Tuesday, August 9, 2011

ಸಂತೋಷ - ಸಂಯಮ

 ಬರೀಬೇಕು ಅನ್ನಿಸ್ತು - ಮುಂದೊಂದು ದಿನ ಓದಿದಾಗ ಹೆಗನ್ನಿಸಬಹುದು ಅಂತ.

೧. ಸಂತೋಷವಾಗಿರಲು ಬೇಕಾಗಿರೋದು ವಸ್ತು ಅಥವಾ ವ್ಯಕ್ತಿ ಅಲ್ಲ... ಶುದ್ಧವಾದ ಮನಸ್ಸು, ವಿಚಾರಗಳು. ಹಾಗಂತ ವಸ್ತುಗಳು ಹಾಗು ವ್ಯಕ್ತಿಗಳು ಇಲ್ಲದೆ ಸಂತೋಷ ಅಪೂರ್ಣ. ಮನಸ್ಸಿಗೆ ಹತ್ತಿರವಾಗಿರುವವರು ದೈಹಿಕವಾಗಿ ಹತ್ತಿರವಿಲ್ಲದಿದ್ದರೂ ಅವರೊಡನೆ ಕಳೆದ ಸಂತಸದ ಆ ಸ್ವಲ್ಪ ಸಮಯವನ್ನು ಮೆಲುಕು ಹಾಕುತ್ತ ಮುಗುಳ್ನಗು ಮುಖದಲ್ಲಿ ಮೂಡಿದಾಗ ಸಿಗುವ ಆನಂದ ಅಪಾರ.
೨. ಪ್ರತಿಯೊಬ್ಬರಲ್ಲಿ ಇರುವ ವಿಚಾರಗಳನ್ನ ಸಂಯಮದಿಂದ ಆಲಿಸಬೇಕು - ದುಡುಕಿ ತಿರುಗೇಟು ನೀಡಲು ನಿಲ್ಲಬಾರದು. ಕಾರಣವಿಲ್ಲದೆ ಜಗಳ ಮಾಡಬಾರದು. ಯಾರಾದರು ಕೆಣಕಿದರೆ ಅದನ್ನು ಮನಸ್ಸಿಗೆ ತಗೆದುಕೊಲ್ಲಬಾರದು; ಮಾತು-ಜಗಳಕ್ಕೆ ಆಸ್ಪದ ನೀಡಬಾರದು. ಯಾರೋ ಏನೋ ಹೇಳಿದರು ಅಂತ ಅವರ ಮಾತಿನ ಧಾಟಿಗೆ ಕೆರಳಿದರೆ ಅದು ಮೂರ್ಖತನ. ಸತ್ಯ-ಸರಿಯಾದ ವರ್ತನೆ ಗೊತ್ತಿದ್ದವರಾದರೆ ಬೆಲೆ ಕೊಟ್ಟು ಮಾತನಾಡು; ಚರ್ಚಿಸು. ಮೈ ಮುಟ್ಟಿದರೆ ಚಚ್ಚುವುದು ಅನಿವಾರ್ಯ - ನಿನ್ನ ಹಾಗು ನಿನ್ನ ಜನರ ರಕ್ಷಣೆಗಾಗಿ.
೩. ಹೆದರಿಸಿ / ಹೆದರಿಕೊಂಡು ಕೆಲಸ ಮಾಡಬೇಡ. ಶ್ರದ್ಧೆ, ನಿಯತ್ತು ಹಾಗು ಸಂತಸದಿಂದ ಕೆಲಸ ಮಾಡು. ಗುಣಮಟ್ಟಕ್ಕೆ ಆದ್ಯತೆ ಕೊಡು. ಬಲ್ಲದವರಿಗೆ, ಆಸಕ್ತಿ ಇರುವವರಿಗೆ ದಾರಿ ತೋರಿಸು. ಕೆಲಸ ಮಾಡುವ ಬಗೆಯನ್ನು ಹೇಳಿ ಕೊಡು. ನಿನ್ನ ಅಭಿಮಾನವನ್ನು ಬದಿಗೊತ್ತಿ ತಪ್ಪಾಗಿದ್ದರೆ ಒಪ್ಪಿಕೊ; ತಪ್ಪು ಮಾಡಿದವರಿಗೆ ಕ್ಷಮಿಸಬಹುದಾದ ಪಕ್ಷದಲ್ಲಿ ಕ್ಷಮಿಸು.
೪. ಕೆಲವೊಮ್ಮೆ 'ನನಗೆ ಏನೂ ಬಾರದು - ದಡ್ಡ ನಾನು' ಅನ್ನಿಸಿದ ಪಕ್ಷದಲ್ಲಿ ನಿನ್ನ ಅನಿಸಿಕೆ ತಪ್ಪು ಅಂತ ತಿಳಿದುಕೊ. ನಿಜ, ಕೆಲವು ವಿಶಯಗಳು ಗೊತ್ತಿಲ್ಲದೇ ಇರಬಹುದು. ಆದರೆ ಕಲಿಯಕಲಿಯಲಾಗದಷ್ಟು ಪೆದ್ದ ನೀನಲ್ಲ.
೫. ಯಾವುದೇ ವಿಷಯದಲ್ಲಿ ಸರಿ ಅಥವಾ ತಪ್ಪು ನಿರ್ಧರಿಸುವುದು ಹಲವಾರು ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಬ್ಬರ ದೃಷ್ಟಿಕೋನದಲ್ಲಿ ಸರಿ-ತಪ್ಪುಗಳು ಬೇರೆಯಾಗಿರುತ್ತವೆ. ದುಡುಕಿ ಆದೇಶವನ್ನು ಹೊರಡಿಸಬಾರದು.
೬. ಮರಳಿ ಯತ್ನವ ಮಾಡು; ಯತ್ನ ಮಾಡುವುದರಲ್ಲಿ, ಕಷ್ಟ ಪಟ್ಟು ಸಂಪಾದಿಸಿದ ಸ್ವತ್ತಿನಲ್ಲಿ ಇರುವ ಆನಂದ ನಿರಾಯಾಸವಾಗಿ ಸಿಗುವ ಗಂಟಿನಲ್ಲಿ ಇಲ್ಲ.
೭. ನಗೆ ಬೀರಿ ಸ್ನೇಹವನ್ನು ತೋರಿದರೆ ಗಂಟೇನು ಕಳೆದು ಹೋಗುವುದಿಲ್ಲ.
೮. ಏನೇ ಮಾಡಿದರೂ, ಮನಸಪೂರ್ವಕವಾಗಿ ಮಾಡು. ಹೊಗಳಿದರೆ, ನಕ್ಕರೆ, ಸಂತೋಷವನ್ನು ಹಂಚಿದರೆ, ಇತ್ಯಾದಿ ಇತ್ಯಾದಿ.
೯. ಕೈಲಾದರೆ, ಮನಸ್ಸಿದ್ದರೆ ಸಹಾಯ ಮಾಡು. ಹಣ ಕೊಡಬೇಕು ಎಂದೇನು ಇಲ್ಲ; ಸಹಾಯ ಅರ್ಥಿಕವಾಗಿಯೇ ಇರಬೇಕು ಅನ್ನೋದು ಸುಳ್ಳು. ವಿದ್ಯೆಯನ್ನು ಹಂಚು.
೧೦. ಯಾರನ್ನೂ ಕಡೆಗಾಣಿಸಬೇಡ. ಮಿತ್ರರನ್ನ, ಮಿತ್ರೇತರರನ್ನು ನೋಡಿ ಕಲಿ.

Tuesday, June 21, 2011

ಧಾರವಾಡ ಪೇಡಾ ಸವಿಯುವ ವಿಧಾನ

ವಿವಿಧ ಬಗೆಯ ಪೇಡಾ ಇದ್ರೂ ಧಾರವಾಡ ಪೇಡಾನೇ ಯಾಕೆ ಅಂತೀರಾ? ಸುಮ್ನೆ. ಇದೊಂದು ಸ್ವಾದಿಷ್ಟ ಪೇಡಾ ಅಂತಾ. ಇನ್ನೂ ತಿನ್ನೋ ಬಗೆಗಾಗಿ... ಬೇಕಾದ್ ರೀತೀಲಿ ತಿನ್ರೀ ಯಾರ್ ಬ್ಯಾಡಾ ಅಂತಾರೆ; ಆದ್ರೆ, ಅದನ್ನ ಸವಿಯುವುದು ಹೇಗ ಅಂತ ನನ್ನ ವರ್ಶನ್ ನಿಮ್ಮ್ ಮುಂದೆ ಇಲ್ಲಿ ಇಟ್ಟಿದ್ದೀನಿ.

ಧಾರವಾಡದ ಮಿಶ್ರಾ ಪೇಡಾ ಭಾಳಾ ಪ್ಹೇಮುಸ್. ನನಗೆ ಗೊತ್ತಿರೋ ಹಾಗೆ, ಇನ್ನೂ ಕೆಲೋರು ಮಾಡ್ತಾರೆ (ಬಾಬೂರಾವ್ ಪೇಡಾ), ಆದ್ರೆ ಒಥೆಂಟಿಕ್ ಪೇಡಾ ಅಂದ್ರೆ ಮಿಶ್ರಾ ಪೇಡಾದವರದ್ದೇ. ಇವರು ಪೇಡಾ ಜೊತೆಗೆ ಹಲವಾರು ಬೇರೆ ರುಚಿರುಚಿಯಾದ ಬೇಕರಿ ತಿನಿಸುಗಳನ್ನ ಸಹ ಮಾಡ್ತಾರೆ. ನಾನು ಸವೆದಿರೋ ಎಲ್ಲಾ ಐಟೆಮ್ ಗಳು ನಾಲಗೆ ಚಪ್ಪರಿಸುವಂತೆ ಇದ್ದವು - ಲಕ್ಕಡ ಗಾಟಿ, ಪುದಿನಾ ಗಾಟಿ, ಶೇವ್, ಭಾಕರ್ ವಡಾ, ದೂದ್ಹ್ ಪೇಡಾ, ಹಲವಾರು ಬಂಗಾಲಿ ಮೂಲದ ಸಿಹಿ ತಿನಿಸುಗಳು. ಆದ್ರೆ, ಧಾರವಾಡ್ ಪೇಡಾ ಟೇಸ್ಟ್ ಒನ್ಥರಾ ವಿಶೇಷವಾದದ್ದು. ವಿವರಣೆಯ ಸಲುವಾಗಿ ಧಾರವಾಡ ಪೇಡಾ ನಾ ಇನ್ ಶಾರ್ಟ್ 'ಡೀ.ಪೀ.' ಅಂತ ಕರೀತೀನಿ.

