Thursday, May 22, 2008

ತಾರಾಯಣ - ೨

'ಇಸ್ರೋ'ದವನು ಎಂದು ಬಂದು, ಎಲ್ಲರಿಗೂ ಮೋಸ ಮಾಡಿ, ಆ ವ್ಯಕ್ತಿ ಓಡಿಹೋಗಿ ೮ ವರ್ಷಗಳೇ ಕಳೆದು ಹೋಗಿದ್ದವು; ನಾನು ಆರನೇಯ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದೆ.

ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳು ಹತ್ತಿರ ಬರುತ್ತಿದ್ದುವು. ಹುಡುಗರು ತರಗತಿಗಳಿಗೆ ಬರುವುದನ್ನು ಕಡಿಮೆ ಮಾಡಿ ತಮ್ಮ ತಮ್ಮ ಮನೆ ಅಥವ ಹಾಸ್ಟೆಲ್ ರೂಮುಗಳಲ್ಲಿ ಕುಳಿತು ಓದುವುದನ್ನು ಶುರು ಮಾಡಿದ್ದರು. ಇಂತಹ ಒಂದು ದಿನ ನಾನು ನನ್ನ ತರಗತಿಯಲ್ಲಿ ಕುಳಿತಿದ್ದೆ; ನಮ್ಮ ವಿಭಾಗದಿಂದ ಉತ್ತಮ ಅಂಕಗಳನ್ನು ಗಳಿಸಿದ ೧೦ ಮಂದಿ ವಿದ್ಯಾರ್ಥಿಗಳನ್ನು ಕೂಡಲೆ ಪ್ರಾಂಶುಪಾಲರ ಕೊಠಡಿಯ ಹತ್ತಿರ ಬರಬೀಕಾಗಿ ಬುಲಾವು ಬಂದಿತು. ಸರಿ, ಏಕೆ ಕರೆದಿದ್ದಾರೆ ಎಂದು ಗೊತ್ತಿರಲಿಲ್ಲವಾದರೂ ಅಟೆಂಡರುಗಳಿಗೆ ವಿಷಯವೇನೆಂದು ಕೇಳಿ ತಿಳಿದುಕೊಂಡೆವು. ಆಫೀಸಿನ ಮುಂದೆ ಇದ್ದ ಆಸನಗಳಲ್ಲಿ ಕುಳಿತುಕೊಂಡೆವು - ಮೆಕ್ಯಾನಿಕಲ್ ವಿಭಾಗದಿಂದ ಹುಡುಗರು ಇಸ್ತ್ರಿ ಮಾಡಿದ ಶರ್ಟು, ಟೈ ಹಾಕಿಕೊಂಡು ಬಂದಿದ್ದನ್ನು ಕಂಡು ನನಗೆ ಒಳಒಳಗೆ ವ್ಯಂಗ ನಗೆ ಉಕ್ಕಿ ಬರುತ್ತಿತ್ತು - ತಡೆದುಕೊಂಡು ಸುಮ್ಮನೆ ಕುಳಿತಿದ್ದೆ; ಅಲ್ಲಾ, ಬರುತ್ತಿರುವ ಒಬ್ಬ ವಿಜ್ಞಾನಿಯನ್ನು ನೋಡಲು ಸಿಂಗರಿಸಿಕೊಂಡು ಬರುವ ಅವಶ್ಯಕತೆಯಾದರೂ ಏನಿತ್ತು ಎನ್ನುವುದು ನನ್ನ ವಾದ! ಆದರೆ ನನಗೆ ಸಂಭಂದವಿಲ್ಲದ ವಿಷಯ ಅಂತಾ ಸುಮ್ಮನಾದೆ. ಹದಿನೈದು ನಿಮಿಷ ಎಂದು ಹೋದವರು ಒಂದು ಘಂಟೆಯಾದರು ಯಾವ ನರಪಿಳ್ಳೆಯು ನಮ್ಮೆಡೆಗೆ ತಿರುಗಿ ನೋಡುತಿಲ್ಲವಾದ್ದರಿಂದ ಬೇಸರವಾಗುತ್ತಿತ್ತು - ಸುಮ್ಮನೆ ತರಗತಿಯಲ್ಲಿ ಕುಳಿತು ಪಾಠವನ್ನಾದರೂ ಕೇಳುತಿದ್ದೆನಲ್ಲ ಎಂದು ಮನಸ್ಸಿನಲ್ಲಿಯೇ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಿಗೆ ಹಿಡಿ ಶಾಪ ಹಾಕುತ್ತ ಕುಳಿತಿದ್ದೆ.

