Monday, January 26, 2009

ಅಮ್ಮನ ಮಾತು ಕೇಳಿದ್ದಿದ್ದರೆ ಹೀಗಾಗ್ತಿತ್ತಾ?

ಅದು ಸೋಮವಾರವೇ ಇದ್ದಿರಬೇಕು - ಮನಸ್ಸಿಲ್ಲದ ಮನಸ್ಸಿನಿಂದ ಆಫೀಸಿಗೆ ಹೋಗಬೇಕಲ್ಲ ಅಂತ ಬೆಳಗಿನ ಜಾವ ೯ ಘಂಟೆಗೆ ಎದ್ದುಬಿಟ್ಟಿದ್ದೆ. ಬಹಳ ಹೊತ್ತಾಯಿತು ಎಂದು ಗೊತ್ತಿದ್ದರೂ, ಸ್ನಾನ ಮಾಡದೆ ಹೋಗೋದು ಸರಿಯಲ್ಲ ಎಂದು ನೀರನ್ನು ಕಾಯಲು ಹಾಕಿ ಸಮಾಚಾರ ಪತ್ರಿಕೆಯ ಪುಟಗಳನ್ನು ತಿರುವಿಹಾಕತೊಡಗಿದೆ. ಅಷ್ಟರಲ್ಲಿ ನೆನಪಾಯಿತು - ಹಿಂದಿನ ದಿನ ಉಡುಪಿಗೆ ಹೋದಾಗ ತಗೆದುಕೊಂಡು ಹೋದ "ಪಿಯರ್ಸ್" ಸೋಪೊಂದು ನನ್ನ ಬಳಿ ಇದೆ ಎಂದು. ಪ್ರತಿ ದಿನ ಬಳಸುತ್ತಿದ್ದ "ಲಿರಿಲ್" ಸೋಪನ್ನು ಬದಿಗೊತ್ತಿ, ಇಂದು ನಲವತ್ತೊಂಬತ್ತು ರೂಪಾಯಿ ತೆತ್ತು ತಂದ ಈ ಬಿಲ್ಲೆಯನ್ನು ಬಳಸಿಯೇ ಬಿಡೋಣವೆನಿಸಿ ಅದನ್ನು ತಂದು ಬಾತ್ ರೂಮಿನಲ್ಲಿ ಇಟ್ಟೆ - ಅಷ್ಟರಲ್ಲಿ ನೀರು ಬಿಸಿಯಾಗಿದ್ದರಿಂದ ಪತ್ರಿಕೆಯನ್ನು ಬೇಗನೆ ಓದಿ ಮುಗಿಸಿ ಸ್ನಾನಕ್ಕೆ ಅಣಿಯಾದೆ.
ಎಂದಿನಂತೆ ಇಂದೂ ಸಹ ಈ ವಿಶಾಲವಾದ ಅಟ್ಯಾಚ್ಡ್ ಬಾತ್ ರೂಮನ್ನು ಹೊಕ್ಕಾಗ ಅದರಲ್ಲಿದ್ದ ಟಾಯ್ಲೆಟ್ ಗೆ ಒಂದು ಫ್ಲಶ್ ವ್ಯವಸ್ಥೆಯನ್ನು ಮನೆಯನ್ನು ಕಟ್ಟಿಸಿದವರು ಯಾಕೆ ಮಾಡಿಸಲಿಲ್ಲ ಎನಿಸಿತು. ಹಾಳಾಗಿ ಹೋಗ್ಲಿ ಎಂದು ಬಕೀಟಿನಲ್ಲಿದ್ದ ಬಿಸಿ ನೀರನ್ನು ತಲೆಯ ಮೇಲೆ ಸುರಿದು ಹೊಸ ಸಾಬೂನಿನ ಬಿಲ್ಲೆಯನ್ನು ಬೇಗೆಬೇಗನೆ ತಲೆಗೆ ಉಜ್ಜಲಾರಂಭಿಸಿದೆ - ಇಂದು ಆಫೀಸಿನಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೆ... ಅಷ್ಟರಲ್ಲಿ ಆಗಬಾರದ್ದು ಆಗೇ ಬಿಟ್ಟಿತು! ಕೈಯಲ್ಲಿದ್ದ ಬಿಲ್ಲೆ ಚೆಂಗನೆ ನೆಗೆಯಿತು. ಅಪರೂಪಕ್ಕೆ ತಂದ ಸಾಬೂನು ನೆಲಕ್ಕೆ ಬಿದ್ದರೆ ಆಕಾರ ವಿಕಾರವಾದೀತು ಅಂತ ಕ್ಷಣಾರ್ಧದಲ್ಲಿ ನನ್ನ ಕೈ ಬಿಲ್ಲೆಯ ಬೆನ್ನನ್ನಟ್ಟಿತು. ಹಿಡಿದು ಬಿಟ್ಟೆ ಎನ್ನುವಷ್ಟರಲ್ಲಿ ಅದು ಇನ್ನೊಮ್ಮೆ ಮೇಲಕ್ಕೆ ಚಿಮ್ಮಿತು. ಈ ಬಾರಿ ನನ್ನ ಎರಡೂ ಕೈಗಳು ಅದನ್ನು ಹಿಡಿಯಲೆತ್ನಿಸಿದುವು - ಹಿಂದಿನ ಬಾರಿಗಿಂತ ಇನ್ನೂ ಹೆಚ್ಚು ಆತ್ಮವಿಶ್ವಾಸದಿಂದ ಸೋಪು ದೂರಕ್ಕೆ ಹಾರಿತು. ಅಸಹಾಯಕತೆಯಿಂದ ನನ್ನ ಕಣ್ಣುಗಳು ಆ ಬಿಲ್ಲೆಯ ಕೊನೆಯ ಹಾರಾಟವನ್ನು ನೋಡಿ ಮುಗಿಸುತ್ತಿದಂತೆ ಅದು ಟಾಯ್ಲೆಟ್ ಇನ ಗುಂಡಿಯಲ್ಲಿ ಇಳಿದುಬಿಟ್ಟಿತು. ಇನ್ನೇನು ನಾನು ಕಣ್ಣು ಮಿಟಿಕಿಸುವಷ್ಟರಲ್ಲಿ ಅದು "ಗುಳುಂ" ಆಗಲ್ಪಟ್ಟಿತ್ತು - ಫ್ಲಶ್ ಮಾಡುವ ಮುನ್ನವೇ ನಾಪತ್ತೆಯಾಗಿತ್ತು. ನಿರಾಸೆಯಿಂದ "ಲಿರಿಲ್" ನತ್ತ ನನ್ನ ಕೈಯನ್ನೊಡ್ಡಿ ಸ್ನಾನ ಮುಗಿಸಿದೆ. ಆಮ್ಮ ಹೇಳಿದ ಮಾತು ನೆನಪಿಗೆ ಬಂತು - "ಮಾಡುವ ಕೆಲಸದ ಮೇಲೆ ಗಮನವಿರಲಿ ಮಗನೆ". ಚರಂಡಿ ಪಾಲಾದ ಸಾಬೋನನ್ನು ಮರೆತು ಆಫೀಸಿಗೆ ತೆರಳಿದೆ.