'ಡೀ.ಪೀ.' ಹೊರಗಡೆಯಿಂದ ನೋಡಲು ಡಾರ್ಕ್-ಬ್ರೌನ, ಡ್ರೈ ಲುಕ್. ಮೇಲಿಂದ ವೈಟ್ ಪಾರ್ಟಿಕಲ್ (ರವೆಯ ಥರಾ) ಕೋಟಿಂಗ್ ಕೊಟ್ಟಿರೋ ಹಾಗೆ. ಕಾಣೊಕ್ಕೆ ಡ್ರೈ-ಜಾಮೂನಿನನ್ತಿದ್ದರೂ ಶೇಪ್ ಅನ್ನೋದು ಇಲ್ಲ. ಕೈಯಲ್ಲಿ ಉಂಡೆ ಕಟ್ಟಿ ಅಕ್ಕ-ಪಕ್ಕ ಅದುಮಿ ಸಾಲಾಗಿ ಡಬ್ಬಿಯಲ್ಲಿ ಜೋಡಿಸಿ ಇಟ್ಟಿರುತ್ತಾರೆ. ಕಾಣೊಕ್ಕೆ ಹಾಗಿದ್ರೆ ಏನಂತೆ, - ಬಾಯಿಗೆ ಹಾಕಿದಾಗ ಸರಾಗವಾಗಿ ಮೆಲ್ಟ್ ಆದಾಗ ಬರೋ ಆನಂದ ತಿಂದವರಿಗೇ ಗೊತ್ತು. ಪೇಡಾ ದ ಒಳಗಿನ ಟೆಕ್ಸ್ಚರ್ ಅನ್ಯ ಪೇಡಾಗಳಿಗಿಂತ ವಿಭಿನ್ನವಾದುದು. ಅಲ್ಲಲ್ಲಿ ತರಿತರಿಯಾದ ಖೋವಾ, ನುಣ್ಣನೇಯ ಖೋವಾದೊಂದಿಗೆ ಹದವಾದ ರೀತಿಯಲ್ಲಿ ಸಿಹಿಯಾಗಿ, ಮೃದುವಾಗಿ, ಬೆರೆತಿದ್ದು, ಬಾಯಲ್ಲಿಟ್ಟು ಕರಗಿದ ಕೂಡಲೆ ಇನ್ನೊಂದು ಸಣ್ಣ ತುಣುಕನ್ನು ತಿನ್ನುವ ತವಕವನ್ನು ಹುಟ್ಟಿಸುತ್ತದೆ.

ಕೈಯಲ್ಲಿರೋ ಪೇಡಾ ನ ಇಡಿಯಾಗಿ ನುಂಗಿ ನೀರು ಕುಡಿಯುವವರು ಮೂರ್ಖರು - ಔಷಧಿಗೂ, ತಿನಿಸಿಗೂ ವ್ಯತಾಸ ಗೊತ್ತಿಲ್ಲದವರು.

ಪೇಡಾ ಸ್ಯಾಂಪಲ್ ಮಾಡೋಕ್ಕೆ ಕೊಟ್ಟಾಗ ತಿನ್ನೋ ಮಜಾ ನೇ ಬೇರೆ. ಚಿಕ್ಕದೊಂದು ಕಸ್ಟಮ್-ಮೇಡ್ ಸ್ಯಾಂಪಲ್ ಪೇಡಾ ಕೈಗೆ ಸೇರಿದಾಗ ಗ್ರ್ಯಾವಿಟಿ-ಆಫ್-ದಿ-ಸಿಚುವೇಶನ್ ತಿಳಿದವರು ಕನ್ಸರ್ವೇಶನ್-ಆಫ್-ಟೆಸ್ಟ್ ಅನ್ನೋ ವಿಧಾನವನ್ನ ಅಳವಡಿಸುತ್ತಾರೆ. ಮೆಲ್ಲನೆ ಪೇಡಾ ನ ಕೈಗೆತ್ತಿಕೊಂಡು, ದಿಟ್ಟಿಸಿ ನೋಡಿ, ಅದನ್ನು ಕೊಟ್ಟ ಕೌಂಟರ್ ನಲ್ಲಿನ ಮಾಹಾಶಯನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ, ಹುಸಿ ಮುಗುಳ್ನಕ್ಕು, ಮತ್ತೆ ಪೇಡಾ ನ ನೋಡಿ... ಹಾಗೆ ಅದನ್ನು ಮೂಸುವ ಪ್ರಯತ್ನ ಮಾಡುತ್ತಾರೆ (ಆಫ್ಟರ್ ಆಲ್, ಪೇಡಾ ಹುಳಿಯಾಗಿದ್ರೆ ಅನ್ನೋ ಸಂಶಯ!). ಮೆಲ್ಲನೆ ಪೇಡಾ ತುಟಿಗಳತ್ತ ಸಾಗಲು ದವಡೆಗಳು ಚೂರೇ-ಚೂರು ಬೇರ್ಪಟ್ಟು ಆ ಸ್ಯಾಂಪಲ್ ನ ಮೀಲ್ಪದರವನ್ನು ಹಲ್ಲುಗಳು, ಮೆಲ್ಲನೆ, ನಾಲಿಗೆಯ ಮೇಲೆ ಸೇರಿಸುತ್ತವೆ.

"ಪರಮಾನಂದ!!!" (ಸ್ವಾಮಿಗಳಲ್ಲ! ಇದು ನಿತ್ಯವಾಗುವ ಆನಂದವೂ ಅಲ್ಲ! ಅಪರೂಪಕ್ಕೊಮ್ಮೆ ಆಗೋದು ನೋಡಿ)

 ಲಾಳಾ-ರಸ ಈ ಡೆಲಿಕಸಿಯೊಡನೆ ಮಿಕ್ಸ್ ಆಗಿ ನಾಲಿಗೆಯ ದಾಹವನ್ನು ತೀರಿಸುತ್ತಿರಲು, ಮನಸ್ಸಿನಲ್ಲಿಯೇ ಮೆಲ್ಲಗೆ "ಇನ್ನೂ ಸ್ವಲ್ಪವೇ ಇದೆ ಈ ಸ್ಯಾಂಪಲ್! ಮಿತವಾಗಿ ತಿನ್ನಬೇಕು!" ಅನ್ನೋ ಸಿಗ್ನಲ್ ಆಗಲೇ ಹೋಗಿಯಾಗಿದೆ ಗಂಟಲಿಗೆ - ಗಂಟಲು ನುಂಗಲು ನಿರಾಕರಿಸುತ್ತದೆ - "ಇನ್ನಸ್ಟು ಜಗಿ! ಲಾಳಾ ರಸವನ್ನು ಬೆರೆಸು" ಅಂತ ಬಾಯಿಗೆ ಆಗ್ರಹಿಸುವಂತೆ.

ಇನ್ನೊಂದು ಸಣ್ಣ ತುಣುಕು ಬಾಯಲ್ಲಿ ಇಳಿಯಿತು... ಕಣ್ಣುಗಳು ನಿರಾಯಾಸವಾಗಿ ಮುಚ್ಚುತ್ತಿದಂತೆ, ಪೇಡಾದ ಒಳಗಿನ ಸವಿ ನಾಲಿಗೆಯ ಮಾರ್ಗವಾಗಿ ತಲೆಗೆ ಏರುವ ಹೊತ್ತಿಗೆ...
"ಸಾರ್!!! ಎಷ್ಟು ಪ್ಯಾಕ್ ಮಾಡ್ಲಿ?", ಅಂತ ಅಶರೀರ ವಾಣಿ ಯಾವುದೋ ಮೊಲೆಯಿಂದ ಹೊರಡಿದಂತಾಗುತ್ತದೆ. ಕಣ್ಣು ತೆರೆದಾಗ ಹಲ್ಲು ಕಿರಿಯುತ್ತ ನಿಂತ ಕೌಂಟರ್ ನ ಪೋರನಿಗೆ ಚಚ್ಚುವಷ್ಟು ಸಿಟ್ಟು ನೇತ್ತಿಗೆರಿದರೂ, ರಿಯಾಲಿಟಿ ಅರ್ಥ ಮಾಡ್ಕೊಂಡು, "ಆ ಶೇವ್ ಸ್ಯಾಂಪಲ್ ಕೊಡಪ್ಪ", ಅಂತ ಅಂದಾಗ ಲುಕ್ ಕೊಡೋ ಬಾರಿ ಆ ಹುಡುಗನದ್ದು.

"ಪರಮಾನಂದ!!!"

ಇನ್ನೊಂದು ನಿಮಿಷ ಟೈಮ್ ಸಿಗ್ತು ಅನ್ನೋ ಖುಷಿ ಒಂದೆಡೆ ಆದ್ರೆ, ಇನ್ನೊಂದೆಡೆ ಈ ಪೇಡಾ ನ ಮುಗಿಸಬೇಕು! ಆದಷ್ಟು ಮೆಲ್ಲಗೆ ಅದನ್ನು ತಿಂದು ಮುಗಿಸಿ ಶೇವ್ ಸ್ಯಾಂಪಲ್ ಗೆ ಕಾಯಬೇಕು...

ಬಾಟಂ-ಲೈನ್ ಏನಪ್ಪಾ ಅಂದ್ರೆ, ತಿಂಡಿ-ತಿನಿಸುಗಳನ್ನ ಆದಸ್ತು ಮೆಲ್ಲಗೆ ಎಂಜಾಯ್ ಮಾಡ್ಕೊಂಡು ತಿನ್ಬೇಕು; ಮುಕ್ಕಬಾರದು. ಇನ್ನೂ, ಫ್ರೀ ಸ್ಯಾಂಪಲ್ ಅಂದ್ರೆ ಅದರ ಟೆಸ್ಟ್ ಸ್ವಲ್ಪ ಜಾಸ್ತಿ - ನೆನಪಿರಲಿ!

ಪೋಸ್ಟ್-ಸ್ಕ್ರಿಪ್ಟ್:
ಪೇಡಾ ನ ನೆನೆಯುತ್ತ, ಇಡ್ಲಿ ನ ತಿನ್ನುತ್ತ ರವಿ ಬೆಳಗೆರೆ ಅವರ ಕಾದಂಬರಿಯನ್ನ ಓದಿದಾಗ ಆಗೋ ಡೆಡ್ಲಿ ಕಾಂಬಿನೇಶನ್ ನ ಒಂದು ಝಲಕು ಇದು!

