Monday, May 21, 2012

"ಕ್ಷಮಿಸು" ಎಂದಿತು ಅಂತರಾತ್ಮ


"ಕೆಟ್ಟ ಕನಸೇ ಇದು!?"
ತನಗೆ ತಾನೇ ಪ್ರಶ್ನಿಸಿಕೊಂಡ ಸುಜಯ್.
ಒಂದು ಕ್ಷಣ "ತಾನೆಲ್ಲಿದ್ದೇನೆ?", ಎನ್ನುವುದು ಪ್ರಶ್ನೆ ಬಂದಿತಾದರೂ ಯಾಕೋ ತಲೆಯ ಮೇಲೆ ಬೇತಾಳ ತಾಂಡವವಾಡುತ್ತಿರುವನೇನೋ ಎನ್ನುವಂತಹ ತಲೆ ನೋವು. ತನ್ನ ಬಲಗೈ ಎತ್ತಿ ತಲೆಗೆ ಇಡೋಣ ಅಂದುಕೊಂಡನಾದರೂ ಯಾಕೋ ಬಲಗೈ ಆಡುತ್ತಿಲ್ಲ; ನಿಶ್ತೇಜವಾಗಿ ಬಿದ್ದ ಮರದ ಕೊಂಬೆಯಂತಿತ್ತು ಅವನ ಬಲಗೈ. ತನಗಾಗಿದ್ದ ಆಯಾಸದಲ್ಲಿ, ನಿಧಾನವಾಗಿ, ಕಣ್ಣುಗಳನ್ನು ತೆರೆದ ಅವನು ತಲೆಯನ್ನು ಅಲುಗಾಡಿಸಲಾಗದೆ ತನ್ನ ಬಲಗೈಯನ್ನು ಗಮನಿಸಿದಾಗ ಅವನಿಗೆ ಆದದ್ದು ಆಘಾತ!
ಬಲಗೈಯನ್ನೂ ಯಾರೋ ಜಜ್ಜಿ ಮಾಂಸದ ಮುದ್ದೆಯ ಹಾಗೆ ಮಾಡಿ ಹಾಕಿದ್ದರು. ರಕ್ತ ಹೆಪ್ಪುಗಟ್ಟಿ ಹೆಣದ ಕೈಯಂತಾಗಿತ್ತು ಅದು. ಅವನಿಟ್ಟ ನೋವಿನ ಆಕ್ರಂದನ ದೂರದ ವರೆಗೆ ಪ್ರತಿಫಲಿಸಿದ ಹಾಗೆ ಅವನಿಗೆನ್ನಿಸಿತು. ಕಣ್ಣಿನಿಂದ ಹಾಗೆಯೇ ಕಂಬನಿಗಳ ಸರಮಾಗೆ ನೆಲಕ್ಕುರುಳಿದುವು. ಮೆಲ್ಲಗೆ ಜಿನುಗುತ್ತಿರುವ ಮಳೆಯಲ್ಲಿ ತಾನು ಬಿದ್ದಿರುವುದು ಯಾವುದೋ ಕ್ರೀಡಾಂಗಣದಲ್ಲಿ ಎಂದು ಅರಿವಾಯಿತು ಅವನಿಗೆ. ಕಷ್ಟ ಪಟ್ಟು ತನ್ನ ಎಡಗೈಯನ್ನು ತನ್ನ ತಲೆಗೆ ಮುಟ್ಟಿಸಿದಾಗ ಉರಿದಂತಾಯಿತು. ಮೆಲ್ಲಗೆ ತಲೆಯನ್ನು ತಿರುಗಿಸಿ ತನ್ನ ಕೈ ಬೆರಳುಗಳನ್ನು ಗಮನಿಸಿದ - ಅದು ತನ್ನ ರಕ್ತ; ತನ್ನ ತಲೆಗೆ ಯಾರೋ ಬಲವಾಗಿ ಹೊಡೆದಿದ್ದಾರೆ ಎಂಬುದನ್ನು ಕೂಗಿ ಹೇಳುವಂತಿತ್ತು. ತನ್ನ ಕಾಲುಗಳನ್ನು ಅಲುಗಾಡಿಸಲು ನೋಡಿದ - ಊಹೂಂ! ಆಗ್ತಿಲ್ಲ!
"ಅಮ್ಮ ಎಲ್ಲಿದ್ದಾಳೆ.... ಅಯ್ಯೋ! ಅವಳಿಗೆ ಏನು ಆಗದಿದ್ದಿರಲಿ ದೇವರೇ!
ಸಂಧ್ಯಾ ಸರಿಯಾಗಿ ಇದ್ದಾಳೆ ಅಂತ ತಿಳಿದುಕೊಳ್ಳುವುದು ಹೇಗೆ?
ನಾನೆಲ್ಲಿದ್ದೇನೆ? ನಾನಿನ್ನೂ ಯಾಕೆ ಉಸಿರಾಡುತ್ತಿದ್ದೇನೆ?", ಎಂದು ಹತ್ತು ಹಲವು ವಿಚಾರಗಳು ಕ್ಷಣಾರ್ಧದಲ್ಲಿ ಅವನ ಮೆದುಳಿನಲ್ಲಿ ಸುಳಿದಾಡಿದುವು.
ಸತ್ತ ಹೆಣದಂತೆ ತನ್ನನ್ನು ಮಾಡಿದವರ್ಯಾರು? ಯಾಕೆ? ತಾನು ಬದುಕುಳಿಯುವನೇ? ಮುಂದೇನು ಮಾಡುವುದು? ಎಂದೆಲ್ಲ ಅಂದುಕೊಂಡ...
ಅಷ್ಟರಲ್ಲಿ ದೂರದಿಂದ ಯಾರೋ ತನ್ನ ಹೆಸರನ್ನು ಕೂಗುತ್ತ ತನ್ನೆಡೆಗೆ ಓಡಿಕೊಂಡು ಬರುತ್ತಿರುವಂತೆ ಭಾಸವಾಯಿತು. ಚಿರಪರಿಚಿತ ದನಿ ಅದು.... ಯಾಕೋ ನಿದ್ದೆ ಬಂದಂತಾಗುತ್ತಿದೆ ಎಂದುಕೊಳ್ಳುತ್ತಿದ್ದಂತೆ ಕಣ್ಣರೆಪ್ಪೆಗಳು ಭಾರವಾಗತೊಡಗಿದುವು. ಮಿತ್ರ ಸುನೀಲ್ ನನ್ನು ನೋಡಿ ಸಣ್ಣ ನಗುವೊಂದನ್ನು ಬೀರಿ ಮೂರ್ಛೆ ಹೋದನು.
-- ೦ --
ಸುಜಯ್ ಒಬ್ಬ ಸಾಮಾನ್ಯ ಹುಡುಗ; ಆಟದಲ್ಲಿ ಬಹಳಷ್ಟು ಆಸಕ್ತಿ ಇದ್ದ ಕಾರಣ ತಾನು ಆಟವನ್ನೇ ತನ್ನ ವೃತ್ತಿಯನ್ನಾಗಿ ಸ್ವೀಕರಿಸಿದ್ದ. ಬೆವರು ಸುರಿಸಿ ನಿರಂತರವಾಗಿ ದುಡಿದು ಫೂಟ್ಬಾಲ್ ಕ್ರೀಡಾಪಟುವಾಗಿ ತನ್ನ ಊರಿನ ಸಣ್ಣದೊಂದು ಕ್ಲಬ್ ಸೇರಿಕೊಂಡಿದ್ದ. ಬಲಿಷ್ಠವಾದ ಮೈ - ಅಂದವಾದ ಮೈಕಟ್ಟು ಹೊಂದಿದ ಇವನಿಗೆ ಅಭಿಮಾನಿಗಳ ಕೊರತೆ ಇರಲಿಲ್ಲ. ಆಟವೇ ಸರ್ವಸ್ವವಾಗಿದ್ದರೂ ಹೊಟ್ಟೆಪಾಡಿಗೆ ಅದು ಸಾಕಾಗದು ಅನ್ನುವುದನ್ನು ಅರಿತು ತನ್ನ ವ್ಯಾಸಂಗವನ್ನೂ ನಿಷ್ಠೆಯಿಂದ ಮಾಡಿ ಮುಗಿಸಿ ಬಿ.ಏ. ಪದವೀಧರನಾದ. ಚಿಕ್ಕದೊಂದು ಕೆಲಸಕ್ಕೆ ಸೇರಿಕೊಂಡು ತನ್ನ ಅಮ್ಮನಿಗೆ ಆಸರೆಯಾಗಿದ್ದ. ಸುಮಾ, ಇವನ ತಾಯಿ, ಇವನನ್ನ ಹೆತ್ತಿಲ್ಲವಾದರೂ ತಾಯಿ ಕೊಡಬೇಕಾದ ಅಕ್ಕರೆ-ಪ್ರೀತಿಯನ್ನೆಲ್ಲ ಇವನಿಗೆ ಧಾರೆಯೆರೆದು ಬೆಳೆಸಿದ್ದಳು. ತನ್ನ ಗಂಡನಿಂದ ಅನಿವಾರ್ಯ ಕಾರಣಗಳಿಂದಾಗಿ ದೂರವಾದ ಇವಳ ಬದುಕಿನಲ್ಲಿ ಆಶಾಕಿರಣವಾಗಿ ಬಂದವನು ಸುಜಯ್.
ವೃತ್ತಿಯಿಂದ ವೈದ್ಯೆಯಾದ ಸುಮಾ, ಊರಿನ ಜನರಿಗೆಲ್ಲ "ಸುಮಕ್ಕ ಡಾಕ್ಟ್ರು" ಎಂದೇ ಪರಿಚಿತವಾಗಿದ್ದಳು. ಜೀವನದಲ್ಲಿ ಗಂಡನಿಂದ ದೂರವಾಗಿ ನೊಂದು ನಿಂತಾಗ, ತನ್ನ ವೃತ್ತಿಯನ್ನು ಪುನರಾರಂಭಿಸಬೇಕು ಎಂದು ಸಲಹೆಗಾಗಿ ಗುರುಗಳಾದ ಪ್ರೊ. ಸುಬ್ರಮಣ್ಯ ಅವರನ್ನು ಕಂಡು ಕೇಳಿದಾಗ ಅವರು ಸೂಚಿಸಿದ್ದು ಈ ಚಿಕ್ಕ ಗ್ರಾಮ - ಸಂಪಿಗೆಹಳ್ಳಿ.
"ಐದು ವರ್ಷ ಸುಮ್ಮನೆ ಕೂತಿದ್ದೆ ಅಂತ ನಿನ್ನ ವಿದ್ಯೆಯೇನು ನಿನ್ನ ಕೈ ಬಿಡೊಲ್ಲ. ಈ ಊರಿನಲ್ಲಿ ಸರಕಾರೀ ಆಸ್ಪತ್ರೆಯೇನೋ ಇದೆ... ಆದರೆ ವೈದ್ಯರಿಲ್ಲ. ಈ ಜನರಿಗೆ ನಿನ್ನಂತಹ ಪ್ರತಿಭಾನ್ವಿತ ಮಹಿಳೆಯ ಸಹಾಯ ಬೇಕು. ನಿನಗೆ ನೀನರಿಸುತ್ತಿರುವ ನೆಮ್ಮದಿ ಇಲ್ಲಿ ಸಿಗಬಹುದೇನೋ. ಏನಂತೀಯಾ?", ಎಂದು ಕೇಳಿದ್ದರು ಪ್ರೊಫೆಸ್ಸರ್, ಗ್ರಾಮದ ಬೀದಿಗಳಲ್ಲಿ ಸುಮಾಳನ್ನು ನಡೆಸಿಕೊಂಡು ಹೋಗುತ್ತಾ. ಸಂತಸದಿಂದ ಮುಗುಳ್ನಕ್ಕ ಸುಮಾ ತನಗೆ ಆಗಬಹುದು ಎಂದು ಸೂಚಿಸಿದಳು. ಜೀವನಕ್ಕೆ ಸಿಕ್ಕ ಹೊಸ ಗುರಿಯನ್ನು ತನ್ನೆಲ್ಲ ಏಕಾಗ್ರತೆಯಿಂದ, ನಿಷ್ಥೆಯಿಂದ ಮಾಡತೊಡಗಿದಳು. ತನಗೆ ಬೇಕಾದ ನಿಷ್ಠಾವಂತ ನರ್ಸುಗಳನ್ನು ಆಯ್ದುಕೊಂಡು ಎಲ್ಲ ಕಠಿಣ ಅಡೆತಡೆಗಳನ್ನು ದಾಟುತ್ತ ಆ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದಳು. ಹಗಲು-ರಾತ್ರಿಯೆನ್ನದೆ ದುಡಿದು ಗ್ರಾಮದ ಜನತೆಯ ಹಿತಕ್ಕಾಗಿ ಗ್ರಾಮದ ಮಗಳಾಗಿ ನಿಂತಳು. ಅದೆಷ್ಟು ಜನರಿಗೆ ಆಶಾಕಿರಣವನ್ನು ಒದಗಿಸಿ ಕೊಟ್ಟಳು ಅನ್ನುವುದಕ್ಕೆ ಲೆಕ್ಕವೇ ಇರಲಿಲ್ಲ. ಆಗಾಗ ಗುರುಗಳಾದ ಸುಬ್ರಮಣ್ಯರವರು ಭೇಟಿ ನಿಡಿ ವಿಚಾರಿಸಿಕೊಂಡು ಹೋಗುತ್ತಿದ್ದರು. ಗ್ರಾಮದಲ್ಲಿ ಜನರ ಆರೋಗ್ಯದ ಮೇಲೆ ಆಗಿದ್ದ ಪರಿಣಾಮ ಕಣ್ಣಿಗೆ ಎದ್ದು ಕಾಣುವಂತಿತ್ತು. ಮನಸ್ಸಿನಲ್ಲೇ ತನ್ನ ಶಿಷ್ಯೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎದೆ ಖುಷಿಯಿಂದ ಹಿಗ್ಗಿತ್ತು. ಗಾಯಕ್ಕೆ ಚುಚ್ಚುಮದ್ದಿನಿಂದ ಹಿಡಿದು ಹೆರಿಗೆ - ಎಲ್ಲ ಸುಮಾಳ ತೀಕ್ಷ್ಣ ಕಣ್ಣುಗಳ ಹಾಗು ಕುಶಲ ಕೈಗಳನ್ನು ದಾಟಿ ಮುಂದೆ ಸಾಗುತ್ತಿದುವು.
ಸುಮಾಳ ಜೀವನಕ್ಕೆ ಜಾಸ್ತಿಯೇನು ಅಲ್ಲದ ಅವಳ ಸರಕಾರೀ ಸಂಬಳ ಸಾಗುತ್ತಿತ್ತು; ಆದರೆ ಜನರ ಪ್ರೀತಿಯ ಸುಮಕ್ಕಾಳಿಗೆ ದವಸ-ಧಾನ್ಯ, ಹಾಲು ಮೊಸರು ಇತ್ಯಾದಿ ಬೇಡವೆಂದರೂ ಬಂದು ಮನೆಗೆ ತಲುಪುತ್ತಿತ್ತು. ಮೊದಮೊದಲು ನಿರಾಕರಿಸಲು ಪ್ರಯತ್ನಪಟ್ಟಳಾದರೂ ಜನರ ಅಕ್ಕರೆಗೆ ಸೋತು ಸುಮ್ಮನಾಗಿದ್ದಳು. ತನ್ನ ಮನೆ ಕೆಲಸಗಳಿಗಾಗಿ ಸೌಭಾಗ್ಯಳನ್ನು ನೆಮಿಸಿದ್ದಳು ಸುಮಾ. ಸೌಭಾಗ್ಯ ಸುಮಾಳಿಗೆ ಮನೆಯಾಳು ಆಗದೆ ಗೆಳತಿಯಂತಿದ್ದಳು. ತಮ್ಮ ಕಷ್ಟ-ಸುಖಗಳನ್ನು, ಊರ ವಿಷಯವನ್ನೂ ಸಮಯ ಸಿಕ್ಕಾಗ ಮಾತನಾಡುವುದು ಅವರ ಹವ್ಯಾಸವಾಗಿತ್ತು. ಆಸ್ಪತ್ರೆಯ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಳು ಸುಭಾಗ್ಯ. ಆದರೆ ಅವಳ ದುರ್ಭಾಗ್ಯಕ್ಕೆ ಸೌಭಾಗ್ಯಳ ಗಂಡ ಅವಳು ಗರ್ಭವತಿಯಾಗುತ್ತಿದಂತೆಯೇ ಅವಳನ್ನು ಬಿಟ್ಟು ನಾಪತ್ತೆಯಾಗಿದ್ದ. ಕುಡಿದು ಬಂದು ತನ್ನನ್ನು ಬಡಿಯುತ್ತಿದ್ದ ಗಂಡ ನಾಪತ್ತೆಯಾದ ಸುದ್ದಿ ಸ್ವಲ್ಪ ಮಟ್ಟಿಗೆ ಸಂತೋಷವನ್ನು ತಂದರೂ ತಾನು ಹೊರಲಿರುವ ಮಗುವಿನ ಬಗ್ಗೆ ಚಿಂತೆ ಕಾಡತೊಡಗಿತು ಅವಳಿಗೆ. ತನ್ನ ದುಃಖವನ್ನೂ ಸುಮಕ್ಕನಲ್ಲಿ ತೋಡಿಕೊಂಡಳು ಸೌಭಾಗ್ಯ. ಅಂದು, ತನ್ನ ತಂಗಿಯಂತಿದ್ದ ಸೌಭಾಗ್ಯಳ ಕೈಗಳನ್ನೂ ಮೃದುವಾಗಿ ಹಿಡಿದು, ತಾನು ಅವಳೊಂದಿಗೆ ಇದ್ದೇನೆ ಎಂದಿದ್ದಳು ಸುಮಾ.
