Thursday, April 30, 2009

ತಮಿಳುನಾಡಿನಲ್ಲಿ 'ಕೋವಿಲ್' ಗಳನ್ನ ಹೊಕ್ಕಾಗ...

ಕಳೆದ ವಾರ ಪೂರ್ತಿ ತಮಿಳುನಾಡಿನಲ್ಲಿ ವಿವಿಧ ದೇವಸ್ಥಾನಗಳನ್ನು ತಿರುಗಾಡಿದ್ವಿ. ನಮ್ಮ ಪಯಣ ದೇಹಕ್ಕೆ ಸಾಕಷ್ಟು ದಣಿವನ್ನು ಉಂಟು ಮಾಡಿತ್ತಾದರು ಅದು ಆನಂದಮಯವಾಗಿತ್ತು.

ನಮ್ಮ ಪ್ರಯಾಣ ಶುರುವಾದದ್ದು ಬೆಂಗಳೂರಿನಿಂದ - ಅಪ್ಪ, ಅಮ್ಮ, ವಿಜಯ್, ಅಜ್ಜಿ, ಮಾಮ, ಮಾಮಿ, ಚಿಕ್ಕಮ್ಮಾ, ದೊಡ್ಡಮ್ಮಾ ಹಾಗು ಚಿಕ್ಕಮ್ಮನ ಇಬ್ಬರು ಮಕ್ಕಳು ಸೇರಿ ಏಪ್ರಿಲ್-೨೦ನೆ ತಾರೀಖು ರಾತ್ರಿ ತುತುಕುಡಿ ಎಕ್ಸ್ ಪ್ರೆಸ್ ಹತ್ತಿದ್ದೆವು. ಮೈಸೂರಿನಿಂದ ಹೊರಡುವ ಈ ರೈಲಿನಲ್ಲಿ ನಮ್ಮ ಹಿಂದಿನ ಪ್ರಯಾಣ (ಶ್ರೀರಂಗಪಟ್ಟಣದಿಂದ ಕಾರ್ಮಲಾರಂ) ಇನ್ನು ನೆನಪಿದೆ ನನಗೆ. ಸುಖ ನಿದ್ರೆಯ ನಂತರ ಎಚ್ಚರವಾದಾಗ ನಾವು ಮದುರೈ ತಲುಪಿದ್ದೆವು (ಹೌದು - ರೈಲಿನಲ್ಲಿ ಅಳುವ/ಕಿರುಚಾಡುವ ಚಿಕ್ಕ ಮಕ್ಕಳಿಲ್ಲದಿದ್ದರೆ ಸಾಮಾನ್ಯವಾಗಿ ನಿದ್ರೆ ಚೆನ್ನಾಗಿಯೇ ಆಗುತ್ತದೆ!). ನಮಗೆ ಮಾರ್ಗ ದರ್ಶನ ನೀಡಲು ತಮಿಳು ಬಲ್ಲವರೊಬ್ಬರು ನಮ್ಮೊಡನೆ ಮದುರೈಯಲ್ಲಿ ಸೇರ್ಪಡೆಯಾದರು.

ಇನ್ನೂ ಹೆಚ್ಚು ವಿಸ್ತಾರವಾಗಿ ಹೇಳಿದರೆ ಓದುಗರು ಈ ಲೇಖನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದೆಂದು ಊಹಿಸಿ ಸಂಕ್ಷಿಪ್ತವಾಗಿ ಹೇಳಿಬಿಡ್ತೀನಿ - ನಾವು ನೋಡಿದ ದೇವಸ್ಥಾನಗಳು (ನೋಡಿದ ಕ್ರಮದಲ್ಲಿ)

ಸ್ಥಳ
ದೇವರು
ನವಗ್ರಹ
ಪಂಚ ಭೂತ
ಅನ್ಯ
ದಿನ - ೨೧/೦೪/೨೦೦೯




ತಿರುಪ್ಪರನ್ಕುಂದ್ರಂ
ಮುರುಗ



ಪಜ್ಹಮುಥಿರ್ಚೋಲೈ
ಮುರುಗ



ಮದುರೈ
ಮೀನಾಕ್ಷಿ








ದಿನ - ೨೨/೦೪/೨೦೦೯




ತಿರುವನ್ನಕ್ಕಾವಲ್
ಜಮ್ಬುಕೇಶ್ವರ


ನೀರು
ತಿನ್ಗಲೂರ್
ಚಂದ್ರ



ಸ್ವಾಮಿಮಲೈ
ಮುರುಗ



ಪಾಪನಾಶಿನಿ
ಶಿವ








ದಿನ - ೨೩/೦೪/೨೦೦೯




ಅಲಂಗುಡಿ
ಗುರು



ತಿರುನಾಗೇಶ್ವರಂ
ರಾಹು



ಸುರ್ಯನರ್ಕೊಇಲ್
ರವಿ



ಕಂಜನೂರ್
ಶುಕ್ರ



ತಿರುನಲ್ಲಾರ್
ಶನಿ



ಕಿಜ್ಹಪೆರುಮ್ಬಲ್ಲಂ
ಕೇತು



ತಿರುವೆನ್ನ್ಕದು
ಬುಧ



ಪೂಮ್ಪುಹಾರ
ಶಿವ


ಸಮುದ್ರ ಸ್ನಾನ
ವೈಥಿಸ್ವರನ್ಕೊವಿಲ್
ಮಂಗಳ








ದಿನ - ೨೪/೦೪/೨೦೦೯




ಚಿದಂಬರಂ
ನಟರಾಜ


ಆಕಾಶ
ತಿರುವನ್ನಮಲೈ
ಅರುಣಾಚಲೇಶ್ವರ


ಅಗ್ನಿ
ಕಂಚಿಪುರಂ
ಕಾಮಾಕ್ಷಿ ದೇವಸ್ಥಾನ







ದಿನ - ೨೫/೦೪/೨೦೦೯




ಕಂಚಿಪುರಂ
ಏಕಾಂಬರ್ನಾಥರ

ಭೂಮಿ
ಶ್ರೀ ಕಾಳಹಸ್ತಿ
ಶ್ರೀ ಕಾಳಹಸ್ತೀಶ್ವರ


ವಾಯು

ಕೊನೆಯ ದೇವಸ್ಥಾನ ಮಾತ್ರ ಆಂಧ್ರದಲ್ಲಿ ಇದೆ. ಮೇಲಿರುವ ಬಹುತೇಕ ಅಂಶವನ್ನು ವಿಜಯ್ ಸಂಕಲಿಸಿದ್ದು; ನಾನದನ್ನು ಕೇವಲ ಮರು ಉಪಯೋಗಿಸಿಕೊಂಡಿದ್ದೇನೆ.

ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡದ್ದು - ನನಗೆ ಹಿಡಿಸಿದ್ದು:
1. ಪ್ರತಿಯೊಂದು ದೇವಸ್ಥಾನವು ಕೋಟೆಯಂತಿದೆ - ಸುತ್ತಿನೊಳಗೆ ಸುತ್ತು; ಸುತ್ತಿನೊಳಗೆ ಸುತ್ತು.
೨. ಪ್ರತಿಯೊಂದು ಸುತ್ತಿನಲ್ಲೂ ಹಲವಾರು ಚಿಕ್ಕ-ಚಿಕ್ಕ ದೇವಸ್ಥಾನಗಳು

೩. ಪೂಜಾರಿಗಳು ನೀಡುತ್ತಿದ್ದ ಕುಂಕುಮ / ವಿಭೂತಿ; ಆದರೆ ಶಿವ ಮೂಲ ದೇವರಾದ್ದರಿಂದ ಒಂದು ದೇವಸ್ಥಾನವನ್ನು ಬಿಟ್ಟರೆ ಬೇರೆಲ್ಲೂ ತೀರ್ಥ ದೊರೆಯಲಿಲ್ಲ ( ವಿಷ್ನು ದೇವಾಲಯದಲ್ಲಿಯ ತೀರ್ಥ-ಪಂಚಾಮೃತ ಬಹಳವಾಗಿ ಮಿಸ್ ಮಾಡಿಕೊಂಡೆ )
೪. ಕುಡಿಯುವ ನೀರಿನ ವ್ಯವಸ್ಥೆ
೫. ಒಳ್ಳೆಯ ತೆಂಗಿನ ಕಾಯಿಗಳು


ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡದ್ದು - ನನಗೆ ಹಿಡಿಸದೆ ಇದ್ದದ್ದು:
೧. ಎಲ್ಲೆಂದರಲ್ಲಿ ಎಣ್ಣೆ
೨. ಎಲ್ಲ ನಾಮಫಲಕಗಳು ತಮಿಳಿನಲ್ಲಿ - ರಾಷ್ಟ್ರ ಭಾಷೆಗೂ ಇಲ್ಲಿ ಆಸ್ಪದವಿಲ್ಲ
೩. ಸಂಕುಚಿತವಾದ, ಗಾಳಿಯಾಡದ ದೇವಸ್ಥಾನದ ಮಧ್ಯ ಭಾಗ; ಜನರು ಪೂಜೆಯ ಸಮಯದಲ್ಲಿ ವಿಚಿತ್ರ ಅನುಭವಗಳನ್ನು ಪಡೆಯುವುದು ಏತಕೆ ಎಂದು ಈಗ ನನಗೆ ಅರ್ಥವಾಗಿದೆ
೪. ಮುಗಿಬಿದ್ದು ಬರುವ ಜನರು (ದಾವಸ್ಥಾನ-ಅದನ್ನುಪಯೋಗಿಸುವ ಜನ-ಜಂಗುಳಿ; ಸಮತೋಲನ ಏರುಪೇರಾದಂತೆ ತೋರುತ್ತದೆ)
೫. ಜನರನ್ನು ಕುರಿಗಳಂತೆ ಹಿಂಡಿನಲ್ಲಿ ಓಡಿಸುವ ದೇವಸ್ಥಾನದ ಸಿಬ್ಬಂದಿಗಳು
೬. ತಟ್ಟೆಗೆ ದಕ್ಷಿಣೆಯನ್ನು ಹಾಕಿ ಎಂದು ಆಗ್ರಹಿಸುವ ಪೂಜಾರಿಗಳು; ಇದು ನನಗೆ ಅತ್ಯಂತ ಬೇಸರ ಉಂಟು ಮಾಡಿದ ಸಂಗತಿ - ಕೆಲವೊಮ್ಮೆ ತಲೆ ಕೆಟ್ಟವರಂತೆ ಗದರುವುದು (ಭಾಷೆ ತಿಳಿಯದೆ ನಮಗೆ ಏನಾಗುತ್ತಿದೆ ಎಂದು ತಿಳಿಯುತ್ತಿರಲಿಲ್ಲ)
೭. ಬೆನ್ನು ಬಿಡದೆ ಹಿಂಬಾಲಿಸಿಕೊಂಡು ಬರುವ ಭಿಕ್ಷುಕರು (ಆದರೆ ತಮ್ಮ ವ್ರತ್ತಿ ಧರ್ಮವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದು ಅವರೊಬ್ಬರೆ ಅನಿಸಿತು ನನಗೆ)
೮. ಕಾವೇರಿದ ಚಪ್ಪಡಿ ಕಲ್ಲುಗಳ ಮೇಲೆ ನಡೆದು ಪ್ರದಕ್ಷಿಣೆ ಹಾಕುವುದು
೯. ಬಾಳೆಯ ಹಣ್ಣಿನ / ತಿಂಡಿಯ / ಜೂಸ್ ಬಾಟಲಿಯ ಒಂದು ಝಲಕು ಸಿಕ್ಕರೂ ಸಾಕು - ಅಟ್ಟಿಸಿ ಕೊಂಡು ಬರುವ ವಾನರ ಜಾತಿಯ, ತೀಕ್ಷ್ಣ ಬುದ್ಧಿಯುಳ್ಳ ಬಾಲ ಸಹಿತವಾದ ಪ್ರಾಣಿಗಳು; ಜನರು ಅವುಗಳನ್ನು ಹಾಗೆಯೆ ಬಿಟ್ಟಿರುವುದು ನನಗೆ ಬೇಸರ ಉಂಟು ಮಾಡಿತು
೧೦. ಗಲೀಜು ಕೊಳಗಳು (ಪುಷ್ಕರಣಿ)


ಕೆಲವು ಮನಸ್ಸಿಗೆ ಮುದ ನೀಡಿದ ಕ್ಷಣಗಳು - ಒಳ್ಳೆಯ ಅನುಭವಗಳು:

೧. ಎಡೆ ಬಿಡದೆ ತಿರುಗಾಡಿದ್ದು
೨. ಬೆಳಗಿನ ಜಾವ ಬೇಗನೆ ಎದ್ದೇಳುವ ಅಭ್ಯಾಸ ಮಾಡಿಕೊಂಡದ್ದು
೩. ಸುಸ್ತಾಗಿ ಕಣ್ತುಂಬ ನಿದ್ದೆ ಮಾಡಿದ್ದು
೪. ಓಡುತ್ತಿರುವ ಬಸ್ಸಿನಲ್ಲಿ ನಿಂಬೆಯ ಹಣ್ಣಿನ ಶರ್ಬತ್ ಮಾಡಿದ್ದು
೫. ಮಾತನಾಡುತ್ತ ಮನೆ ಮಂದಿಯೊಡನೆ ಸಮಯ ಕಳೆದದ್ದು
೬. ದೊಡ್ದಮ್ಮ, ನಾನು ಪುಷ್ಕರಣಿಯಲ್ಲಿ ಪಾಚಿಯ ಮೇಲೆ ಕಾಲಿಟ್ಟು ಜಾರಿದಾಗ, ಕಿರುಚಿದ್ದು