Thursday, January 8, 2009

ಒಂದುವರೆ ವರ್ಷದಲ್ಲಿ ಏನೇನು ಕಲಿತೆ...

ಜನವರಿ ೧ ನೆ ತಾರೀಖಿಗೆ ಐ.ಟಿ. ಜಗತ್ತಿಗೆ ಬಂದು ೧.೫ ವರ್ಷಗಳಾದುವು. ಹಿಂದಿರುಗಿ ನೋಡಿದಾಗ, ಈ ಕಾಲಾವಧಿಯಲ್ಲಿ ಏನೇನು ಮಾಡಿದೆ ಅನ್ನೋದನ್ನು ಪಟ್ಟಿ ಮಾಡೋ ಆಸೆ...
ಹಂ... ದೊಡ್ಡ ಸಾಧನೆಗಳೇನಲ್ಲವಾದರು, ನನಗೆ ಸಂತೋಷ ನೀಡಿದಂತಹ ವಿಷಯಗಳೆನ್ನಬಹುದು...
೧. ಹೊಂಡಾ ದ್ವಿಚಕ್ರ ವಾಹನವನ್ನು ಕೊಂಡು ಅದನ್ನು ಬೆಂಗಳೂರಿನಲ್ಲಿ ಓಡಿಸಲು ಕಲಿತು ಬೀಳಿಸಿದ್ದೂ ಆಯಿತು ( ಸರಿ, ರಾಷ್ಟ್ರೀಯ ಹೆದ್ದಾರಿ-೪ ರ ಮೇಲೆ ಬೀಳಿಸಿದ್ದೂ ಆಯಿತು - ದೇವರ ದಯೆಯಿಂದ ಏನು ಆಗಲಿಲ್ಲ). ಎಲ್ಲಾದರು ಹೋಗಿ ಬರ್ತೆನೇ ಅಂದ್ರೆ ಅಮ್ಮ ಇನ್ನೂ ಚಿಂತಿಸುತ್ತಾಳೆ.