ಹೀಗೊಂದು ದಿನ ಹೆರಿಗೆಯ ನೋವು ತಡೆಲಾಗದೆ ಆಸ್ಪತ್ರೆಗೆ ನಡೆದುಕೊಂಡು ಬಂದ ಸೌಭಾಗ್ಯಳ ಸ್ಥಿತಿ ಚಿಂತಾಜನಕವಾಗಿತ್ತು. ಸುಜಯನ ಆಗಮನವಾದದ್ದು ಆ ರವಿವಾರ. ಇನ್ನೂ ನೋವಿನಲ್ಲಿದ್ದ ಸೌಭಾಗ್ಯ ಸುಜಯನ ಮುಖ ನೋಡಿ ಸಂತಸದಲ್ಲಿಯೇ ಸುಮಾಳ ಕೈಗಳನ್ನೂ ಹಿಡಿದು,"ಅಕ್ಕಾ, ನಾನು ಶಿವನ ಪಾದ ಸೇರ್ಕೊಂಡ್ರೆ ನೀವು ನನ್ನ ಮಗೂನ ಸಾಕ್ತೀರಲ್ಲಕ್ಕಾ?", ಎಂದು ಕಣ್ಣಿರಿಟ್ಟಿದ್ದಳು. 
ಅವಳಿಗೆ ಪುಟ್ಟಗೆ,"ಹಾಗೆನ್ನಬಾರದು! ನಿನಗೇನೂ ಆಗೋದಿಲ್ಲ. ನಾನಿದ್ದೀನಿ", ಎಂದು ಗದರಿಸಿದ್ದಳು ಸುಮಾ. ಮನಸ್ಸಿನಲ್ಲಿ ದುಗುಡವಿತ್ತು - ಸೌಭಾಗ್ಯಳ ಸ್ಥಿತಿ ನಿಜಕ್ಕೂ ಚಿಂತಾಜನಕವೇ ಆಗಿತ್ತು. ಪಟ್ಟಣದಿಂದ ಪರಿಣತ ವೈದ್ಯರನ್ನು ಕರೆತರಲಾಯಿತು. ಬಹಳಷ್ಟು ಪ್ರಯತ್ನಗಳು ನಡೆದುವು; ಆದರೆ ಅವಳ ಆರೋಗ್ಯದಲ್ಲಿ ಯಾವ ಸುಧಾರಣೆಯೂ ಕಾಣಲಿಲ್ಲ. ಇದಾದ ಎರಡು ದಿನಗಳಲ್ಲಿ ಅವಳ ಹೃದಯ ನಿಂತು ಅವಳು ತೀರಿಕೊಂಡಳು. ಹಿಂದೆಂದೂ ಆಗದಷ್ಟು ದುಃಖ ಸುಮಾಳಿಗೆ ಆಗಿತ್ತು. ತನ್ನ ಗೆಳತಿಯನ್ನು ಉಳಿಸಿಕೊಳ್ಳಲಾಗಿರಲಿಲ್ಲ. ಸುಜಯನ್ನು ಸಾಕುವ ಹೊಣೆ ಅವಳದಾಗಿತ್ತು. 
ಸುಜಯನನ್ನು ದತ್ತು ತಗೆದುಕೊಂಡು ಪ್ರೀತಿಯಿಂದ ಸಾಕಿದಳು.
-- ೧ --
ಸಾಮಾನ್ಯವಾಗಿ ರಾತ್ರಿಯಾಗುವುದರೊಳಗೆ ಮನೆ ಸೇರಿಬಿಡುವ ಸುಜಯ್ ಅಂದು ಮನೆಗೆ ಬರ್ದಿದ್ದನ್ನು ಗಮನಿಸಿ ಸುಮಾಳಿಗೆ ದಿಗಿಲಾಯಿತು. ಹೇಳದೆ ಎಲ್ಲೂ ಹೋಗುವನಲ್ಲ ಸುಜಯ್. ಇಂದು ತನ್ನ ಫೋನನ್ನು ತಗೆದುಕೊಳ್ಳದೆ ಬೇರೆ ಹೋಗಿದ್ದಾನೆ. ಏನು ಮಾಡುವುದು ಎಂದು ತೋಚದೆ ಸುನೀಲನಿಗೆ ಕರೆ ಮಾಡಿ ತಿಳಿಸಿದಳು ಸುಮಾ. ದಿಗಿಲು ಮಾಡಿಕೊಳ್ಳಬಾರದು ಎಂದು ತಿಳಿ ಹೇಳಿ, ತಾನು ಹುಡುಕುವುದಾಗಿ ತಿಳಿಸಿ, ಮಲಗಲು ಹೇಳಿದನು ಅವನು. ತನ್ನ ಅನ್ಯ ಮಿತ್ರರನ್ನು ಫೋನಾಯಿಸಿ ಸುಜಯನು ಕಾಣದಿರುವ ವಿಷಯವನ್ನೂ ತಿಳಿಸಿ ಅಲ್ಲೇನಾದರೂ ಬಂದಿರುವನೆನು ಎಂದು ಕೇಳಿದನು. ಎಲ್ಲೂ ಇಲ್ಲದ್ದನ್ನು ತಿಳಿದು ಸ್ವಲ್ಪ ಗಾಬರಿಗೊಂಡನಾದರೂ ಸುಜಯನ ತಾಯಿಗೆ ಕರೆ ಮಾಡಿ ತಾನು ಮಾರನೆಯ ದಿನ ಬೆಳಕಾಗುತ್ತಲೇ ಹುಡುಕಲು ಶುರು ಮಾಡುವುದಾಗಿ ಹೇಳಿ, ಸುಜಯ ಎಲ್ಲೆ ಇದ್ದರೂ ಸರಿಯಾಗಿ ಇರುವನು ಎಂದು ಹೇಳಿ, ಚಿಂತೆ ಮಾಡಬಾರದೆಂದು ಮತ್ತೆ ತಿಳಿ ಹೇಳಿ ಬೆಳಕು ಹರಿಯಲು ಕಾಯತೊಡಗಿದನು. ಮಳೆಗಾಲವಾದ ಕಾರಣ ಮೆಲ್ಲಗೆ ಜಿನುಗುತ್ತಿರುವ ಮಳೆಯಲ್ಲಿ ಬೆಳಗಿನ ಜಾವ ೫ ಘಂಟೆಗೆ ಎದ್ದು ತನ್ನ ಬೈಕಿನಲ್ಲಿ ಗ್ರಾಮದ ಸುತ್ತ ತಿರುಗಾಡ ತೊಡಗಿದನು. ಗೊತ್ತಿರುವ ಜಾಗಗಳನ್ನೆಲ್ಲ ಸುತ್ತಿದನು. ಆರು ಘಂಟೆಗಳು ಕಳೆದುವು ಆದರೆ ಸುಜಯನ ಪತ್ತೆ ಇರಲಿಲ್ಲ. ಇತ್ತ ಸುಮಾ ತನ್ನ 
ಮಗನ ಮೇಲಿನ ಕಾಳಜಿಯಿಂದ ಮಲಗದೆ ದುಃಖದಲ್ಲಿ ಮುಳುಗಿದ್ದಳು. ಇನ್ನೇನು ಹುಡುಕಾಟ ಮುಗಿಯಿತು ಅನ್ನುವಷ್ಟರಲ್ಲಿ ಸುಜಯನು ಕೂಗಿದಂತೆ ಭಾಸವಾಯಿತು. ಗ್ರಾಮದ ಸರಹದ್ದಿನ ಮೇಲೆ ನಿಂತಿದ್ದ ಸುನೀಲನು ತಡ ಮಾಡದೆ ಸದ್ದು ಬಂದಲ್ಲಿ ಓಡತೊಡಗಿದನು. ಸುಮಾರು ಇನ್ನೂರು ಮೀಟರಿನಷ್ಟು ದೂರದಲ್ಲಿ ರಕ್ತದಲ್ಲಿ ಮುಳುಗಿದ್ದ ಆಕ್ರತಿಯೊಂದು ಕಂಡು,"ಸುಜಯ್!...", ಎಂದು ಕೂಗುತ್ತ ಅತ್ತ ಓಡಿದನು. ಇನ್ನೈದು ನಿಮಿಷಗಳಲ್ಲಿ ಅಲ್ಲೊಂದು ಅಂಬುಲ್ಯೆನ್ಸ ಬಂದು ಮಾಂಸದ ಮುದ್ದೆಯಾಗಿದ್ದ ಸುಜಯನನ್ನು ಆಸ್ಪತ್ರೆಗೆ ವೊಯ್ಯಲು ಅಣಿಯಾಯಿತು.
ವಿಷಯ ಗೊತ್ತಾದೊಡನೆ ಆಸ್ಪತ್ರೆಗೆ ಧಾವಿಸಿದ ಸುಮಾ, ಮಗನ ಅವಸ್ತೆಯನ್ನು ಕಂಡು ದಂಗಾದಳು. ಎಂದೂ ಅತ್ತಿರದ ಸುಮಾ, ಅಂದು ಭೋರ್ಗರೆದು ಅತ್ತಳು. ದುಃಖ ಉಮ್ಮಳಿಸಿ ಬರುತ್ತಿತ್ತು. ತನ್ನ ಅನುಭವದಿಂದ ಇಂತಹ ಕೇಸಿನಲ್ಲಿ ಪೇಶಂಟ್ ಬದುಕುಳಿಯುವ ಸಾಧ್ಯತೆ ಎಷ್ಟು ಕಡಿಮೆ ಅನ್ನುವುದು ಅವಳಿಗೆ ಗೊತ್ತಿತ್ತು. ಬದುಕುಳಿದರೂ ಮುಂದಿನ ಜೀವನ ಎಷ್ಟು ಕಠಿಣ ಎಂದು ಅವಳಿಗೆ ಬೇರೆಯವರು ಹೇಳಬೇಕಾಗಿರಲಿಲ್ಲ. ಮಗ ಬದುಕುಳಿದರೆ ಸಾಕು ಎಂದು ಪ್ರಾರ್ಥಿಸ ತೊಡಗಿದಳು.
ಒಂದು ದೊಡ್ಡ ನಿದ್ರೆಯಿಂದ ಎದ್ದೆನೇನೋ ಎನ್ನುವ ಭಾವದಿಂದ ಕಣ್ಣರಳಿಸಿದ ಸುಜಯನಿಗೆ ತನ್ನ ಪಕ್ಕದಲ್ಲಿ ಕುಳಿತ ತನ್ನ ತಾಯಿಯನ್ನು ಕಂಡು ಎಲ್ಲಿಲ್ಲದ ಸಂತೋಷವಾಯಿತು. "ಅಮ್ಮಾ" ಎಂದವನೇ ತನ್ನ ಕಣ್ಣುಗಳಿಂದ ಆನಂದಬಾಷ್ಪವನ್ನು ಹರಿಸಿದನು. ಸತತವಾಗಿ ನಿದ್ದೆಗೆಟ್ಟು ತನಗಾಗಿಯೇ ಕಾಯುತ್ತ ಕುಳಿತಿದ್ದ ಆ ತಾಯಿಯನ್ನು ಕಂಡು ಸುಜಯನಿಗೆ ಬೇಸರವಾಯಿತು. ಹಿಂದೆಂದೂ ತಾಯಿಯನ್ನು ಕಾಯಿಸಿದವನಲ್ಲ ಸುಜಯ್. ಇರುವುದನ್ನು ನೇರವಾಗಿ ಹೇಳಿ ಅಭ್ಯಾಸ ಅವನಿಗೆ. ತಾನು ಯಾರು ಎಂದು ತನ್ನ ಸಾಕು-ತಾಯಿ ತನ್ನ ೧೦ ನೇಯ ಹುಟ್ಟು ಹಬ್ಬದಂದು ಹೇಳಿದಾಗ ಸಮಾಧಾನದಿಂದ ಕೇಳಿಸಿಕೊಂಡು ತಡವಿಲ್ಲದೆ, "ನೀನು ನನ್ನವ್ವ. ಅಷ್ಟು ಸಾಕು ನನಗೆ", ಎಂದಿದ್ದನು ಅವನು. ಸುಮಾಳಿಗೆ ಅಂದು ಮನಸ್ಸಿನಿಂದ ಒಂದು ಭಾರ ಕಡಿಮೆಯಾಗಿತ್ತು. ಮಗನ ಸಂಯಮ ಹಾಗು ಪ್ರೀತಿಯನ್ನು ಕಂಡು ಖುಷಿಯಲ್ಲಿ ತೇಲಿ ಹೋಗಿದ್ದಳು ಅವಳು. ಒಂದೆಡೆ ಅಮ್ಮ, ಇನ್ನೊಂದೆಡೆಯಲ್ಲಿ ಸುನೀಲ್ ಕುಳಿತಿರುವುದನ್ನು ಕಂಡನು. ಅವನತ್ತ ಮುಗುಳ್ನಕ್ಕು ಅವನಿಗೆ ಧನ್ಯವಾದಗಳನ್ನು ಹೇಳಿದನು. ಆದರೆ ತನ್ನ ಹೆಂಡತಿಯಾದ ಸಂಧ್ಯಾ ಕಾಣುತ್ತಿಲ್ಲವಲ್ಲ ಎಂಬ ಚಿಂತೆಯ ಗೆರೆಗಳು ಅವನ ಹಣೆಯ ಮೇಲೆ ಮೂಡತೊಡಗಿದ್ದನ್ನು ಗಮನಿಸಿದ ಸುಮಾ, "ಸಂಧ್ಯಾ ಮನೆಯಲ್ಲಿದ್ದಾಳೆ; ಇನ್ನೇನು ಬರ್ತಾಳೆ", ಎಂದುಬಿಟ್ಟಳು. ಸುನೀಲ್ ಅವಳತ್ತ ಅಚ್ಚರಿ ಕಣ್ಣುಗಳನ್ನು ಹಾಯಿಸಿದನಾದರೂ ಏನನ್ನೂ ಮಾತನಾಡಲಿಲ್ಲ.
ಸುಜಯನಿಗೆ ಸ್ವಲ್ಪ ಔಷಧಿ ಮಿಶ್ರಿತ ಗ್ಲೂಕೋಸ್ ಏರಿಸುತ್ತಿದಂತೆಯೇ ಅವನು ಮತ್ತೆ ನಿದ್ದೆಗೆ ಜಾರಿದ. ಐದು ಶಸ್ತ್ರಚಿಕಿತ್ಸೆಗಳು ಹಾಗು ಮೂರು ತಿಂಗಳ ಕೋಮಾದ ನಂತರ ಮೊದಲನೆಯ ಬಾರಿ ಎದ್ದಿದ ಸುಜಯ್. ಅವನು ಚೇತರಿಸಿಕೊಳ್ಳುವ ಹಾದಿಯಲ್ಲಿ ಇದೊಂದು ಪುಟ್ಟ ಹೆಜ್ಜೆಯಾಗಿತ್ತು. ಅವನ ಬಲಗೈಯನ್ನು ಕತ್ತರಿಸಬೇಕಾಗಿ ಬಂದಿತ್ತು. ತಾಯಿಯ ಅನುಮತಿ ಪಡೆದು ಅದನ್ನು ಮಾಡಲಾಯಿತು. ಕಾಲುಗಳೆರಡರಲ್ಲೂ ತೆಜವಿರಲಿಲ್ಲ - ಸರಿಯಾಗಲು ಬಹಳಷ್ಟು ಸಮಯ ಬೇಕಾಗುವುದೆಂದು ಸುಮಾಳಿಗೆ ಚೆನ್ನಾಗಿ ಗೊತ್ತಿತ್ತು. ಇನ್ನೂ ದೇಹದ ಮೇಲೆ ಉಳಿದ ಗಾಯಗಳು ಮಾಸಲು ಹಲವಾರು ತಿಂಗಳುಗಳೇ ಕಳೆಯಬೇಕಿತ್ತು. ಇನ್ನೂ ಮನಸ್ಸಿಗೆ ಆದ ಹಾಗು ಆಗಲಿರುವ ಗಾಯಗಳು ಸುಜಯನನ್ನು ಅದೆಷ್ಟು ಶಿಥಿಲಗೊಳಿಸಲಿವೆಯೋ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಅವನು ಫೂಟ್ಬಾಲ್ ಆಡುವುದು ಕ್ರಮೇಣ ಸಾಧ್ಯವಿಲ್ಲವೆಂದು ವೈದ್ಯರು ಸುಮಾಳಿಗೆ ಹೇಳಿಯಾಗಿತ್ತು.
-- ೨ --
ಮಾರನೇಯ ದಿನ ಸುಜಯ್ ಎದ್ದಾಗ,"ಸಂಧ್ಯಾ ಎಲ್ಲಿ...?",ಎಂದು ಕೇಳಿದ.