Sunday, May 22, 2011

ಚಿತ್ರದುರ್ಗ - ಬಾಲೇನಹಳ್ಳಿ ಪ್ರಸಂಗ

ಕಾಂತ, ಮಲ್ಲಿಕಾರ್ಜುನ ಹಾಗು ನಾನು ಏಪ್ರಿಲ್ ೨೧ ನೇಯ ರಾತ್ರಿ ಬಹಳ ಹೊತ್ತಿನ ವರೆಗೆ ದುರ್ಗಕ್ಕೆ ಹೋಗುವ ಸ್ಲೋ ಪ್ಯಾಸೆಂಜರ್ (ಅದರ ಹೆಸರು, ಹೊಸಪೇಟೆ ಫಾಸ್ಟ್ ಪ್ಯಾಸೆಂಜರ್ - ಆದರೆ ಅದು ಎಷ್ಟು ಫಾಸ್ಟ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ನೆ) ಗಾಡಿಗಾಗಿ ಕಾಯುತ್ತ ನಿಂತಿದ್ದೆವು. ಮಾರನೆಯ ದಿನ ವಿವೇಕನ ಅಣ್ಣ ವಿನಯನ ಮದುವೆಗೆ ಮಹೂರ್ತಕ್ಕೆ ಸರಿಯಾಗಿ ಸೇರಬೇಕು ಅನ್ನುವುದು ನಮ್ಮ ಉದ್ದೇಶವಾಗಿತ್ತು. ಮಳೆ ಸ್ವಲ್ಪ ಜೋರಾಗಿಯೇ ಬೀಳುತ್ತಿತ್ತು. ವಾರದ ಅಂತ್ಯ ಅನ್ನೋ ಕಾರಣದಿಂದ ಪ್ಲ್ಯಾಟ್ಫಾರಂ ಜನರಿಂದ ತುಂಬಿ ಕಿಕ್ಕಿರಿಯುತ್ತಿತ್ತು. ಸಿಕ್ಕ ಸ್ವಲ್ಪ ಜಾಗದಲ್ಲಿ ನಾನು ಹಾಗು ಮಲ್ಲಿಕಾರ್ಜುನ ನಿಂತುಕೊಂಡು ಬಿಸಿ ಕಾಫಿ ಸವೆಯುತ್ತಿರಲು, ಎಲ್ಲೆಡೆ ಹಸಿ-ಹಸಿ ಇದ್ದ ಕಾರಣ ಕಾಂತ ಸ್ವಲ್ಪ ದೂರದಲ್ಲಿ ನಿಂತಿದ್ದ. ಕೊನೆಗೂ ರೈಲು ಗಾಡಿ ಬಂದಾಗ ಸಮಯ ರಾತ್ರಿಯ ೧೧.೩೦. ನಿಧಾನವಾಗಿಯೇ ನಮ್ಮ ಬೋಗಿಯೊಳಗೆ ಹತ್ತಿದ್ದಾಯಿತು. ಎಂದಿನಂತೆ ಮಲ್ಲಿ-ಕಾಂತ ರ ಕಾಲುಗಳಿಗೆ ಗಾಲಿಗಳು ಅಂಟಿರುವುದರಿಂದ ಮಳೆ ಇದ್ದರೂ ಸಹ ಹೊರಗೆ ಜೋತಾಡಿ ಒಳಗೆ ಬಂದರು. ನನ್ನದು ಕೆಳಗಿನ ಸೀಟು, ಅದರ ಎದುರಿನ ಸೀಟು ಬೇರೊಬ್ಬನದ್ದು, ಅದರ ಮೇಲಿನ ಎರಡು ಸೀಟುಗಳು ಮಲ್ಲಿ-ಕಾಂತನದ್ದು ಆಗಿದ್ದುವು. ಇನ್ನೂ ಕಸ ತಗೆಯೋ ಬಾಯಿ ಬಂದಿಲ್ಲದಿದ್ದ ಕಾರಣ ಮಾತನಾಡುತ್ತ ಕುಳಿತಿದ್ದೆವು. ಮುಂದಿನ ಸೀಟಿನಲ್ಲಿ ಕುಳಿತಿದ್ದ ಪೋರ ನೀರು ಕುಡಿಯುತ್ತಿದ್ದಾಗ ಅವನ ಕೈ ಜಾರಿ ಬಾಟಲಿ ಕೆಳಗೆ ಬೀಳುತ್ತಿದ್ದಂತೆಯೇ ನನಗೆ ಚಿಮ್ಮುತ್ತಿರುವ ನೀರಿನಲ್ಲಿ ಮೂರನೇಯ ಬಾರಿ ಸ್ನಾನವಾಯ್ತು (ಮೊದಲನೇಯ ಬಾರಿ ಮನೆಯಲ್ಲಿ, ಎರಡನೇಯದ್ದು ಮಳೆಯಲ್ಲಿ). ಸಿಟ್ಟನ್ನು ಹತೋಟಿಯಲ್ಲಿಟ್ಟುಕೊಂಡು ಪೋರನ ಸಣ್ಣನೆಯ ಕ್ಷಮಾ ಯಾಚನೆಯನ್ನು ಗಮನಿಸದೇ ನೀರನ್ನು ಒರೆಸಿಕೊಂಡೆ. ಕೀಟಲೆ ಮಾಡುತಿದ್ದ ಮಲ್ಲಿಯನ್ನು ಚಚ್ಚುವ ಅತೀವ್ರವಾದ ಆಸೆಯನ್ನೂ ಬದಿಗೊತ್ತಿ (ಪ್ರಯೋಜನವಿಲ್ಲ ನೋಡಿ, ಅರ್ಥ ಆಗುವವರಿಗೆ ಬಿಡಿಸಿ ಹೇಳಬಹುದು) ತೆಪ್ಪಗೆ ಮಲಗಿಕೊಂಡೆ. ಸುಸ್ತಾಗಿದ್ದ ಕಾರಣ ಯಾರು ಏನು ವೋದರಿಕೊಂಡ್ರೋ ಗೊತ್ತಾಗ್ಲಿಲ್ಲ - ನಿದ್ದೆ ಅಂತು ಚೆನ್ನಾಗಿ ಹತ್ತಿತು.
ಎಚ್ಚರವಾದಾಗ ಬೆಳಗಿನ ಜಾವ ೬.೦೦ ಘಂಟೆ ಆಗಿತ್ತು. ಎದ್ದು ಫೋನು ತೆಗೆದು ಸಮಯ ನೋಡಿ ಎಷ್ಟು ದೂರ ಬಂದಿದ್ದೇವೆ ಎಂದು ನೋಡಿದರೆ ಇನ್ನೂ ಚಿಕ್ಕಜಾಜೂರು ಸಹ ಬಂದಿಲ್ಲ ಎಂದು ಬೇಸರವಾಯಿತು. ಮತ್ತೆ ಮಲಗಿಕೊಂಡೆ. ೭.೩೦ ಯ ಸುಮಾರು ಎಚ್ಚರವಾದಾಗ ಚಿಕ್ಕಜಾಜೂರು ದಾಟಿದ್ದೆವು. ಮಲ್ಲಿಕಾರ್ಜುನನನ್ನು ಎಬ್ಬಿಸಲು ಹೋದೆ...
"ಲೇ ಮಲ್ಲಿ ಎದ್ದೇಳೋ!"
"ಊ ಊ ಅಂ ಅಂ..." (ನಿದ್ದೆಯಲ್ಲಿ ಕನವರಿಸುವುದು)
"ಎದ್ದೇಳೋ ಮಲ್ಲಿಕಾರ್ಜುನ!"
"... ಊ ಊ ಊ ... ದುರ್ಗಾ ಬಂತಾ??" (ಮುಸುಕು ಎತ್ತದೆಯೇ)
"ಇಲ್ಲ.. ಇನ್ನೊಂದು ಘಂಟೆಯಲ್ಲಿ ಬರಬಹುದೇನೋ"
"ಬಂದಾಗ್ಲಾಸಿ ಎಬ್ಸು!"
ಇನ್ನೇನು ಎಬ್ಬಿಸೋ ಪ್ರಯತ್ನಗಳೆಲ್ಲ ವಿಫಲ ಅಂತ, ಹಲ್ಲುಜ್ಜುತ್ತಿರುವ ಅನ್ಯರನ್ನು ನೋಡುತ್ತಾ ತೆರೆದ ಬಾಗಿಲಿಗೆ ಜೋತು ಬಿದ್ದು ಮಳೆಯಿಂದ ಹಸಿಯಾದ ಮಣ್ಣಿನ ಸುವಾಸನೆಯನ್ನು ಹೀರುತ್ತ, ಹಸಿರನ್ನ ಕಣ್ಣಿನಲ್ಲಿ ಸೆರೆ ಹಿಡಿಯುತ್ತ ಇನ್ನೊಂದು ಘಂಟೆ ಕಳೆದೆ. ಚಿತ್ರದುರ್ಗ ಬರುವ ಸನ್ನೆಗಳು ಕಾಣಿಸುತ್ತಿರಲಿಲ್ಲ. ಆದರು, ಚಾದರ್ ಮಡಿಚಿ, ಕನ್ನಡಕ ಏರಿಸಿಕೊಂಡು ತಯಾರಾಗಿ ಕುಳಿತೆ. ಸುಮಾರು ಒಂಭತ್ತು ಘಂಟೆಗೆ ರೈಲು ಚಿತ್ರದುರ್ಗ ಮುಟ್ಟಿತು. ಅದರ ಅರಿವಾಗಲು ನನಗೆ ಕೆಲ ನಿಮಿಷಗಳು ಬೇಕಾಯಿತು. ಮಲ್ಲಿಯನ್ನು ಎಬ್ಬಿಸಿದೆ. ಕಾಂತನನ್ನು ಎಬ್ಬಿಸಿದೆ. ಇಬ್ಬರು ಗೊಣಗುತ್ತ ಕಣ್ಣು ತಿಕ್ಕಿಕೊಳ್ಳುತ್ತ ಮೆಲ್ಲನೆ ಇಳಿಯಲಾರಂಭಿಸಿದರು. ಮಲ್ಲಿಕಾರ್ಜುನ ಅಷ್ಟರಲ್ಲಿ ತನ್ನ ದೂರವಾಣಿ ಯಂತ್ರವನ್ನು ಕಿವಿಗದುಮಿಕೊಂಡು ಚಿತ್ರದುರ್ಗ ಬಂದಿರುವ ಪರಿವೆ ಇಲ್ಲದೆ ನಡೆಯತೊಡಗಿದ. ಅಲ್ಲಿಯೇ ಇದ್ದ ಒಬ್ಬರಿಗೆ ನಾನು ಕೇಳಿ ಇದೇ ಚಿತ್ರದುರ್ಗ ಎಂದು ಖಾತ್ರಿ ಪಡಿಸಿಕೊಂಡಾಗ ಮಲ್ಲಿ ಎಚ್ಚೆತ್ತ. ಬೇಗನೆ ತನ್ನ ಬ್ಯಾಗನ್ನು ಇಳಿಸಿಕೊಂಡ. ನಾನು ನನ್ನ ಬ್ಯಾಗೊಂದನ್ನು ಇಳಿಸಿ ಚಂದ್ರಕಾಂತನ ಬ್ಯಾಗನ್ನು ತಂದೆ. ಆದರೆ ಕಾಂತ ಎಲ್ಲಿ? ಬೋಗಿಯಲ್ಲಿನ ಶೌಚಾಲಯದ ಬಾಗಿಲು ಬಡಿದು ಕರೆ ನೀಡಿದ ಮೇಲೆ ಆಸಾಮಿ ಹೊರಬಂದ. ೫ ನಿಮಿಷದ ಮೇಲೆ ನಿಂತಿದ್ದ ರೈಲು ಅಷ್ಟರಲ್ಲಿ ಮತ್ತೆ ಹೊರಟಿತು. ಇನ್ನೇನು ರೈಲು ಸ್ಟೇಷನ್ ಬಿಡ್ತು ಅನ್ನೋ ಅಷ್ಟರಲ್ಲಿ
"ಓಹೋ, ಅಮ್ಮ ಕೊಟ್ಟು ಕಳುಹಿಸಿದ ಬ್ಯಾಗು ಬೋಗಿಯಲ್ಲಿಯೇ ಉಳಿಯಿತು!" ಅಂತ ನಾನು ಉಸುರಿದೆ.
ಅಷ್ಟು ಹೊತ್ತಿಗಾಗಲೇ ಎಲ್ಲರೂ ಎದ್ದಿದ್ದರು. ಮಲ್ಲಿಕಾರ್ಜುನ ರೈಲು ಸಿಬ್ಬಂದಿಗೆ ಕೇಳು ಅಂತ ನನಗೆ ಹೇಳಿದ. ಹಾಗೆಯೇ ಮಾಡಿದೆ - ಅಲ್ಲಿಯೇ ನಿಂತಿದ್ದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಹಾಗು ಅನ್ಯ ಸಿಬ್ಬಂದಿಗೆ ಆದ ವಿಷಯವನ್ನ ಹೇಳಿದೆ. ಅವರು ಸ್ಟೇಷನ್ ಮಾಸ್ಟರ್ ಅವರನ್ನು ಬೇಗ ಭೆಟ್ಟಿಯಾಗಿ ತಿಳಿಸಲು ಹೇಳಿದರು. ಮುಂದಿನ ಸ್ಟೇಷನ್ ಅಲ್ಲಿ ಬ್ಯಾಗ್ ಸಿಕ್ರೆ ಇಳಿಸಿಕೊಳ್ಳಬಹುದು ಅಂದ್ರು. ನಾನು ಬೇಗನೆ ಹೋಗಿ ಅಲ್ಲಿಯೇ ಇದ್ದ ಸ್ಟೇಷನ್ ಮಾಸ್ಟರ್ ಅವರನ್ನು ಕಂಡೆ.
