬ್ಬಿಕೊಂಡು ಕಣ್ಣೀರಿಟ್ಟಳು.

"ಅಯ್ಯೋ ಹುಚ್ಚಿ... ನನಗೆ ಬೇಜಾರಿಲ್ಲ; ಆದರೆ ನಿನ್ನ ಭಾವನ ನೆನಪುಗಳು ನೋಡು... ಬೆನ್ನು ಬಿಡೋದಿಲ್ಲ ಅನ್ನುತ್ತವೆ. ಇರ್ಲಿ ಮಹಾರಾಣಿ, ಈಗ ಎದ್ದೇಳ್ತಿಯೋ,ವೊದೆ ಬೇಕೋ?", ಅಂತ ಹುಸಿ ಮುನಿಸನ್ನು ತೋರಿದಳು ಜ್ಯೋತಿ.

--- ೦ ---

ವೃತ್ತಿಯಿಂದ ವೈದ್ಯನಾಗಿದ್ದ ಜಗದೀಶ, ತನ್ನ ಬಾಲ್ಯವನ್ನು ಬಡತನದಲ್ಲಿ ಒಂದು ಅನಾಥಾಶ್ರಮದಲ್ಲಿ ಕಳೆದಿದ್ದ. ತನ್ನ ತಂದೆ-ತಾಯಿ ಯಾರೆಂದು ಅವನಿಗೆ ಗೊತ್ತಿರಲಿಲ್ಲ; ದೊಡ್ಡವನಾಗುತ್ತಾ ತನ್ನ ಹೊತ್ತ ತಾಯಿಯನ್ನೂ ಗೊತ್ತು ಮಾಡಿಕೊಳ್ಳುವ ಆಸಕ್ತಿಯಿದ್ದರೂ,ಬಿಳಿ ಕಾರೊಂದು ಅನಾಥಾಶ್ರಮದ ಬಾಗಿಲಲ್ಲಿ ತನ್ನನ್ನು ಬಿಟ್ಟು ಹೋಗಿತ್ತು ಅನ್ನೋ ವಿಷಯ ತನ್ನ ಗಮನಕ್ಕೆ ಬಂದಾಕ್ಷಣ ತನಗೆ ತಂದೆ-ತಾಯಿ, ಬಂಧುಗಳೆಲ್ಲ  ಎಲ್ಲ ತನ್ನ ಅನಾಥಾಶ್ರಮ ಎಂದು ನಿರ್ಧರಿಸಿ ಬಿಟ್ಟ. ಓದಿನಲ್ಲಿ ಹಾಗು ಆಟದಲ್ಲಿ ಎತ್ತಿದ ಕೈ ಜಗದಿಶನದ್ದು. ದಾನಿಗಳೊಬ್ಬರು ಇವನ ಉಜ್ವಲ ಭವಿಷ್ಯಕ್ಕೆ ನೆರವಾದರು. ಅವನಿಗೆ ಉನ್ನತ ವಿಧ್ಯಾಭ್ಯಾಸ ನಿಡಿಸಿ ಅವನನ್ನು ಪ್ರೋತ್ಸಾಹಿಸಿದರು. ತಕ್ಕಂತೆ ಚೆನ್ನಾಗಿ ಓದಿ, ಆಟ-ಪಾಠಗಳಲ್ಲಿ ಸಮನಾಗಿ ಭಾಗವಹಿಸಿ ಸರಕಾರೀ ವೈದ್ಯನಾಗಿ ಹಳ್ಳಿಯೊಂದರಲ್ಲಿ ಸೇರಿದ. ತನಗೆ ಆಶ್ರಯವಿತ್ತ ಅನಾಥಾಶ್ರಮಕ್ಕೆ, ತನ್ನ ವಿಧ್ಯಾಭ್ಯಾಸಕ್ಕೆ ನೆರವಾದ ದಾನಿಯ ಹೆಸರಿನಲ್ಲಿ , ಸಹಾಯ ನಿಧಿಯೊಂದನ್ನು ರೂಪಿಸಿದ. ತನ್ನ ಕೈಲಾದ ಸಹಾಯವನ್ನೆಲ್ಲ ಹಳ್ಳಿಯ ಜನರಿಗೆ ಮಾಡಿ ದೊಡ್ಡ ಮನುಷ್ಯ ಅನ್ನಿಸಿಕೊಂದಿದ್ದ.

ಜ್ಯೋತಿಯು ವೃತ್ತಿಯಿಂದ ಸಾಫ್ಟ್ವೇರ್ ಎಂಜಿನಿಯರ್. ತಕ್ಕ ಮಟ್ಟಿಗೆ ಶಕ್ತರಾದ ತಂದೆ-ತಾಯಿ ಇವಳಿಗೆ ಒಳ್ಳೆಯ ವಿದ್ಯಾಭ್ಯಾಸ ನಿಡಿ ತನ್ನ ಕಾಲಿನ ಮೇಲೆ ತಾನು ನಿಲ್ಲುವ ಹಾಗೇ ಮಾಡಿದ್ದರು. ಇನ್ನು ತಂಗಿ ಇವಳಿಗಿಂತ ೬ ವರ್ಷ ಚಿಕ್ಕವಳು. ಓದು ತಲೆಗೆ ಹತ್ತೋಲ್ಲ ಅಂತ ಅವಳಿಗಿಂತ ಹೆಚ್ಚು ಪೋಷಕರಿಬ್ಬರಿಗೂ ಮೊದಲೇ ಗೊತ್ತಾಗಿ ಹೋಗಿತ್ತು. "ಬೇಕಾದದ್ದನ್ನು ಓದಿಕೊ ಮಗಳೇ", ಅಂದವರೇ ಜ್ಯೋತಿಗೆ ಪ್ರೀತಿಯ ಉಸ್ತುವಾರಿಯನ್ನು ಕೊಟ್ಟು ಇಬ್ಬರಿಗೆ ಇರಲು ಶಹರಿನಲ್ಲಿ ಮನೆಯೊಂದನ್ನು ತಗೆದು ಕೊಟ್ಟಿದ್ದರು.ತಾವು ತಮ್ಮ ಪೂರ್ವಜರ ಮನೆಯಲ್ಲಿ ನೆಲೆಸಿ ತೋಟವನ್ನು ನೋಡಿಕೊಂಡಿದ್ದರು.