೨. ಅಪ್ಪ-ಅಮ್ಮನ್ನ ಬಿಟ್ಟು ದೂರದ ಈ ಊರಿನಲ್ಲಿ ತಮ್ಮ ಹಾಗು ಮಿತ್ರನೊಡನೆ ಮನೆ ಮಾಡಿಕೊಂಡು ಇದ್ದೇನೆ ( ಹಾಸ್ಟೆಲ್ಲಿನಲ್ಲಿ ಇರದವನಿಗೆ ಇದು ಒಂದು ಹೊಸ ಅನುಭವ - ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಜೊತೆಗೆ ಕಳೆದಿದ್ದೇವೆ - ಇಂದಿಗೂ ಪ್ರತಿ ದಿನ ಮನೆಗೆ ಕೆಲಸದಿಂದ ಹಿಂದಿರುಗಿದಾಗ ಒಬ್ಬರನ್ನೊಬ್ಬರು ಮಾತನಾಡಿಸಿದಾಗ ಆಗುವ ಸಂತಸವೇ ಬೇರೆ; ಬೆಳೆದಿರುವ ಆತ್ಮೀಯತೆಯ ಲತೆಯು ನಮ್ಮೆಲ್ಲರನ್ನು ಜೊತೆಗಿಟ್ಟಿದೆ. )

೩. ಮತ್ತೆ ಓದಬೇಕೆಂಬ ಹಂಬಲ... ಮತ್ತೆ ಲೆಕ್ಚರ್ ಹಾಲಿನಲ್ಲಿ ಕೂರಬೇಕೆಂಬ ಆಸೆ. ಸಧ್ಯಕ್ಕೆ ನನಸಾಗಿದೆ ಅಂದರೆ ತಪ್ಪಗಲಾರದು - ಮಣೀಪಾಲ್ ಯೂನಿವರ್ಸಿಟಿಯವರ ಸ್ನಾತಕೋತ್ತರ ಪದವಿಗೆ ಪ್ರತಿ ರವಿವಾರ ತರಗತಿಗಳು ಇದ್ದು, ಅವುಗಳಿಗೆ ತಮ್ಮನೋಡನೆ ಹೋಗಿ ಆಲಿಸುವುದು ಸಂತಸವನ್ನು ನೀಡುತ್ತಿದೆ.

೪. ಹಿಂದೆ ಎಂದೂ ಹೋಗದಷ್ಟು ಜಾಗಗಳಿಗೆ ಹೋಗಿ, ತಿರುಗಾಡಿದ್ದಾಯಿತು. ಗಾಳಿಯಲ್ಲಿ ತೇಲಾಡಿ, ಗುಡ್ಡಗಳನ್ನು ಏರಿ, ಟ್ರೇನಿನಿಂದ ಜಿಗಿದು ದಂಡ ಕಟ್ಟಿ, ಸಂತಸ ಪಟ್ಟದ್ದಾಯಿತು. ಇನ್ನು ಬಹಳ ತಿರುಗಾಡುವ ಆಸೆ ಇದೆ.

೫. ಬಹಳಷ್ಟು ಪುಸ್ತಕಗಳನ್ನು ( ತಾಂತ್ರಿಕವಲ್ಲದಂತಹ ) ಓದಿ ಆನಂದಿಸಿದ್ದೇನೆ - ಸಣ್ಣ ನೀತಿ ಕಥೆಗಳನ್ನು ಬಹಳವಾಗಿ ಇಷ್ಟಪಟ್ಟು ಪುಸ್ತಕಗಳನ್ನು ಕೊಂಡು ತಂದು ಓದಿದ್ದೇನೆ.