"ಸರ್, ಟ್ರೈನಲ್ಲಿ ನಾನು ಒಂದು ಬ್ಯಾಗ್ ಬಿಟ್ಟಿದ್ದೀನಿ... ಇಳೀಬೇಕಾದ್ರೆ ಲಕ್ಷ್ಯಕ್ಕೆ ಬರ್ಲಿಲ್ಲ..."
"ಅಲ್ಲ ಅದು ಹೇಗೆ ಬಿಟ್ರಿ? ಬ್ಯಾಗ್ ಅಲ್ಲೇ ಇದ್ರೆ ಸಿಗಬಹುದು - ಇಲ್ಲ ಅಂದ್ರೆ ಏನು ಮಾಡೋಕ್ಕಾಗೋಲ್ಲ...
ಯಾವ್ ಬೋಗಿ, ಸೀಟ್ ನಂಬರ್ ಏನು?..."
"ಎಸ್ ೨, ಸೀಟ್ ನಂಬರ್ ೬೦..."
"ಯಾವ ಬ್ಯಾಗ್? ಬಣ್ಣ ಏನಿತ್ತು?"
"ದೊಡ್ಡ ಏರ್ ಬ್ಯಾಗ್... ಕರಿ ಬಣ್ಣ... ಆ ಸೀಟ್ ಕೆಳಗೆ ಇತ್ತು... ಸಿಕ್ರೆ ನೆಕಸ್ಟ್ ಸ್ಟೇಷನ್ ಅಲ್ಲಿ ಇಳ್ಸಕ್ಕೆ ಹೇಳ್ರಿ... ಅಲ್ಲಿ ಹೋಗಿ ತಗೋತೀವಿ..."
ಮುಂದಿನ ಸ್ಟೇಷನ್ ಫೋನಾಯಿಸಿದ ಸ್ಟೇಷನ್ ಮಾಸ್ಟರ್,"ಸಾರ್, ಇಲ್ಲಿ ಒಬ್ರು ಪ್ಯಾಸೆಂಜರ್ ತಮ್ಮ ಬ್ಯಾಗನ್ನ ಬೋಗಿಯಲ್ಲೇ ಬಿಟ್ಟಿದ್ದಾರೆ... ಟ್ರೈನ್ ಅಲ್ಲಿ ಸೇರಿದಾಗ ಬ್ಯಾಗ್ ಸಿಕ್ರೆ ಇಳಿಸಿ ಇಟ್ಕೊಳ್ಳಿ. ಬರ್ಕೊಳ್ಳಿ... ಎಸ್ ೨, ಸೀಟ್ ನಂಬರ್ ೬೦, ಕರಿ ಬಣ್ಣದ ಏರ್ ಬ್ಯಾಗ ಅಂತೆ... ಅಲ್ಲಿ ಸೀಟ್ ಕೆಳಗೆ ಬಿಟ್ಟಿದ್ದಾರೆ... ಓಕೆ ಸಾರ್..."
"ಸಾರ್, ಬ್ಯಾಗ್....", ನಾನು ಉಸುರಿದೆ.
"ಇನ್ನೊಂದು ೧೫ ನಿಮಿಷಗಳಲ್ಲಿ ಟ್ರೈನ್ ಬಾಲೇನಹಳ್ಳಿ ರಿಚ್ ಆಗೊತ್ತೆ... ಆಮೇಲೆ ಸಿಕ್ರೆ ತಿಳಸ್ತಾರೆ... ಆಗ ಅಲ್ಲಿ ಹೋಗಿ ಬ್ಯಾಗ ತಗೊಳ್ಳಿ..."
ಸ್ಟೇಷನ್ ಮಾಸ್ಟರ್ ಅನ್ನು ಮಾತನಾಡಿಸಿ ಹೊರಬಂದ್ದದ್ದಾಯ್ತು. ಅಲ್ಲಿ ಇದ್ದ ರೈಲ್ವೆ ಸಿಬ್ಬಂದಿಯೊಬ್ಬರು ನನ್ನನ್ನು ಮಾತನಾಡಿಸಿ ಯಾರು, ಏನು, ಎಂತು ಎಂದೆಲ್ಲ ವಿಚಾರಿಸಿ ತಮ್ಮ ಒಬ್ಬ ಸೀನಿಯರ್ ಅದೇ ಟ್ರೈನ್ ಅಲ್ಲಿ ಹೋಗುತ್ತಿರುವುದಾಗಿಯೂ, ಅವರಿಗೆ ಫೋನಾಯಿಸಲು ಹೇಳಿದರು. ಮಾಡಿದೆ. ಅವರಿಗೆ ನನ್ನ ಬ್ಯಾಗಿನ ಬಗ್ಗೆ ಹೇಳಿದೆ - ಅವರು ಅದನ್ನು ಹುಡುಕಿದರು. ಬ್ಯಾಗು ಅವರಿಗೆ ಸಿಕ್ಕಿತು. ಮುಂದಿನ ಸ್ಟೇಷನ್ ಅಲ್ಲಿ ಇಳಿಸುವುದಾಗಿ ಹೇಳಿದರು.
ಇದಾದ ಮೇಲೆ ರೈಲ್ವೆ ಸಿಬ್ಬಂದಿಯವರು ತಮ್ಮ ಮಗ ಬೀ.ಐ.ಈ.ಟೀ ಅಲ್ಲಿ ಓದುತ್ತಿರುವುದಾಗಿಯು ಅವನ ಕ್ಯಾಂಪಸ್ ಪ್ಲೆಸಮೆಂಟ್ ಬಗ್ಗೆ ಮಾತನಾಡತೊಡಗಿದರು, ತಾವು ಹರಿಹರಕ್ಕೆ ಟ್ರಾನ್ಸ್ಫರ್ ಆಗುವುದಾಗಿಯೂ, ಅಲ್ಲಿ ಮನೆ ಸಿಗುವುದೇ ಎಂದೆಲ್ಲ ವಿಚಾರಿಸಿಕೊಂಡರು. ನಾನು ನನ್ನ ಕೈಲಾದಷ್ಟು ವಿವರಿಸಿದೆ. ಅಷ್ಟರಲ್ಲಿ ರೈಲು ಬಾಲೇನಹಳ್ಳಿ ಸೇರಿ, ಬ್ಯಾಗನ್ನು ಅಲ್ಲಿ ಇಳಿಸಲಾಗಿದೆ ಅಂತ ಸುದ್ದಿ ಬಂದಿತು.
ರೈಲಿನಿಂದ ಇಳಿದು ಈ ಕೊನೆಯ ಸುದ್ದಿ ಸಿಗುವುದರ ವರೆಗೆ ಆದ ಘಟನೆಗಳೆಲ್ಲ ೧೫ ನಿಮಿಷಗಳಲ್ಲಿ ಜರುಗಿದ್ದುವು!
ಈಗ ಆ ಸ್ಟೇಷನ್ ಗೆ ಹೋಗೋದು ಹೇಗೆ ಅನ್ನೋದೇ ಪ್ರಶ್ನೆ... ಮಲ್ಲಿ ವಿವೇಕನಿಗೆ ಫೋನಾಯಿಸಿ ಬೈಕ್ ಸಿಗುತ್ತಾ ಅಂತ ವಿಚಾರಿಸಿದ... ಮದುವೆಯ ಕೆಲಸದ ಮೇರೆಗೆ ಎಲ್ಲ ಗಾಡಿಗಳು ಉಪಯೋಗದಲ್ಲಿದ್ದವು. ಆಗ ನೆನಪಾದದ್ದು ನಮ್ಮ ಮಂಜು (ಅಲಿಯಾಸ್ "ಸ್ಪೂನ್ ಮಂಜ"). ಮಲ್ಲಿ ಅವನಿಗೆ ಫೋನಾಯಿಸಿ ಗಾಡಿ ಬೇಕಿತ್ತು ಎಂದು ವಿಚಾರಿಸಿದ; ಕಾರು ಸಿಕ್ಕರೆ ನಾವೇ ಓಡಿಸಿಕೊಂಡು ಹೋಗ್ತಿವಿ ಅಂದ. ಮಂಜ ಹಳೆಯ ಚೇತಕ್ ನಡೀಬಹುದ ಅನ್ನೋ ಪ್ರಶ್ನೆಗೆ ಹೂ ಅಂದಿದ್ದ ಮಲ್ಲಿ. ರೈಲ್ವೆ ಸ್ಟೇಷನ್ ಇಂದ ಹೊರ ಬಂದು ಕಾಂತನನ್ನ ವಿವೇಕನು ಕಾಯಿದಿರಿಸಿದ್ದ ಹೋಟಲ್ ರೂಂಗೆ ಆಟೋ ಹತ್ತಿಸಿ ಕಳುಹಿಸಿದೆವು. ನಾವು ಮಂಜು ಮಾವನ ಮನೆಗೆ ಆಟೋ ಹತ್ತಿದೆವು.
ಅಲ್ಲಿ ಮಂಜು ಅವರ ಮಾವ, ಹೆಂಡತಿ, ಭಾವ ಅವರನ್ನು ಭೆಟ್ಟಿಯಾಗಿ ಮಂಜು, ಅವರ ಭಾವ, ಮಾವ ಅವರ ಜೊತೆ ಅವರ ಕಾರಿನಲ್ಲಿ ನಾನು ಹಾಗು ಮಲ್ಲಿ ಹೊರಟೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದೆವು. ಬಾಲೇನಹಳ್ಳಿ - ಚಿತ್ರದುರ್ಗದಿಂದ ೨೩ ಕಿಲೋಮೀಟರು; ೨೦ ಕಿಲೋಮೀಟರ್ ವರೆಗೆ ಒಳ್ಳೆಯ ರಸ್ತೆ ಇದೆ. ಅದರ ಮುಂದೆ ಸ್ವಲ್ಪ ಕಚ್ಚಾ ರಸ್ತೆ ಎಂದು ರೈಲ್ವೆ ಸಿಬ್ಬಂದಿ ಹೇಳಿದ್ದರು. ಹಾಗೆಯೇ ಇತ್ತು. ಮೊದಲ ೨೦ ಕಿಲೋಮೀಟರ್ ಸುಗಮವಾಗಿ ಸಾಗಿದೆ ಪಯಣ ಆನಂತರ ಸ್ವಲ್ಪ ಕಷ್ಟಕರವಾಗಿತ್ತು. ಹೆಚ್ಚು-ಕಡಿಮೆ ಅಸ್ತೆ ಅನ್ನೋದು ಇರಲೇ ಇಲ್ಲ! ಅದರಲ್ಲಿ, ನಾವೆಲ್ಲಾ ಅಲ್ಲಿ ಮೊದಲನೇಯ ಬಾರಿ ಹೋಗುತ್ತಿದ್ದೆವು - ದಾರಿ ಯಾರಿಗೂ ಗೊತ್ತಿರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದ ಒಬ್ಬನನ್ನು ನಿಲ್ಲಿಸಿ ಇಲ್ಲಿ ರೈಲ್ವೆ ಸ್ಟೇಷನ್ ಎಲ್ಲಿದೆ (ಇದೆಯಾ?) ಎಂದು ಕೇಳಿದಾಗ ಅವನು, "ಹೀಗೆ ಮುಂದೆ ಹೋದ್ರೆ ಸಿಗೊತ್ತೆ", ಅಂತ ಹೇಳಿದ... ಆದ್ರೆ ಅಲ್ಲಿ ರಸ್ತೆ ಇದ್ದರಲ್ಲ ಹೋಗೋಕ್ಕೆ! ಸುಮಾರು ೧.೫ ಕಿಲೋಮೀಟರ್ ಹೇಗೋ ಒಳಗಡೆಯವರೆಗೆ ಕಾರು ಹೋಯಿತು. ಅದಕ್ಕಿಂತ ಮುಂದೆ ಹೋದ್ರೆ ಕೊಚ್ಚೆಯಲ್ಲಿ ಗಾಲಿಗಳು ಸಿಕ್ಕಿಕೊಂಡು ಕಷ್ಟ ಆಗಬಹುದು ಅಂತ ನಾನು ಹಾಗು ಮಲ್ಲಿ ಇಳಿದು ಮುಂದಿನ ೧.೫ ಕಿಲೋಮೀಟರು ನಡೆಯುವುದಾಗಿ ನಿರ್ಧರಿಸಿ ಉಳಿದವರನ್ನ ಅಲ್ಲಿಯೇ ಇರಲು ಹೇಳಿ ನಡೆಯಲಾರಂಭಿಸಿದೆವು. ಮಳೆ ಬಿದ್ದು ಹೋಗಿದ್ದರಿಂದ ಆ ಮಣ್ಣಿನ ರಸ್ತೆ ಗದ್ದೆಯಂತೆ ಕೊಚ್ಚೆಯಿಂದ ಕೂಡಿತ್ತು. ಸುಮಾರು ೧.೫ ಕಿಲೋಮೀಟರು ನಡೆದ ಮೇಲೆ ಒಂದು ರೈಲು ಹಳಿ ಕಾಣಸ್ತು. ಆ ರೈಲು ಹಳಿಯ ಪಕ್ಕ ಒಂದು ಮುರುಕಲು ಗುಡಿಸಿಲು ದೂರದಿಂದ ಸ್ಟೇಷನ್ ಅನ್ನಿಸಿದ್ದು ಈಗ ಹಾಳು ಬಿದ್ದ ಕೊಠಡಿ ಅಂತ ತಿಳಿದು ಸ್ವಲ್ಪ ಬೇಸರವೇ ಆಯಿತು. ಆದರೆ ಮಾಡುವುದೇನು?

