ಅದು ಸೋಮವಾರವೇ ಇದ್ದಿರಬೇಕು - ಮನಸ್ಸಿಲ್ಲದ ಮನಸ್ಸಿನಿಂದ ಆಫೀಸಿಗೆ ಹೋಗಬೇಕಲ್ಲ ಅಂತ ಬೆಳಗಿನ ಜಾವ ೯ ಘಂಟೆಗೆ ಎದ್ದುಬಿಟ್ಟಿದ್ದೆ. ಬಹಳ ಹೊತ್ತಾಯಿತು ಎಂದು ಗೊತ್ತಿದ್ದರೂ, ಸ್ನಾನ ಮಾಡದೆ ಹೋಗೋದು ಸರಿಯಲ್ಲ ಎಂದು ನೀರನ್ನು ಕಾಯಲು ಹಾಕಿ ಸಮಾಚಾರ ಪತ್ರಿಕೆಯ ಪುಟಗಳನ್ನು ತಿರುವಿಹಾಕತೊಡಗಿದೆ. ಅಷ್ಟರಲ್ಲಿ ನೆನಪಾಯಿತು - ಹಿಂದಿನ ದಿನ ಉಡುಪಿಗೆ ಹೋದಾಗ ತಗೆದುಕೊಂಡು ಹೋದ "ಪಿಯರ್ಸ್" ಸೋಪೊಂದು ನನ್ನ ಬಳಿ ಇದೆ ಎಂದು. ಪ್ರತಿ ದಿನ ಬಳಸುತ್ತಿದ್ದ "ಲಿರಿಲ್" ಸೋಪನ್ನು ಬದಿಗೊತ್ತಿ, ಇಂದು ನಲವತ್ತೊಂಬತ್ತು ರೂಪಾಯಿ ತೆತ್ತು ತಂದ ಈ ಬಿಲ್ಲೆಯನ್ನು ಬಳಸಿಯೇ ಬಿಡೋಣವೆನಿಸಿ ಅದನ್ನು ತಂದು ಬಾತ್ ರೂಮಿನಲ್ಲಿ ಇಟ್ಟೆ - ಅಷ್ಟರಲ್ಲಿ ನೀರು ಬಿಸಿಯಾಗಿದ್ದರಿಂದ ಪತ್ರಿಕೆಯನ್ನು ಬೇಗನೆ ಓದಿ ಮುಗಿಸಿ ಸ್ನಾನಕ್ಕೆ ಅಣಿಯಾದೆ.
ಎಂದಿನಂತೆ ಇಂದೂ ಸಹ ಈ ವಿಶಾಲವಾದ ಅಟ್ಯಾಚ್ಡ್ ಬಾತ್ ರೂಮನ್ನು ಹೊಕ್ಕಾಗ ಅದರಲ್ಲಿದ್ದ ಟಾಯ್ಲೆಟ್ ಗೆ ಒಂದು ಫ್ಲಶ್ ವ್ಯವಸ್ಥೆಯನ್ನು ಮನೆಯನ್ನು ಕಟ್ಟಿಸಿದವರು ಯಾಕೆ ಮಾಡಿಸಲಿಲ್ಲ ಎನಿಸಿತು. ಹಾಳಾಗಿ ಹೋಗ್ಲಿ ಎಂದು ಬಕೀಟಿನಲ್ಲಿದ್ದ ಬಿಸಿ ನೀರನ್ನು ತಲೆಯ ಮೇಲೆ ಸುರಿದು ಹೊಸ ಸಾಬೂನಿನ ಬಿಲ್ಲೆಯನ್ನು ಬೇಗೆಬೇಗನೆ ತಲೆಗೆ ಉಜ್ಜಲಾರಂಭಿಸಿದೆ - ಇಂದು ಆಫೀಸಿನಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೆ... ಅಷ್ಟರಲ್ಲಿ ಆಗಬಾರದ್ದು ಆಗೇ ಬಿಟ್ಟಿತು! ಕೈಯಲ್ಲಿದ್ದ ಬಿಲ್ಲೆ ಚೆಂಗನೆ ನೆಗೆಯಿತು. ಅಪರೂಪಕ್ಕೆ ತಂದ ಸಾಬೂನು ನೆಲಕ್ಕೆ ಬಿದ್ದರೆ ಆಕಾರ ವಿಕಾರವಾದೀತು ಅಂತ ಕ್ಷಣಾರ್ಧದಲ್ಲಿ ನನ್ನ ಕೈ ಬಿಲ್ಲೆಯ ಬೆನ್ನನ್ನಟ್ಟಿತು. ಹಿಡಿದು ಬಿಟ್ಟೆ ಎನ್ನುವಷ್ಟರಲ್ಲಿ ಅದು ಇನ್ನೊಮ್ಮೆ ಮೇಲಕ್ಕೆ ಚಿಮ್ಮಿತು. ಈ ಬಾರಿ ನನ್ನ ಎರಡೂ ಕೈಗಳು ಅದನ್ನು ಹಿಡಿಯಲೆತ್ನಿಸಿದುವು - ಹಿಂದಿನ ಬಾರಿಗಿಂತ ಇನ್ನೂ ಹೆಚ್ಚು ಆತ್ಮವಿಶ್ವಾಸದಿಂದ ಸೋಪು ದೂರಕ್ಕೆ ಹಾರಿತು. ಅಸಹಾಯಕತೆಯಿಂದ ನನ್ನ ಕಣ್ಣುಗಳು ಆ ಬಿಲ್ಲೆಯ ಕೊನೆಯ ಹಾರಾಟವನ್ನು ನೋಡಿ ಮುಗಿಸುತ್ತಿದಂತೆ ಅದು ಟಾಯ್ಲೆಟ್ ಇನ ಗುಂಡಿಯಲ್ಲಿ ಇಳಿದುಬಿಟ್ಟಿತು. ಇನ್ನೇನು ನಾನು ಕಣ್ಣು ಮಿಟಿಕಿಸುವಷ್ಟರಲ್ಲಿ ಅದು "ಗುಳುಂ" ಆಗಲ್ಪಟ್ಟಿತ್ತು - ಫ್ಲಶ್ ಮಾಡುವ ಮುನ್ನವೇ ನಾಪತ್ತೆಯಾಗಿತ್ತು. ನಿರಾಸೆಯಿಂದ "ಲಿರಿಲ್" ನತ್ತ ನನ್ನ ಕೈಯನ್ನೊಡ್ಡಿ ಸ್ನಾನ ಮುಗಿಸಿದೆ. ಆಮ್ಮ ಹೇಳಿದ ಮಾತು ನೆನಪಿಗೆ ಬಂತು - "ಮಾಡುವ ಕೆಲಸದ ಮೇಲೆ ಗಮನವಿರಲಿ ಮಗನೆ". ಚರಂಡಿ ಪಾಲಾದ ಸಾಬೋನನ್ನು ಮರೆತು ಆಫೀಸಿಗೆ ತೆರಳಿದೆ.
No comments:
Post a Comment