ಒಟ್ಟಿನಲ್ಲಿ ಒಂದು ಒಳ್ಳೆಯ ಕಲಿಕೆಯಾಗಿತ್ತು. ಈಗ ನನ್ನಲ್ಲಿ ನಾನು ಸ್ವಲ್ಪ ಮಟ್ಟಿನ ಒಳ್ಳೆಯ ಬದಲಾವಣೆಯನ್ನು ಕಂಡಿದ್ದೇನೆ :) ಇನ್ನು ಮುಂದೆ ನಮ್ಮ ಕರ್ನಾಟಕದಲ್ಲೇ ಇರುವ ಬಹಳಷ್ಟು ಒಳ್ಳೆಯ ಪ್ರದೇಶಗಳನ್ನು ನೋಡುವುದಾಗಿ ನಿರ್ಧರಿಸಿದ್ದೇನೆ.

Saturday, April 4, 2009

ಅಪರಿಚಿತ

ರೈಲು ೨ ಘಂಟೆ ತಡವಾಗಿ ನಡೆಯುತ್ತಿತ್ತು. ರಾತ್ರಿಯೆಲ್ಲ ತನ್ನ ಟಾಪ್ ಬರ್ತ್ ನಲ್ಲಿ ಹೋರಳಾಡಿ ನಿದ್ದೆಗೆಟ್ಟ ವಸಂತ ಎದ್ದು ಕುಳಿತ - ಕಣ್ಣರೆಪ್ಪೆಗಳು ತೆರೆಯಲೊಲ್ಲೆ ಎಂದರೂ ಜನರು ಮಾತಾಡುತ್ತಿದ್ದನ್ನು ಕೇಳುತ್ತ ಅವನಿಗೆ ಮಲಗಲಾಗಲಿಲ್ಲ. ಎದ್ದು ಕಣ್ಣನ್ನು ಉಜ್ಜುತ್ತ ತನ್ನ ಮೊಬೈಲನ್ನು ಕಿಸೆಯಿಂದ ಹೊರ ತಗೆದು ನೋಡಿದರೆ ಸಮಯ ೯ ಘಂಟೆ! ಎಲ್ಲಿ ಸ್ಟೇಷನ್ ತಪ್ಪಿಹೋಯಿತೋ ಅನ್ನೋ ಭಯದಿಂದ ಚೆಂಗಗೆ ನೆಗೆದವನು ಇನ್ನೇನು ಕೆಳಗೆ ಕುಳಿತವರಲ್ಲೊಬ್ಬರನ್ನು ಗುದ್ದೇ ಬಿಡುತಿದ್ದನೇನೊ... ಸುಧಾರಿಸಿಕೊಂಡು ಕೆಳಗೆ ಕುಳಿತವರಲ್ಲೊಬ್ಬರಿಗೆ ಕೇಳಿದ - " ಸಾರ್, ದಾವಣಗೆರೆ ಸ್ಟೇಷನ್ ಬಂತಾ? ". ಪ್ರಶ್ನೆ ಕೇಳುತ್ತಿದ್ದಂತೆ, ಮಾತನಾಡಿಸಿದವನನ್ನು ಎಲ್ಲೋ ನೋಡಿದಂತೆ ಅನಿಸಿತು.

"ಇಲ್ಲ - ಟ್ರೇನು ಲೇಟಾಗಿದೆ - ಇನ್ನೇನು ಇನ್ನೊಂದು ಘಂಟೆಯಲ್ಲಿ ಬರಬೇಕು"