"ಅವಳು ಇಲ್ಲಿ ಇಲ್ಲಪ್ಪ. ತಾವರೆಕೊಪ್ಪದ ಕಾರಾಗೃಹದಲ್ಲಿ ಇಟ್ಟಿದ್ದಾರೆ ಅವಳನ್ನು... ಉಗ್ರವಾದ ಹಾಗು ನಿನ್ನನ್ನು ಕೊಲ್ಲುವ ಪಿತೂರಿ ಮಾಡಿದ ಆರೋಪದ ಮೇಲೆ..ನೆನ್ನೆ ನೀನು ಮೂರು ತಿಂಗಳ ದೊಡ್ಡ ನಿದ್ರೆಯ ನಂತರ ಎದ್ದಿದ್ದ ಕಾರಣ ನಾನು ಈ ವಿಷಯವನ್ನೂ ನಿನ್ನಿಂದ ಮುಚ್ಚಿ ಇಟ್ಟಿದ್ದೆ... ನಿನ್ನ ಅಮ್ಮನ್ನ ಕ್ಷಮಿಸಪ್ಪ...", ಎಂದಳು ಸುಮಾ, ಕೈ ಜೋಡಿಸುತ್ತ. ಅವಳ ಮುಖದ ಮೇಲೆ ಯಾವ ಭಾವವೂ ಇರಲಿಲ್ಲ; ಆದರೆ ಕಂಬನಿಗಳೆರಡು ಉರುಳುವುದರೋಳಗಾಗಿ ಅವಳು ಅವುಗಳನ್ನು ಒರೆಸಿ ಹಾಕಿದ್ದಳು.
"ಸಂಧ್ಯಾ?!...", ಎಂದವನೇ ದಿಗ್ಭ್ರಾಂತನಾದ ಸುಜಯನಿಗೆ ಏನು ಹೇಳಬೇಕೆಂಬುದು ತೋಚದಂತಾಗಿ ಬಿಕ್ಕಳಿಸತೊಡಗಿದನು.
-- ೩ --
ಸಂಧ್ಯಾ ಸುಜಯನ ಬಾಲ್ಯ ಸ್ನೇಹಿತೆ.ಶಾಲೆಯಿಂದ ಡಿಗ್ರೀ ವರೆಗೂ ಜೊತೆಗೆ ಓದಿದ್ದವರು - ಸುನೀಲ್,ಸುಜಯ್ ಹಾಗು ಸಂಧ್ಯಾ. ಶಾಲೆಯಲ್ಲಿದ್ದಾಗ. ರವಿವಾರ ಬಂದರೆ ಮುಗಿಯಿತು, ಸುಮಾಳಿಗೆ ತಲೆನೋವು ಶುರು. ಮೂವರು ಮಿತ್ರರು ಸೇರಿ ಊರು ಸುತ್ತುವುದೇ ಕೆಲಸವೆಂಬಂತೆ ಮನೆಯಿಂದ ಹೊರ ಬಿದ್ದವರೇ ಮನೆ ಹೊಕ್ಕುತ್ತಿದ್ದದ್ದು ಕತ್ತಲು ಕವಿದ ಮೇಲೆ. ಮನೆಗೆ ಬಂದ ಮೇಲೆ ಹಿರಿಯರಿಂದ ಪೆಟ್ಟು ತಿಂದು ಅಳುವ ಪ್ರಕ್ರಿಯೆ ಪ್ರತಿ ರವಿವಾರ ನಡೆದೇ ನಡೆಯುತ್ತಿತ್ತು. ಪೆಟ್ಟು ತಿನ್ನಲು ಕಾರಣಗಳೇನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ - ಅವುಗಳು ಇವರನ್ನೇ ಹುಡುಕಿಕೊಂಡು ಬರುತ್ತಿದ್ದುವು. ಮನೆಯ ಮುಂದೆ ಕ್ರಿಕೆಟ್ ಆಡುತ್ತಿರುವಾಗ ಸುಜಯನು ಬಾರಿಸಿದ ಪರ್ಫೆಕ್ಟ್ ಸ್ಕ್ವೇರ್ ಕಟ್ ಎಲ್ಲರ ಕಣ್ಣೆದುರಲ್ಲಿ ಸ್ಲೋ ಮೋಷನ್ನಿನಲ್ಲಿ ಎಂಬುವಂತೆ ಎದುರುಮನೆ ತಿಮ್ಮಕ್ಕನ ಕಿಟಕಿಯ ಗಾಜನ್ನು ತಿವಿದು ಒಳಹೊಕ್ಕಾಗ ಗಾಜು ಒಡೆದ ಸದ್ದಿಗಿಂತ ದೊಡ್ಡದಾದ ತಿಮ್ಮಕ್ಕನ ಗುಡುಗು,"ಯಾವನೋ --ಮಗ ಚೆಂಡು ಕಿಟಕಿಗೆ ಹೊಡೆದಿದ್ದು! ಎಷ್ಟ್ ಸಲಾ ಹೇಳ್ಬೇಕು ನಿಮಗೆ ಮಂಗ - ಪೋಲಿಗಳಾ!! ಬಾಲು ಕೊಡೊಲ್ಲ ನಾನು!". ಅಂದು ಅಮ್ಮನಿಂದ ಅವನ ಕಲೆಯ ಪ್ರದರ್ಶನಕ್ಕೆ ಸಿಕ್ಕಿದ್ದು ಕಪಾಳ ಮೋಕ್ಷ. ಚಿಕ್ಕ ಚೆಂಡಿನಿಂದ ದೊಡ್ದದಕ್ಕೆ (ಅಂದರೆ ಫುಟ್ಬಾಲ್ಗೆ) ತೆರ್ಗಡೆಯಾಗಿದ್ದೇ ಅಂದು. ಪಕ್ಕದ ಬೀದಿಯಲ್ಲಿ ಬುಗುರಿ ಆಡುತ್ತಿದ್ದಾಗ ಸಂಧ್ಯಾಳಿಗೆ ಕಲಿಸಿ ಕೊಡಲು  ಹೋಗಿ ಹೊಡೆದ ಗಿಚ್ಚಿ ಬೊಕ್ಕ ತಲೆ ಪಾಪಣ್ಣನ ತಲೆಗೆ ಬಿದ್ದು ತೂತು ಕೊರೆದಾಗ ಕಾಲು ಕಿತ್ತಿದ್ದು ಬಹಳ ಹೊತ್ತು ಸುಜಯನಿಗೆ ಉಳಿಸಲಿಲ್ಲ; ಅಮ್ಮನು ನೀಡಿದ ಚಾಟಿ ಏಟು ಬೆನ್ನ ಮೇಲೆ ಚಿತ್ರ-ವಿಚಿತ್ರ ನಕಾಶೆಗಳನ್ನ ಮೂಡಿಸಿತ್ತು.ಅಲ್ಲಿಗೆ, ರೋಡಿನಲ್ಲಿ ಆಡುವುದು ಬಂದ್! ಇನ್ನು ಮುಂದೆ ಶಾಲೆಯ ಕ್ರೀಡಾಂಗಣದಲ್ಲಿ ಹೋಗಿ ಆಡಬೇಕು, ಸರಿಯಾದ ಸಮಯಕ್ಕೆ ಮನೆಗೆ ಹಿಂದಿರುಗಬೇಕು ಅನ್ನುವ ಅಪ್ಪಣೆಯಾಗಿತ್ತು ಅಮ್ಮನಿಂದ. ಪಾಲಿಸದೇ ಇರುವುದು ಇದೆಯೇ?
ಇವರ್ಯಾರಿಗೂ ಕೈಯಲ್ಲಿ ಕಾಸು ನೀಡಲಾಗುತ್ತಿರಲಿಲ್ಲ; ಹಾಗಾಗಿ ಕಾಲುಗಳೇ ಇವರಿಗೆ ಗಾಲಿ, ಹೊಳೆಯ ನೀರೆ ಪೆಟ್ರೋಲ್ ಹಾಗು ಕದ್ದ ಪೇರಲೆಯ ಹಣ್ಣು - ಮಾವಿನ ಕಾಯಿ ಸೈಡ್ ಡಿಷ್. ಇದಕ್ಕೆಲ್ಲ ಪೊರಕೆಯ ಹೊಡೆತ ಮನೆಗೆ ಮರಳಿದ ಕೂಡಲೆ ಅನ್ನುವುದು ಇವರಿಗೆ ಗೊತ್ತು; ಆದರೆ, ಹೊಡೆತಕ್ಕೆ ಹೆದರಿ ತಡೆಯುವ ಜೀವಗಳಾಗಿರಲಿಲ್ಲ ಅವು. ತಮ್ಮ ದಾರಿಯನ್ನು ತಾವು ನಡೆದೇ ತೀರುತ್ತೇವೆ ಎಂದು ಪಣ ತೊಟ್ಟ ಪುಟಾಣಿಗಳ ಸಂಗ ಅದು. ಮೊದಲಿಂದಲೂ ಸುಜಯನಿಗೆ ಸಂಧ್ಯಾಳ ಮೇಲೆ ಪ್ರೀತಿ - ಅಕ್ಕರೆ. ತಮ್ಮ ಕರಾಮಾತುಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಬೆತ್ತದ ಏಟು ತಿನ್ನಲು ಮೊದಲು ಕೈ ಮುಂದಾಗುತ್ತಿದ್ದದ್ದು ಸುಜಯನದ್ದು - ಜೊತೆಗೆ, ಸಂಧ್ಯಾಳದ್ದು ಇದರಲ್ಲಿ ಯಾವ ತಪ್ಪೂ ಇಲ್ಲ ಅನ್ನುವ ಧೃಡ ಹೇಳ್ಕೆ. ಮುಂದೊಮ್ಮೆ ತನ್ನ ಇದೆ ಸಂಧ್ಯಾಳ ಪರ ವಹಿಸುವುದು ತನ್ನನ್ನು ಜೀವಂತ ಶವವನ್ನಾಗಿ ಮಾಡುವುದು ಎನ್ನುವುದು ಅವನಿಗೆಲ್ಲಿ ಗೊತ್ತಿತ್ತು?
ಮಕ್ಕಳು ದೊಡ್ದವರಾದರು. ತಮ್ಮ ಗುರಿಗಳನ್ನು, ಅವನ್ನ ಸೇರುವ ದಾರಿಯನ್ನು ಅವರೇ ರೂಪಿಸಿಕೊಂಡರು. ಸುಜಯನಿಗೆ ಅವನ ತಾಯಿಯ ಪ್ರೋತ್ಸಾಹವಿತ್ತು. ಸುನೀಲನು ತನ್ನ ಸ್ವಂತ ಉದ್ಯೋಗವನ್ನು ಶುರು ಮಾಡಿದ. ಸಂಧ್ಯಾ ಸಮಾಜ ಸೇವಕಿಯಾಗಿ ಜನರ ಹಿತಕ್ಕಾಗಿ ಹೋರಾಡಲು ನಿರ್ಧರಿಸಿದ್ದಳು.
ಆದರೆ, ಇದರ ಮಧ್ಯ ಆದ ಒಂದು ವಿಚಿತ್ರ ಬೆಳವಣಿಗೆ ಎಲ್ಲರನ್ನೂ ಬೆಚ್ಚಿ ಬೀಳಿಸಿತು. ಸಮಾಜ ಸೇವಕಿ ಆಗಿದ್ದ ಸಂಧ್ಯಾ, ಉಗ್ರವಾದಿಗಳ ಸಂಘವೊಂದನ್ನು ಅರಿಯದೆ ಸೇರಿ, ಅದರಿಂದ ಬಿಡುಗಡೆಯಾಗಲಾರದೆ ಒದ್ದಾಡುತ್ತಿದ್ದಳು. ಇದನ್ನರಿತ ಸುಜಯ್ ತನ್ನ ಗೆಳೆಯ ಸುನೀಲ್ನೊಡನೆ ಸೇರಿ ಅವಳ ಸಹಾಯಕ್ಕಿಳಿದರು. ಪೋಲೀಸರ ಸಹಾಯ ಪಡೆದು ದುಷ್ಟರನ್ನು ಬಹು ಮಟ್ಟಿಗೆ ಹಿಡಿಸಿ ಹಾಕುವುದರಲ್ಲಿ ಸಮರ್ಥರಾದರು. ಇದಾದ ಕೆಲವೇ ದಿನಗಳಲ್ಲಿ ಸಂಧ್ಯಾ ಸುಜಯನ್ನ ಮದುವೆಯಾದಳು.ಇನ್ನೇನು ಎಲ್ಲ ಸರಿ ಹೋಯಿತು ಅನ್ನುವಸ್ಟರಲ್ಲಿ ಉಗ್ರರ ಟೋಳಿಯೊಂದು ಪ್ರತಿಕಾರಕ್ಕೆ ಹಾತೊರೆಯುತ್ತಿತ್ತು. ಎದುರಾಳಿಗೆ ಹಿಂಸೆ ಕೊಡುವ ಉದ್ದೇಶವುಳ್ಳ ಕ್ರುರಿಗಳಾದ ಅವರು ಹೊಂಚನ್ನು ಹಾಕುತ್ತ, ಸರಿಯಾದ ಸಮಯಕ್ಕೆ ಕಾಯುತ್ತ ಕುಳಿತರು. ಸುಜಯನ ಮನೆಯಲ್ಲಿ, ಗುಪ್ತವಾಗಿ, ಸಂಧ್ಯಾ  ಉಗ್ರವಾದಿಗಳಲ್ಲಿ ಒಬ್ಬಳು - ತನ್ನ ಗಂಡನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದಾಳೆ ಎನ್ನುವಂತೆ ಪುರಾವೆಗಳನ್ನು ಸೃಷ್ಟಿಸಿ ನೆಟ್ಟರು. ಕೆಲಸದ ನಿಮಿತ್ತ ಪಕ್ಕದ ಊರಿನಿಂದ ನಡೆದು ಬರುತ್ತಿದ್ದ ಸುಜಯನಿಗೆ ಹಿಂದಿನಿಂದ ತಲೆಯ ಮೇಲೆ ಉಗ್ರರಲ್ಲೊಬ್ಬರು ಯಾರೋ ಬಲವಾಗಿ ಹೊಡೆದರು. ಸುಜಯ್ ನೆಲಕ್ಕೆ ಕುಸಿದು ಬಿದ್ದ. ಕೈಲಿದ್ದ ಕಬ್ಬಿಣದ ಸಲಾಖೆಗಳಿಂದ ಅವನ ಮೈ ಹಣ್ಣು-ಹಣ್ಣಾಗುವ ವರೆಗೆ ಚಚ್ಚಿದರು. ಮೂರ್ಛೆ ಹೋದ ಇವನು ಇನ್ನೇನು ಬದುಕಿಯಾನು ಎಂದು ದೂರದ ಬಯಲಿನಲ್ಲಿ ಎಸೆದು ತಲೆ ಮರೆಸಿಕೊಂಡರು. ಇತ್ತ ಅನಾಮಧೇಯರಾಗಿ ಪೊಲೀಸ್ ಸ್ಟೇಷನ್ ಗೆ ಕರೆ ಹಚ್ಚಿ ಪುರಾವೆಯ ಬಗ್ಗೆ  ಹೇಳಿದರು. ಮನೆಗೆ ಬಂದು ತಪಾಸಣೆ ನಡೆಸಿದ ಅವರು ಸಂಧ್ಯಾಳನ್ನು ಬಂಧಿಸಿದರು - ಪುರಾವೆಗಳು ಬಲವಾಗಿದ್ದುವು.
-- ೪ --
ಬಿಕ್ಕಳಿಸುತ್ತಿದ್ದ ಸುಜಯನಿಗೆ ಸಮಾಧಾನ ಹೇಳಿದ ಅವನಮ್ಮ ನಡೆದದ್ದನ್ನು ನಿಧಾನವಾಗಿ ತಿಳಿ ಹೇಳಿದಳು. ಸುಜಯನ ಕೈ-ಕಾಲುಗಳು ಪ್ಲಾಸ್ಟರ್ ನಲ್ಲಿ ಹೊಚ್ಚಲ್ಪಟ್ಟಿದ್ದುವು. ಬಲಗೈ ಇನ್ನಿಲ್ಲದಿರುವುದನ್ನು ಚಿಕ್ಕ ಮಾತೇನೋ ಅನ್ನುವ ಹಾಗೇ ತೆಲಿಸಿದಳು. ಕಾಲಿನಲ್ಲಿ ಸ್ಥಿರತೆ ಕ್ರಮೇಣ ಬರುವುದು ಆದರೆ ಸ್ವಲ್ಪ ಕುಂಟು ಇರುವುದು ಎಂದು ಸೂಕ್ಷ್ಮವಾಗಿ ತಿಳಿಸಿದಳು. ಎಲ್ಲದ್ದಕ್ಕಿಂತ ಹೆಚ್ಚಾಗಿ ತಾನು ಅವನೊಂದಿಗೆ ಇದ್ದು ಇದನ್ನೆಲ್ಲಾ ಜೊತೆಗೆ ಸರಿ ಮಾಡುವುದಾಗಿ ಹೇಳಿದಳು. ಸಂಧ್ಯಾ ತೊಂದರೆಯಿಲ್ಲದೆ ಬಿಡುಗಡೆಯಾಗುವಳೆಂದು, ಅವನು ಗುಣಮುಖನಾಗುವನೆಂದು ಭರವಸೆಯ ಮಾತುಗಳನ್ನ ಆಡಿದಳು ತಾಯಿ. ಎಲ್ಲ ಮೊದಲಿನಂತಿರುವುದಿಲ್ಲ ಎಂದು ಚೆನ್ನಾಗಿ ಗೊತ್ತಿತ್ತು ಅವಳಿಗೆ - ಆದರೆ, ಪ್ರಯತ್ನ ಪಟ್ಟರೆ, ಎಷ್ಟೋ ಮಟ್ಟಿಗೆ ಸುಧಾರಣೆಗಳು ಆಗಬಹುದು - ತನ್ನ ಮಗ ಇದೆಲ್ಲದರಿಂದ ಹೊರಬರುವನು ಅನ್ನುವ ಧೃಡ ನಂಬಿಕೆ ಅವಳಲ್ಲಿತ್ತು. ಸಧ್ಯಕ್ಕೆ ಸುಜಯನನ್ನು ಗುಣಮುಖನಾಗಲು ಬಿಟ್ಟು ಸಂಧ್ಯಾಳನ್ನು ಕಾಪಾಡಬೇಕಿತ್ತು.
