Sunday, November 16, 2008

ಐ ಹೇಟ್ ಹರ್ ಟು ದ ಕೋರ್!

ಕಾಲೇಜಿನ ಕೊನೆಯ ಸೆಮಿಸ್ಟರ್ ನಡೆಯುತ್ತಿರುವ ಸಮಯ... ಅದೊಂದು ಶನಿವಾರ...
ವಿದ್ಯಾರ್ಥಿಗಳು ಕಾಲೇಜಿನ ಮುಖವನ್ನು ನೋಡುವುದು ಅಪರೂಪವೆಂದು ತಿಳಿದಿದ್ದ ಪ್ರಾದ್ಥ್ಯಾಪಕರು ಬೆರಳೆಣಿಕೆಯಷ್ಟು ಹುಡುಗರು ಬಂದರೂ ತರಗತಿ ನಡೆಸುವುದಾಗಿ ಹೇಳಿದ್ದರು...ಪಾಠ ಕೇಳುವ ಆಸಕ್ತಿ ಇನ್ನೂ ಇದ್ದಿದ್ದರಿಂದ ತರಗತಿಗೆ ಹಾಜರಾಗಿದ್ದೆ ಆದರೆ ತರಗತಿಯ ಅಕ್ಕ-ಪಕ್ಕ ಸಹ ಯಾರೂ ಕಾಣುತ್ತಿಲ್ಲ.
ಎಲ್ಲ ಕೊಠಡಿಗಳಲ್ಲಿ ಇಣುಕಿ ನೋಡಿದ್ದಾಯಿತು. ದಿನದ ಎರಡು ಘಂಟೆಗಳು ಪ್ರಯಾಣದಲ್ಲಿ ವಿನಾಕಾರಣ ವ್ಯಯವಾದವಲ್ಲ ಅಂತ ಬೇಸರಿಸುತ್ತ ಪ್ರಾದ್ಥ್ಯಾಪಕರ ಅಪ್ಪಣೆ ಪಡೆದು ಕಾಲೇಜಿನ ಹಿಂಬದಿಯ ಗೇಟಿನಿಂದ ಹೊರಬಂದು ಸಿಟಿ ಬಸ್ಸಿಗಾಗಿ ಕಾಯುತ್ತ ನಿಂತುಬಿಟ್ಟೆ. ಮಾತನಾಡಲು ಯಾರು ಇಲ್ಲದೆ ಇದ್ದ ಕಾರಣ ಕಿರಿಕಿರಿಯಾಗಿತ್ತು - ಬಸ್ಸು ಬಂದರೆ ಸಾಕು, ಹತ್ತಿ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುವುದು ಎಂದು ಲೆಕ್ಕಾಚಾರ ಮನಸ್ಸಿನಲ್ಲೇ ಹಾಕುತ್ತಿರಲು ಸಿಟಿ ಬಸ್ಸು ಬಂದೇ ಬಿಟ್ಟಿತು. ಹಿಂದಿನ ಬಲಮೋಲೆಯ ಸೀಟಿನಲ್ಲಿ ನೆಲೆಸಿದ್ದಾಯಿತು. ಕಂಡಕ್ಟರ್ಗೆ ೨ ರೂಪಾಯಿ ನಾಣ್ಯ ನೀಡಿ ಕಿಟಕಿಯಿಂದ ಹೊರ ನೋಡುವ ಕಾರ್ಯದಲ್ಲಿ ಮಗ್ನನಾದೆ.