ಕಣ್ಣಿನಿಂದಲೇ ಧನ್ಯವಾದಗಳನ್ನು ಸೂಚಿಸುತ್ತ ತನ್ನ ಚಾದರನ್ನು ಮಡಚಲು ಅಣಿಯಾದ. ೨ ದಿನದ ಹಿಂದೆ ನಡೆದ ಘಟನೆ ತಲೆಯಲ್ಲಿ ಇನ್ನೂ ಸುಂಟರ ಗಾಳಿಯಂತೆ ತಿರುಗಾಡುತ್ತಿತ್ತು. ಕಳೆದ ೬ ತಿಂಗಳುಗಳಿಂದ ಸತತವಾಗಿ ತಿಂಡಿ-ಊಟವೆಂದು ಲೆಕ್ಕಿಸದೆ ದುಡಿದಿದ್ದ. ಕರೆದಾಗಲೆಲ್ಲ ಹೊತ್ತು-ಗೊತ್ತು ನೋಡದೆ ಆಫೀಸಿಗೆ ಹೊರಟೇ ಬಿಡುತ್ತಿದ್ದ; ರಜಾ ದಿನವನ್ನು ಅವನು ಕಂಡೇ ಇರಲಿಲ್ಲ ಅಂದರೆ ತಪ್ಪಾಗಲಾರದು. ಬೆಂಗಳೂರಿನಲ್ಲಿ ಕೆಲಸ ಅವನಿಗೆ ಸಾಕಷ್ಟು ಹಣವನ್ನು ಪ್ರತಿ ತಿಂಗಳು ಬರುವಂತೆ ಮಾಡಿತ್ತು - ಅದರಲ್ಲಿ ಬಹು ಪಾಲನ್ನು ತನ್ನ ತಮ್ಮನ ವಿದ್ಯಾಭ್ಯಾಸಕ್ಕೆಂದು ಮನೆಗೆ ಕಳುಹಿಸುತ್ತಿದ್ದ. ಉಳಿದ ಸ್ವಲ್ಪದರಲ್ಲಿ ಮನೆ ಬಾಡಿಗೆ, ತಿಂಡಿ-ಊಟ ಹಾಗು ಅನ್ಯ ಖರ್ಚುಗಳನ್ನ ಸಾಗಿಸುತ್ತಿದ್ದ. ಉಳಿತಾಯ ಅನ್ನೋದು ಬಹಳವೇನು ಮಾಡಿರಲಿಲ್ಲ. ಮಾಡಲು ಏನು ಇರುತ್ತಲೂ ಇರಲಿಲ್ಲ. ಕೆಲಸ ಮಾಡುವಲ್ಲಿ ಹೊಸ ಮಿತ್ರರನ್ನು ಮಾಡಿಕೊಂಡಿದ್ದ - ಅವನ ಜೀವನ ಆಫೀಸು-ಮನೆಗಳ ನಡುವೆ ಸಾಗಿತ್ತು. ೪ ಜನ ಮಿತ್ರರೊಡಗೂಡಿ ಮನೆಯನ್ನು ಬಾಡಿಗೆಗೆ ತಗೆದುಕೊಂಡಿದ್ದರು. ತನ್ನ ೩ ಜನ ಮಿತ್ರರೊಡನೆ ಅವನು ಕಳೆಯುವ ಸಮಯವಾದರು ಪ್ರತಿದಿನ ಕೆಲವೇ ನಿಮಿಷಗಳು - ದೊಡ್ಡ ಊರಿನಲ್ಲಿ ಇಷ್ಟು ಜನ ಪರಿಚಯದವರಾದರು ಸಿಗುತ್ತಾರಲ್ಲ ಅಂತ ಖುಷಿ ಪಡುತ್ತಿದ್ದ. ಎಂದಾದರೊಮ್ಮೆ ಊರಿಗೆ ಹೋಗಿ ಬರುತ್ತಿದ್ದ.
ಕೆಲಸದಲ್ಲಿ ಮಗ್ನನಾಗಿದ್ದರೂ, ಆಗೊಮ್ಮೆ-ಈಗೊಮ್ಮೆ ಸುತ್ತಮುತ್ತ ಸಹೋದ್ಯೋಗಿಗಳೊಡನೆ ಮಾತನಾಡುತಿದ್ದ. ಹೀಗೆಯೆ ಆಶಾಳ ಪರಿಚಯವಾಗಿ ಆಪ್ತಳೂ ಆಗಿದ್ದಳು. ಮದುವೆಯ ಪ್ರಸ್ತಾವವನ್ನು ಮುಂದಿಟ್ಟಾಗ ಜೀವನ ಸಂಗಾತಿಯಾಗಲು ತನ್ನ ಸಮ್ಮತಿಯನ್ನಿತ್ತಿದ್ದಳು - ತಂದೆ ತಾಯಂದಿರು ಸಹ ತಮ್ಮ ಸಮ್ಮತಿಯನ್ನು ಸೂಚಿಸಿದ್ದರು. ಅಂದು ಅವನು ಆಕಾಶಕ್ಕೆ ಮೂರೇ ಗೇಣು - ಖುಷಿಯಿಂದ ಕುಣಿದು ಕುಪ್ಪಳಿಸಿದ್ದ. ಎಂತಹ ಕಷ್ಟ ಬಂದರೂ ಅದನ್ನು ಜೊತೆಗೆ ಎದುರಿಸಿ, ಸಂತೋಷದಿಂದ ಬದುಕುವ ಕನಸನ್ನು ಅಂದು ಕಂಡ. ಕಷ್ಟ ಕಾದಿತ್ತು.
ಎಲ್ಲ ಶುರುವಾಗಿದ್ದು ಆ ಮಂಗಳವಾರ - ಅಫೀಸಿನಲ್ಲಿ ಎಂದಿನಂತೆ ಕೆಲಸ ನಡೆದಿತ್ತು. ಬಾಸ್ ಬಂದವನೆ, ಎಂದಿನಂತೆ ಅಂದಿನ ಕೆಲಸವನ್ನು ವಿವರಿಸಿ ತನ್ನ ಚೇಂಬರ್ ಗೆ ಹೋದ. ಕೆಲಸ ಬಹಳವೇ ಇತ್ತು - ತುಟಿಪಿಟಕ್ಕೆನ್ನದೆ ವಸಂತ ಕೆಲಸದಲ್ಲಿ ತೊಡಗಿದ. ಊಟವಾದ ಒಂದು ಘಂಟೆಯ ನಂತರ ಬಾಸ್ ವಸಂತನಿಗೆ ಫೋನಾಯಿಸಿ ತನ್ನ ಚೇಂಬರ್ಗೆ ಬರಲು ಹೇಳಿದ - ಚೇಂಬರ್ ಅಲ್ಲಿ ಒಂದು ಕಾಗದವನ್ನು ಅವನ ಕೈಗೊತ್ತಿ ಅದರ ಮೇಲೆ ಸಹಿ ಹಾಕಲು ಹೇಳಿದ - ನಾಳೆಯಿಂದ ನೀನು ಬರುವುದು ಬೇಡವೆಂದು ಸ್ಪಷ್ಟವಾಗಿ ಹೇಳಿಬಿಟ್ಟ. ವಸಂತನಿಗೆ ಏನು ಮಾಡಬೇಕೆಂದು ತೋಚಲಿಲ್ಲ; ಒಂದು ಕ್ಷಣ ದಿಗ್ಭ್ರಾಂತನಾಗಿ ಗೋಡೆಗೊರಗಿ ನಿಂತು ಬಿಟ್ಟ. ಬಾಸ್ ಹೇಳಿದ -

"ನಿನಗೆ ಬೇಜಾರಾಗಿರಬಹುದು ಅಂತ ನಾನು ಊಹಿಸಬಲ್ಲೆ ವಸಂತ... ನಿನ್ನ ಅರ್ಹತೆಯ ಮೇಲೆ ನನಗೆ ಸಂದೇಹವಿಲ್ಲ, ಆದರೆ ಕಂಪನಿಗೆ ಜನರನ್ನು ಸಾಕುವುದು ಕಷ್ಟವಾಗಿದೆ. ನಿನಗೆ ಗೊತ್ತಿರುವ ಹಾಗೆ ನಮ್ಮ ಕಂಪನಿಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಈ ರಾಜಿನಾಮೆ ಪತ್ರದ ಮೇಲೆ ಸಹಿ ಮಾಡು - ಎರಡು ತಿಂಗಳ ಸಂಬಳ ನಿನಗೆ ಸಿಗುತ್ತದೆ. ಸಹಿ ಮಾಡದಿದ್ದ ಪಕ್ಷದಲ್ಲಿ ನಿನ್ನನ್ನು ನಾವು ಕೆಲಸದಿಂದ ತಗೆದು ಹಾಕಬೇಕಾಗುತ್ತೆ ನಿನ್ನ ಕ್ಯಾರೆಕ್ಟರ್ ಸರಿ ಇರಲಿಲ್ಲ ಅನ್ನುವ ಕಾರಣ ಕೊಟ್ಟು"