ಗುರುಗಳಾದ ಸುಬ್ರಮಣ್ಯರವರು ತಮಗೆ ಗೊತ್ತಿದ್ದ ಅತ್ಯುನ್ನತ ವಕೀಲರನ್ನು ಕರೆತಂದರು. ಗ್ರಾಮದ ಜನರು ಸಂಧ್ಯಾಳ ಪರವಾಗಿ ನಿಂತು ಸಾಕ್ಷಿ ನೀಡಿದರು. ಮನ ಪರಿವರ್ತನೆಗೊಂಡಿದ್ದ ಹಲವು ಉಗ್ರರು ಉಳಿದ ಉಗ್ರರ ವಿರುಧ್ಧ ಸಾಕ್ಷಿ ನೀಡಿ ಸಹಕರಿಸಿದರು. ಅವರನ್ನೆಲ್ಲ ಒಟ್ಟುಗೂಡಿಸುವುದರಲ್ಲಿ ಸುನೀಲ ಸುಸ್ತಾದನಾದರು ಎಡೆಬಿಡದೆ ಶ್ರಮಿಸಿದನು. ಉಗ್ರರು ಪ್ರತಿಯಾಗಿ ಹಲ್ಲೆ ನಡೆಸಲು ಪ್ರಯತ್ನ ಪಟ್ಟರಾದರೂ, ಸತರ್ಕರಾಗಿದ್ದ ಗ್ರಾಮಸ್ಥರು ಹಾಗು ಪೋಲಿಸ್ ಇವರಿಗೆ ರಕ್ಷಣೆ ಒದಗಿಸಿತು. ಇದೆಲ್ಲ ಜರುಗಿ ನ್ಯಾಯ ಸಿಗುವಸ್ಟರಲ್ಲಿ ೩ ವರ್ಷಗಳು ಕಳೆದು ಹೋಗಿದ್ದುವು. ಬಹುತೇಕ ಎಲ್ಲ ಉಗ್ರರನ್ನು ಬಂಧಿಸಲಾಯಿತು.
ಇತ್ತ ಮಗನ ಆರೈಕೆ, ಸೊಸೆಯ ನ್ಯಾಯಾಲಯದಲ್ಲಿನ ಕಾರ್ಯಗಳನ್ನೂ ಸುನೀಲನ ಸಹಾಯದಿಂದ ನಿರ್ವಹಿಸುತ್ತಿದ್ದ ಸುಮಾ ದಣಿದಿದ್ದಳಾದರೂ, ಮಗನು ಮತ್ತೆ ಇಡುತ್ತಿದ್ದ ಪುಟ್ಟ ಹೆಜ್ಜೆಗಳನ್ನು ಕಂಡು ಸಂತಸದಿಂದ ಕುಣಿದಾಡಿದಳು. ಸಂಧ್ಯಾ ಜೈಲಿನಲ್ಲಿದ್ದಾಗ ಪ್ರತಿ ದಿನ ಸೋಸೆಯನ್ನು ಭೆಟ್ಟಿಯಾಗಿ ಬರುತ್ತಿದ್ದಳು ಸುಮಾ; ನ್ಯಾಯ ದೊರಕೇ ತೀರುತ್ತದೆ ಅಂತ ಅವಳನ್ನು ಹುರಿದುಂಬಿಸಿ ಬರುತ್ತಿದ್ದಳು. ಮೂರು ವರ್ಷಗಳಾಗುವಷ್ಟರಲ್ಲಿ ಸುಜಯ್ ಕೋಲಿನ ಸಹಾಯವಿಲ್ಲದೆ ನಡೆಯತೊಡಗಿದ. ತನ್ನ ಕೃತಕ ಬಳಗೈಯ್ಯನ್ನು ಚೆನ್ನಾಗಿ ಉಪಯೋಗಿಸಲು ಕಲೆತಿದ್ದ. ಎಡಗೈ ಅವನ ಪ್ರಮುಖ ಕೈಯ್ಯಾಗಿ ಮಾರ್ಪಟ್ಟಿತ್ತು. ಸುನೀಲನ ಉದ್ಯೋಗದಲ್ಲಿ ಸಹಭಾಗಿಯಾದ. ಸಮಯ ಸಿಕ್ಕಾಗ ಅಮ್ಮನ ಕಣ್ಣು ತಪ್ಪಿಸಿ ಬೀದಿ ಹುಡುಗರೊಡನೆ ಫುಟ್ಬಾಲ್ ಸಹ ಆಡಹತ್ತಿದ. ಪತ್ನಿ ಮರಳಿ ಮನೆಗೆ ಬಂದಾಗ ಅವನ ಸಂತೋಷ ಇಮ್ಮಡಿಯಾಗಿತ್ತು.
-- ೫ --
ಅಭಿಮಾನಿಗಳ ಚಪ್ಪಾಳೆಯ ಸುರಿಮಳೆಯಲ್ಲಿ ಮಿಂದು ಹೋಗಿತ್ತು ಆ ಕೋಣೆ. ಬೆವರ ಹನಿಗಳು ಹಣೆಯಿಂದುರುಳಿ ನೆಲಕ್ಕುರುಳಿದವು. ಆಟವಾಡಿ ದಣಿದ ಮುಖದ ಮೇಲೆ ಸಂತೃಪ್ತಿ ಮೂಡಿತ್ತು. ಮೇಲ್ದುಟಿಯನ್ನು ನಾಲಗೆ ಒಂದಂಚಿನಿಂದ ಇನ್ನೊಂದರ ವರೆಗೆ ಮೃದುವಾಗಿ ಸವರುತ್ತಿರಲು, ಆಟಗಾರ ಪಾನೀಯದ ಬಾಟಲಿಯನ್ನು ಕೈಗೆತ್ತುಕೊಂಡ. ಆಟವನ್ನೇ ವೃತ್ತಿಯನ್ನಾಗಿಸಿ ತಾನು ಸರಿಯಾದ ಕೆಲಸ ಮಾಡಿದೆ ಎಂದೆನಿಸಿತು. ಬೆವರನ್ನೊರೆಸಿ ಆಟಕ್ಕೆ ಮರಳಿದ, ತನ್ನ ವ್ಹೀಲ್ ಚೇರ್ ನ ಗಾಲಿಯನ್ನು ತಳ್ಳುತ್ತ. ಇದನ್ನು ನೋಡುತ್ತಿದ್ದ ಸುಜಯ್ ಇನ್ನಸ್ಟು ಜೋರಾಗಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದ ತನ್ನ ನೆಚ್ಚಿನ ಆಟಗಾರನನ್ನು.
ಇತ್ತ ಸುಬ್ರಮಣ್ಯರವರು ಸುಮಾಳ ಜೊತೆ ಹೆಜ್ಜೆ ಹಾಕುತ್ತ ಊರ ಬಿದಿಗಳನ್ನು ಸುತ್ತುತ್ತಿದ್ದರು. ಅದೇ ಬೀದಿಗಳನ್ನು ಅವರಿಬ್ಬರೂ ೩೦ ವರ್ಷಗಳ ಹಿಂದೆ ಸುತ್ತಿದ್ದರು - ಸಮಯ ಎಷ್ಟು ಬೇಗ ಕಳೆದೆ ಹೋಯಿತು ಎನ್ನುವ ಭಾವ ಇಬ್ಬರ ಮುಖದಲ್ಲಿ ಇತ್ತು. ಮಾತು ಪ್ರಾರಂಭಿಸಿದರು  ಸುಬ್ರಮಣ್ಯರವರು..
"ಏನೆಲ್ಲ ಕಷ್ಟಗಳನ್ನ ಅನುಭವಿಸಿ ಬಿಟ್ಟೆಯಲ್ಲ ಸುಮಾ... ಕೆಲವೊಮ್ಮೆ, ಇದರಲ್ಲಿ ನನ್ನ ಪಾತ್ರವು ಇದ್ದ ಹಾಗೇ ನನಗೆ ಅನ್ನಿಸುತ್ತದೆ"
"ಹಾಗೆನ್ನಬೇಡಿ ಸರ್... ನೀವು ಹಾಕಿ ಕೊಟ್ಟ ದಾರಿ ಹಲವಾರು ಜನರ ಪ್ರಾಣ ಉಳಿಸಿದೆ. ನನ್ನ ಜೀವನಕ್ಕೊಂದು ಗುರಿ ಕಲ್ಪಿಸಿ ಕೊಟ್ಟಿದೆ. ಇನ್ನು ಇದರ ಮಧ್ಯೆ ಸ್ವಲ್ಪ ನೋವು, ಸಾಕಸ್ತು ಪ್ರೀತಿ ಹಾಗು ಸಂತೋಷವನ್ನು ಕಂಡು ಕೊಳ್ಳುವ ಹಾಗೇ ಮಾಡಿದೆ", ಎಂದಳು ಸುಮಾ.
ಮೌನವಾಗಿ ಸಾಕಸ್ತು ದೂರ ನಡೆದು ಇನ್ನೇನು ಸುಬ್ರಮಣ್ಯರವರು ಹಿಂದಿರುಗಬೇಕು ಎನ್ನುವಸ್ಟರಲ್ಲಿ ಸುಮಾಳನ್ನು ಕುರಿತು ಇನ್ನೊಂದು ಪ್ರಶ್ನೆಯನ್ನೂ ಎಸೆದರು...
"೩೨ ವರ್ಷಗಳ ಹಿಂದೆ ನಿಮ್ಮ ಮಗು ತೀರಿ ಹೋದಾಗ ನೀವು ಹಾಗೇ ನಿಮ್ಮ ಗಂಡನನ್ನು ಬಿಟ್ಟು ಬಂದಿರಿ... ನಾನು ಯಾಕೆಂದು ಕೇಳಲಿಲ್ಲ. ಒಳ್ಳೆಯ ಮನುಷ್ಯನೆಂದು ಕೇಳಿದ್ದೇನೆ; ಇಂದು ಕೇಳ ಬಹುದೇ ನೀವು ಯಾಕೆ ಒಂಟಿ ಜೀವನ ಆಯ್ದುಕೊಂಡಿರಿ ಎಂದು?"
"ನನ್ನ ಗಂಡ ಅನಿಸಿಕೊಂಡವನು ಒಳ್ಳೆಯ ಮನುಷ್ಯನೇ. ಆದರೆ ತನ್ನವರಿಗಲ್ಲ. ಹೆಂಡತಿ-ಮಕ್ಕಳು, ಅಪ್ಪ ಅಮ್ಮ ಅನ್ನುವ ಪದಗಳು ಅವನಿಗೆ ಕೇವಲ ಪದಗಳೇ ಆಗಿದ್ದುವು. ನಾನು ಅವನನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೆಲಸ ಬಿಟ್ಟು ಮನೆಯಲ್ಲಿ ಇರತೊಡಗಿದೆ. ಅವನೊಡನೆ ಸಮಯ ಕಳೆಯಲು ಪ್ರಯತ್ನ ಪಟ್ಟೆ. ಅವನಿಗೆ ತನ್ನ ಕೆಲಸ ಹಾಗು ಸಹೋದ್ಯೋಗಿಗಳಿಂದ ಆಚೆ ಬರಲು ಸಾದ್ಯವೇ ಆಗಲಿಲ್ಲ. ನನ್ನ ಅತ್ತೆ-ಮಾವನವರ ಕೊನೆಗಾಲದಲ್ಲಿ ನಾನಿದ್ದೆ. ಇವರು ನಾಪತ್ತೆ. ಎಲ್ಲಿ ಹೋಗಿದ್ದರು ಅನ್ನುವ ಸುದ್ದಿ ನನಗೆ ಇಂದಿನ ವರೆಗೆ ತಿಳಿದಿಲ್ಲ. ಒಂದು ದಿನ ನಮ್ಮ ಒಂದು ವರ್ಷದ ಮಗು ಆರಾಮಿಲ್ಲದೆ ಅಳುತ್ತಿರುವಾಗ ಪಕ್ಕಾದೆ ಮನೆಯ ಬಸುರಿ ಪ್ರಸವ ವೇದನೆಯಲ್ಲಿ ನನ್ನನ್ನು ಕರೆದಾಗ ಸಮಯ ಕಡಿಮೆ ಇದ್ದ ಕಾರಣ ನಾನು ಮಗುವನ್ನೂ ಇವರ ಕೈಗಿಟ್ಟು ಅವಳಲ್ಲಿಗೆ ಧಾವಿಸಿದೆ. ಹೇರಿಗೆಯೇನೋ ಸರಿಯಾಗಿಯಾಗಿತ್ತು ಆದರೆ ನನ್ನ ಮಗು ಕಾಣೆಯಾಗಿತ್ತು. ಗೊರಕೆಯಲ್ಲಿ ತೇಲುತ್ತಿದ್ದ ಗಂಡ ಮಹಾಶಯನನ್ನು ಎಬ್ಬಿಸಿ ಕೇಳಿದೆ - ಮಗು ಎಲ್ಲಿ ಎಂದು. ಉತ್ತರ ಬಂದದ್ದು : ಅಲ್ಲೇ ಎಲ್ಲೋ ಇರ್ಬೇಕು ಹುದುಕ್ಕೋ! ದಿಕ್ಕು ತೋಚದಂತಾಗಿ ಬಾಲ್ಕನಿಗೆ ಬಂದಾಗ ಎದೆ ಝಲ್ಲೆಂದಿತು - ೫ ಅಂತಸ್ತಿನ ಮಹಡಿಯಿಂದ ಕೆಳಗೆ ಬಿದ್ದಿದ್ದ ಮಗು ರಕ್ತ ಸೋಕಿದ ನೆಲದಲ್ಲಿ ಶಾಶ್ವತವಾಗಿ ಮಲಗಿಬಿಟ್ಟಿತ್ತು!"
"ಒಹ್ ಮೈ ಗಾಡ್!", ಎಂದು ಉದ್ಗರಿಸಿದ ಸುಬ್ರಮಣ್ಯರವರು ಕೇಳಿದರು,"ನಿವೇನು ಆಕ್ಷನ್ ತೊಗೊಂಡ್ರಿ ಅವನ ಮೇಲೆ?".
"ಏನು ಇಲ್ಲ. ಅವನು, ಮೊದಲೇ ಹೇಳಿದ ಹಾಗೇ, ಹೊರ ಜಗತ್ತಿನಲ್ಲಿ ಅತಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದ. ತನ್ನದೇನೂ ತಪ್ಪಿಲ್ಲದ ಹಾಗೇ ವರ್ತಿಸಿದ. ಪೊಲೀಸರು ನಂಬಿದರು. ನಾನು 
ವಿಚ್ಚೇದನ ಪಡೆದು ಹೊರ ನಡೆದೆ, ಬದುಕಿಗೊಂದು ಹೊಸ ಅರ್ಥ ಕಲ್ಪಿಸಿಕೊಳ್ಳಲು. ಅವನನ್ನು ಕ್ಷಮಿಸು ಎಂದಿತು ಅಂತರಾತ್ಮ. ಮನಸ್ಸು ಹಗುರವಾಗಿತ್ತು. ನಿಮ್ಮಲ್ಲಿಗೆ ಬಂದೆ".
"ಮತ್ತೆ ಅವನು ಹಾಗೇ ಸ್ಕಾಟ್-ಫ್ರೀ ಇದ್ದಾನೆಯೇ?"
"ಹೌದು - ಫ್ರೀ ಫ್ರೊಂ ದಿಸ್ ವರ್ಲ್ಡ್! ನಾವು ಬೇರ್ಪಟ್ಟ ಸ್ವಲ್ಪ ದಿನಗಳಲ್ಲಿ ಕಾರ್ ದುರ್ಘಟನೆಯಲ್ಲಿ ತೀರಿಹೊದನಂತೆ", ಎಂದು ನಿರ್ಭಾವುಕಳಾಗಿ ತಿಳಿಸಿದಳು ಸುಮಾ.