"ಇಲ್ಲೇ ಎಲ್ಲಾದರು ಇರಲೇಬೇಕು - ಹಳಿ ಹತ್ತಿ ನೋಡೋಣ", ಅಂದ ಮಲ್ಲಿಕಾರ್ಜುನ.

ಹೇಗೆ ಆಗಲಿ, ಒಮ್ಮೆ ಸಹಾಯ ಮಾಡಿದ ಆ ರೈಲ್ವೆ ಸಿಬ್ಬಂದಿಯವರನ್ನ ಮಾತನಾಡಿಸಿ ಕೇಳೋಣ ಎಂದುಕೊಂಡು ಫೋನಾಯಿಸಿದೆ. ಅವರು,"ರೈಲ್ವೆ ಸ್ಟೇಷನ್ ಅಲ್ಲಿಯೇ ಹತ್ತಿರದಲ್ಲಿ ಇರಬೇಕು", ಅಂದರು. ಮಲ್ಲಿ ಹಳಿ ಹತ್ತಿ ಸುಮಾರು ಅರ್ಧ ಕಿಲೋಮೀಟರು ದೂರದಲ್ಲಿ ಸ್ಟೇಷನ್ ಹೆಸರಿನ ಬೋರ್ಡ್ ಅನ್ನು ಕಂಡು ನನ್ನನ್ನು ಬರಲು ಹೇಳಿದ. ಇಬ್ಬರು ಹಳಿಯ ಗುಂಟ ನಡೆದು ಸ್ಟೇಷನ್ ತಲುಪಿದೆವು. ನೆನಪಿಗಾಗಿ ಫೋಟೋ ಕ್ಲಿಕ್ಕಿಸಿ ಆಮೇಲೆ ಸ್ಟೇಷನ್ ಹೊಕ್ಕೆವು. ಸ್ಟೇಷನ್ ಅಚ್ಚುಕಟ್ಟಾಗಿತ್ತು. ಆದರೆ, ಎಲ್ಲೊ ಕಾಡಿನ ಮಧ್ಯ ಇದ್ದ ಹಾಗಿತ್ತು. ಅಲ್ಲಿ ೩ ಮಂದಿ ಸಿಬ್ಬಂದಿಗಳು ಕುಳಿತಿದ್ದರು. ಅವರಿಗೆ ನಾವು ಬ್ಯಾಗಿಗಾಗಿ ಬಂದಿರುವುದಾಗಿ ತಿಳಿಸಿದೆವು. ಅವರು ನಮ್ಮ ಬ್ಯಾಗನ್ನು ನಮಗೆ ಒಪ್ಪಿಸಿದರು. ನಾನು ಸ್ವಲ್ಪ ಹಣವನ್ನೂ ಅವರಿಗೆ ನೀಡಲು ಹೋದಾಗ ಬೇಡ ಅಂದವರು ನಮ್ಮ ಧನ್ಯವಾದಗಳಿಗೆ,"ಇರ್ಲಿ ಸಾರ್. ದುಡ್ಡು ಬ್ಯಾಡ. ಏನೋ ನೀಮ್ಮ ಬ್ಯಾಗ ಸಿಗ್ತಲ್ಲ ಅಷ್ಟು ಸಾಕು", ಎಂದರು. ನಾವು ಮತ್ತೆ ಹಳಿಯನ್ನು ಹತ್ತಿ ಹೋಗೋದು ಬೆಡವೆಂದುಕೊಂಡು ಅಲ್ಲಿಯ ಸಿಬ್ಬಂದಿಗೆ ದಾರಿ ಕೇಳಿ ಬೀಳ್ಕೊಟ್ಟೆವು. ಬ್ಯಾಗಿನೊಂದಿಗೆ ಸ್ವಲ್ಪ ದೂರ ನಡೆದು ಉಳಿದವರನ್ನು ಸೇರಿದೆವು. ಕಾರನ್ನು ಹತ್ತಿ ಚಿತ್ರದುರ್ಗ ಸೇರಿಕೊಂಡೆವು. ಕಾಂತ ಆಗಲೆ ಮದುವೆ ಮಂಟಪವನ್ನು ಸೇರಿದ್ದ. ನಾವು ಹೋಟೆಲ್ ಹೋಗಿ, ಮಂಜು ಹಾಗು ಅವರ ಮಾವನವರಿಗೆ ಧನ್ಯಾವದಗಳನ್ನು ತಿಳಿಸಿ - ಬೀಳ್ಕೊಟ್ಟು, ಅಲ್ಲಿಂದ ಮಂಟಪದತ್ತ ಧಾವಿಸಿದೆವು - ಮಹೂರತಕ್ಕೆ ಸರಿಯಾಗಿ.

Monday, February 7, 2011

ಕವನ - ವರ್ಣನೆ

ಬರೆದದ್ದು ಪ್ರಥಮ ವರ್ಷ, ಪದವಿ ಪೂರ್ವ ಕಾಲೇಜಿನಲ್ಲಿದಾಗ. ಕೇವಲ ಕಾಲ್ಪನಿಕ! ಪ್ರಶ್ನೆಗಳನ್ನು ಕೇಳಬೇಡಿ - ನನ್ನ ಹತ್ತಿರ ಉತ್ತರಗಳಿಲ್ಲ. ಆಗ ಇದನ್ನು ಬರೆದಾಗ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಿದ್ದೆ - ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು - ಆ ಪುಟಗಳನ್ನು ಮತ್ತೆ ತಿರುವಿ ಹಾಕಿದಾಗ ಇದನ್ನು ಇಲ್ಲಿ ಬರೆಯಬೇಕೆನಿಸಿತು...

ಕವನ : ~

ಆ ನಿನ್ನ ಚಂಚಲತೆಗೆ ಸೋತೆ ನಾನು
ನಿನ್ನನ್ನು ತಡೆಯಲು ಇಲ್ಲವಲ್ಲ ಯಾವ ಕಾನೂನು
ನಿನ್ನ-ನನ್ನ ಸಂಬಂಧ ಬಿಡಿಸಲಾಗ ನಂಟು
ಬ್ರಹ್ಮನೂ ತಲೆ-ಕೆಡಿಸಿಕೊಂಡ ಜಟಿಲ ಗಂಟು

ನಿನ್ನ ಮೃದು ತನುವ ಹಾಡಿ ಹೊಗಳಲೆ
ನನ್ನ ಬಿಟ್ಟು ತೊಲಗು ನೀನೀಗಲೆ
ಆ ನಿನ್ನ ಬಳುಕು ನಡೆಗೆ ಸೋತೆ ನಾನು
ಜನರೆಲ್ಲ ನಕ್ಕರೂ ಏಕೆ ಬಿಡಲೊಲ್ಲೆ ನೀನು

ನೀನು ತೆಳು - ಬಿಳುಪು ಮಿಶ್ರಿತ ರನ್ನ
ಕರೆತಂದೆಯಲ್ಲ ಜೊತೆಗೆ ನಿನ್ನ ಅಣ - ತಮ್ಮಂದಿರನ್ನ
ಬಂದು, ಬೇಗನೆ ಹೋಗದವರನ್ನೆಲ್ಲ
ಅದ್ಹೇಗೆ ತಿಳಿ ಹೇಳುವುದು, ನನಗೆ ಗೊತ್ತಿಲ್ಲ

ನೀನೊಬ್ಬಳೇ ಬಂದರೆ ಪರ್ವಾಗಿಲ್ಲ
ಜೊತೆಗೆ ತರುತೀಯಲ್ಲ ತಲೆನೋವನ್ನೆಲ್ಲ
ನೀನು ಚಪಲತೆಯಿಂದ ಕೂಡಿದಾಗ ಮಾತ್ರ
ನನ್ನ ಸಿಟ್ಟಿಗೆ ನೀನೇ ಪಾತ್ರ

ಅಂದು ಕೇಳಿದ್ರು ಡಾಕ್ಟರು ನಿನ್ನ
ನಾನೆಂದೆ, ನನ್ನ-ನಿನ್ನದು ಅಮರ ಪ್ರೇಮ
ನಿನ್ನೊಂದಿಗೆ ನಾನು-ನನ್ನೊಂದಿಗೆ ನೀನು, ಜೊತೆಯಲ್ಲಿ
ನಮ್ಮೀ ಐಕ್ಯಕ್ಕೆ, ಅಯ್ಯೋ, ಆಕೆ ಬರಲಿಲ್ಲ ಕಲಿ?