ವಸಂತನ ಮನಸ್ಸು ಒಡೆದು ಹೋಗಿತ್ತು. ಅಪ್ಪ-ಅಮ್ಮ, ಶಾಲಾ-ಕಾಲೇಜು ಹೇಳಿಕೊಟ್ಟ "ನೀಯತ್ತಿನಿಂದ ದುಡಿ" ಅನ್ನೋದನ್ನ ಪಾಲಿಸಿದ್ದಕ್ಕೆ ಸರಿಯಾದ ಫಲವನ್ನು ನೀಡಿದರಲ್ಲ ಇವರು ಅಂತ ಭಾವುಕನಾಗಿ ಕಣ್ಣಿನಿಂದ ಹನಿಗಳೆರದು ಉರುಳಿ ನೆಲಕ್ಕಪ್ಪಳಿಸಿದುವು. ಹೇಸಿಗೆಯಾಯಿತು. ಉನ್ಮಾದಗ್ರಸ್ಥನಾಗುವಮುನ್ನ ಇಲ್ಲಿಂದ ಹೊರ ಹೋಗಬೇಕೆಂಬ ಒಂದೇ ಗುರಿಯನ್ನು ಇಟ್ಟುಕೊಂಡು ತಿರಸ್ಕಾರದಿಂದ ಬಾಸನ್ನು ನೋಡಿ, ಸಹಿ ಹಾಕಿ ಹೊರಟೇ ಬಿಟ್ಟ. ಮನೆಗೆ ಹಿಂದಿರುಗುವಾಗ ವಿಚಿತ್ರವೆನಿಸಿತು - ಎಂದೂ ಸರಿಯಾದ ಸಮಯಕ್ಕೆ ಮನೆಗೆ ಬರದವನಿಗೆ ತಾನು ಹೋಗುತ್ತಿದ್ದ ಮನೆಯ ಅಕ್ಕ ಪಕ್ಕ ಹಲವಾರು ಅಂದದ ಉದ್ಯಾನವನಗಳಿರುವುದು ಗೊತ್ತಾಗಿದ್ದೇ ಅಂದು.

ಮನೆಗೆ ಬರುವ ಗಡಿಬಿಡಿಯಲ್ಲಿ ಆಶಾಳ ಬಗ್ಗೆ ಪೂರ್ತಿಯಾಗಿ ಮರೆತೇ ಹೋಗಿದ್ದ ವಸಂತ, ಅವಳಿಗೆ ಫೋನಾಯಿಸಿದನು.

ಭಾವೋದ್ವೇಗವಿಲ್ಲದೆ,"ಆಶು... ನನ್ನನ್ನ ಕೆಲಸದಿಂದ ತಗೆದು ಹಾಕಿದ್ರು", ಅಂದ.
"ಬೇಸರಿಸ ಬೇಡ ವಸಂತ, ನನಗೆಲ್ಲ ಗೊತ್ತಾಯ್ತು - ಇನ್ನೊಂದು ಕೆಲಸ ಹುಡುಕೋಣಂತೆ. ಕೆಲ್ಸಾ ಮುಗ್ಸ್ಕೊಂಡು ರಾತ್ರಿ ಮನೆ ಕಡೆ ಬರ್ತೀನಿ - ಕೂತ್ಕೊಂಡು ಸಮಾಧಾನದಿಂದ ಮಾತಾಡೋಣಾ. ನೀನು ಮನೇಲಿ ಸುಧಾರಿಸಿಕೊ", ಎಂದಳು ಆಶಾ.

ಕೆಲಸವಿಲ್ಲದೆ ನನ್ನ ಗತಿ ಏನು? ಇನ್ನೊಂದು ಕೆಲಸ ಎಲ್ಲಿ ಹುಡುಕಲಿ? ನನಗೆ ಗೊತ್ತಿರೋ ಮಿತ್ರರಾದರು ಹಲವರು - ಬೇಗ ಕೆಲಸ ಸಿಗೋದಾ? ಎಂದೆಲ್ಲ ವಿಚಾರಗಳು ಅವನ ತಲೆಯಲ್ಲಿ ತುಂಬಿ ತಲೆ ಸಿಡಿಯಲಾರಂಭಿಸಿತು. ಹಾಲು ತಂದು ಚಹ ಮಾಡಿ ಕುಡಿದ - ಹಿತವೆನಿಸಿತು. ನಿದ್ದೆ ಬರದ ಕಾರಣ ಹೊರಗೆ ಹೊಸದಾಗಿ ಕಣ್ಗೆ ಬಿದ್ದ ಉದ್ಯಾನವನವನ್ನು ಹೊಕ್ಕ - ತಿರುಗಾಡಿದ. ಬೆಂಗಳೂರಿಗೆ ಬಂದಂದಿನಿಂದಲು ಎಂದೂ ಹೀಗೆ ಆರಾಮವಾಗಿ ಎಲ್ಲೂ ಸುತ್ತಿರಲಿಲ್ಲ. ಹಿತವೆನಿಸಿತು. ಸ್ವಲ್ಪ ಸಮಯ ಅಲ್ಲಿನ ಕಟ್ಟೆಗಳ ಮೇಲೆ ಕುಳಿತು ಕಳೆದು. ಆಕ್ಕ ಪಕ್ಕ ಕಣ್ಣು ಹಾಯಿಸಿದಾಗ ಮಕ್ಕಳು ಕ್ರಿಕೆಟ್ ಆಡುತ್ತಿರುವುದನ್ನು ಗಮನಿಸಿದ - ಆಸಕ್ತಿಯಿಂದ ಅವರ ಆಟವನ್ನು ಮನಸಾರೆ ವೀಕ್ಷಿಸಿ ಆನಂದಿಸಿದ. ಅವರ ಜಗಳ, ಚೆಂಡಿನ ಹಿಂದೆ ಓಡಾಟ, ನಲ್ಲಿಗೆ ಕೈಯನ್ನಿಟ್ಟು ಬೊಗಸೆಯಲ್ಲಿ ನೀರನ್ನು ತುಂಬಿಸಿ ಕುಡಿಯುವ ಪರಿಯನ್ನು ಕಂಡು ತನ್ನ ಶಾಲಾ-ಕಾಲೇಜಿನ ದಿನಗಳು ನೆನಪಿಗೆ ಬಂದವು. ದೇಹವನ್ನು ದಂಡಿಸದೆ ನಿರ್ಜೀವ ಕಡ್ಡಿ-ಕೋಲಾಗಿದ್ದ ತನ್ನ ಕೈ-ಕಾಲುಗಳನ್ನು, ಹೋಟ್ಟೆಯ ಬೊಜ್ಜನ್ನು ದಿಟ್ಟಿಸಿ ನೋಡಿ ನಿಟ್ಟುಸಿರನ್ನು ಬಿಟ್ಟು ಮನೆಗೆ ಹಿಂದಿರುಗಿದ.