Wednesday, March 7, 2012

ನನಗೆ ನೀಡಿದ ಉಡುಗೊರೆ ನೀನು

ಸೂರ್ಯನ ಕಿರಣಗಳು ಕಿಟಕಿಯಿಂದ ಇಣುಕಿ ತನ್ನ ಸ್ಟಡಿ-ಟೇಬಲ್ ಮೇಲೆ ಬೀಳುತ್ತಿರುವುದು ಹೊಸತೇನಲ್ಲ. ಆದರೆ,ಇವತ್ತು ಯಾಕೋ ಇದರಲ್ಲಿ ಏನೋ ವಿಶೇಷವಾದದ್ದು ಕಂಡವಳಂತೆ ಮಂದಹಾಸ ಬೀರಿದಳು ಜ್ಯೋತಿ.ಛಳಿಗಾಲದ ಆಗಮನವಾಗಿತ್ತು. ಹಬೆಯಾಡುತ್ತಿರುವ ಕಾಫಿಯ ಲೋಟವನ್ನು ಭದ್ರವಾಗಿ ತನ್ನೆರಡು ಪುಟ್ಟ ಕೈಗಳಲ್ಲಿ ಹಿಡಿದು, ಮೆಲ್ಲನೆ ಹಿತವಾದ ಕಾಫಿಯನ್ನು ಹೀರುತ್ತ  ಮನೆಯನ್ನೆಲ್ಲ ತಿರುಗಿದಳು. "ಎಂದೂ ಇಲ್ಲದ ಸೋಮಾರಿಗೆ ಇಂದು ಅಂತಹದ್ದೇನು ಉತ್ಸಾಹ ಹುಟ್ಟಿತೋ?", ಅಂತ ಮನಸ್ಸಿನಲ್ಲಿ ತನಗೆ ತಾನೇ ಪ್ರಶ್ನೆಯನ್ನು ಹಾಕುತ್ತ, ಮನೆಯ ಕಿಟಕಿಗಳನ್ನೆಲ್ಲ ತೆರೆಯುತ್ತ ಮುನ್ನಡೆದಳು. ಇಂದೇನು ವಿಶೇಷವಂತೂ ಅಲ್ಲ - ಹಬ್ಬದ ದಿನವಲ್ಲ; ಅಪ್ಪ-ಅಮ್ಮ ಮನೆಗೆ ಬರ್ತೀನಿ ಅಂತೇನು ಹೇಳಿಲ್ಲ. ಸಾಮನ್ಯವಾದ "ಸಂಡೇ". ಗೆಳತಿಯರ್ಯಾರೂ ಫೋನ್ ಸಹ ಮಾಡಿಲ್ಲ. "ನನ್ನ ತಲೇಲಿ ಏನೋ ಎಡವಟ್ಟಾಗಿದೆ!",ಅಂತ ತನಗೆ ತಾನೇ ಮೆಲ್ಲನೆ ಉಸುರುತ್ತ ಅಂದಿನ "ಕ್ಲೀನಿಂಗ್" ಕಾರ್ಯಕ್ಕೆ ಕೈ ಹಾಕಿದಳು.

ಸಾಮಾನ್ಯವಾಗಿ ಎಲ್ಲಾ ಕೆಲಸಗಳು ಮುಗಿದು ಮಧ್ಯಾಹ್ನದ "ಬ್ರಂಚ್" ಆಗುವಷ್ಟರಲ್ಲಿ ೧ ಘಂಟೆ ಆಗಿ ಹೋಗ್ತಿತ್ತು. ಆದರೆ ಇವತ್ತು ಯಾಕೋ ಸಮಯ ನಿಂತೇ ಹೋಗಿದೆ ಏನೋ ಅಂತ ಅನ್ನಿಸಿತು ಅವಳಿಗೆ. ಸಮಯ ನೋಡಿದ್ರೆ ಇನ್ನು ಬೆಳಗಿನ ಜಾವ ೯ ಘಂಟೆ ಮಾತ್ರ ಆಗಿದ್ದನ್ನು ನೋಡಿ ಸ್ವಲ್ಪ ಕಿರಿಕಿರಿಯಾಗಿ, ಹುಸಿಮುನಿಸನ್ನು ಪಕ್ಕದ ರೂಮಿನಲ್ಲಿ ಮಲಗಿದ್ದ ತಂಗಿಯ ಮೇಲೆ ತೀರಿಸಿಕೊಳ್ಳುವ ಮನಸ್ಸಾಯಿತು. ತಂಗಿಯನ್ನು ಕುರಿತಾಗಿ,"ಲೇ, ಸೋಂಬೇರಿ... ಬಿಸಿಲು ನೆತ್ತಿಗೇರಿದ್ರೂ ನೀನು ಮಾತ್ರ ಬೇಡ್ದಲ್ಲಿ ಬಿದ್ಕೊಂಡು ನಿನ್ನ ಶಾಹರುಖ್ ಖಾನ್ ಕನಸುಗಳನ್ನ ಕಾಣೋದು ಬಿಡೋಲ್ವಲ್ಲೆ! ಎದ್ದೇಳು - ಮನೆ ಕ್ಲೀನ್ ಮಾಡ್ಬೇಕು!", ಎಂದು ಅಬ್ಬರಿಸಿದಳು.

"ತಿಂಡಿ ರೆಡಿ ಆಗಿದೆ ನಾ?...", ಅಂತ ಮೆಲ್ಲನೆ ಉಸುರಿದಳು ತಂಗಿ, ಪ್ರೀತಿ. ತನ್ನ ಎಂ.ಬೀ.ಏ. ವ್ಯಾಸಂಗದ ನಿಮಿತ್ತ ಮನಸ್ಸಿಲ್ಲದಿದ್ದರೂ ಪ್ರತಿ ದಿನ ೨-೩ ಘಂಟೆಗೇ ಮಲಗುವ ಪೈಕಿಯಾದ ಅವಳು , ಇನ್ನು ನಿದ್ದೆಗಣ್ಣಿನಲ್ಲೇ ಮಿಸ್ಕಾಡದೆ ಉಸುರಿದಳು.

"ತಿಂಡಿಯೇನು ಆಕಾಶದಿಂದ ಉದುರೋತ್ತಾ? ಮಾಡ್ಬೇಕು ಇನ್ನು. ಮೊದಲು ಎದ್ದು ನನಗೆ ಸ್ವಲ್ಪ ಕಸ ತಗೆಯೋಕ್ಕೆ ಸಹಾಯ ಮಾಡು...", ಅವಳ ಮಾತಿನಲ್ಲಿ ಅವಳಿಗೇ ಅಚ್ಚರಿ ಬರಿಸುವಂತಹ ಗಾಂಭೀರ್ಯವಿತ್ತು.

ಸ್ವಲ್ಪ ಹೊತ್ತು ತಂಗಿಯಿಂದ ಏನು ಪ್ರತಿಕ್ರಿಯೆ ಬರದದ್ದನ್ನು ಗಮನಿಸಿ, ಸುಮ್ಮನೆ ಅಲ್ಲೇ ನಿಂತು ಬಿಟ್ಟಳು ಅವಳು.