ಜ್ಯೋತಿಯ ಮನಸ್ಸು ಕೀಲಿಮಣೆಯನ್ನು ಕುಟಿಯುವುದರ ಜೊತೆಗೆ ಸಮಾಜ ಸೇವೆ ಮಾಡುವತ್ತ ವಾಲಿತ್ತು. ತಾನು ಉನ್ನತ ಶಿಕ್ಷಣಕ್ಕೆಂದು ಪಟ್ಟಣದಲ್ಲಿದ್ದಾಗ ಕಂಡ ದೃಶ್ಯವೊಂದು ಅವಳ ಅಂತರಾತ್ಮವನ್ನು ಅಲುಗಾಡಿಸಿ ಬಿಟ್ಟಿತ್ತು.ಜೋರ ಬಂದು ವೈದ್ಯರನ್ನು ನೋಡಲು ತನ್ನ ಪಾಳಿಗೆ ಕಾಯುತ್ತಿದ್ದಳು. ಬಡ ಮಹಿಳೆಯೊಂದು ಸೊರಗಿ ಸುಕ್ಕಾದ ಮಗುವೊಂದನ್ನು ಹಿಡಿದು ಏನು ಮಾಡಬೇಕೆಂದು ತೋಚದೆ ಸಹಾಯಕ್ಕೆಂದು ವೈದ್ಯರನ್ನು ಕಾಣಲು ಬಂದಿದ್ದಳು. ಮಗು, ಸುಮಾರು ೩-೪ ತಿಂಗಳ ಕೂಸು,ಮೈಯಲ್ಲಿ ಶಕ್ತಿಯಿಲ್ಲದೆ ನಿತ್ರಾಣವಾಗಿತ್ತು.ತಾಯಿಯ ಕಡೆಯೋ ಕಾಸಿಲ್ಲ; ಇದ್ದ ಕಾಸು ಗಂಡ ಅನ್ನಿಸಿಕೊಂದವನು ಸೇಂದಿ ಕುಡಿದು ಮುಗಿಸಿ ಆಗಿತ್ತು. ಅವನ ಪತ್ತೆ ಇಲ್ಲ. ವೈದ್ಯರು ತುರ್ತಾಗಿ ಮಗುವನ್ನೂ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಹೇಳ್ತಿದ್ದಾರೆ - ಇವರ ಹತ್ತಿರ ದುಡ್ಡಿಲ್ಲ. ಹೆದರಿ ದಿಗ್ಭ್ರಾಂತಳಾಗಿದ್ದಾಳೆ.ಆಟೋ ತರಿಸಿದರೆ ಇವಳಿಗೆ ಹೋಗಲು ಹಿಂದೇಟು. ಜ್ಯೋತಿ ತನ್ನ ಪಾಕೆಟ್ ಮನಿಯಿಂದ ೨೫ ರುಪಾಯಿ ತಗೆದು ಅವಳ ಕೈಗಿಟ್ಟು ಹೋಗು ಎಂದು ಸನ್ನೆ ಮಾಡಿದ್ದಳು. ತಾನು ಒಂದು ಏನ್.ಜೀ.ಓ.ಗೆ ಸೇರಿ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಆಗಲೇ ನಿರ್ಧರಿಸಿ ಬಿಟ್ಟಿದ್ದಳು.