ಬೆಂಗಳೂರಿನಲ್ಲಿ ಜೀವನ ಹಲವಾರು ಪಾಠಗಳನ್ನು / ಕಲೆಗಳನ್ನು ಕಲಿಸಿತ್ತಾದರೂ ಮನಸ್ಸು ಸಮಾಧಾನವನ್ನು ಕಳೆದುಕೊಂಡಿತ್ತು. ಚಿಕ್ಕ-ಪುಟ್ಟ ಸಂತಸಗಳನ್ನ ಪಡುವುದು ಅಶಕ್ಯವಾಗಿತ್ತು ವಸಂತನಿಗೆ. ಕಷ್ಟಪಟ್ಟು ಮಲಗಿದ.

ಆಶಾ ವಸಂತನ ಮನೆಗೆ ಹೋದಾಗ ರಾತ್ರಿಯ ೯.೩೦ ಘಂಟೆ. ಮನೆಯಲ್ಲಿ ಯಾವುದೇ ದೀಪ ಬೆಳಗದೇ ಇರುವುದನ್ನು ಕಂಡು ಸ್ವಲ್ಪ ಹೆದರಿದ ಅವಳು ಬೆಲ್ಲು ಬಾರಿಸಿದಳು - ಏನೂ ಪ್ರತ್ಯುತ್ತರ ಬರದಿದ್ದಾಗ ವಸಂತನಿಗೆ ಫೋನಾಯಿಸಿದಳು. ನಾಲ್ಕನೆಯ ಬಾರಿ ಪ್ರಯತ್ನಿಸಿದಾಗ ವಸಂತ ಪ್ರತ್ಯುತ್ತರ ನೀಡಿದಾಗ ಅವಳಿಗೆ ಸಮಾಧಾನವಾಯಿತು. ವಸಂತ ಗಾಢ ನಿದ್ರೆಯಲ್ಲಿದ್ದ ಕಾರಣ ಅವನಿಗೆ ಬೆಲ್ಲು ಕೇಳಿಸಿರಲಿಲ್ಲ - ಎದ್ದು ಬಂದು ಮನೆಯ ಬಾಗಿಲನ್ನು ತಗೆದನು. ಆಶಾ ಒಳಗೆ ಬರುತ್ತಿದ್ದಂತೆ ತಾನು ಮುಖ ತೋಳೆದುಕೊಂಡು ಬರುವುದಾಗಿ ಸನ್ನೆ ಮಾಡಿ ಒಳಗೆ ನಡೆದನು.

ಐದು ನಿಮಿಷಗಳ ನಂತರ ಹಿಂದಿರುಗಿದ ಅವನು, ಅವಳ ಮುಂದೆ ಬಂದು ಕುಳಿತನು. ಇನ್ನೈದು ನಿಮಿಷಗಳ ಮೌನದ ನಂತರ ಆಶಾ ಶುರು ಮಾಡಿದಳು -

"ನಿದ್ದೆ ಆಯ್ತಾ?"

"ಹುಂ"

"ಆಫೀಸಿನಲ್ಲಿ ನಡೆದದ್ದೆಲ್ಲ ನನಗೆ ನಿನ್ನ ಫ್ರೆಂಡ್ ಚಂದ್ರ ನನಗೆ ಹೇಳ್ದ - ಚಿಂತೆ ಮಾಡಬೇಡ. ಇನ್ನೊಂದು ಕೆಲಸ ಹುಡುಕೋಣ. ನಾನು ನಿನ್ನ ಜೊತೆಯಲ್ಲಿದ್ದೀನಿ - ಎಲ್ಲ ಸರಿ ಹೋಗೊತ್ತೆ. ನಿನ್ನ ಬಾಸ್ ಗೆ ನೀನು ಮಾಡಿದ ಕೆಲಸದ ಅರಿವಿಲ್ಲ ಅನ್ಸೊತ್ತೆ"

ಇಲ್ಲಿಯ ವರೆಗೆ ದುಃಖವನ್ನು ತೋರಿಸದಿದ್ದ ವಸಂತನಿಗೆ ತಡೆಯಲಾಗಲಿಲ್ಲ - ಜೋರಾಗಿ ಅತ್ತುಬಿಟ್ಟ. ತನ್ನ ತಲೆಯನ್ನು ಆಶಾಳ ತೋಡೆಯ ಮೇಲಿಟ್ಟು ಏನೇನೋ ಬಡಬಡಿಸಿದ - ಬಾಸನ್ನಿಷ್ಟು ದೂರಿದ, ತನ್ನ ಹಣೆಬರಹವನ್ನಿಷ್ಟು ಹಳಿದ... ಸುಸ್ತಾಗಿ ಮಾತನಾಡಲಾಗದೆ ಸುಮ್ಮನಿರಲಾರದೆ ಬಿಕ್ಕಳಿಸಿ ಅಳತೊಡಗಿದ. ಹೇಳಿದ ಮಾತನ್ನು ಅರಿಯುವ ಪರಿಸ್ಥಿತಿಯಲ್ಲಿ ಇವನಿಲ್ಲವೆಂದು ಅರಿತ ಆಶಾ ಮೆಲ್ಲನೆ ಅವನ ತಲೆಯನ್ನು ನೇವರಿಸಿತೊಡಗಿದಳು.

ಕೋಪವಿಳಿದು ಮನಸ್ಸು ಹಗುರವಾದಂತೆ ವಸಂತ ಅಳುವುದನ್ನು ನಿಲ್ಲಿಸಿದ್ದ. ಅವನ ಹಾಗು ಆಶಾಳ ಹೊಟ್ಟೆ ತಾಳ ಹಾಕುತ್ತಿತ್ತು. ತಾನು ಅಡುಗೆ ಮಾಡುತ್ತೇನೆಂದು ಆಶಾ ಅಡುಗೆ ಮನೆಗೆ ಹೋದಳು - ವಸಂತ ತಾನು ಸಹಾಯ ಮಾಡುವುದಾಗಿ ಸೂಚಿಸಿ ಅವಳೊಡನೆ ನಡೆದನು. ತಮ್ಮ ಕಳೆದ ಸಂತಸದ ದಿನಗಳನ್ನು ನೆನೆಸುತ್ತ, ಮುಂದೆ ಹೇಗೆ ತಾವು ಜೊತೆಯಲ್ಲಿ ಸಂಸಾರ ಹೂಡಬೇಕೆಂದು ವಿವರಿಸುತ್ತ ಆಶಾ ಅಡುಗೆಯನ್ನು ಮಾಡಿ ಮುಗಿಸಿದಳು - ಇಬ್ಬರೂ ಜೊತೆಗೂಡಿ ಮೊದಲ ಬಾರಿಗೆ ವಸಂತನ ಮನೆಯಲ್ಲಿ ಊಟ ಮಾಡಿದರು. ನಂತರ, ತಾನು ತನ್ನ ಪಿ.ಜಿ. ಗೆ ಹೋಗುವುದಾಗಿ ಹೇಳಿದ ಆಶಾ, ವಸಂತನು ಸ್ವಲ್ಪ ದಿನ ತನ್ನ ಊರಿಗೆ ಹೋಗಿ ಸುಧಾರಿಸಿಕೊಂಡು ಬರಬೇಕೆಂದು, ಅಲ್ಲಿಯ ತನಕ ತಾನು ಕೆಲಸಗಳಿಗೆ ಅರ್ಜಿಗಳನ್ನು ಹಾಕುವುದಾಗಿ ಹೇಳಿ ಬೀಳ್ಕೊಟ್ಟಳು.