೫ ನಿಮಿಷಗಳಾದರೂ ಪರಿಚಯದ ಒಂದೂ ಮುಖ ಕಾಣುತ್ತಿಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ಒಬ್ಬ ಕಂಡೇಬಿಟ್ಟ. ವಾಟರ್ ಟ್ಯಾಂಕ್ ಸ್ಟಾಪಿನಲ್ಲಿ ಹತ್ತಿದವನು ನನ್ನ ಪಕ್ಕ ಬಂದು ಕುಳಿತವನ ಕೈಯಲ್ಲಿ ಒಂದು ದೊಡ್ದ ಬ್ಯಾಗು ಇತ್ತು. ಅವನ ಬೀರಿದ ಕಿರುನಗೆಯ ಪ್ರತಿಯಾಗಿ ನಾನೂ ಸಹ ನನ್ನ ಮುಖಚರ್ಯೆಯಲ್ಲಿ ಬದಲಾವಣೆಯನ್ನು ತಂದು ನಮಸ್ಕಾರವನ್ನು ಸೂಚಿಸಿದೆ. ಇನ್ನೆರಡು ನಿಮಿಷ ಮೌನ ಆವರಿಸಿತ್ತು.
ಅವನ ಬ್ಯಾಗನ್ನೇ ನೋಡುತ್ತಿದ್ದ ನಾನು ಮಾತನಾಡಲು ಪ್ರಾರಂಭಿಸಿದೆ..."ಎಲ್ಲಿ ಹೋಗ್ತಿದ್ದೀಯ?"
"ನಾನು ಊರಿಗೆ ಹೋಗ್ತಿದ್ದೀನಿ..."
"ಮತ್ತೆ, ಕ್ಲಾಸ್ ಇಲ್ವಾ ನಿಮಗೆ?"
"ಇದೆ... ಆದ್ರೆ ಯಾರೂ ಬರ್ತಿಲ್ಲ; ಭಾಳಾ ದಿನಾನು ಆಯ್ತು ಊರಿಗೆ ಹೋಗಿ ಅದಕ್ಕೆ ಹೋಗ್ತಿದ್ದೀನಿ... ನೆನ್ನೆಯ ನಿಮ್ಮ ಜೂಸ್ ಪಾರ್ಟಿ ಚೆನ್ನಗಿತ್ತು; ನೀವೆಲ್ಲ ಇಷ್ಟೆಲ್ಲ ಕ್ಲೋಸಾಗಿ ಇದ್ದು ಎಂಜಾಯ್ ಮಾಡ್ತೀರ ಅನ್ನೊದು ನನಗೆ ಗೋತ್ತೇ ಇರ್ಲಿಲ್ಲ - ನೋಡಿ ಖುಷಿಯಾಯ್ತು!"
"ಹಂ... ಥ್ಯಾಂಕ್ಸ್..."
"ಮುಂದೇನು ಮಾಡ್ಬೇಕಂತ ಇದ್ದೀಯ? ಕ್ಯಾಂಪಸ್ ಸೆಲೆಕ್ಶನ್ ಆಗಿದೆಯಲ್ಲವ - ಅಲ್ಲೇ ಕೆಲಸಕ್ಕೆ ಹೋಗ್ತಿಯ?"
"ಸಧ್ಯಕ್ಕೆ ಬೇರೆಯ ವಿಚಾರಗಳೇನೂ ಇಲ್ಲ - ಕಲಸಕ್ಕೆ ಹೋಗ್ತೀನಿ. ನೀನೇನ್ ಮಾಡ್ಬೇಕಂತಿದ್ದೀಯ?"
"ಎಮ್.ಎಸ್. ಮಾಡೋಣ ಅಂತ ಇದ್ದೀನಿ - ಫಾರಿನ್ ಯೂನಿವರ್ಸಿಟಿಗಳಿಗೆ ಅಪ್ಪಲಯ್ ಮಾಡಿದ್ದೀನಿ..."

ಹುಡುಗನ ಮುಂದಾಲೋಚನೆಯನ್ನು ಕೇಳಿ ಸಂತೋಷವಾಯಿತು. ಸ್ವಲ್ಪ ವಿರಾಮದ ನಂತರ ನಾನು ಮತ್ತೆ ಮಾತನ್ನು ಬೇಳೆಸಿದೆ

"... ಯಾವ ಊರು ನಿಂದು?"
"xxxx"
"ಒಹ್! ಹಾಗಿದ್ದರೆ ನಿನ್ಗೆ xxx ಗೊತ್ತಿರ್ಬೇಕಲ್ಲ? ಅವಳು ಅಲ್ಲಿಯವಳೆ"
"ಹಂ... ಗೊತ್ತು... ನಾವು ಜೋತೆಗೆ ಓದಿಲ್ಲ ಆದ್ರೆ ಡಿಸ್ಕಶ್ಯನ್ ಕ್ಲಾಸ್ ಅಲ್ಲಿ ನೋಡಿದ್ದೆ - ಬಹಳ ಸೊಕ್ಕು ತುಂಬಿದೆ ಅವಳಿಗೆ!"