ಜ್ಯೋತಿ ಜಗದಿಶನನ್ನು ಭೆಟ್ಟಿಯಾದದ್ದು ತನ್ನ ಗುರಿಯಿಂದಾಗಿ ಅಂದರೆ ತಪ್ಪಾಗಲಾರದು. ಕೆಲಸದ ಜೊತೆಗೆ ಏನ್.ಜೀ.ಓ.ಗೆ ಸೇರಿದ ಜ್ಯೋತಿ, ಬಹುತೇಕ ಪ್ರತಿ ರಜಾ ದಿನ ಜನ ಸೇವೆಯಲ್ಲಿ ಕಳೆಯುತ್ತಿದ್ದಳು. ಕೆಲವೊಮ್ಮೆ, ಬಿಡುವಿದ್ದಾಗ ಪ್ರಿತಿಯನ್ನು ತನ್ನೊಡನೆ ಕರೆದುಕೊಂಡು ಹೋಗುತ್ತಿದ್ದಳು. ಅಂತಹ  ಒಂದು ದಿನ, ಪ್ರಿತಿಯೊಡನೆ ಜಗದೀಶ ಕೆಲಸ ಮಾಡುವ ಊರಿಗೆ ಹೋಗಿದ್ದಾಗ ಮೊದಲ ಬಾರಿ ಜಗದೀಶನ ಭೆಟ್ಟಿಯಾಯಿತು. ಜ್ಯೋತಿಗೆ ಆತನ ವ್ಯತಿತ್ವ ಬಹಳವೇ ಇಷ್ಟವಾಗಿ ಹೋಯಿತು - ಮದುವೆಯನ್ನೋದು ಆದರೆ ಇಂತಹವನನ್ನೇ ಅಂತ ನಿರ್ಧರಿಸಿಬಿಟ್ಟಳು. ತನ್ನ ಹಾಗು ಇವನ ಗುರಿ ಒಂದೇ ಆಗಿದೆ, ಜೊತೆಗೆ - ಇನ್ನೇನು ಬೇಕು; ಹಾಂ - ಅವನ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನೆಲ್ಲಾ ಪ್ರೀತಿಗೆ ಹೇಳಲು ಅವಳಿಗೆ ಇಷ್ಟವಿರಲಿಲ್ಲ. ಚಿಕ್ಕ ಹುಡುಗಿ, ಬುದ್ಧಿ ಬೆಳೆದಿಲ್ಲ. ತುಂಟಾಟ ಜಾಸ್ತಿ - ಇನ್ನೇನಿದ್ರು ನಾನೇ ಇದನ್ನ ನೋಡ್ಕೋಬೇಕು ಅಂದುಕೊಂಡವಳೇ ತನ್ನ ಏನ್.ಜೀ.ಓ.ಸಹಕರ್ಮಿಗಳಲ್ಲಿ ವಿಚಾರಿಸಿ ಅವನ ಬಗ್ಗೆ ತಿಳಿದುಕೊಂದಿದ್ದಳು. ಇನ್ನು ಸ್ವಲ್ಪ ಅವನೊಡನೆ ಸಮಯ ಕಳೆದರೆ ತನಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಅಂದುಕೊಂಡು ಮುಂದಿನ ೩ ತಿಂಗಳು ಕಾಲ ಹಲವಾರು ಜನ ಸೇವೆಯ ಕೆಲಸಗಳಲ್ಲಿ ಭಾಗ ವಹಿಸುತ್ತ ಅವನ ಬಗ್ಗೆ ಅರಿತುಕೊಂಡಳು. ಹಾಗೆಯೇ ಒಂದು ದಿನ ಅವನಲ್ಲಿಗೆ ಹೋಗಿ ತಮ್ಮ ಮನಸ್ಸನ್ನು ಅವನೆದುರು ಬಿಚ್ಚಿಟ್ಟೆ ಬಿಟ್ಟಳು. ಧೈರ್ಯ ಎಲ್ಲಿಂದ ಬಂತೋ ಗೊತ್ತಿಲ್ಲ; ಆದರೆ ಇನ್ನೊಂದೆಡೆಗೆ ತಾನು ತನ್ನ ತಂದೆ-ತಾಯಿಗೆ ತಿಲಿಸಿದ್ದಿದ್ದರೆ ಚೆನ್ನಾಗಿರ್ತಿತ್ತೇನೋ ಆನೋ ಕೊರೆತ ಮನಸ್ಸಿನಲ್ಲಿ. ಅದನ್ನೆಲ್ಲ ಬದಿಗೊತ್ತಿ ಬಾಯಿ ತೆರೆದಿದ್ದಳು.