೧೧ ಘಂಟೆಯ ಆಸುಪಾಸಿನಲ್ಲಿ ವಸಂತನ ಮಿತ್ರರು ಮನೆಗೆ ಕೆಲಸದಿಂದ ಹಿಂದಿರುಗಿದರು. ಸುಸ್ತಾಗಿ ಬಂದಿದ್ದ ಅವರು ಬಂದವರೇ ಮಲಗಿಬಿಟ್ಟರು.
ಮಾರನೆಯ ದಿನ ತಾನು ಮನೆಗೆ ಹೋಗುವುದಾಗಿ ವಸಂತ ನಿರ್ಧರಿಸಿದನು; ತನ್ನ ಮಿತ್ರರಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿದನು - ಅವರು ಸಹ ಮನೆಗೆ ಹೋಗಿ ಸ್ವಲ್ಪ ದಿನದ ನಂತರ ಹಿಂದಿರುಗುವಂತೆ ಸೂಚಿಸಿದರು. ಆ ದಿನ ರಾತ್ರಿ ರೈಲು ಗಾಡಿಯನ್ನು ಹತ್ತಿದ್ದ ವಸಂತ - ಮನೆಯಲ್ಲಿ ಯಾರಿಗೂ ಏನನ್ನೂ ಹೇಳುವುದು ಬೇಡ; ಇನ್ನೊಂದು ಕೆಲಸ ಸಿಕ್ಕ ಮೇಲೆ ತಿಳಿಸುವುದೆಂದು ನಿರ್ಧರಿಸಿ ಬಿಟ್ಟಿದ್ದ ವಸಂತ.

ಟ್ರೇನಿನಲ್ಲಿ ಈ ಅಪರಿಚಿತ ವ್ಯಕ್ತಿಯನ್ನು ಮಾತನಾಡಿಸಿದ್ದ - ಎಲ್ಲೋ ನೋಡಿರುವ ಹಾಗೆ ನೆನಪು.... ಹಾಂ... ನನ್ನ ಶಾಲಾ ದಿನಗಳಲ್ಲಿ ಅವರು ನಮಗೆ ವಾಲಿಬಾಲ್ ಕ್ಯಾಂಪ್ ಒಂದನ್ನು ಮಾಡಿದ್ದರಲ್ಲ! ಇನ್ನು ಅಂದಿನಂತೆಯೇ ಕಾಣುತ್ತಾರಲ್ಲ - ಮುಖದ ಮೇಲೆ ಅದೇ ಕಳೆ. ವಸಂತನೇ ಮಾತನ್ನು ಪ್ರಾರಂಭಿಸಿದ -

"ಸಾರ್, ನೀವು ವಾಲಿಬಾಲ್ ಕೋಚ್ ಅಲ್ಲವ?"

"ಹುಂ... ನಿಮ್ಮನ್ನು ಯೆಲ್ಲೋ ನೋಡಿದ್ದೀನಿ ಅನ್ಸೊತ್ತೆ..."

"ಹೌದು ಸಾರ್ - ನೀವು ನಮ್ಮ ಶಾಲೆಗೆ ಸುಮಾರು ೮ ವರ್ಷಗಳ ಹಿಂದೆ ವಾಲಿಬಾಲ್ ಕ್ಯಾಂಪ್ ಒಂದನ್ನು ನಡೆಸಿಕೊಟ್ಟಿದ್ರಿ"

"ಒಹ್ ನೆನಪಾಯ್ತು - ಎಲ್ಲಿದ್ದಿಯಪ್ಪ ನೀನು ಈಗ?"

"ಬೆಂಗಳೂರು...", ಎಂದನು ವಸಂತ.

"ಕೆಲಸ ಹೇಗೆ ನಡೀತಿದೆ?"

"ಪರ್ವಾಗಿಲ್ಲ... ", ಸುಳ್ಳೆಂದು ಮನಸ್ಸು ಹೇಳುತ್ತಿದ್ದರು ನಿಜವನ್ನು ಹೇಗೆ ಒಬ್ಬ ಅಪರಿಚಿತನಿಗೆ ಹೇಳೋದೆಂಬ ದುಗುಡ ವಸಂತನಿಗೆ.

"ಹಂ ಒಳ್ಳೆದಪ್ಪ... ನನ್ನ ಮಗ ಕೂಡ ಅಲ್ಲಿಯೆ ಕೆಲಸಕ್ಕಿದ್ದ. ಒಂದು ವರ್ಷವಾಗಿತ್ತು ಅವನು ಕೆಲಸಕ್ಕೆ ಸೇರಿ. ಎಲ್ಲ ಸರಿಯಾಗಿಯೆ ನಡೆಯುತ್ತಂತೆ - ಒಂದು ದಿನ ಅವನನ್ನು ಕರೆದು ನಾಳೆಯೊಂದ ಕೆಲಸಕ್ಕೆ ಬರೋದು ಬೇಡ ಎಂದರಂತೆ...", ಅವರ ಮುಖದ ಮೇಲೆ ಅಸಮಾಧಾನ ಕಾಣುತ್ತಿತ್ತು.

"ಒಹ್!", ಎಂದ ವಸಂತ. ತನ್ನ ತಂದೆಯ ಪ್ರತಿಕ್ರಿಯೆ ಹೇಗಿರಬಹುದೆಂಬುದನ್ನು ಊಹಿಸಲು ಅವನಿಗೆ ಕಷ್ಟವಾಗಲಿಲ್ಲ.