ನಾನು ಸುಮ್ಮನಿದ್ದೆ... ನನ್ನ ಕಿವಿಗಳಿಗೆ ಇದು ಹೋಸ ಸುದ್ದಿಯಾಗಿತ್ತು...ಮುಖದ ಮೇಲ ಆಶ್ಚರ್ಯದ ಕಳೆಯನ್ನು ಮೂಡಿಸಿದೆಯೇ ವಿನಹ ಯಾವ ಪ್ರತಿಯುತ್ತರವನೂ ಕೋಡಲಿಲ್ಲ. ಇದ್ದಿದ್ದರೂ ಇರಬಹುದು. ಆದರೆ, ನನಗೆ ಈಗ ಗೊತ್ತಿರುವ ಆ ಗೆಳತಿ ಹಾಗಿರಲಿಲ್ಲ. ಎಂದಿಗೂ ನಗುತ್ತ, ಸಂತಸದಿಂದ ಕೂಡಿದ, ಎಲ್ಲರೊಡನೆ ಸಲೀಸಾಗಿ ಬೆರೆಯುವ ಅವಳನ್ನು ನಾನು ಕಂಡಿದ್ದೇನೆ.

ಅವನು ಮುಂದು ವರೆಸಿದ,"ಇಗೋ ಬಹಳ ಅವಳಿಗೆ - ಐ ಹೇಟ್ ಹರ್ ಟು ದ ಕೋರ್!"... ಇದನ್ನೇ ಹಲವಾರು ಬಾರಿ ಪುನರಾವರ್ತಿಸಿದ.

ಅಷ್ಟು ಬಲವಾದ ದ್ವೇಷ!? ನನಗೆಂದೂ ಇಂತಹ ಅತೀವ್ರ ದ್ವೇಷ ಭಾವನೆ ಬಂದೇ ಇರಲಿಲ್ಲವೆ. ಹಂ... ನಾನು ಸುಮ್ಮನೆ ಇದ್ದೆ. ಈ ಬಾರಿ, ನನ್ನ ಮುಖದ ಮೇಲೆ ಯಾವ ಭಾವನೆಗಳನ್ನೂ ತೋರ್ಕೊಡದೆ.
ಇಷ್ಟಾಗುವಷ್ಟರಲ್ಲಿ ಸಿಟಿ ಬಸ್ಸು ಹಳೆ ಬಸ್ ಸ್ಟ್ಯಾಂಡಿನ ಹತ್ತಿರ ಬಂದು ನಿಂತುಕೊಂಡಿತ್ತು. ಅವನನ್ನು ಬೀಳ್ಕೊಟ್ಟು ನಾನು ಇಳಿದುಕೊಂಡೆ - ಹರಿಹರದ ಬಸ್ಸೊಂದನ್ನು ಹತ್ತಿ ಕುಳಿತು ಅವನ ಕೊನೆಯ ವಾಕ್ಯವನ್ನು ಮೆಲುಕು ಹಾಕಿದೆ... ಕೊನೆಗೆ ಮನೆ ಸೇರಿ ಇದನ್ನು ಮರೆತು ಸಹ ಆಯಿತು.

ಹಲವಾರು ಕಾರಣಗಳಿಂದ ಅಂದು ಅವನಲ್ಲಿ ಕಂಡ ಆ ಬಲವಾದ ದ್ವೇಷ, ಆಗಾಗ ನಾನು ನನ್ನಲ್ಲಿ ಕಾಣುತ್ತೇನೆ; ಬೇಸರವಾಗುತ್ತದೆ.
ಆದರೆ "ಸೊಕ್ಕಿನವಳ" ಆ ಬದಲಾವಣೆ ನನಗೆ ಪ್ರೇರಣೆಯಾಗಿದೆ - ಮಿತ್ರರೊಡನೆ ಮಾತನಾಡಿದಾಗ ಮನಸ್ಸಿನಲ್ಲಿನ ಅಸಮಾಧಾನ ದೂರವಾಗುತ್ತದೆ.