ಜಗದೀಶನಿಗೋ ಆಗಿದ್ದು ಶಾಕ್. ತಾನು ಎಂದೂ ಇದರ ಬಗೆಗಾಗಿ ವಿಚಾರವೇ ಮಾಡಿರಲಿಲ್ಲ ಎಂದು ಸಮಾಧಾನದಿಂದಲೇ ಹೇಳಿದ. ಜ್ಯೋತಿಯ ಧೃಡ ನಿರ್ಧಾರದಿಂದ ಕೂಡಿದ ಅವಳ ಬಟ್ಟಲು ಕಣ್ಣುಗಳನ್ನೂ ನೇರವಾಗಿ ನೋಡಲಾಗದೆ ಅವನು ತಾನು ಇದರ ಬಗ್ಗೆ ವಿಚಾರ ಮಾಡುವುದಾಗಿ ಹೇಳಿ ಅವಳನ್ನು ಬೀಳ್ಕೊಟ್ಟ. ತನಗೆ ತಾನೇ ಪ್ರಶ್ನೆಯನ್ನೂ ಹಾಕಿಕೊಂಡ. ಪ್ರಶ್ನೆಗಳ ಮಹಾಪೂರವೇ ಅವನ ಮನಸ್ಸಿನಲ್ಲಿ - ಮನಸ್ಸಿನಿಂದ ಶ್ಯಾಹಿಯ ಮೂಲಕ್ಕ ಕಾಗದಕ್ಕೆ - ಹರಿಯಿತು. ಎಲ್ಲವನ್ನೂ ಬರೆದಿಟ್ಟುಕೊಂಡ. ತನ್ನ ಹೆತ್ತವಳು ತನ್ನನ್ನು ಯಾಕೆ ತೊರೆದಳು ಅನ್ನುವುದು ಅವನಿಗೆ ಇಂದು ತಿಳಿದುಕೊಳ್ಳಲೇ ಬೇಕು ಅನ್ನುವ ಛಲ ಬಂದಿತ್ತು. ಅದಕ್ಕೆ ಉತ್ತರ ಸಿಗದೇ ತಾನು ಮದುವೆಯಾಗುವ ವಿಚಾರ ಸಹ ಮಾಡುವುದಿಲ್ಲ ಎಂದು ನಿರ್ಧರಿಸಿ ಬಿಟ್ಟಿದ್ದ. ಇನ್ನೊಂದು ವಾರ ಸಮಯ ಬೇಕು ತನಗೆ ಎಂದು ಜ್ಯೋತಿಗೆ ಮಿಂಚಂಚೆ ಕಳುಹಿಸಿದ. ಮೊದಲು ತನ್ನ ಪ್ರಶ್ನೆಗಳಿಗೆ ತಾನು ಉತ್ತರಗಳನ್ನು ಹುಡುಕಬೇಕಿತ್ತು; ಅನಂತರ ಅವಳಿಗೆ ಪ್ರಶ್ನೆಗಳನ್ನೂ ಕೇಳಬೇಕಿತ್ತು. ಮಾರನೆಯ ದಿನ ಎಂದೂ ರಜೆ ಹಾಕದವನು ರಜೆಯ ಅರ್ಜಿ ಹಾಕಿ ನೇರವಾಗಿ ತನ್ನ ಅನಾಥಾಶ್ರಮಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ ತನ್ನ ನೆಚ್ಚಿನ ವಾರ್ಡೆನ್ ತಾತನನ್ನು ಭೆಟ್ಟಿಯಾದ. ತನಗೆ ತನ್ನ ಹೊರೆದವಳು ಯಾಕೆ ಬಿಟ್ಟು ಹೋದಳು ಅನ್ನುವ ಪ್ರಶ್ನೆ ಕಾಡುತ್ತಿದೆ - ಉತ್ತರ ಬೇಕು ಎಂದು ಅವನಲ್ಲಿ ಕೇಳಿದ. ಮುದುಕನ ಪ್ರೀತಿಯ ಹುಡುಗ ಜಗದೀಶ. ಆದರೆ ತಾನು ಮಾತು ಕೊಟ್ಟ ತಾಯಿಗೆ ಅನ್ಯಾಯ ಮಾಡಬಾರದು ಅನ್ನುವುದು ಇನ್ನೊಂದು ಕಡೆ. ಸುಮ್ಮನಾಗಿಬಿಟ್ಟ ಅವನು. ಜಗದೀಶ ತನಗೆ ಅವಳ ಹೆಸರು ಬೇಡ; ಅವಳಿಂದ ಧನ-ಕನಕಗಳು ಸಹ ಬೇಡ.ಕೇವಲ ಕಾರಣ ಬೇಕು - ಸತ್ಯ ತನಗೆ ತಿಳಿಯಬೇಕು ಎಂದು ಅಂಗಲಾಚಿದ. ಮುದುಕ ಬಾಯಿ ಬಿಟ್ಟ. ನಿನ್ನ ಹೆತ್ತವಳು ಒಳ್ಳೆಯ ಕುಟುಂಬದವಳು; ಅವಳು ಒಬ್ಬ ಹುಡುಗನನ್ನು ಪ್ರೀತಿಸಿದಳು. ಅಪ್ರಾಪ್ತ ವಯಸ್ಸು - ದುಡುಕಿದಳು. ಆ ಹುಡುಗನು ತನ್ನ ಜಾವಬ್ದಾರಿಯನ್ನು ಮರೆತು ಇವಳನ್ನು ದೂರ ಮಾಡಿದನು. ಆದರೆ ನಿನ್ನ ತಾಯಿಗೆ ನಿನ್ನ ಹೊರುವ ಆಸೆ. ತನ್ನ ಮಗು ತನ್ನಿಂದ ದೂರವಾಗಬಾರದು ಆನುವ ವಿಚಾರದಿಂದ, ಹೆದರಿ, ತನ್ನ ಪೋಷಕರಿಗೆ ಹೇಳಲಿಲ್ಲ. ಮುಂದೊಂದು ದಿನ ಈ ವಿಚಾರ ಅರಿತ ಅವರು ಅವಳ ಇಚ್ಛೆಯಂತೆ ನಿನ್ನ ಬದುಕಲು ಬಿಟ್ಟರು. ಬದಲಾಗಿ, ನೀನು ಹೊರ ಜಗತ್ತಿಗೆ ಬರುತ್ತಿದ್ದಂತೆಯೇ ನಿನ್ನನ್ನು ಅವಳು ಬಿಡಬೇಕು ಅಂತ ಅವರು ಆಜ್ಞಾಪಿಸಿದರು. ತಪ್ಪು ಮಾಡಿದ ನಂತರ ಅವಳಿಗೆ ಬೇರೆಯ ದಾರಿ ಇರಲಿಲ್ಲ. ಒಪ್ಪಿಕೊಂಡಳು. ಇಂದು ಅವಳು ಇನ್ನೊಂದು ಮದುವೆಯಾಗಿ ಸುಖವಾಗಿದ್ದಾಳೆ. ನಿನ್ನ ತಾತ, ನಿನ್ನನ್ನು ನನ್ನ ತಾಯಿಯ ಪ್ರಿತಿಯಿಂದ ವಂಚಿಸಿದನಾದರೂ ನಿನ್ನ ಸಕಲ ಸುಖಗಳಿಗೆ ಕಾರಣನಾದ. ಅವನೇ ನಿನ್ನ ದಾನಿ. ನಿಂಗೆ ಗೊತ್ತಿರೋ ಅವನ ಹೆಸರೂ ಸಹ ಅದಲ್ಲ.