"ನಾಳೆ ಮನೆಗೆ ಬರ್ತಿದ್ದಾನೆ ಅವನು - ಕೆಲಸ ಮಾಡೋದು ಇದ್ದೇ ಇದೆ; ಹುಡುಕಿದರೆ ಸಿಕ್ಕೇ ಸಿಗುತ್ತದೆ ಅದಕ್ಕೇನಂತೆ ಅಂತ ಅವನಿಗೆ ಹೇಳಿದ್ದೇನೆ..."

"...ಆದರೆ ಸಾರ್, ಈಗಿನ ಪರಿಸ್ಥಿತಿಯಲ್ಲಿ ಕೆಲಸ ಸಿಗೋದು ಕಷ್ಟ...", ವಸಂತನಿಗೆ ತಡೆಯಲಾಗದೆ ಉಸುರಿಯೇ ಬಿಟ್ಟ.

"ನಿಜ... ಇದೇ ಕೆಲಸ ಬೇಕು, ಅದೇ ಕೆಲಸ ಬೇಕು, ಅಷ್ಟೇ ಸಂಬಳ ಬೇಕೆಂದರೆ ಸುಲಭದಲ್ಲಿ ಸಿಗದೇ ಇರಬಹುದು. ಆದರೆ ಬದುಕಲು ಒಂದು ಕೆಲಸ ಅನ್ನೋದು ಸಿಕ್ಕೇ ಸಿಗೊತ್ತೆ ಅನ್ನೋದು ನನ್ನ ಅನುಭವ"

"ಆದರೆ ಮೋದಲಿದ್ದ ಹಾಗೆ ಇರಲು ಆಗಬೇಕಲ್ಲ? ಗಾಡಿಗೆ ಪೆಟ್ರೋಲು, ಮನೆ ಬಾಡಿಗೆ, ತಿರುಗಾಡಲು - ಖರ್ಚಿಗೆ ಹಣ ಬೇಡವೆ?", ವಸಂತನಿಗೆ ಉತ್ತರ ಬೇಕಿತ್ತು.

"ಇದ್ದದ್ದನ್ನು ಮಿತವಾಗಿ ಬಳಸಬೇಕಷ್ಟೆ. ಇದು ಒಬ್ಬರಿಗೇ ಒದಗಿ ಬಂದಿರುವ ಕಷ್ಟವಲ್ಲ - ಹಲವಾರು ಜನರಿಗೆ ಇದೇ ರೀತಿಯಲ್ಲಿ ಕಷ್ಟ ಒದಗಿ ಬಂದಿದೆ ಅನ್ನುವುದನ್ನು ಮರೆಯಬಾರದು. ಬಾಡಿಗೆಗಳು ಕಡಿಮೆಯಾಗಿವೆ - ಇಲ್ಲದ ಪಕ್ಷದಲ್ಲಿ, ಕಡಿಮೆ ಬಾಡಿಗೆಯ ಮನೆಗಳು ಈಗ ಸಿಗಹತ್ತಿವೆ. ಬಸ್ಸನ್ನು ಉಪಯೋಗಿಸಿದರೆ ತಿರುಗಾಡೋ ಖರ್ಚು ಕಡಿಮೆಯಾಗಲೇ ಬೇಕು. ಕೆಲಸ ಸಿಗಲು ತಡವಾಗಬಹುದು - ಅಲ್ಲಿಯ ವರೆಗೆ ಆರ್ಥಿಕ ಸಹಾಯ ಮಾಡಲು ನಾವಿಲ್ಲವೆ? ನಮ್ಮ ಮಿತ್ರರಿಲ್ಲವೆ? ಹೋಗಲಿ, ಬ್ಯಾಂಕುಗಳಿಲ್ಲವೆ? ನನ್ನ ಹುಡುಗ ಇಷ್ಟು ವರ್ಷ ಕಾಲೇಜು ಓದಿದ್ದು ಶೇರು ಮಾರುಕಟ್ಟೆಯಲ್ಲಿ ಹಾಕಿದ ಹಣದಂತಲ್ಲವಲ್ಲ - ಅವನು ಪಡೆದುಕೊಂಡ ಜ್ಞಾನವನ್ನು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅವನು ಅದನ್ನು ಈಗ ಉಪಯೋಗಿಸಬೇಕು - ಕೆಲಸ ಸಿಕ್ಕೇ ಸಿಗುತ್ತದೆ"

"ಅವನು ಕೆಲಸ ಕಳೆದ ಕೂಡಲೆ ನಿಮಗೆ ಹೇಳಿದನಾ?"

"ಹುಂ...ಬೇಸರದಲ್ಲಿದ್ದ... ಆದರೆ ನಮ್ಮೊಡನೆ ಮಾತನಾಡಿದ ನಂತರ ಸರಿಯಾಗಿದ್ದಾನೆ. ಮನಸ್ಸಿನಲ್ಲಿ ಅದನ್ನು ಇಟ್ಟುಕೊಂಡು ಕೊರಗುವ ಜಾಯಮಾನ ಅವನದಲ್ಲ"

"ಕೇಳಿ ಸಂತೋಷವಾಯಿತು..."

"ಏನಪ್ಪ... ನಿಮ್ಮಲ್ಲಿ ಏನಾದರು ಕೆಲಸ ಮಾಡಲು ಜನರನ್ನು ಹುಡುಕುತ್ತಿದ್ದರೆ ನನಗೆ ತಿಳಿಸು... ನನ್ನ ಮಗನನ್ನು ನಿನ್ನೋಡನೆ ಮಾತನಾಡಲು ಹೇಳುತ್ತೇನೆ"

"ಆಯ್ತು ಸಾರ್.... ", ವಸಂತನ ಮನಸ್ಸು ಹಗುರವಾಗಿತ್ತು... ತಾನು ಇದ್ದುದನ್ನು ಇದ್ದ ಹಾಗೆ ಆಪ್ತರಿಗೆ ಹೇಳಿದರೆ ಸಮಾಧಾನವಾಗಿ, ಸಮಸ್ಯೆಗೆ ಪರಿಹಾರವನ್ನು ಹುಡುಕುವುದು ಸುಲಭವಾಗುತ್ತದೆಂಬ ಭರವಸೆ ಮೂಡಿತು. ಮನಸ್ಸಿನಲ್ಲೇ ಅಪರಿಚಿತ ವ್ಯಕ್ತಿಗೆ ಧನ್ಯವಾದಗಳನ್ನ ಹೇಳಿದ. ತಂದೆಗೆ ಎಲ್ಲವನ್ನೂ ಮುಚ್ಚು-ಮರೆ ಮಾಡದೆ ಹೇಳುವುದಾಗಿ ನಿರ್ಧರಿಸಿದ. ರೈಲು ದಾವಣಗೆರೆ ತಲುಪಿತು.