ನಿನ್ನ ಪ್ರಯತ್ನಗಳನ್ನೆಲ್ಲ ಮಾಡಲು ವಿಫಲ
ವೈದ್ಯ ಮಹಾಶಯರು ಬಳಸಿದರು ತಮ್ಮ ತಪೋಬಲ
ಅವಳ ಮನದಲ್ಲೆದ್ದಿತೊಂದು ಬಲವಾದ ಶಂಕೆ
ವೈದ್ಯರ ವಿಷ ಬೀಜ ಹೊಡೆಯಲಿಲ್ಲ ಮೊಳಕೆ

ನಾ ಹೇಳಿದೆ ನಿನ್ನ ಆಗಮನದಿಂದ ಬೇಸರಗೊಳ್ಳಲಿಲ್ಲ ಚಿನ್ನ
ಆದರೆ ಆ ನಿನ್ನ ಚಪಲತೆ, ಹಾಕಿತು ನಿನ್ನ ನೀಯತ್ತಿಗೆ ಕನ್ನ
ಮರುದಿನದ ಆ ನಿನ್ನ ಜಟಿಲತೆ, ಕಾಡಿಸಿ ಕೈಬಿಟ್ಟಿತು ನನ್ನ
ಅಯ್ಯೋ, ಹೇಗೆ ತಡೆಯಲಿ ನಿನ್ನ ಕೆಲಸಗಳನ್ನ

ಸಕಲ ಅಸ್ತ್ರಗಳ ಬಳಕೆಯಾಯಿತು
’ಲೋಕಲ್’ - ಲಗಾಟಿ ಹೊಡೆಯಿತು
’ಹರ್ಬಲ್’ - ಶೆಟೆದು ಹೋಯಿತು
’ರಾಯಲ್’ - ಜೇಬಿಗೆ ತೂತು ಹೊಡೆಯಿತು

ನಿನ್ನ ಆ ಗಲಭೆಗೆ ಕೆಟ್ಟಿತು ಈ ತಲೆ
ಇನ್ನೇನಾದರು ಮಾಡಬೇಕೆನ್ನುವಷ್ಟರಲ್ಲೆ
ಹೊರಟು ಹೋದರು ನಿನ್ನ ಜೊತೆಯವರು
ಕೊನೆಗೂ ಕಡಿಮೆಯಾಯಿತು ನಿನ್ನ ಜೋರು

ಅಂದಹಾಗೆ, ದುಃಖಿಸಬೇಡ ಪ್ರಿಯೆ
ಅಡೆತಡೆ ಇಲ್ಲದೆ, ನಿರಂತರವಾಗಿ ನಡೆಸು ನಿನ್ನ ಕ್ರಿಯೆ
ಮೂಗಿನೊಳ ರಂಧ್ರದೊಳಗೆ ಮುತ್ತಿನಂತೆ ನೀನು ಹೊಳೆಯುತ್ತಿರುವೆ
ನೆಗಡಿ ಬಂದಾಗ ಮಾತ್ರ, ಎಲ್ಲರ ಮನದೊಳಗೆ ನೀ ಕೊಳೆಯುತ್ತಿರುವೆ

Friday, February 4, 2011

ಅಲೆ

ಹಿತವಾದ ತಂಗಾಳಿ ಸಮುದ್ರದ ಅಲೆಯೊಡನೆ ದಡದತ್ತ ಬೀಸುತಲಿತ್ತು. ಸಮುದ್ರದ ಮಧುರ ಘರ್ಜನೆಯ ಹೊರತು ಬೇರೆ ಯಾವುದೇ ಸಪ್ಪಳವಿರಲಿಲ್ಲ. ಸಾಯಂಕಾಲದ ಸಮಯ; ಅವರಿಬ್ಬರು ಹಸಿ ಮರಳಿನಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಮಾತನಾಡದೆ ನಡೆಯುತ್ತಿರಲು, ಕೆಂಪಾದ ಸೂರ್ಯನು ಇವರಿಬ್ಬರ ನೆರಳನ್ನು ಸಮುದ್ರ ದಂಡೆಯ ಮೇಲೆ ಬೃಹದಾಕೃತಿಯ ರೂಪದಲ್ಲಿ ಮೂಡಿಸುತ್ತ ದೂರ-ದೂರದ ವರೆಗೆ ಹಬ್ಬಿದ್ದ ಸಮುದ್ರದ ಹಿಂದೆ ಮೆಲ್ಲನೆ ಮರೆಯಾಗಲಾರಂಭಿಸದ್ದನು. ಅವನು-ಅವಳ ಉತ್ಸಾಹ ಭರಿತ ಆ ನಡಿಗೆಯಲ್ಲಿ ಮಾತನ್ನು ಯಾರೂ ಪ್ರಾರಂಭಿಸಿರದಿದ್ದರೂ, ಕಣ್ಣುಗಳ ನೋಟದಲ್ಲಿಯೇ ಸಾವಿರಾರು ಪ್ರಶ್ನೆಗಳನ್ನು ಕೇಳಿ ಉತ್ತರಿಸಿಯೂ ಆಗಿತ್ತು! ಸಂತಸ ಕೂಡಿದ ಮಂದಹಾಸ ಅವಳ ಮುಖದಲ್ಲಿ ತುಂಬಿದ್ದರೆ, ಅವನ ನಯನಗಳಲ್ಲಿ ಅವಳ ಪ್ರತಿಬಿಂಬವೇ ಹೊರತು ಬೇರಿನ್ನಿಲ್ಲ... ಆಕಾಶ್ ಹಾಗು ಅನ್ವಿತ ಈ ಸಮುದ್ರ ದಂಡೆಯ ಮೇಲೆ ಹಲವಾರು ಬಾರಿ ನಡೆದಿದ್ದರು, ಆದರೆ ಇಂದು ಅವರಿಗೆ ಒಂದು ವಿಶೇಷವಾದ ದಿನ...

ಅವಳಂದಳು, "ಇಂದು ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ ಅಂತ ನೆನೆಸಿಕೊಂಡ್ರೆ ನಂಬೊಕ್ಕೆ ಆಗ್ತಿಲ್ಲ! ನಾವು ಮೊದಲ ಬಾರಿ ಇಲ್ಲಿಗೆ ಬಂದಾಗ ನನ್ನನೇ ನೋಡುತ್ತ ನೀವು ಆ ತಂಗಿನ ಮರಕ್ಕೆ ಡಿಕ್ಕಿ ಹೊಡೆದದ್ದು ನನಗಿನ್ನೂ ನೆನಪಿದೆ...".
ಮುಖ ಕೆಂಪೇರಿದ ಅಕಾಶ್, "ಒಹ್! ಅದು ನಿನ್ನನ್ನು ನೋಡುತ್ತ ಅಲ್ಲ, ನಿನ್ನ ಜೊತೆಗಿದ್ದ ನಿನ್ನ ಗೆಳತಿ ಪ್ರಿಯಾ ನ ನೋಡಿ!", ಎಂದು ಅನ್ವಿತಾಳನ್ನು ರೇಗಿಸಿ ಅವಳ ಮೃದು ಕೈಗಳ ಪುಟ್ಟ ಗುದ್ದುಗಳಿಂದ ತಪ್ಪಿಸಿಕೊಳ್ಳುತ್ತ ಪ್ರೀತಿಯಿಂದ ಅವಳ ಕೈಗಳನ್ನು ಹಿಡಿದನು.
"ಅನ್ವಿತಾ, ನೀನೇ ನನ್ನ ದಾರಿ ತಪ್ಪಿಸಿದ್ದು! ಇನ್ನು ನಿನ್ನ ಹಾಗು ನನ್ನ ದಾರಿ ಒಂದೇ ಆದ ಮೇಲೆ ನಾನು ನೀನು ಹೇಳಿದ ಹಾಗೆಯೇ ಕೇಳಬೇಕಲ್ಲವೇ?", ಎಂದು ಸ್ವಲ್ಪ-ಸ್ವಲ್ಪವಾಗಿಯೇ ಬೆಂಕಿಗೆ ತುಪ್ಪ ಹಾಕಿದನು.
ಅನ್ವಿತಳ ಹುಸಿ ಮುನಿಸನ್ನು ಹೋಗಲಾಡಿಸಲು ಹಣೆಯೆ ಮುತ್ತೊಂದನ್ನು ಇತ್ತು ಕ್ಷಮೆಯನ್ನು ಯಾಚಿಸಿದನು. ಇಬ್ಬರೂ ದಡದ ಮೇಲೆ ಒಂದೆಡೆ ಕುಳಿತು ಮರಳಿನ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದರು.

ಅಕಾಶ್ - ಅನ್ವಿತ, ಒಬ್ಬರನ್ನೊಬ್ಬರು ನೋಡಿದ್ದು ಸುಮಾರು ೨ ವರ್ಷಗಳ ಹಿಂದೆ. ಅಂದಿನಿಂದಲೂ ಒಬ್ಬರನ್ನೊಬ್ಬರು ಅರಿತು, ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರೂ ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಅದೆಂತಹುದ್ದೋ ಕೂತು ಕೀಳಿ-ಮಣೆ ವೊತ್ತೋ ಕೆಲಸವಂತೆ, ಸಾಫ್ಟ್-ವೇರ್ ಅಂತಾರಲ್ಲ, ಅದನ್ನ ಮಾಡೋದು. ತಮ್ಮ ತವರೂರಾದ ಮಂಗಳೂರಿಗೆ ಬಂದಾಗಲೊಮ್ಮೆ ಸಮುದ್ರ ದರ್ಶನ ಮಾಡಿಯೇ ಹೋಗೋದು ಇವರು. ಇನ್ನು, ಕಥೆಗೆ ಮರಳೋಣ!

"ಆಕಾಶ್, ನಿನಗ್ಯಾವ ಮಗು ಇಷ್ಟ?", ಎಂದು ಅನ್ವಿತ ಪ್ರಶ್ನಿಸಿದಾಗ ಆಕಾಶ್, "ನನಗೆ ಗಂಡು, ಹೆಣ್ಣು ಮಗು - ಯಾವುದೇ ಆದರೂ ಪರ್ವಾಗಿಲ್ಲ; ಆದರೆ ಮಗು ಮೈ ಮೇಲೆ ಸುಸ್ಸು ಮಾಡುವುದನ್ನ ನಿಲ್ಲಿಸಿ ಸೂರ್ಯಕಾಂತಿಯಂತಹ ಬೊಜ್ಜು-ಬಾಯಿ ತುಂಬ ನಗು ಬೀರಿದರೆ ಅದು ನನಗಿಷ್ಟ!", ಎಂದು ಸುತ್ತು-ಬಳಸಿ, ಒಂದೇ ಮಾತಿನಲ್ಲಿ ಎರಡು ಪ್ರಶ್ನೆಗಳಿಗೆ (ಒಂದು ಕೇಳಿದ್ದು - ಇನ್ನೊಂದು ಕೇಳದೇ ಇದ್ದಿದ್ದು) ಉತ್ತರ ನೀಡಿದ. ಅನ್ವಿತಾ ಆಕಾಶನಿಗೆ ತಲೆಯ ಮೇಲೆ ನೀಡಿದ ಮೊಟಕು ಅವನ ಬಾಯಿ ಮುಚ್ಚಿಸಿತು!

"ಅದು ಸರಿ, ಒಂದು ಲಾಂಗ್-ಡ್ರೈವ್ ಗೆ ಹೋಗೋಣವೇ?", ಎಂದು ಅಕಾಶ್ ಉಸುರಿದಾಗ, "ಹುಂ! ಆ ನಿಮ್ಮ ಮುರುಕಲು ಬೈಕಿನ ಮೇಲೆ ಕುಳಿತಾ? ನಾನ್ ಬರಲ್ಲಾ!", ಎಂದು ಕಿಡಿ ಕಾರಿದಳು.

ಆಕಾಶ್, ಬೇಸರಿಸದೆ, "ಹಾಗಿದ್ದರೆ, ಒಂದು ಐಸ್ ಕ್ರೀಮ್?", ಎಂದಾಕ್ಷಣ ಅನ್ವಿತ, "ಖಂಡಿತ!", ಎಂದು ತಯಾರಾದಳು.

ಐಸ್ ಕ್ರೀಮ್ ನೆಕ್ಕುತ್ತ, ಮರಳಿನ ಮನೆಯನ್ನು ಅದರ ಪಾಡಿಗೆ ಬಿಟ್ಟು ಒಬ್ಬರನ್ನೊಬ್ಬರು ಛೇಡಿಸುತ್ತ, ಚಿಕ್ಕ ಮಕ್ಕಳಂತೆ ಜಗಳಾವಾಡುತ್ತ, ಮುದ್ದಾಡುತ್ತ ಮನೆಯತ್ತ ನಡೆದರು... ಅಮ್ಮನು ರಾತ್ರಿಗೆಂದು ಮಾಡಿದ್ದ ಸಾರಿನ ಸುವಾಸನೆ ಮರಿಗಳನ್ನು ಬಿಲಕ್ಕೆ ಸೇರುವಂತೆ ಸಂದೇಶವನ್ನು ನೀಡಿತ್ತು. ತಂಪಾದ ಗಾಳಿ ಬೀಸುತ್ತಲಿತ್ತು... ನೀರಿನ ಕೆನೆತ ಮುಗಿಲಿಗೇರಹತ್ತಿತ್ತು.