ಇಷ್ಟು ಹೊತ್ತಿಗಾಗಲೇ ಜಗದೀಶನ ಮನಸ್ಸು ಹಗುರವಾಗಿತ್ತು. ಎಲ್ಲರನೂ ಮನಸ್ಸಿನಲ್ಲೇ ಕ್ಷಮಿಸಿ, ತಾತನಿಗೆ ಧನ್ಯವಾದಗಳನ್ನು ಅರ್ಪಿಸಿ ತನ್ನ ಊರಿಗೆ ಹಿಂದಿರುಗಿದನು. ಒಂದು ದಿನವಿಡೀ ಮಲಗಿ ಎದ್ದನು. ಮನಸ್ಸಿನಲ್ಲಿ ಏನೋ ಉಲ್ಲಾಸ.

ತಾನು ಜ್ಯೋತಿಗೆ ಫೋನಾಯಿಸಿ ಭೆಟ್ಟಿ ಆಗಬೇಕು ಅಂದನು. ಜ್ಯೋತಿ ತನ್ನ ಕೆಲಸಕ್ಕೆ ರಜೆ ಹಾಕಿ ಅವನಲ್ಲಿಗೆ ಬಂದಳು. ಇಬ್ಬರೂ ಕೂತು ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು - ಕೆಲಸ ಹಾಗು ಕೆಲಸೇತರ. ತನ್ನ ಒಪ್ಪಿಗೆಯನ್ನೂ ಸೂಚಿಸುವ ಮುನ್ನ ಜ್ಯೋತಿ ತನ್ನ ವಿಷಯವಾಗಿ  ಅವಳ ಮನೆಯವರಿಗೆ ತಿಳಿಸಬೇಕು ಎಂದು ಅವನು ಕೇಳಿಕೊಂಡನು. ಜ್ಯೋತಿ ಒಪ್ಪಿಗೆಯನ್ನು ಸೂಚಿಸಿದಳು. ತನ್ನ ಜೀವನದ ಪುಟಗಳನ್ನೂ ಜ್ಯೋತಿಯ ಎದುರು ತೆರೆದಿಡುತ್ತಾ ತನ್ನ ಕಳೆದೆರಡು ದಿನಗಳ ವಿವರವನ್ನೂ ಸೇರಿಸಿ ವಿಸ್ತಾರವವಾಗಿ ಹೇಳಿದನು. ಜ್ಯೋತಿಗೆ ಇದರಲ್ಲಿ ಹಲವಾರು ವಿಶಯಗಳು ಗೊತ್ತಿದ್ದರೂ ಅವನ ಬಾಯಿಂದ ಕೇಳುವ ಆನಂದ ಬೇರೆಯದೇ ಆಗಿತ್ತು. ಪ್ರೀತಿಯಲ್ಲಿ ಮುಳುಗಿದ್ದ ಅವಲಿದೆ ಅವನ ಹೊರತು ಬೇರೆ ಏನು ಕಂಡರೆ ಅಲ್ಲವೇ ಪ್ರಶ್ನೆ ಕೇಳುವ ವಿಚಾರ ಬರುವುದು. ಸಂಜೆ ಆಗುತ್ತಿದ್ದ ಹಾಗೇ ದವಾಖಾನೆಗೆ ಜನರ ಆಗಮನ ಶುರುವಾಯಿತು. ಜ್ಯೋತಿ ಅವನಿಂದ ಬೀಳ್ಕೊಟ್ಟು ಮನೆಗೆ ಹಿಂದಿರುಗಿದಳು. ತಂದೆ-ತಾಯಿಗೆ ಫೋನಾಯಿಸಿ ತಾನು ಒಬ್ಬ ಹುಡುಗನನ್ನು ಹುದುಕಿರುವುದಾಗಿ ಹೇಳಿದಳು. ಮಾರನೇಯ ದಿನ ತಂಗಿ ಪ್ರೀತಿಯೋಡನೆ ಊರಿಗೆ ಹೊರಟೇ ಬಿಟ್ಟಳು.

ತಂದೆ-ತಾಯಿಯೊಡನೆ ವಿಚಾರ ವಿನಿಮಯ ಆದಮೇಲೆ ಜಗದೀಶನಿಗೆ ತನ್ನ ಮನೆಗೆ ಬರಲು ಆಮಂತ್ರಿಸಿದಳು.