"ಪ್ರೀತೀ, ಸ್ವಲ್ಪ ಸಹಾಯ ಮಾಡ್ತಿಯಾ...?", ಅಂತ ಅವಳು ಮಾತು ಮುಗಿಸುವಷ್ಟರಲ್ಲಿ ಬೆಡ್ಡಿನ ಮೇಲೆ ಧಿಡೀರನೆ ಎದ್ದು ಕೂತ ಪ್ರೀತಿ, "ಏನಕ್ಕಾ ನಿನ್ ಕಿರಿಕಿರಿ. ಪ್ರತೀ ದಿನ ನಿದ್ದೆಯಿಲ್ಲ ನನಗೆ. ಅದರಲ್ಲಿ ಇವತ್ತು ಅಪರೂಪಕ್ಕೆ ಒಳ್ಳೆ ಕನಸು ಬಿಳ್ತಿತ್ತು - ಕಲ್ ಹಾಕ್ಬಿಟ್ಟೆ ನೀನು!

ಸುಮ್ನೆ ಹೋಗಿ ಮಲ್ಕೊಳ್ಳೋದಬಿಟ್ಟು ನನ್ ಜೀವ ಯಾಕ್ ತಿಂತೀಯಾ? ಭಾವ ಇದ್ದಿದ್ರೆ...", ಅಂದವಳೇ ಕಲ್ಲಾಗಿಬಿಟ್ಟಳು.

ಒಂದು ಕ್ಷಣಾರ್ಧದಲ್ಲಿ ಎಲ್ಲೆಡೆಯೂ ಮೌನ ಆವರಿಸಿತ್ತು. ಇಬ್ಬರೂ ಮಾತನಾಡಲಿಲ್ಲ. ಜ್ಯೋತಿಯ ಕಣ್ಣುಗಳಿಂದ ಕಂಬನಿಗಳೆರದು ಕೆನ್ನೆಯನ್ನು ಜಾರಿ ನೆಲಕ್ಕೆ ಬಿದ್ದವು. ಅಂದು ಜಗದೀಶನ ಹುಟ್ಟುಹಬ್ಬವಾಗಿತ್ತು.

ಜ್ಯೋತಿಯ ಗಂಡ ಜಗದೀಶ ತೀರಿಕೊಂಡು ೩ ವರ್ಷಗಳು ಉರುಳಿಹೋಗಿದ್ದುವು. ಅವನು ಬದುಕಿದ್ದಾಗ ಅವನ ಕಣ್ಣಲ್ಲಿ ಒಂದೇ ಒಂದು ದಿನ ಸಹ ಕಣ್ಣಿರು ಕಂಡವಳಲ್ಲ ಜ್ಯೋತಿ; ಮಾತು ಕಡಿಮೆಯಾದರೂ, ನಗುನಗುತ್ತ ಸಂತೋಷದಿಂದ ಇರುವ ಪೈಕಿ. ಕಷ್ಟಗಳಿರಲಿಲ್ಲ ಅಂತೇನಿಲ್ಲ; ಆದರೆ ಚಿಂತೆ ಅಥವಾ ಸಿಟ್ಟು ಮಾಡಿಕೊಳ್ಳುವುದು ಅವನ ಪ್ರವೃತ್ತಿಯಾಗಿರಲಿಲ್ಲ. ಸಂಯಮ ಹಾಗು ನಂಬಿಕೆಯಿಂದ ಕೂಡಿದ ವ್ಯಕ್ತಿ. ಅದೇ ಪ್ರವೃತ್ತಿ ಪ್ರೀತಿಯ ಪ್ರಾಣ ಉಳಿಸಿತ್ತು.

"ಅಕ್ಕಾ, ಸಾರಿ ಅಕ್ಕಾ! ನಿನ್ನ ಬೇಜಾರ್ ಮಾಡ್ಸೋ ಉದ್ದೇಶ ಇರ್ಲಿಲ್ಲ ನಂದು. ಭಾವ ನೆನ್ಪಾದ್ರು. ಸಾರಿ....", ಎಂದವಳೇ ಎದ್ದು ಬಂದು ಅಕ್ಕನನ್ನು ತಬ್ಬಿಕೊಂಡು ಕಣ್ಣೀರಿಟ್ಟಳು.

"ಅಯ್ಯೋ ಹುಚ್ಚಿ... ನನಗೆ ಬೇಜಾರಿಲ್ಲ; ಆದರೆ ನಿನ್ನ ಭಾವನ ನೆನಪುಗಳು ನೋಡು... ಬೆನ್ನು ಬಿಡೋದಿಲ್ಲ ಅನ್ನುತ್ತವೆ. ಇರ್ಲಿ ಮಹಾರಾಣಿ, ಈಗ ಎದ್ದೇಳ್ತಿಯೋ,ವೊದೆ ಬೇಕೋ?", ಅಂತ ಹುಸಿ ಮುನಿಸನ್ನು ತೋರಿದಳು ಜ್ಯೋತಿ.

--- ೦ ---

ವೃತ್ತಿಯಿಂದ ವೈದ್ಯನಾಗಿದ್ದ ಜಗದೀಶ, ತನ್ನ ಬಾಲ್ಯವನ್ನು ಬಡತನದಲ್ಲಿ ಒಂದು ಅನಾಥಾಶ್ರಮದಲ್ಲಿ ಕಳೆದಿದ್ದ. ತನ್ನ ತಂದೆ-ತಾಯಿ ಯಾರೆಂದು ಅವನಿಗೆ ಗೊತ್ತಿರಲಿಲ್ಲ; ದೊಡ್ಡವನಾಗುತ್ತಾ ತನ್ನ ಹೊತ್ತ ತಾಯಿಯನ್ನೂ ಗೊತ್ತು ಮಾಡಿಕೊಳ್ಳುವ ಆಸಕ್ತಿಯಿದ್ದರೂ,ಬಿಳಿ ಕಾರೊಂದು ಅನಾಥಾಶ್ರಮದ ಬಾಗಿಲಲ್ಲಿ ತನ್ನನ್ನು ಬಿಟ್ಟು ಹೋಗಿತ್ತು ಅನ್ನೋ ವಿಷಯ ತನ್ನ ಗಮನಕ್ಕೆ ಬಂದಾಕ್ಷಣ ತನಗೆ ತಂದೆ-ತಾಯಿ, ಬಂಧುಗಳೆಲ್ಲ  ಎಲ್ಲ ತನ್ನ ಅನಾಥಾಶ್ರಮ ಎಂದು ನಿರ್ಧರಿಸಿ ಬಿಟ್ಟ. ಓದಿನಲ್ಲಿ ಹಾಗು ಆಟದಲ್ಲಿ ಎತ್ತಿದ ಕೈ ಜಗದಿಶನದ್ದು. ದಾನಿಗಳೊಬ್ಬರು ಇವನ ಉಜ್ವಲ ಭವಿಷ್ಯಕ್ಕೆ ನೆರವಾದರು. ಅವನಿಗೆ ಉನ್ನತ ವಿಧ್ಯಾಭ್ಯಾಸ ನಿಡಿಸಿ ಅವನನ್ನು ಪ್ರೋತ್ಸಾಹಿಸಿದರು. ತಕ್ಕಂತೆ ಚೆನ್ನಾಗಿ ಓದಿ, ಆಟ-ಪಾಠಗಳಲ್ಲಿ ಸಮನಾಗಿ ಭಾಗವಹಿಸಿ ಸರಕಾರೀ ವೈದ್ಯನಾಗಿ ಹಳ್ಳಿಯೊಂದರಲ್ಲಿ ಸೇರಿದ. ತನಗೆ ಆಶ್ರಯವಿತ್ತ ಅನಾಥಾಶ್ರಮಕ್ಕೆ, ತನ್ನ ವಿಧ್ಯಾಭ್ಯಾಸಕ್ಕೆ ನೆರವಾದ ದಾನಿಯ ಹೆಸರಿನಲ್ಲಿ , ಸಹಾಯ ನಿಧಿಯೊಂದನ್ನು ರೂಪಿಸಿದ. ತನ್ನ ಕೈಲಾದ ಸಹಾಯವನ್ನೆಲ್ಲ ಹಳ್ಳಿಯ ಜನರಿಗೆ ಮಾಡಿ ದೊಡ್ಡ ಮನುಷ್ಯ ಅನ್ನಿಸಿಕೊಂದಿದ್ದ.

ಜ್ಯೋತಿಯು ವೃತ್ತಿಯಿಂದ ಸಾಫ್ಟ್ವೇರ್ ಎಂಜಿನಿಯರ್. ತಕ್ಕ ಮಟ್ಟಿಗೆ ಶಕ್ತರಾದ ತಂದೆ-ತಾಯಿ ಇವಳಿಗೆ ಒಳ್ಳೆಯ ವಿದ್ಯಾಭ್ಯಾಸ ನಿಡಿ ತನ್ನ ಕಾಲಿನ ಮೇಲೆ ತಾನು ನಿಲ್ಲುವ ಹಾಗೇ ಮಾಡಿದ್ದರು. ಇನ್ನು ತಂಗಿ ಇವಳಿಗಿಂತ ೬ ವರ್ಷ ಚಿಕ್ಕವಳು. ಓದು ತಲೆಗೆ ಹತ್ತೋಲ್ಲ ಅಂತ ಅವಳಿಗಿಂತ ಹೆಚ್ಚು ಪೋಷಕರಿಬ್ಬರಿಗೂ ಮೊದಲೇ ಗೊತ್ತಾಗಿ ಹೋಗಿತ್ತು. "ಬೇಕಾದದ್ದನ್ನು ಓದಿಕೊ ಮಗಳೇ", ಅಂದವರೇ ಜ್ಯೋತಿಗೆ ಪ್ರೀತಿಯ ಉಸ್ತುವಾರಿಯನ್ನು ಕೊಟ್ಟು ಇಬ್ಬರಿಗೆ ಇರಲು ಶಹರಿನಲ್ಲಿ ಮನೆಯೊಂದನ್ನು ತಗೆದು ಕೊಟ್ಟಿದ್ದರು.ತಾವು ತಮ್ಮ ಪೂರ್ವಜರ ಮನೆಯಲ್ಲಿ ನೆಲೆಸಿ ತೋಟವನ್ನು ನೋಡಿಕೊಂಡಿದ್ದರು.

ಜ್ಯೋತಿಯ ಮನಸ್ಸು ಕೀಲಿಮಣೆಯನ್ನು ಕುಟಿಯುವುದರ ಜೊತೆಗೆ ಸಮಾಜ ಸೇವೆ ಮಾಡುವತ್ತ ವಾಲಿತ್ತು. ತಾನು ಉನ್ನತ ಶಿಕ್ಷಣಕ್ಕೆಂದು ಪಟ್ಟಣದಲ್ಲಿದ್ದಾಗ ಕಂಡ ದೃಶ್ಯವೊಂದು ಅವಳ ಅಂತರಾತ್ಮವನ್ನು ಅಲುಗಾಡಿಸಿ ಬಿಟ್ಟಿತ್ತು.ಜೋರ ಬಂದು ವೈದ್ಯರನ್ನು ನೋಡಲು ತನ್ನ ಪಾಳಿಗೆ ಕಾಯುತ್ತಿದ್ದಳು. ಬಡ ಮಹಿಳೆಯೊಂದು ಸೊರಗಿ ಸುಕ್ಕಾದ ಮಗುವೊಂದನ್ನು ಹಿಡಿದು ಏನು ಮಾಡಬೇಕೆಂದು ತೋಚದೆ ಸಹಾಯಕ್ಕೆಂದು ವೈದ್ಯರನ್ನು ಕಾಣಲು ಬಂದಿದ್ದಳು. ಮಗು, ಸುಮಾರು ೩-೪ ತಿಂಗಳ ಕೂಸು,ಮೈಯಲ್ಲಿ ಶಕ್ತಿಯಿಲ್ಲದೆ ನಿತ್ರಾಣವಾಗಿತ್ತು.ತಾಯಿಯ ಕಡೆಯೋ ಕಾಸಿಲ್ಲ; ಇದ್ದ ಕಾಸು ಗಂಡ ಅನ್ನಿಸಿಕೊಂದವನು ಸೇಂದಿ ಕುಡಿದು ಮುಗಿಸಿ ಆಗಿತ್ತು. ಅವನ ಪತ್ತೆ ಇಲ್ಲ. ವೈದ್ಯರು ತುರ್ತಾಗಿ ಮಗುವನ್ನೂ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಹೇಳ್ತಿದ್ದಾರೆ - ಇವರ ಹತ್ತಿರ ದುಡ್ಡಿಲ್ಲ. ಹೆದರಿ ದಿಗ್ಭ್ರಾಂತಳಾಗಿದ್ದಾಳೆ.ಆಟೋ ತರಿಸಿದರೆ ಇವಳಿಗೆ ಹೋಗಲು ಹಿಂದೇಟು. ಜ್ಯೋತಿ ತನ್ನ ಪಾಕೆಟ್ ಮನಿಯಿಂದ ೨೫ ರುಪಾಯಿ ತಗೆದು ಅವಳ ಕೈಗಿಟ್ಟು ಹೋಗು ಎಂದು ಸನ್ನೆ ಮಾಡಿದ್ದಳು. ತಾನು ಒಂದು ಏನ್.ಜೀ.ಓ.ಗೆ ಸೇರಿ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಆಗಲೇ ನಿರ್ಧರಿಸಿ ಬಿಟ್ಟಿದ್ದಳು.

ಜ್ಯೋತಿ ಜಗದಿಶನನ್ನು ಭೆಟ್ಟಿಯಾದದ್ದು ತನ್ನ ಗುರಿಯಿಂದಾಗಿ ಅಂದರೆ ತಪ್ಪಾಗಲಾರದು. ಕೆಲಸದ ಜೊತೆಗೆ ಏನ್.ಜೀ.ಓ.ಗೆ ಸೇರಿದ ಜ್ಯೋತಿ, ಬಹುತೇಕ ಪ್ರತಿ ರಜಾ ದಿನ ಜನ ಸೇವೆಯಲ್ಲಿ ಕಳೆಯುತ್ತಿದ್ದಳು. ಕೆಲವೊಮ್ಮೆ, ಬಿಡುವಿದ್ದಾಗ ಪ್ರಿತಿಯನ್ನು ತನ್ನೊಡನೆ ಕರೆದುಕೊಂಡು ಹೋಗುತ್ತಿದ್ದಳು. ಅಂತಹ  ಒಂದು ದಿನ, ಪ್ರಿತಿಯೊಡನೆ ಜಗದೀಶ ಕೆಲಸ ಮಾಡುವ ಊರಿಗೆ ಹೋಗಿದ್ದಾಗ ಮೊದಲ ಬಾರಿ ಜಗದೀಶನ ಭೆಟ್ಟಿಯಾಯಿತು. ಜ್ಯೋತಿಗೆ ಆತನ ವ್ಯತಿತ್ವ ಬಹಳವೇ ಇಷ್ಟವಾಗಿ ಹೋಯಿತು - ಮದುವೆಯನ್ನೋದು ಆದರೆ ಇಂತಹವನನ್ನೇ ಅಂತ ನಿರ್ಧರಿಸಿಬಿಟ್ಟಳು. ತನ್ನ ಹಾಗು ಇವನ ಗುರಿ ಒಂದೇ ಆಗಿದೆ, ಜೊತೆಗೆ - ಇನ್ನೇನು ಬೇಕು; ಹಾಂ - ಅವನ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನೆಲ್ಲಾ ಪ್ರೀತಿಗೆ ಹೇಳಲು ಅವಳಿಗೆ ಇಷ್ಟವಿರಲಿಲ್ಲ. ಚಿಕ್ಕ ಹುಡುಗಿ, ಬುದ್ಧಿ ಬೆಳೆದಿಲ್ಲ. ತುಂಟಾಟ ಜಾಸ್ತಿ - ಇನ್ನೇನಿದ್ರು ನಾನೇ ಇದನ್ನ ನೋಡ್ಕೋಬೇಕು ಅಂದುಕೊಂಡವಳೇ ತನ್ನ ಏನ್.ಜೀ.ಓ.ಸಹಕರ್ಮಿಗಳಲ್ಲಿ ವಿಚಾರಿಸಿ ಅವನ ಬಗ್ಗೆ ತಿಳಿದುಕೊಂದಿದ್ದಳು. ಇನ್ನು ಸ್ವಲ್ಪ ಅವನೊಡನೆ ಸಮಯ ಕಳೆದರೆ ತನಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಅಂದುಕೊಂಡು ಮುಂದಿನ ೩ ತಿಂಗಳು ಕಾಲ ಹಲವಾರು ಜನ ಸೇವೆಯ ಕೆಲಸಗಳಲ್ಲಿ ಭಾಗ ವಹಿಸುತ್ತ ಅವನ ಬಗ್ಗೆ ಅರಿತುಕೊಂಡಳು. ಹಾಗೆಯೇ ಒಂದು ದಿನ ಅವನಲ್ಲಿಗೆ ಹೋಗಿ ತಮ್ಮ ಮನಸ್ಸನ್ನು ಅವನೆದುರು ಬಿಚ್ಚಿಟ್ಟೆ ಬಿಟ್ಟಳು. ಧೈರ್ಯ ಎಲ್ಲಿಂದ ಬಂತೋ ಗೊತ್ತಿಲ್ಲ; ಆದರೆ ಇನ್ನೊಂದೆಡೆಗೆ ತಾನು ತನ್ನ ತಂದೆ-ತಾಯಿಗೆ ತಿಲಿಸಿದ್ದಿದ್ದರೆ ಚೆನ್ನಾಗಿರ್ತಿತ್ತೇನೋ ಆನೋ ಕೊರೆತ ಮನಸ್ಸಿನಲ್ಲಿ. ಅದನ್ನೆಲ್ಲ ಬದಿಗೊತ್ತಿ ಬಾಯಿ ತೆರೆದಿದ್ದಳು.