Wednesday, January 26, 2011

ಮಿತ್ರರೊಡನೆ ವಾಸ

ಮಿತ್ರರೊಡನೆ ಒಂದೇ ಮನೆಯಲ್ಲಿ ವಾಸಿಸುವ ಮಜವೇ ಬೇರೆ. ಅಂತಹ ಕೆಲ ಸ್ವಾರಸ್ಯಕರ ಸನ್ನಿವೇಶಗಳು ಇಲ್ಲಿವೆ - ಕೆಲವು ಕೇಳಿದ್ದವು, ಕೆಲವು ಅನುಭವಿಸಿದ್ದವು. ಕೆಲ ಕಡೆ, ಓದುಗರಲ್ಲಿ ಸ್ವಾರಸ್ಯ ಹೆಚ್ಚಿಸಲು ವಿಷೇಶ ಪದಗಳನ್ನು ಹಾಕಲಾಗಿದೆ.


ಫ್ಲಶ್!

ಅಪರೂಪಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಕೈಯಿಂದ ಬಟ್ಟೆಯನ್ನು ಅಟ್ಯಾಚ್ಡ್ ಬಾತ್ರೂಮಿನಲ್ಲಿ ತೊಳೆದರೆ ಏನಾಗಬಹುದು? ಊಹಿಸಿ :) ಏನಾದರು "ಅನಾಹುತ" ಆಗಲೇ ಬೇಕಲ್ಲವೇ? ಬೆನ್ನು ನೋಯಿಸಿಕೊಂಡು, ಬಟ್ಟೆ ತಿಕ್ಕಿ, ನೀರಿನಲ್ಲಿ ೨ ಬಾರಿ ತೊಳೆದು, ಬಟ್ಟೆಯನ್ನು ಹಿಂಡಿ ತಗೆದಿಟ್ಟು ಇನ್ನೇನು ಮುಗಿಯಿತು, ಈ ನೀರನ್ನು ಎಸೆಯಬೇಕು ಅನ್ನುವಷ್ಟರಲ್ಲಿ ಸುಸ್ತಾಗಿಬಿಟ್ಟಿರುತ್ತದೆ. ಆ ನೀರಿನಲ್ಲಿ ಇನ್ನೇನಾದರೂ ಉಳಿದಿದೆಯೆ ಎಂದು ನೋಡಲೂ ಸಹ ಮನಸ್ಸಿರುವುದಿಲ್ಲ. "ನೀರನ್ನು ಇನ್ನೇನು ಕಮೋಡಿನಲ್ಲಿ ಸುರಿದರೆ ಎರಡು ಕೆಲಸಗಳಾಗುತ್ತವೆ - ನೀರು ಎಸೆದಂತಾಗುತ್ತದೆ ಹಾಗು ಗಲೀಜಾದ ಕಮೋಡನ್ನು ಅಪರೂಪಕ್ಕೆ ಸ್ವಲ್ಪ ಮಟ್ಟಿಗೆ ತೊಳೆದಹಾಗಾಗುತ್ತದೆ", ಎಂಬ ಅತಿ ಜಾಣ್ಮೆಯ ಕಿಡಿ ಮನಸ್ಸಿನಲ್ಲಿ ಬಿದ್ದಾಗ ಎಲ್ಲ ಶುರುವಾಗುತ್ತದೆ. ಒಳಒಳಗೆ ಆದ ಸಂತೋಷದ ಗುಂಗಿನಲ್ಲಿ ಬಕೀಟನ್ನು ಎತ್ತಿ ನೀರನ್ನು ಕಮೋಡಿಗೆ ಸುರಿಯಲು ಶುರು ಮಾಡಲಾಗಿದೆ - ಅಷ್ಟರಲ್ಲಿ, ಅದೋ, ಅಲ್ಲಿ ಹೋಯಿತು ಆ ಅರ್ಧ ತೋಳಿನ ಬನಿಯಾನು... ಮೊನ್ನೆ ತಂದ ಕರ್ಚೀಫು... ಕಮೋಡು ಇವರಿಬ್ಬರನ್ನು "ಸ್ವಾಹಾ" ಅನ್ನುತ್ತಿದ್ದ ಹಾಗೆ, ಮೈ ಮೇಲಿನ ಧ್ಯಾನ ಮತ್ತೆ ಮರಳಿ ಬಕೀಟನ್ನು ಆಚೆ ಸರೆಸಿ, ಅದರಲ್ಲಿ ಉಳಿದ ಸ್ವಲ್ಪ ನೀರಿನಲ್ಲಿ ಇನ್ನೇನಾದರು ಇದೆಯೇ ಎಂದು ನೋಡಿದಾಗ ಏನೂ ಇರುವುದಿಲ್ಲ. ಹೋಗಿದ್ದು ಹೋಯಿತು, ಇನ್ನೇನು ಕಮೋಡಿನಲ್ಲಿ ಕೈ ಹಾಕುವುದು ಬಾಕಿ!

ಇವತ್ತಿನ ತಿಂಡಿ ಮ್ಯಾಗೀ!!

ಸಾಮಾನ್ಯವಾಗಿ ಯಾವುದೇ ತಿಂಡಿ ತಯಾರು ಮಾಡಲು ೩೦ ನಿಮಿಶಗಳಿಗಿಂತ ಹೆಚ್ಚು ಸಮಯ ಬೇಕಾಗುವುದಿಲ್ಲ - ಆದರೆ ಸಮಯ ಯಾರ ಹತ್ತಿರ ಇದೆ? ವಾರದಲ್ಲಿ ೩-೪ ದಿನ ಮ್ಯಾಗಿ ಸರ್ವೇಸಾಮನ್ಯ!

ನಾಳೆ ಬೆಳಿಗ್ಗೆ ನನ್ನ ಬೇಗನೆ ಎಬ್ಬಿಸು

ಬೆಳಗಿನ ಜಾವ (ಅಂದರೆ ೭ ಘಂಟೆಯ ಮೇಲೆ - ೭ ಘಂಟೆ ಆಗುವ ಮುಂಚಿನ ಸಮಯ "ಮಧ್ಯರಾತ್ರಿ"ಯಲ್ಲಿ ಬರುತ್ತದೆ! ) ಎಷ್ಟೇ ಬಾರಿ ಅಲಾರ್ಮ್ ಹೊಡೆದುಕೊಂಡರೂ ಕೈ ಅಲಾರ್ಮನ್ನು ಬಂದ್ ಮಾಡುತ್ತದೆಯೇ ವಿನಹ ದೇಹ ಮಂಚವನ್ನಗಲಿ ಕದಲುವುದಿಲ್ಲ. ಇಂತಹ ಸಮಯದಲ್ಲಿ ಒಬ್ಬರು ಇನ್ನೊಬ್ಬರನ್ನು ಎದ್ದೇಳಿಸಲು ಹೇಳಿ ಮಲಗುವುದು ಸರ್ವೇಸಾಮಾನ್ಯ. ಇದಾದ ಮೇಲೆ, ಇಬ್ಬರೂ ಏಳುವುದು ೮ ಘಂಟೆ ಆದ ಮೇಲೆಯೇ!

ನನ್ನ ಸಾಕ್ಸ್ ಎಲ್ಲಿ?!

ಅವನು (ಹೆಸರು ’ವಿನೋದ’ ಅಂತ ಅಂದ್ಕೊಳ್ಳಿ) ಮನೆ ಹೊಕ್ಕಾಗ ಸಮಯ ಸಾಯಂಕಾಲದ ೭ ಘಂಟೆ. ವಿನೋದನಿಗೆ, ಪ್ರತಿ ಅವಿವಾಹಿತ ಯುವಕನಂತೆ , ಏನನ್ನೂ ಮುಂಚಿತವಾಗಿ ಜೋಡಿಸಿ ಅಭ್ಯಾಸವಿಲ್ಲ. ಕಾಲಿಗೆ ತೊಡಿಸಿದ ಕಾಲುಚೀಲಗಳು (ಸಾಕ್ಸ್) ಹೊರಗಿನ ಕೋಣೆಯಲ್ಲಿ ಒಂದು ವಾರದಿಂದ ತಯಾರಾಗಿ ನಾನಾ ತೆರನೇಯ ಸುವಾಸನೆಗಳನ್ನು ಹೊಮ್ಮಿಸುತ್ತಲಿರುವ ವಿಧವಿಧ ಬಣ್ಣಗಳಿಂದ ಕೂಡಿದ ಗುಂಪೊಂದನ್ನು ಸೇರುವುದರಲ್ಲಿದೆ. ಈ ಸುವಾಸನೆ ಎಲ್ಲರ ಗಮನವನ್ನು ಕನಿಷ್ಟ ೩-೪ ದಿನಗಳಿಂದ ಸೆಳೆಯುತ್ತಲೇ ಇದೆ; ಇನ್ನೊಂದು ದಿನ ಕಳೆದರೆ, ಮೇಲಿನ ಮನೆಯವರು ಸತ್ತ ಇಲಿಯನ್ನು ಹುಡುಕಿಕೊಂದು ನಮ್ಮ ಮನೆಯ ಬಾಗಿಲನ್ನು ತಟ್ಟಿದರೆ ಆಶ್ಚರ್ಯವೇನಿಲ್ಲ. ರಾತ್ರಿ ಕಳೆದು ಬೆಳಗಾಗುತ್ತದೆ - ವಿನೋದನಿಗೆ ಬೆಳಗಿನ ಜಾವ ಬೇಗನೆ ಎದ್ದು ಆಫೀಸಿಗೆ ಹೋಗಬೇಕಾದ ಸಮಯ; ಅಪರೂಪಕ್ಕೆ ಸ್ನಾನ ಮಾಡಲಾಗಿದೆ ಇಂದು. ಎಂದಿನಂತೆ ಕ್ಯಾಬ್ ಬಂದು ಇವರಿಗಾಗಿ ಕಾಯುತ್ತಿದೆ... ಆದರೆ, ಕಾಲಿಗೆ ತೊಡಿಸಲು ಕಾಲುಚೀಲಗಳೆಲ್ಲಿ???

Monday, January 24, 2011

ಮೇಡಂನ ಬೆಚ್ಚಿ-ಬೀಳಿಸಿದ ಪ್ರಸಂಗ

ಮೇಡಂ ನ ಬೆಚ್ಚಿ-ಬೀಳಿಸಿದ ಪ್ರಸಂಗ

ಬಿ.ಈ. ತರಗತಿಗಳಲ್ಲಿ ಮಾಡಿದ ಹಲವಾರು ’ಅತಿ’ ಜಾಣ್ಮೆಯ ಕೆಲಸಗಳಲ್ಲಿ ನನಗಿಂದು ನೆನಪಿಗೆ ಬಂದದ್ದು ಈ ಸನ್ನಿವೆಷ.