ಜಗದೀಶ ಮುಂದಿನ ರವಿವಾರ ರಜೆ ಹಾಕಿ ಜ್ಯೋತಿಯ ಊರಿಗೆ ಬಂದಾಗ ಜ್ಯೋತಿಯ ತಂದೆ ಶ್ಯಾಮಸುಂದರ ಮೂರ್ತಿ ಅವರು ಅವನನು ಆದರದಿಂದ ಬರಮಾಡಿಕೊಂಡರು. ಮೂರ್ತಿ ಅವರು ಓದಿದ್ದು ಬೀ.ಏ.(ಎಲ್.ಎಲ್.ಬೀ). ವಾಕಿಲರಾಗಿ ಕೆಲಕಾಲ ಕೆಲಸ ಮಾಡಿದರಾದರೂ, ವ್ಯವಸಾಯದಲ್ಲಿ ಅವರ ಆಸಕ್ತಿ. ಮಕ್ಕಳು ತಮಗೆ ಬೇಕಾದ ರೀತಿಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲಿ ಅನ್ನುವುದು ಅವರಾಸೆ. ಅಂತೆಯೇ ಜ್ಯೋತಿ, ಗೆಳೆಯನಂತಹ ತನ್ನ ತಂದೆಗೆ ವಿವರವಾಗಿ ಏನನ್ನೂ ಮುಚ್ಚಿಡದೆ ಎಲ್ಲವನ್ನೂ ವಿವರವಾಗಿ ಹೇಳಿದ್ದಳು. ಇನ್ನೊಂದು ತಿಂಗಳಲ್ಲಿ ಒಳ್ಳೆಯ ಮಹೂರ್ತ ನೋಡಿ ಇಬ್ಬರ ಮದುವೆಯನ್ನು ಮಾಡಿಸಿದರು.

ಜ್ಯೋತಿ ತನ್ನ ಕಿಲಿಮಣೆಯ ಕೆಲಸಕ್ಕೆ ತಿಲಾಂಜಲಿ ಹೇಳಿ ತನ್ನ ಪೂರ್ತಿ ಸಮಯವನ್ನು ಜನಸೇವೆಗೆ ಇಟ್ಟಳು. ಈ ಮಧ್ಯೆ ತಂಗಿ ಪ್ರಿತಿಯನ್ನು ಹಾಸ್ಟೆಲ್ ಗೆ ಹಾಕಲಾಯಿತು. ಅವಳಿಗೋ ಹೊಸ ಜನರೊಂದಿಗೆ ಬೆರೆಯುವುದು ಅಂದ್ರೆ ಪಂಚ ಪ್ರಾಣ. ಅಕ್ಕನಿಂದ ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದ್ರು

ಸಿಗಬೇಕು ಅಂತ ಭಾಷೆ ತಗೊಂಡು ಬಿಳ್ಕೊಟ್ಟಳು. ಮೊದಲ ಒಂದು ವರುಷ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ ಜ್ಯೋತಿಗೆ. ಇಬ್ಬರ ಆಸಕ್ತಿಗಳು ಒಂದೇ ಆಗಿದ್ದಕ್ಕೋ ಏನೋ, ಎಲ್ಲದರಲ್ಲೂ ಹೊಂದಾಣಿಕೆ ಇತ್ತು. ಎಲ್ಲ ಸುಸ್ಥಿತಿಯಲ್ಲಿದೆ ಅನ್ನುವಷ್ಟರಲ್ಲಿ ಅಪಘಾತ ಸಂಭವಿಸಿತು. ಪ್ರೀತಿಯು ಒಂದು ಅಪಘಾತಕ್ಕೆ ತುತ್ತಾಗಿ ತನ್ನ ಕಣ್ಣುಗಯನ್ನೆರಡನ್ನೂ ಕಳೆದುಕೊಂಡಳು. ಇಂತಹ ಕಷ್ಟಕರ ಸ್ಥಿತಿಯಲ್ಲಿ ಗಂಡನ ಪ್ರೋತ್ಸಾಹದಿಂದ ಜ್ಯೋತಿ ತನ್ನ ತಂಗಿಯ ಆರೈಕೆಗೆ ಪಟ್ಟಣಕ್ಕೆ ಹಿಂದಿರುಗಿದಳು. ಜ್ಯೋತಿಯ ತಂದೆ-ತಾಯಿ ಸಹ ಬಂದಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದ ಕಾರಣ ಅವರನ್ನು ಜ್ಯೋತಿ ಊರಿಗೆ ಕಳುಹಿಸಿದಳು.ಗಂಡ ಪ್ರತಿದಿನ ತನಗಾಗಿ - ತನ್ನ ತಂಗಿಗಾಗಿ ಸ್ವ ಇಚ್ಛೆಯಿಂದ ತನ್ನ ಕೆಲಸಗಳನ್ನೂ ಮುಗಿಸಿ ದಣಿದಿದ್ದರೂ ನೆರವಿಗೆ ಬರುವುದನ್ನು ಕಂಡು ಅವಳ ಮನಸ್ಸು ಸಂತೋಷದಿಂದ ಹಿಗ್ಗಿತು. ಕಣ್ಣುಗಳು ತುಂಬಿ ಬಂದುವು.

ಪ್ರೀತಿಯು ಕ್ರಮೇಣ ಗುಣವಾಗುತ್ತ ಬಂದಿದ್ದಳು - ಆದರೆ ಕಣ್ಣುಗಳ ಬಗ್ಗೆ  ಚಿಂತೆ ಇತ್ತು.ಎಲ್ಲ ಕಾಣುತ್ತಿದ್ದವಳಿಗೆ ಒಮ್ಮೆಲೆ ಕತ್ತಲು ಆವರಿಸಿದಾಗ ಎಲ್ಲಿಲ್ಲದ ಖಿನ್ನತೆ ಕಾಡತೊಡಗಿತು. ಹಾಗೆಯೇ ರಮಿಸಲಾಗದ ಹಾಗೇ ಅಳುವುದು ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಜೀವನದ ಮುಂದಿನ ಹಂತವನ್ನೂ ಯೋಚಿಸಿ ಎಲ್ಲರೂ ದುಃಖದಲ್ಲಿದ್ದರು. ಜಗದೀಶ ಮಾತ್ರ ಪ್ರೋತ್ಸಾಹದ ಮಾತುಗಳನ್ನೂ ಆಡುತ್ತ ತನ್ನೆಲ್ಲ ವೃತ್ತಿ ಹಾಗು ಗೆಳೆಯ ವೃಂದದಲ್ಲಿ ಯಾರಾದ್ರೂ ನೇತ್ರ ದಾನಿಗಳು ದಾನ ಮಾಡಿದ ಕಣ್ಣುಗಳು ಸಿಗಬಹುದೇ ಎಂದು ಹುಡುಕಾಟ ಜಾರಿಯಲ್ಲಿ ಇಟ್ಟಿದ್ದ.