೬. ಮನೆಯಲ್ಲಿ ಇರುವುದರಿಂದಾಗಿ ಹಾಗು ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದರಿಂದಾಗಿ ಪ್ರತಿ ದಿನ ಏನಾದರೊಂದು ಹೋಸರುಚಿಯನ್ನು ಬೇಯಿಸುತ್ತೇವೆ ( ಹಲವಾರು ಬಾರಿ ಉದ್ದೆಷಪೂರ್ವಕವಲ್ಲವಾದರೂ, ಹಳೆರುಚಿಗಳೇ ಹೊಸರುಚಿಗಳಾಗಿ ಮಾರ್ಪಟ್ಟಿರುತ್ತವೆ. ಇದೆಲ್ಲವನ್ನು "ಸರಿಯಾಗಿಲ್ಲ" ಅಂತ ಗೊಣಗುತ್ತಲಾದರು ಪೂರ್ತಿಯಾಗಿ ತಿಂದು ತೇಗುವ ಮಿತ್ರ ಜೋತೆಗಿರುವುದರಿಂದಾಗಿ ಎಲ್ಲರಿಗೂ ಸಮಾಧಾನ ).

೭. ಬೆಂಗಳೂರಿಗೆ ಬಂದ ಹೊಸತರಲ್ಲಿ ಹಲವಾರು ಬಾರಿ ಮೋಸ ಹೋಗಿದ್ದೇನೆ - ಬಹಳಷ್ಟು ಬಾರಿ ನನ್ನ ಮುಟ್ಠಾಳತನದಿಂದ ಹಾಗೆ ಆಗಿದೆ ಅಂತ ಮಿತ್ರರು ನನಗೆ ಮನವರಿಕೆ ಮಾಡಿಸಿದ್ದಾರೆ. ಸಾಮಾಜಿಕ ವಿಚಾರಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ನಾನು, ಸುತ್ತಮುತ್ತಲಿನ ಜನ-ಅವರ ನಡೆ-ನುಡಿಗಳ ಬಗ್ಗೆ ವಿಶೇಷ ಗಮನ ನೀಡುತ್ತಿದ್ದೇನೆ. (ಬಲಿಪಶು ಎಂದು ತೋರಿಸಿಕೊಂಡರೆ, ತಲೆ ಕಡಿಯಲು ಬಹಳ ಜನ ಮುಂದಾಗುತ್ತಾರೆ - ಅಂತಹವರಿಂದ ದೂರವಿರುವುದನ್ನು ಕಲಿಯುತ್ತಿದ್ದೇನೆ)

೮. ಗುಂಡನ (ಇನ್ನೊಬ್ಬ ಮಿತ್ರ ) ಜೊತೆ, ಪ್ರಾಣಭಯ ಬಿಟ್ಟು ತಲಕಾಡಿಗೆ ಅವನ ಕಾರಿನಲ್ಲಿ ಹೋಗಿದ್ದೇನೆ. ( ಹಲವಾರು ಗುಡ್ಡ-ಬೆಟ್ಟಗಳನ್ನು ಹತ್ತಿದ್ದರೂ ಇದು ಸ್ವಲ್ಪ ವಿಶೇಷವಾದದ್ದು )

೯. ಮೊಬೈಲ್ ಫೋನಿನ ಮಿತ ಬಳಕೆ ಮಾಡಲು ಕಲಿತದ್ದು; ಇಂದು ಟಾಕ್ ಟೈಮ್ ಸಾಕಷ್ಟಿದ್ದರೂ, ಮಾತನಾಡುವುದು ಅವಷ್ಯಕತೆ ಇದ್ದರೆ ಮಾತ್ರ...

೧೦. ಇನ್ನು ಐ.ಟಿ. ಜಗತ್ತಿನಲ್ಲಿ ಏನು ಮಾಡಿದೆ ಅಂತ ನೋಡೋಣ.... ಅಯ್ಯೋ...ಏನು ನೆನಪಿಗೆ ಬರ್ತಿಲ್ವೆ.... :)