ಸಾಯಂಕಾಲದ ೩ ಘಂಟೆಯಾಗಿದೆ. ಕಾಲೇಜಿನ ಎರಡನೇಯ ಅಂತಸ್ತಿನ ಕೊಠಡಿಗಳು ಸೂರ್ಯನ ಶಾಖಕ್ಕೆ ಸುಡುವ ಕಾವಲಿಯಂತೆ ಕಾದು, ಊಟ ಮಾಡಿ ಪಾಠ ಕೇಳಲು ಕುಳಿತ ವಿದ್ಯಾರ್ಥಿಗಳು ತೂಕಡಿಸುವಂತೆ ಮಾಡಿತ್ತು. ತೆರೆದ ಕಿಟಕಿಗಳು (ತೆರೆಯುವುದಿನ್ನೇನಿದೆ - ಗಾಜಿನ ಕಿಟಕಿಗಳಿಗೆ ಗಾಜೇ ಇಲ್ಲ), ಕಿಟಕಿಗಳಿಂದ ಒಳಚಿಮ್ಮುತ್ತಿದ್ದ ಸೂರ್ಯನ ಕಿರಣಗಳು, ಹಳೇಯ (ಆದರೆ ಗಟ್ಟಿಮುಟ್ಟಾದ) ಬೆಂಚುಗಳು, ದೂರದಲ್ಲಿ ಪೋಡಿಯಂ ಮೇಲೆ ತರಗತಿಯತ್ತ ಬೆನ್ನು ಮಾಡಿ ಬೋರ್ಡಿನ ಮೇಲೆ ,ಮಗ್ನವಾಗಿ, ಚಾಕ್ ಬಳಸಿ ಬರೆಯುತ್ತಿದ್ದ ಮೇಡಂ, ಇತ್ಯಾದಿ, ಇತ್ಯಾದಿ... ಇವೆಲ್ಲವನ್ನು ನೋಡುತ್ತ, ಪಾಠದೆಡೆ ಗಮನ ನೀಡದೆ ಅತೃಪ್ತನಂತೆ ಹೊರ ಹೋಗಲು ಕಾಯುತ್ತಿದ್ದೆ. ನನ್ನ ಜೊತೆ ಸೂರಿ; ಇಬ್ಬರೂ ಸೇರಿ ನಮ್ಮ ಡಿಪಾರ್ಟಮೆಂಟಿನ ಫೋರಂ ಕೆಲಸದ ನಿಮಿತ್ತ ಹೊರಹೋಗಬೇಕಿತ್ತು; ಆದರೆ ಹೋಗುವುದು ಹೇಗೆ? ೩.೩೦ ಗೆ ನಾವು ಹೋಗಬೇಕು - ತರಗತಿ ಶುರುವಾಗುತ್ತಿದ್ದಂತೆಯೆ ಮೇಡಂನ್ ಜೊತೆ ನಾವಿಬ್ಬರು ಇದರ ಕುರಿತು ಮಾತನಾಡಿದ್ದೆವು - ೩.೩೦ಗೆ ನಾವು ಹೊರ ಹೋಗುವುದಾಗಿ ತಿಳಿಸಿದ್ದೆವು; ಆದರೆ ಸಮಯ ಈಗ ೩.೪೦ ಆಗಿ ಹೋಗಿದೆ! ಮೇಡಂ ಇತ್ತ ತಿರುಗುತ್ತಿಲ್ಲವೇಕೆ? ನಮ್ಮನ್ನು ಹೋಗಲು ಹೇಳುತ್ತಿಲ್ಲ - ಏಕೆ? ತಲೆಯಲ್ಲಿ ಹಲವಾರು ಇಂತಹ ವಿಚಾರಗಳ ಸರಮಾಲೆಯೇ ಸುತ್ತುತಿವೆ.

ಅಷ್ಟರಲ್ಲಿ ಸೂರಿ ನನ್ನನ್ನು ಕುರಿತು ಸಣ್ಣ ದನಿಯಲ್ಲಿ ಪಿಸುಗುಟ್ಟುತ್ತಾನೆ,
"ವಿನಿ! ಅವಿನಾಶ್ ಸರ್ ಕರೆದಿದ್ರಲ್ಲ ಫೋರಂ ಕೆಲಸಕ್ಕೆ? ಹೋಗೋಣ? ಮೇಡಂನ್ ಕೇಳು!"
ನಾನು, "ಸರಿ - ಸ್ವಲ್ಪ ಕಾಯೋಣ" ಅಂದೆ. ಮನಸ್ಸಿನಲ್ಲಿ ಕಾಯುವ ಇಷ್ಟ ಕಿಂಚಿತ್ತೂ ಇಲ್ಲ - ಆದರೆ ಮೇಡಂ ಯಾಕೆ ತಿರ್ಗ್ತಿಲ್ಲಾ ಗೋಡೆ ಬಿಟ್ಟು?

ಅಟೆಂಡರ್ ಒಬ್ಬರು ಬಂದರು ತರಗತಿಯೊಳಗೆ. ಅವಿನಾಶ್ ಸರ್ ಕರೆ ಕಳುಹಿಸಿರಬೇಕು ಅಂತ ಅಂದುಕೊಂಡು ಖುಶಿಯಾಯಿತು. ಅವರು ಒಳಬಂದವರೇ ಸೀದಾ ಮೇಡಂನ ಡೆಸ್ಕಿಗೆ ಹೋಗಿ ಮೇಡಂಗೆ ಕರೆ ನೀಡಿದರು. ಮೇಡಂ, ಅಟೆಂಡರ್ ತಂದ ಕಾಗದದ ಮೇಲೆ ಸಹಿ ಹಾಕಿ ಕಳುಹಿಸಿಬಿಟ್ಟರು... ಅರೆ! ನಮ್ಮನ್ನು ಕರೆಯಲು ಯಾರೂ ಬರಲಿಲ್ಲವೆ? ಛೆ! ಸಮಯ ೪ ಘಂಟೆ!

ಇನ್ನು ತಡೆಯುವುದರಲ್ಲಿ ಅರ್ಥವಿರಲಿಲ್ಲ. ಅಷರಲ್ಲಿ ಸೂರಿ ಮತ್ತೊಮ್ಮೆ ಕೇಳಿದ,
"ವಿನಿ, ಇಗ ಕೇಳೋಣ?"
ನಾನು,"ಸರಿ, ಮೇಡಂನ ಕೇಳ್ತಿನಿ", ಅಂದೆ.

ಮೇಡಂ ಇನ್ನೂ ಬೋರ್ಡಿನತ್ತ ಮುಖ ಮಾಡಿ ಬರೆಯುತ್ತಲೇ ಇದ್ದಾರೆ. ನಾನು ನನ್ನ ಜಾಗದಿಂದ ಎದ್ದು ಮೇಡಂನತ್ತ ಸದ್ದು ಮಾಡದೆ ಧಾವಿಸತೊಡಗಿದೆ. ತಪ್ಪನ್ನೇನು ಮಾಡಿರದಿದ್ದರೂ, ತರಗತಿಯನ್ನು ತಪ್ಪಿಸಿ ಹೋಗಲು ಅನುಮತಿ ಕೇಳಲು ಹೊರಟಾಗ, ಮನಸ್ಸಿನಲ್ಲಿ ಒಂದು ತೆರನೇಯ ದುಗುಡ - ಆತಂಕ. ನಾನು ಇನ್ನೇನು ಪೋಡಿಯಂ ಹತ್ತಿರ ಬಂದೆ ಎನ್ನುವಷ್ಟರಲ್ಲಿ ಎಲ್ಲರ ಗಮನ ನನ್ನತ್ತ; ಆದರೆ ಮೇಡಂ ಮಾತ್ರ ತಿರುಗುವ ಮನಸ್ಸನ್ನು ಇನ್ನು ಮಾಡಿಲ್ಲ. ಎಂತಹ ವಿಪರ್ಯಾಸ! ಮೆಲ್ಲನೆ ಮೇಡಂನ ಕರೆದೆ. ಆದರೆ ಅವರಿಂದ ಉತ್ತರ ಬರಲಿಲ್ಲ. ಬೋರ್ಡಿನ ಮೇಲೆ ಚಾಕ್ ಕೆರೆಯುವ ಸದ್ದು ಹುಡುಗರ ಗುಜುಗುಜುವಿನೊಡನೆ ಬೆರೆತು ಹೊಮ್ಮುತ್ತಿದೆ. ಮೇಡಂ ಮಾತ್ರ - ಊಹುಂ - ಆಲಿಸುತ್ತಿಲ್ಲ. ಅವರ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ.

ಸದ್ದು ಮಾಡುವ ಇಷ್ಟ ನನಗಿರಲಿಲ್ಲ (ತಪ್ಪು ಮಾಡಲು ಮೂಲ ಕಾರಣ!). ಮೆಲ್ಲನೆ ಪೋಡಿಯಂ ಹತ್ತಿದೆ. ಮೇಡಂನ ಪಕ್ಕ ಬಂದು ನಿಂತೆ. ಕೈ ಚಾಚಿದರೆ ಮುಟ್ಟುವಷ್ಟು ದೂರ. ಮೇಡಂ ನನ್ನನ್ನು ಇನ್ನೂ ಗಮನಿಸಿಲ್ಲ... ಇದನ್ನು ನಾನೂ ಗಮನಿಸಿಲ್ಲ.

ಬಾಯಿ ತೆರೆದೆ, "ಮೇಡಂ...."

ತರಗತಿಯಲ್ಲೆಲ್ಲೆಡೆ ಮಂದ ಗುಜುಗುಜು ಮಿಶ್ರಿತ ನಗು ತೇಲುತಿದೆ...

ಮೇಡಂ ನಾನು ಕರೆದಾಕ್ಷಣ ಬೆಚ್ಚಿ ಬಿದ್ದು, ಹೆದರಿಕೆಯಿಂದ ಕೂಡಿದ ಕಣ್ಣುಗಳಿಂದ ನನ್ನನು ನೋಡಿ ಚಾಕ್ ಇಲ್ಲದ ಕೈಯನ್ನು ತಮ್ಮ ಎದೆಗವಚಿ ತಮ್ಮ ಜೀವನದಲ್ಲಾದ ಈ ವಿಚಿತ್ರ ಶಾಕ್ನ್ ನಿಂದ ಹೊರ ಬರಲು ಯತ್ನಿಸಿದರು. ಯಶಸ್ಸನ್ನು ಕಂಡರೆನ್ನಿಸುತ್ತದೆ. ಅಷ್ಟರಲ್ಲಿ ನಾನು, "ನಾನು ಹಾಗು ಸುರೇಶ್ ಅವಿನಾಶ್ ಸರ್ ಅನ್ನು ಫೋರಂ ವಿಶಯವಾಗಿ ಈಗ ಭೆಟ್ಟಿಯಾಗಬೇಕು - ನಾವು ತರಗತಿಯಿಂದಾಚೆ ಹೋಗಬಹುದೆ?", ಎಂದು ಉಸುರಿಯಾಗಿತ್ತು.

ಮೇಡಂ ಇನ್ನು ಶಾಕ್ ನಲ್ಲಿ, ತಮ್ಮ ಗೋಣನ್ನು "ನನಗೆ ಸಮ್ಮತಿ ಇದೆ" ಎನ್ನುವ ರೀತಿಯಲ್ಲಿ ಅಲುಗಾಡಿಸಿದ್ದೇ ತಡ, ಅವರಿಗೆ ಧನ್ಯವಾದಗಳನ್ನರ್ಪಿಸಿ, ನಾನು ಮಾಡಿದ ಅವಾಂತರ ನೆನೆದುಕೊಳ್ಳುತ್ತ, ಸೂರಿಯೊಡನೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ನಮ್ಮೋಡನೆ ಕೊನೇಯ ಬೆಂಚಿನಲ್ಲಿ ಕುಳಿತಿದ್ದ ಸಹಪಾಠಿಗಳು ತಾವೂ ತರಗತಿಯಿಂದ ಹೊರ ಬರುವುದು ಹೇಗೆ ಎಂದು ಕೇಳಿದರಾದರೂ, ನಾನು ನನ್ನ ಈ ವರ್ತನೆಯಿಂದ ಪ್ರಭಾವಿತನಾಗಿದ್ದು, ನನ್ನ ತಲೆಯನ್ನು ಕೆರೆಯುತ್ತ "ಫೋರಂ ಕೆಲಸ" ಎಂದು ಹೇಳಿ ಅಲ್ಲಿಂದ ಹೊರಟೆ. ಪಾಪ, ಮೇಡಂ. :)