--- ೧ ---

ಸುಮಾರು ೧ ವರುಷ ಕಳೆದು ಪ್ರೀತಿ ತನ್ನ ಅಳುವನ್ನು ಕಡಿಮೆ ಮಾಡಿ ತನ್ನ ಹೊಸ ಉಪಕರನಗಳನ್ನು ಬಳಸಲು ಕಲಿಯುತ್ತಿದ್ದಳು. ಜಗದೀಶ ಜ್ಯೋತಿಗೆ ಫೋನಾಯಿಸಿದ. ಅವನ ದನಿಯಲ್ಲಿ ಸಂತಸವಿತ್ತು - ದಾನಿಗಳು ಒಬ್ಬರು ಹಟಾತ್ತಾಗಿ ನಿಧನರಾಗಿದ್ದರಿಂದ ಕಣ್ಣುಗಳ ವ್ಯವಸ್ಥೆ ಆಗಿದ್ದು, ಪ್ರೀತಿಯ ಕಣ್ಣುಗಳು ಸರಿಯಾಗುವುದು ಇನ್ನು ಕೆಲವೇ ತಿಂಗಳುಗಳ ವಿಷಯ ಎಂದು ಅವನು ಹೇಳಿದಾಗ ಜ್ಯೋತಿಯು ಸಂತೋಷದಿಂದ ಹಿಗ್ಗಿದಳು. ಪ್ರೀತಿಗೆ ಇದನ್ನು ಹೇಳಿ ಅವಳನ್ನು ಹುರಿದುಂಬಿಸಿದಳು. ಗಂಡನು ಬರುವ ಹಾದಿಯನ್ನು ಕಾಯುತ್ತ, ಪ್ರಿತಿಯನ್ನು ಮಾತನಾಡಿಸುತ್ತ ಕುಳಿತಳು.

ಸ್ವಲ್ಪ ಸಮಯದಲ್ಲಿ ಜಗದೀಶನ ಮೊಬೈಲಿನಿಂದ ಕರೆ ಬಂದಿತು. ಆದರೆ ಅತ್ತಕಡೆಯಿಂದ  ಮಾತನಾಡುತ್ತಿದ್ದುದು ಜಗದೀಶನಾಗಿರಲಿಲ್ಲ.

"ಹಲೋ... ಎಮ್ ಐ ಸ್ಪೀಕಿಂಗ್ ಟು ಮಿಸ್ಸೆಸ್ ಜಗದೀಶ್? ಮೇಡಂ,ಮೈ ನೇಮ್ ಇಸ್ ಅಜಯ್. ನಿಮ್ಮ ಗಂಡ ಒಂದು ಅಫಘಾತಕ್ಕೆ ತುತ್ತಾಗಿದ್ದಾರೆ; ರೋಡ್ ಕ್ರಾಸ್ ಮಾಡ್ಬೇಕಾದ್ರೆ ಸಿಗ್ನಲ್ ಗಮನಿಸದೇ ಕಾರ್ ಒಂದು ಅವರ ಮೇಲೆ ಹಾದು ಹೋಯ್ತು. ತಾವು ಮಣಿಪಾಲ್ ಆಸ್ಪತ್ರೆಗೆ ಬನ್ನಿ. ಅಲ್ಲಿ ಕರ್ಕೊಂಡು ಬಂದಿದ್ದೇವೆ", ಎಂದವನೇ ಇತ್ತು ಬಿಟ್ಟನು.

ಆಕಾಶವೇ ಕಳಚ ಬಿದ್ದಂತೆ ಆಗಿತ್ತು ಜ್ಯೋತಿಗೆ. ದುಃಖದಿಂದ ಪದಗಳು ಹೊರಮೊಮ್ಮುತ್ತಿಲ್ಲ. ಪಕ್ಕ ಕೂತಿದ್ದ ಪ್ರೀತಿಯೇ ಒಂದೂ ಅರ್ಥವಾಗ್ತಿಲ್ಲ.

"ಅಕ್ಕಾ! ಏನಾಯ್ತು. ನಿನ್ಯಾಕೆ ಅಳತಿದ್ದೀಯ!?", ಅಂದಳವಳು ಬೆಚ್ಚಿಬಿದ್ದು.

"ಏನಿಲ್ಲ ಪುಟ್ಟ. ನಿನ್ನ ಭಾವಂಗೆ ಚಿಕ್ಕ ಆಕ್ಸಿಡೆಂಟ್ ಆಗಿದೆಯಂತೆ - ನೋಡ್ಕೊಂಡು ಬರೋಣ ಬಾ...", ಅಂತ ಬಿಕ್ಕಳಿಸುತ್ತ ಅಳುವನ್ನು ತಡೆ ಹಿಡಿದವಳು ತಂಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದಳು. ದಾರಿಯಲ್ಲಿ ಹೋಗುತ್ತಾ ತಂದೆ-ತಾಯಿಗೆ ವಿಷಯ ತಿಳಿಸಿದಳು.

