Tuesday, August 9, 2011

ಸಂತೋಷ - ಸಂಯಮ

 ಬರೀಬೇಕು ಅನ್ನಿಸ್ತು - ಮುಂದೊಂದು ದಿನ ಓದಿದಾಗ ಹೆಗನ್ನಿಸಬಹುದು ಅಂತ.

೧. ಸಂತೋಷವಾಗಿರಲು ಬೇಕಾಗಿರೋದು ವಸ್ತು ಅಥವಾ ವ್ಯಕ್ತಿ ಅಲ್ಲ... ಶುದ್ಧವಾದ ಮನಸ್ಸು, ವಿಚಾರಗಳು. ಹಾಗಂತ ವಸ್ತುಗಳು ಹಾಗು ವ್ಯಕ್ತಿಗಳು ಇಲ್ಲದೆ ಸಂತೋಷ ಅಪೂರ್ಣ. ಮನಸ್ಸಿಗೆ ಹತ್ತಿರವಾಗಿರುವವರು ದೈಹಿಕವಾಗಿ ಹತ್ತಿರವಿಲ್ಲದಿದ್ದರೂ ಅವರೊಡನೆ ಕಳೆದ ಸಂತಸದ ಆ ಸ್ವಲ್ಪ ಸಮಯವನ್ನು ಮೆಲುಕು ಹಾಕುತ್ತ ಮುಗುಳ್ನಗು ಮುಖದಲ್ಲಿ ಮೂಡಿದಾಗ ಸಿಗುವ ಆನಂದ ಅಪಾರ.
೨. ಪ್ರತಿಯೊಬ್ಬರಲ್ಲಿ ಇರುವ ವಿಚಾರಗಳನ್ನ ಸಂಯಮದಿಂದ ಆಲಿಸಬೇಕು - ದುಡುಕಿ ತಿರುಗೇಟು ನೀಡಲು ನಿಲ್ಲಬಾರದು. ಕಾರಣವಿಲ್ಲದೆ ಜಗಳ ಮಾಡಬಾರದು. ಯಾರಾದರು ಕೆಣಕಿದರೆ ಅದನ್ನು ಮನಸ್ಸಿಗೆ ತಗೆದುಕೊಲ್ಲಬಾರದು; ಮಾತು-ಜಗಳಕ್ಕೆ ಆಸ್ಪದ ನೀಡಬಾರದು. ಯಾರೋ ಏನೋ ಹೇಳಿದರು ಅಂತ ಅವರ ಮಾತಿನ ಧಾಟಿಗೆ ಕೆರಳಿದರೆ ಅದು ಮೂರ್ಖತನ. ಸತ್ಯ-ಸರಿಯಾದ ವರ್ತನೆ ಗೊತ್ತಿದ್ದವರಾದರೆ ಬೆಲೆ ಕೊಟ್ಟು ಮಾತನಾಡು; ಚರ್ಚಿಸು. ಮೈ ಮುಟ್ಟಿದರೆ ಚಚ್ಚುವುದು ಅನಿವಾರ್ಯ - ನಿನ್ನ ಹಾಗು ನಿನ್ನ ಜನರ ರಕ್ಷಣೆಗಾಗಿ.
೩. ಹೆದರಿಸಿ / ಹೆದರಿಕೊಂಡು ಕೆಲಸ ಮಾಡಬೇಡ. ಶ್ರದ್ಧೆ, ನಿಯತ್ತು ಹಾಗು ಸಂತಸದಿಂದ ಕೆಲಸ ಮಾಡು. ಗುಣಮಟ್ಟಕ್ಕೆ ಆದ್ಯತೆ ಕೊಡು. ಬಲ್ಲದವರಿಗೆ, ಆಸಕ್ತಿ ಇರುವವರಿಗೆ ದಾರಿ ತೋರಿಸು. ಕೆಲಸ ಮಾಡುವ ಬಗೆಯನ್ನು ಹೇಳಿ ಕೊಡು. ನಿನ್ನ ಅಭಿಮಾನವನ್ನು ಬದಿಗೊತ್ತಿ ತಪ್ಪಾಗಿದ್ದರೆ ಒಪ್ಪಿಕೊ; ತಪ್ಪು ಮಾಡಿದವರಿಗೆ ಕ್ಷಮಿಸಬಹುದಾದ ಪಕ್ಷದಲ್ಲಿ ಕ್ಷಮಿಸು.
೪. ಕೆಲವೊಮ್ಮೆ 'ನನಗೆ ಏನೂ ಬಾರದು - ದಡ್ಡ ನಾನು' ಅನ್ನಿಸಿದ ಪಕ್ಷದಲ್ಲಿ ನಿನ್ನ ಅನಿಸಿಕೆ ತಪ್ಪು ಅಂತ ತಿಳಿದುಕೊ. ನಿಜ, ಕೆಲವು ವಿಶಯಗಳು ಗೊತ್ತಿಲ್ಲದೇ ಇರಬಹುದು. ಆದರೆ ಕಲಿಯಕಲಿಯಲಾಗದಷ್ಟು ಪೆದ್ದ ನೀನಲ್ಲ.
೫. ಯಾವುದೇ ವಿಷಯದಲ್ಲಿ ಸರಿ ಅಥವಾ ತಪ್ಪು ನಿರ್ಧರಿಸುವುದು ಹಲವಾರು ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಬ್ಬರ ದೃಷ್ಟಿಕೋನದಲ್ಲಿ ಸರಿ-ತಪ್ಪುಗಳು ಬೇರೆಯಾಗಿರುತ್ತವೆ. ದುಡುಕಿ ಆದೇಶವನ್ನು ಹೊರಡಿಸಬಾರದು.
೬. ಮರಳಿ ಯತ್ನವ ಮಾಡು; ಯತ್ನ ಮಾಡುವುದರಲ್ಲಿ, ಕಷ್ಟ ಪಟ್ಟು ಸಂಪಾದಿಸಿದ ಸ್ವತ್ತಿನಲ್ಲಿ ಇರುವ ಆನಂದ ನಿರಾಯಾಸವಾಗಿ ಸಿಗುವ ಗಂಟಿನಲ್ಲಿ ಇಲ್ಲ.
೭. ನಗೆ ಬೀರಿ ಸ್ನೇಹವನ್ನು ತೋರಿದರೆ ಗಂಟೇನು ಕಳೆದು ಹೋಗುವುದಿಲ್ಲ.
೮. ಏನೇ ಮಾಡಿದರೂ, ಮನಸಪೂರ್ವಕವಾಗಿ ಮಾಡು. ಹೊಗಳಿದರೆ, ನಕ್ಕರೆ, ಸಂತೋಷವನ್ನು ಹಂಚಿದರೆ, ಇತ್ಯಾದಿ ಇತ್ಯಾದಿ.
೯. ಕೈಲಾದರೆ, ಮನಸ್ಸಿದ್ದರೆ ಸಹಾಯ ಮಾಡು. ಹಣ ಕೊಡಬೇಕು ಎಂದೇನು ಇಲ್ಲ; ಸಹಾಯ ಅರ್ಥಿಕವಾಗಿಯೇ ಇರಬೇಕು ಅನ್ನೋದು ಸುಳ್ಳು. ವಿದ್ಯೆಯನ್ನು ಹಂಚು.
೧೦. ಯಾರನ್ನೂ ಕಡೆಗಾಣಿಸಬೇಡ. ಮಿತ್ರರನ್ನ, ಮಿತ್ರೇತರರನ್ನು ನೋಡಿ ಕಲಿ.