ಜಗದೀಶನಿಗೋ ಆಗಿದ್ದು ಶಾಕ್. ತಾನು ಎಂದೂ ಇದರ ಬಗೆಗಾಗಿ ವಿಚಾರವೇ ಮಾಡಿರಲಿಲ್ಲ ಎಂದು ಸಮಾಧಾನದಿಂದಲೇ ಹೇಳಿದ. ಜ್ಯೋತಿಯ ಧೃಡ ನಿರ್ಧಾರದಿಂದ ಕೂಡಿದ ಅವಳ ಬಟ್ಟಲು ಕಣ್ಣುಗಳನ್ನೂ ನೇರವಾಗಿ ನೋಡಲಾಗದೆ ಅವನು ತಾನು ಇದರ ಬಗ್ಗೆ ವಿಚಾರ ಮಾಡುವುದಾಗಿ ಹೇಳಿ ಅವಳನ್ನು ಬೀಳ್ಕೊಟ್ಟ. ತನಗೆ ತಾನೇ ಪ್ರಶ್ನೆಯನ್ನೂ ಹಾಕಿಕೊಂಡ. ಪ್ರಶ್ನೆಗಳ ಮಹಾಪೂರವೇ ಅವನ ಮನಸ್ಸಿನಲ್ಲಿ - ಮನಸ್ಸಿನಿಂದ ಶ್ಯಾಹಿಯ ಮೂಲಕ್ಕ ಕಾಗದಕ್ಕೆ - ಹರಿಯಿತು. ಎಲ್ಲವನ್ನೂ ಬರೆದಿಟ್ಟುಕೊಂಡ. ತನ್ನ ಹೆತ್ತವಳು ತನ್ನನ್ನು ಯಾಕೆ ತೊರೆದಳು ಅನ್ನುವುದು ಅವನಿಗೆ ಇಂದು ತಿಳಿದುಕೊಳ್ಳಲೇ ಬೇಕು ಅನ್ನುವ ಛಲ ಬಂದಿತ್ತು. ಅದಕ್ಕೆ ಉತ್ತರ ಸಿಗದೇ ತಾನು ಮದುವೆಯಾಗುವ ವಿಚಾರ ಸಹ ಮಾಡುವುದಿಲ್ಲ ಎಂದು ನಿರ್ಧರಿಸಿ ಬಿಟ್ಟಿದ್ದ. ಇನ್ನೊಂದು ವಾರ ಸಮಯ ಬೇಕು ತನಗೆ ಎಂದು ಜ್ಯೋತಿಗೆ ಮಿಂಚಂಚೆ ಕಳುಹಿಸಿದ. ಮೊದಲು ತನ್ನ ಪ್ರಶ್ನೆಗಳಿಗೆ ತಾನು ಉತ್ತರಗಳನ್ನು ಹುಡುಕಬೇಕಿತ್ತು; ಅನಂತರ ಅವಳಿಗೆ ಪ್ರಶ್ನೆಗಳನ್ನೂ ಕೇಳಬೇಕಿತ್ತು. ಮಾರನೆಯ ದಿನ ಎಂದೂ ರಜೆ ಹಾಕದವನು ರಜೆಯ ಅರ್ಜಿ ಹಾಕಿ ನೇರವಾಗಿ ತನ್ನ ಅನಾಥಾಶ್ರಮಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ ತನ್ನ ನೆಚ್ಚಿನ ವಾರ್ಡೆನ್ ತಾತನನ್ನು ಭೆಟ್ಟಿಯಾದ. ತನಗೆ ತನ್ನ ಹೊರೆದವಳು ಯಾಕೆ ಬಿಟ್ಟು ಹೋದಳು ಅನ್ನುವ ಪ್ರಶ್ನೆ ಕಾಡುತ್ತಿದೆ - ಉತ್ತರ ಬೇಕು ಎಂದು ಅವನಲ್ಲಿ ಕೇಳಿದ. ಮುದುಕನ ಪ್ರೀತಿಯ ಹುಡುಗ ಜಗದೀಶ. ಆದರೆ ತಾನು ಮಾತು ಕೊಟ್ಟ ತಾಯಿಗೆ ಅನ್ಯಾಯ ಮಾಡಬಾರದು ಅನ್ನುವುದು ಇನ್ನೊಂದು ಕಡೆ. ಸುಮ್ಮನಾಗಿಬಿಟ್ಟ ಅವನು. ಜಗದೀಶ ತನಗೆ ಅವಳ ಹೆಸರು ಬೇಡ; ಅವಳಿಂದ ಧನ-ಕನಕಗಳು ಸಹ ಬೇಡ.ಕೇವಲ ಕಾರಣ ಬೇಕು - ಸತ್ಯ ತನಗೆ ತಿಳಿಯಬೇಕು ಎಂದು ಅಂಗಲಾಚಿದ. ಮುದುಕ ಬಾಯಿ ಬಿಟ್ಟ. ನಿನ್ನ ಹೆತ್ತವಳು ಒಳ್ಳೆಯ ಕುಟುಂಬದವಳು; ಅವಳು ಒಬ್ಬ ಹುಡುಗನನ್ನು ಪ್ರೀತಿಸಿದಳು. ಅಪ್ರಾಪ್ತ ವಯಸ್ಸು - ದುಡುಕಿದಳು. ಆ ಹುಡುಗನು ತನ್ನ ಜಾವಬ್ದಾರಿಯನ್ನು ಮರೆತು ಇವಳನ್ನು ದೂರ ಮಾಡಿದನು. ಆದರೆ ನಿನ್ನ ತಾಯಿಗೆ ನಿನ್ನ ಹೊರುವ ಆಸೆ. ತನ್ನ ಮಗು ತನ್ನಿಂದ ದೂರವಾಗಬಾರದು ಆನುವ ವಿಚಾರದಿಂದ, ಹೆದರಿ, ತನ್ನ ಪೋಷಕರಿಗೆ ಹೇಳಲಿಲ್ಲ. ಮುಂದೊಂದು ದಿನ ಈ ವಿಚಾರ ಅರಿತ ಅವರು ಅವಳ ಇಚ್ಛೆಯಂತೆ ನಿನ್ನ ಬದುಕಲು ಬಿಟ್ಟರು. ಬದಲಾಗಿ, ನೀನು ಹೊರ ಜಗತ್ತಿಗೆ ಬರುತ್ತಿದ್ದಂತೆಯೇ ನಿನ್ನನ್ನು ಅವಳು ಬಿಡಬೇಕು ಅಂತ ಅವರು ಆಜ್ಞಾಪಿಸಿದರು. ತಪ್ಪು ಮಾಡಿದ ನಂತರ ಅವಳಿಗೆ ಬೇರೆಯ ದಾರಿ ಇರಲಿಲ್ಲ. ಒಪ್ಪಿಕೊಂಡಳು. ಇಂದು ಅವಳು ಇನ್ನೊಂದು ಮದುವೆಯಾಗಿ ಸುಖವಾಗಿದ್ದಾಳೆ. ನಿನ್ನ ತಾತ, ನಿನ್ನನ್ನು ನನ್ನ ತಾಯಿಯ ಪ್ರಿತಿಯಿಂದ ವಂಚಿಸಿದನಾದರೂ ನಿನ್ನ ಸಕಲ ಸುಖಗಳಿಗೆ ಕಾರಣನಾದ. ಅವನೇ ನಿನ್ನ ದಾನಿ. ನಿಂಗೆ ಗೊತ್ತಿರೋ ಅವನ ಹೆಸರೂ ಸಹ ಅದಲ್ಲ.

ಇಷ್ಟು ಹೊತ್ತಿಗಾಗಲೇ ಜಗದೀಶನ ಮನಸ್ಸು ಹಗುರವಾಗಿತ್ತು. ಎಲ್ಲರನೂ ಮನಸ್ಸಿನಲ್ಲೇ ಕ್ಷಮಿಸಿ, ತಾತನಿಗೆ ಧನ್ಯವಾದಗಳನ್ನು ಅರ್ಪಿಸಿ ತನ್ನ ಊರಿಗೆ ಹಿಂದಿರುಗಿದನು. ಒಂದು ದಿನವಿಡೀ ಮಲಗಿ ಎದ್ದನು. ಮನಸ್ಸಿನಲ್ಲಿ ಏನೋ ಉಲ್ಲಾಸ.

ತಾನು ಜ್ಯೋತಿಗೆ ಫೋನಾಯಿಸಿ ಭೆಟ್ಟಿ ಆಗಬೇಕು ಅಂದನು. ಜ್ಯೋತಿ ತನ್ನ ಕೆಲಸಕ್ಕೆ ರಜೆ ಹಾಕಿ ಅವನಲ್ಲಿಗೆ ಬಂದಳು. ಇಬ್ಬರೂ ಕೂತು ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು - ಕೆಲಸ ಹಾಗು ಕೆಲಸೇತರ. ತನ್ನ ಒಪ್ಪಿಗೆಯನ್ನೂ ಸೂಚಿಸುವ ಮುನ್ನ ಜ್ಯೋತಿ ತನ್ನ ವಿಷಯವಾಗಿ  ಅವಳ ಮನೆಯವರಿಗೆ ತಿಳಿಸಬೇಕು ಎಂದು ಅವನು ಕೇಳಿಕೊಂಡನು. ಜ್ಯೋತಿ ಒಪ್ಪಿಗೆಯನ್ನು ಸೂಚಿಸಿದಳು. ತನ್ನ ಜೀವನದ ಪುಟಗಳನ್ನೂ ಜ್ಯೋತಿಯ ಎದುರು ತೆರೆದಿಡುತ್ತಾ ತನ್ನ ಕಳೆದೆರಡು ದಿನಗಳ ವಿವರವನ್ನೂ ಸೇರಿಸಿ ವಿಸ್ತಾರವವಾಗಿ ಹೇಳಿದನು. ಜ್ಯೋತಿಗೆ ಇದರಲ್ಲಿ ಹಲವಾರು ವಿಶಯಗಳು ಗೊತ್ತಿದ್ದರೂ ಅವನ ಬಾಯಿಂದ ಕೇಳುವ ಆನಂದ ಬೇರೆಯದೇ ಆಗಿತ್ತು. ಪ್ರೀತಿಯಲ್ಲಿ ಮುಳುಗಿದ್ದ ಅವಲಿದೆ ಅವನ ಹೊರತು ಬೇರೆ ಏನು ಕಂಡರೆ ಅಲ್ಲವೇ ಪ್ರಶ್ನೆ ಕೇಳುವ ವಿಚಾರ ಬರುವುದು. ಸಂಜೆ ಆಗುತ್ತಿದ್ದ ಹಾಗೇ ದವಾಖಾನೆಗೆ ಜನರ ಆಗಮನ ಶುರುವಾಯಿತು. ಜ್ಯೋತಿ ಅವನಿಂದ ಬೀಳ್ಕೊಟ್ಟು ಮನೆಗೆ ಹಿಂದಿರುಗಿದಳು. ತಂದೆ-ತಾಯಿಗೆ ಫೋನಾಯಿಸಿ ತಾನು ಒಬ್ಬ ಹುಡುಗನನ್ನು ಹುದುಕಿರುವುದಾಗಿ ಹೇಳಿದಳು. ಮಾರನೇಯ ದಿನ ತಂಗಿ ಪ್ರೀತಿಯೋಡನೆ ಊರಿಗೆ ಹೊರಟೇ ಬಿಟ್ಟಳು.

ತಂದೆ-ತಾಯಿಯೊಡನೆ ವಿಚಾರ ವಿನಿಮಯ ಆದಮೇಲೆ ಜಗದೀಶನಿಗೆ ತನ್ನ ಮನೆಗೆ ಬರಲು ಆಮಂತ್ರಿಸಿದಳು.

ಜಗದೀಶ ಮುಂದಿನ ರವಿವಾರ ರಜೆ ಹಾಕಿ ಜ್ಯೋತಿಯ ಊರಿಗೆ ಬಂದಾಗ ಜ್ಯೋತಿಯ ತಂದೆ ಶ್ಯಾಮಸುಂದರ ಮೂರ್ತಿ ಅವರು ಅವನನು ಆದರದಿಂದ ಬರಮಾಡಿಕೊಂಡರು. ಮೂರ್ತಿ ಅವರು ಓದಿದ್ದು ಬೀ.ಏ.(ಎಲ್.ಎಲ್.ಬೀ). ವಾಕಿಲರಾಗಿ ಕೆಲಕಾಲ ಕೆಲಸ ಮಾಡಿದರಾದರೂ, ವ್ಯವಸಾಯದಲ್ಲಿ ಅವರ ಆಸಕ್ತಿ. ಮಕ್ಕಳು ತಮಗೆ ಬೇಕಾದ ರೀತಿಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲಿ ಅನ್ನುವುದು ಅವರಾಸೆ. ಅಂತೆಯೇ ಜ್ಯೋತಿ, ಗೆಳೆಯನಂತಹ ತನ್ನ ತಂದೆಗೆ ವಿವರವಾಗಿ ಏನನ್ನೂ ಮುಚ್ಚಿಡದೆ ಎಲ್ಲವನ್ನೂ ವಿವರವಾಗಿ ಹೇಳಿದ್ದಳು. ಇನ್ನೊಂದು ತಿಂಗಳಲ್ಲಿ ಒಳ್ಳೆಯ ಮಹೂರ್ತ ನೋಡಿ ಇಬ್ಬರ ಮದುವೆಯನ್ನು ಮಾಡಿಸಿದರು.