ಆಸ್ಪತ್ರೆಯಲ್ಲಿ ಧಾವಿಸಿ ಅಜಯ್ ಗೆ ಫೋನಾಯಿಸಿದಳು. ಅಜಯ್ ಅವಳನ್ನು ಭೆಟ್ಟಿಯಾಗಿ ಓ.ಟಿ.ಅತ್ತ ಅವರನ್ನು ಕರೆದೊಯ್ದ. ೧೫ ನಿಮಿಷ ಕಳೆದ ನಂತರ ಹೊರಬಂದ ಡಾಕ್ಟರ್ "ಐ ಯಾಂ ಸಾರಿ... ನಿಮ್ಮ ಗಂಡನನ್ನು ಬದುಕಿಸಿಕೊಡೋಕ್ಕೆ ಆಗ್ಲಿಲ್ಲ", ಎಂದುಬಿಟ್ಟರು.

ಜ್ಯೋತಿಗೆ ಮಾತೇ ಹೊರಡಲಿಲ್ಲ. ಸುಮ್ಮನಾಗಿಬಿಟ್ಟಳು. ಪ್ರೀತಿ ಮೆಲ್ಲನೆ "ಭಾವ... ಭಾವ..." ಅಂತ ಕಿರುದನಿಯಲ್ಲಿ ಅಳಹತ್ತಿದಳು.

ಎರಡು ತಿಂಗಳುಗಳು ಬೇಕಾಯಿತು ಜ್ಯೋತಿ ಮತ್ತೆ ಸಾಮಾನ್ಯವಾಗಿ ಮಾತನಾಡಲು. ಬದುಕಿದ್ದಾಗ ಜಗದೀಶ ತನ್ನ ಅಂಗಾಂಗಗಳನ್ನೂ ಮರನಾಂತರ ದಾನ ಮಾಡಬೇಕು ಎಂದು ಬರೆದು ಕೊಟ್ಟಿದ್ದ. ಅವನ ಕಣ್ಣುಗಳು, ಹೃದಯ, ಕಿಡ್ನಿಗಳನ್ನೂ  ದಾನ ಮಾಡಲಾಯಿತು.

ಪ್ರೀತಿಗೆ ಇನ್ನೊಮ್ಮೆ ಶಸ್ತ್ರಚಿಕಿತ್ಸೆ ನಡೆದು ಹೊಸ ಕಣ್ಣುಗಳು ಬಂದುವು. ಇದೆಲ್ಲ ಆಗಲು ಸುಮಾರು ೧ ವರುಷ ಸಮಯ ಬೇಕಾಯಿತು.

ಈ ಮಧ್ಯೆ, ಪ್ರೀತಿ ತಾನು ಮತ್ತೊಮ್ಮೆ ಕೀಲಿಮಣೆ ಕೈಗೆ ತಗೆದುಕೊಂಡಳು. ತಾನು ತನ್ನ ಗಂಡನೊಡನೆ ಸೇರಿ ಮಾಡುತ್ತಿದ್ದ ಸಮಾಜ ಸೇವೆಯನ್ನೂ ಸಹ ಮುಂದುವರಿಸಿಕೊಂಡು ಹೋದಳು. ಹೊಸ ಜನರನ್ನು ಭೆಟ್ಟಿಯಾದಳು - ಅವರ ಸುಖ-ದುಃಖಗಳಲ್ಲಿ ಪಾಲ್ಗೊಂಡಳು. ಪ್ರೀತಿ ತನ್ನ ವ್ಯಾಸಂಗವನ್ನು ಮುಗಿಸಲು ಮತ್ತೆ ಓದನ್ನು ಪ್ರಾರಂಭಿಸಿದಳು - ಓದು ತಲೆಗೆ ಎಷ್ಟು ಹತ್ತೊತ್ತೋ ಗೊತ್ತಿಲ್ಲ; ಆದರೆ ಅಕ್ಕನಿಗೆ ಸಹಾಯ ಮಾಡ್ಬೇಕು ಅನ್ನೋ ಆಸೆ ಮಾತ್ರ ಇದ್ದೇ ಇದೆ. ತಂದೆ-ತಾಯಿ ಆಗಾಗ ಬಂದು ಹೋಗ್ತಿರ್ತಾರೆ; ಇನ್ನು ಕೆಲವು ವರ್ಷಗಳಲ್ಲಿ ಎಲ್ಲರೂ ಜೊತೆಗಿರುವ ಪ್ಲಾನ್ ಇದೆ.

--- ೦ ---

"ಅಕ್ಕಾ, ಇವತ್ತು ಎಲ್ಲಿ ತಿರ್ಗಾಡೋಣ? ಆಫ್ಟರಾಲ್ ಇವತ್ತು ಭಾವನ ಬರ್ತ್ಡೇ!", ಎಂದಳು ಪ್ರೀತಿ.

"ಪ್ರೀತಿ... ನೀನು ನನ್ನ ಬಂಗಾರ ಕಣೆ. ನಿನ್ನ ಭಾವ ನನಗೆ ನೀಡಿದ ಉಡುಗೊರೆ ನೀನು. ಎಲ್ಲಿ ಹೋಗೋಣ ಹೇಳು"