ಜ್ಯೋತಿ ತನ್ನ ಕಿಲಿಮಣೆಯ ಕೆಲಸಕ್ಕೆ ತಿಲಾಂಜಲಿ ಹೇಳಿ ತನ್ನ ಪೂರ್ತಿ ಸಮಯವನ್ನು ಜನಸೇವೆಗೆ ಇಟ್ಟಳು. ಈ ಮಧ್ಯೆ ತಂಗಿ ಪ್ರಿತಿಯನ್ನು ಹಾಸ್ಟೆಲ್ ಗೆ ಹಾಕಲಾಯಿತು. ಅವಳಿಗೋ ಹೊಸ ಜನರೊಂದಿಗೆ ಬೆರೆಯುವುದು ಅಂದ್ರೆ ಪಂಚ ಪ್ರಾಣ. ಅಕ್ಕನಿಂದ ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದ್ರು

ಸಿಗಬೇಕು ಅಂತ ಭಾಷೆ ತಗೊಂಡು ಬಿಳ್ಕೊಟ್ಟಳು. ಮೊದಲ ಒಂದು ವರುಷ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ ಜ್ಯೋತಿಗೆ. ಇಬ್ಬರ ಆಸಕ್ತಿಗಳು ಒಂದೇ ಆಗಿದ್ದಕ್ಕೋ ಏನೋ, ಎಲ್ಲದರಲ್ಲೂ ಹೊಂದಾಣಿಕೆ ಇತ್ತು. ಎಲ್ಲ ಸುಸ್ಥಿತಿಯಲ್ಲಿದೆ ಅನ್ನುವಷ್ಟರಲ್ಲಿ ಅಪಘಾತ ಸಂಭವಿಸಿತು. ಪ್ರೀತಿಯು ಒಂದು ಅಪಘಾತಕ್ಕೆ ತುತ್ತಾಗಿ ತನ್ನ ಕಣ್ಣುಗಯನ್ನೆರಡನ್ನೂ ಕಳೆದುಕೊಂಡಳು. ಇಂತಹ ಕಷ್ಟಕರ ಸ್ಥಿತಿಯಲ್ಲಿ ಗಂಡನ ಪ್ರೋತ್ಸಾಹದಿಂದ ಜ್ಯೋತಿ ತನ್ನ ತಂಗಿಯ ಆರೈಕೆಗೆ ಪಟ್ಟಣಕ್ಕೆ ಹಿಂದಿರುಗಿದಳು. ಜ್ಯೋತಿಯ ತಂದೆ-ತಾಯಿ ಸಹ ಬಂದಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದ ಕಾರಣ ಅವರನ್ನು ಜ್ಯೋತಿ ಊರಿಗೆ ಕಳುಹಿಸಿದಳು.ಗಂಡ ಪ್ರತಿದಿನ ತನಗಾಗಿ - ತನ್ನ ತಂಗಿಗಾಗಿ ಸ್ವ ಇಚ್ಛೆಯಿಂದ ತನ್ನ ಕೆಲಸಗಳನ್ನೂ ಮುಗಿಸಿ ದಣಿದಿದ್ದರೂ ನೆರವಿಗೆ ಬರುವುದನ್ನು ಕಂಡು ಅವಳ ಮನಸ್ಸು ಸಂತೋಷದಿಂದ ಹಿಗ್ಗಿತು. ಕಣ್ಣುಗಳು ತುಂಬಿ ಬಂದುವು.

ಪ್ರೀತಿಯು ಕ್ರಮೇಣ ಗುಣವಾಗುತ್ತ ಬಂದಿದ್ದಳು - ಆದರೆ ಕಣ್ಣುಗಳ ಬಗ್ಗೆ  ಚಿಂತೆ ಇತ್ತು.ಎಲ್ಲ ಕಾಣುತ್ತಿದ್ದವಳಿಗೆ ಒಮ್ಮೆಲೆ ಕತ್ತಲು ಆವರಿಸಿದಾಗ ಎಲ್ಲಿಲ್ಲದ ಖಿನ್ನತೆ ಕಾಡತೊಡಗಿತು. ಹಾಗೆಯೇ ರಮಿಸಲಾಗದ ಹಾಗೇ ಅಳುವುದು ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಜೀವನದ ಮುಂದಿನ ಹಂತವನ್ನೂ ಯೋಚಿಸಿ ಎಲ್ಲರೂ ದುಃಖದಲ್ಲಿದ್ದರು. ಜಗದೀಶ ಮಾತ್ರ ಪ್ರೋತ್ಸಾಹದ ಮಾತುಗಳನ್ನೂ ಆಡುತ್ತ ತನ್ನೆಲ್ಲ ವೃತ್ತಿ ಹಾಗು ಗೆಳೆಯ ವೃಂದದಲ್ಲಿ ಯಾರಾದ್ರೂ ನೇತ್ರ ದಾನಿಗಳು ದಾನ ಮಾಡಿದ ಕಣ್ಣುಗಳು ಸಿಗಬಹುದೇ ಎಂದು ಹುಡುಕಾಟ ಜಾರಿಯಲ್ಲಿ ಇಟ್ಟಿದ್ದ.

--- ೧ ---

ಸುಮಾರು ೧ ವರುಷ ಕಳೆದು ಪ್ರೀತಿ ತನ್ನ ಅಳುವನ್ನು ಕಡಿಮೆ ಮಾಡಿ ತನ್ನ ಹೊಸ ಉಪಕರನಗಳನ್ನು ಬಳಸಲು ಕಲಿಯುತ್ತಿದ್ದಳು. ಜಗದೀಶ ಜ್ಯೋತಿಗೆ ಫೋನಾಯಿಸಿದ. ಅವನ ದನಿಯಲ್ಲಿ ಸಂತಸವಿತ್ತು - ದಾನಿಗಳು ಒಬ್ಬರು ಹಟಾತ್ತಾಗಿ ನಿಧನರಾಗಿದ್ದರಿಂದ ಕಣ್ಣುಗಳ ವ್ಯವಸ್ಥೆ ಆಗಿದ್ದು, ಪ್ರೀತಿಯ ಕಣ್ಣುಗಳು ಸರಿಯಾಗುವುದು ಇನ್ನು ಕೆಲವೇ ತಿಂಗಳುಗಳ ವಿಷಯ ಎಂದು ಅವನು ಹೇಳಿದಾಗ ಜ್ಯೋತಿಯು ಸಂತೋಷದಿಂದ ಹಿಗ್ಗಿದಳು. ಪ್ರೀತಿಗೆ ಇದನ್ನು ಹೇಳಿ ಅವಳನ್ನು ಹುರಿದುಂಬಿಸಿದಳು. ಗಂಡನು ಬರುವ ಹಾದಿಯನ್ನು ಕಾಯುತ್ತ, ಪ್ರಿತಿಯನ್ನು ಮಾತನಾಡಿಸುತ್ತ ಕುಳಿತಳು.

ಸ್ವಲ್ಪ ಸಮಯದಲ್ಲಿ ಜಗದೀಶನ ಮೊಬೈಲಿನಿಂದ ಕರೆ ಬಂದಿತು. ಆದರೆ ಅತ್ತಕಡೆಯಿಂದ  ಮಾತನಾಡುತ್ತಿದ್ದುದು ಜಗದೀಶನಾಗಿರಲಿಲ್ಲ.

"ಹಲೋ... ಎಮ್ ಐ ಸ್ಪೀಕಿಂಗ್ ಟು ಮಿಸ್ಸೆಸ್ ಜಗದೀಶ್? ಮೇಡಂ,ಮೈ ನೇಮ್ ಇಸ್ ಅಜಯ್. ನಿಮ್ಮ ಗಂಡ ಒಂದು ಅಫಘಾತಕ್ಕೆ ತುತ್ತಾಗಿದ್ದಾರೆ; ರೋಡ್ ಕ್ರಾಸ್ ಮಾಡ್ಬೇಕಾದ್ರೆ ಸಿಗ್ನಲ್ ಗಮನಿಸದೇ ಕಾರ್ ಒಂದು ಅವರ ಮೇಲೆ ಹಾದು ಹೋಯ್ತು. ತಾವು ಮಣಿಪಾಲ್ ಆಸ್ಪತ್ರೆಗೆ ಬನ್ನಿ. ಅಲ್ಲಿ ಕರ್ಕೊಂಡು ಬಂದಿದ್ದೇವೆ", ಎಂದವನೇ ಇತ್ತು ಬಿಟ್ಟನು.

ಆಕಾಶವೇ ಕಳಚ ಬಿದ್ದಂತೆ ಆಗಿತ್ತು ಜ್ಯೋತಿಗೆ. ದುಃಖದಿಂದ ಪದಗಳು ಹೊರಮೊಮ್ಮುತ್ತಿಲ್ಲ. ಪಕ್ಕ ಕೂತಿದ್ದ ಪ್ರೀತಿಯೇ ಒಂದೂ ಅರ್ಥವಾಗ್ತಿಲ್ಲ.

"ಅಕ್ಕಾ! ಏನಾಯ್ತು. ನಿನ್ಯಾಕೆ ಅಳತಿದ್ದೀಯ!?", ಅಂದಳವಳು ಬೆಚ್ಚಿಬಿದ್ದು.

"ಏನಿಲ್ಲ ಪುಟ್ಟ. ನಿನ್ನ ಭಾವಂಗೆ ಚಿಕ್ಕ ಆಕ್ಸಿಡೆಂಟ್ ಆಗಿದೆಯಂತೆ - ನೋಡ್ಕೊಂಡು ಬರೋಣ ಬಾ...", ಅಂತ ಬಿಕ್ಕಳಿಸುತ್ತ ಅಳುವನ್ನು ತಡೆ ಹಿಡಿದವಳು ತಂಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದಳು. ದಾರಿಯಲ್ಲಿ ಹೋಗುತ್ತಾ ತಂದೆ-ತಾಯಿಗೆ ವಿಷಯ ತಿಳಿಸಿದಳು.

ಆಸ್ಪತ್ರೆಯಲ್ಲಿ ಧಾವಿಸಿ ಅಜಯ್ ಗೆ ಫೋನಾಯಿಸಿದಳು. ಅಜಯ್ ಅವಳನ್ನು ಭೆಟ್ಟಿಯಾಗಿ ಓ.ಟಿ.ಅತ್ತ ಅವರನ್ನು ಕರೆದೊಯ್ದ. ೧೫ ನಿಮಿಷ ಕಳೆದ ನಂತರ ಹೊರಬಂದ ಡಾಕ್ಟರ್ "ಐ ಯಾಂ ಸಾರಿ... ನಿಮ್ಮ ಗಂಡನನ್ನು ಬದುಕಿಸಿಕೊಡೋಕ್ಕೆ ಆಗ್ಲಿಲ್ಲ", ಎಂದುಬಿಟ್ಟರು.

ಜ್ಯೋತಿಗೆ ಮಾತೇ ಹೊರಡಲಿಲ್ಲ. ಸುಮ್ಮನಾಗಿಬಿಟ್ಟಳು. ಪ್ರೀತಿ ಮೆಲ್ಲನೆ "ಭಾವ... ಭಾವ..." ಅಂತ ಕಿರುದನಿಯಲ್ಲಿ ಅಳಹತ್ತಿದಳು.

ಎರಡು ತಿಂಗಳುಗಳು ಬೇಕಾಯಿತು ಜ್ಯೋತಿ ಮತ್ತೆ ಸಾಮಾನ್ಯವಾಗಿ ಮಾತನಾಡಲು. ಬದುಕಿದ್ದಾಗ ಜಗದೀಶ ತನ್ನ ಅಂಗಾಂಗಗಳನ್ನೂ ಮರನಾಂತರ ದಾನ ಮಾಡಬೇಕು ಎಂದು ಬರೆದು ಕೊಟ್ಟಿದ್ದ. ಅವನ ಕಣ್ಣುಗಳು, ಹೃದಯ, ಕಿಡ್ನಿಗಳನ್ನೂ  ದಾನ ಮಾಡಲಾಯಿತು.

ಪ್ರೀತಿಗೆ ಇನ್ನೊಮ್ಮೆ ಶಸ್ತ್ರಚಿಕಿತ್ಸೆ ನಡೆದು ಹೊಸ ಕಣ್ಣುಗಳು ಬಂದುವು. ಇದೆಲ್ಲ ಆಗಲು ಸುಮಾರು ೧ ವರುಷ ಸಮಯ ಬೇಕಾಯಿತು.

ಈ ಮಧ್ಯೆ, ಪ್ರೀತಿ ತಾನು ಮತ್ತೊಮ್ಮೆ ಕೀಲಿಮಣೆ ಕೈಗೆ ತಗೆದುಕೊಂಡಳು. ತಾನು ತನ್ನ ಗಂಡನೊಡನೆ ಸೇರಿ ಮಾಡುತ್ತಿದ್ದ ಸಮಾಜ ಸೇವೆಯನ್ನೂ ಸಹ ಮುಂದುವರಿಸಿಕೊಂಡು ಹೋದಳು. ಹೊಸ ಜನರನ್ನು ಭೆಟ್ಟಿಯಾದಳು - ಅವರ ಸುಖ-ದುಃಖಗಳಲ್ಲಿ ಪಾಲ್ಗೊಂಡಳು. ಪ್ರೀತಿ ತನ್ನ ವ್ಯಾಸಂಗವನ್ನು ಮುಗಿಸಲು ಮತ್ತೆ ಓದನ್ನು ಪ್ರಾರಂಭಿಸಿದಳು - ಓದು ತಲೆಗೆ ಎಷ್ಟು ಹತ್ತೊತ್ತೋ ಗೊತ್ತಿಲ್ಲ; ಆದರೆ ಅಕ್ಕನಿಗೆ ಸಹಾಯ ಮಾಡ್ಬೇಕು ಅನ್ನೋ ಆಸೆ ಮಾತ್ರ ಇದ್ದೇ ಇದೆ. ತಂದೆ-ತಾಯಿ ಆಗಾಗ ಬಂದು ಹೋಗ್ತಿರ್ತಾರೆ; ಇನ್ನು ಕೆಲವು ವರ್ಷಗಳಲ್ಲಿ ಎಲ್ಲರೂ ಜೊತೆಗಿರುವ ಪ್ಲಾನ್ ಇದೆ.

--- ೦ ---

"ಅಕ್ಕಾ, ಇವತ್ತು ಎಲ್ಲಿ ತಿರ್ಗಾಡೋಣ? ಆಫ್ಟರಾಲ್ ಇವತ್ತು ಭಾವನ ಬರ್ತ್ಡೇ!", ಎಂದಳು ಪ್ರೀತಿ.

"ಪ್ರೀತಿ... ನೀನು ನನ್ನ ಬಂಗಾರ ಕಣೆ. ನಿನ್ನ ಭಾವ ನನಗೆ ನೀಡಿದ ಉಡುಗೊರೆ ನೀನು. ಎಲ್ಲಿ ಹೋಗೋಣ ಹೇಳು"