ಆಫೀಸು ಅಂದರೆ ಜನ ಹೋಗೋದು-ಬರೋದು ಇದ್ದೆ ಇರುತ್ತದೆ. ಜನರನ್ನು ನೋಡುತ್ತ ಗುಣಾಕಾರ-ಭಾಗಾಕಾರ ಹಾಕುತ್ತ, ಗೆಳೆಯರೊಡನೆ ಮಾತನಾಡುತ್ತ ಕುಳ್ತಿದ್ದೆ. ಅಷ್ಟರಲ್ಲಿ ಒಂದು ಪರಿಚಿತ ಮುಖ ಕಂಡಂತಾಯಿತು - "ಅರೆ! ನಮಗೆಲ್ಲ ಮೋಸ ಮಾಡಿದ 'ಇಸ್ರೊ ವಿಜ್ಞಾನಿ'! ಆದರೆ ಏಕೋ ಅನುಮಾನ... ಇವನೇಕೆ ಇಲ್ಲಿಗೆ ಬಂದಿದ್ದಾನೆ? ಇವನೇ ಅವನೋ?ಇರಲೇಬೇಕು - ಸಿಗರೇಟು ಊದಿ ಚಪ್ಪಟೆಯಾದ ಮುಖ, ಟೀ-ಶರ್ಟು ಜೀನ್ಸು... ಹಂ... ವಿಜಯ ( ನನ್ನ ತಮ್ಮ ) ನಿಗೆ ಕೇಳಿ ನೋಡಬೇಕು. ಅವನು ಇವನೇ ಆಗಿದ್ದರೆ ನಾಲ್ಕು ತದಕಿ ನಮ್ಮ ದುಡ್ಡನ್ನು ಹಿಂತಗೆದುಕೊಳ್ಳಬೇಕು. ದುಡ್ಡು ಬೆಡ - ಆದರೆ ಮೋಸಗಾರನನ್ನು ಬಿಡಬಾರದು!", ಎಂದು ಅಂದುಕೊಂಡೆ. ಆ ವಿಜ್ಞಾನಿ ನೆಟ್ಟಗೆ ಪ್ರಾಂಶುಪಾಲರ ಕೊಠಡಿಯನ್ನು ಹೊಕ್ಕ - ನನಗೆ ತಿಳಿದು ಹೋಗಿತ್ತು. ಮತ್ತೆ ಮೋಸ ಮಾಡಲು ಬಂದಿದ್ದ ಮಹಾಶಯ! ಕಳ್ಳನನ್ನು ಹಿಡಿದುಬಿಟ್ಟೆ ಎಂಬ ಸಂತೋಷ ತುಂಬಿ ತುಳುಕುತ್ತಿತ್ತು - ಹಿಡಿದಿರಲಿಲ್ಲ; ಅದು ಬೇರೆಯ ಮಾತು ಆದರೆ ಇಷ್ಟು ವರ್ಷಗಳ ನಂತರ ಅವನನ್ನು ಗುರುತು ಹಿಡಿದಿದ್ದೆನಲ್ಲ? ಪಕ್ಕದಲ್ಲೆ ಇದ್ದ ತಮ್ಮನನ್ನು ವಿಚಾರಿಸಿದೆ - ಅವನಿಗೆ ನೆನಪೇ ಇರಲಿಲ್ಲ :( ಆದರೆ ನಾನು ಬಿಡಬೇಕಲ್ಲ?! ಅವನಿಗೆ ನೆನಪಿಸಿದೆ.

ಆಗಲೆ ಮಧ್ಯಾಹ್ನದ ೧ ಘಂಟೆಯಾಗಿದ್ದರಿಂದ ಊಟದ ನಂತರ ಕಾಲೇಜಿನಲ್ಲಿ ಸೇರುವುದಾಗಿ ಸುದ್ದಿ ಬಂತು. ಊಟವಾದ ಮೇಲೆ ನೋಡಿಕೊಳ್ಳೊದು ಇವನನ್ನ ಎಂದುಕೊಂಡು ನಮ್ಮ ಮಾಮೂಲಿ ತಾಣವಾದ 'ಕೆ.ಬಿ. ಮೆಸ್'ಗೆ ನಡೆದೆವು. ಊಟ ಮಾಡುತ್ತ ಸಹ ಅವನ ವಿಚಾರವೇ ನನ್ನೆ ತಲೆಯಲ್ಲಿ. ಹಿಂದಿರುಗಿ ಹೋದ ಮೇಲೆ ಅವನನ್ನು ಹಿಡಿದು ಬಡೆಯುವ ಮಹದಾಸೆ! ಬೇಗನೆ ಊಟ ಮುಗಿಸಿ ದಾರಿಯಲ್ಲಿ ಸಿಕ್ಕ ಎಲ್ಲ ಮಿತ್ರರಿಗೆ 'ತಾರಾಯಣ - ೧' ವಿವರಿಸಿ ಕಾಲೇಜಿಗ ಬಂದದ್ದಾಯಿತು. ನಮ್ಮ ವಿಭಾಗದ ಒಂದು ಕೊಠಡಿಯಲ್ಲಿ ಕೂಡಲು ವ್ಯವಸ್ಥೆಯನ್ನು ಮಾಡಲಾಗಿತ್ತು. ನಮ್ಮ ವಿಭಾಗದ ಮುಖ್ಯಸ್ಥರು ಮ್ರುದು ಸ್ವಭಾವದವರು - ನಾನು ಅವರಲ್ಲಿ ಹೋಗಿ,"ಸರ್... ಈ ವ್ಯಕ್ತಿಯ ಮೇಲೆ ನನಗ್ಯಾಕೋ ಅನುಮಾನ! ಹಿಂದೊಮ್ಮೆ ನಮ್ಮ ಶಾಲೆಗೆ ಬಂದು ಹುಡುಗರಿಗೆಲ್ಲ ಮೋಸ ಮಾಡಿದ್ದ. ಒಮ್ಮೆ ಇವರ ಬಗ್ಗೆ ವಿಚಾರಿಸಿ ಖಾತ್ರಿ ಪಡೆಸಿ", ಎಂದು ಕೇಳಿಕೊಂಡೆ. ಅವರು ನನ್ನ ಮಾತಿಗೆ ಬೆಲೆ ಕೊಟ್ಟ ಹಾಗೆ ಕಾಣಲಿಲ್ಲ - "ನೋಡೋಣ" ಎಂದರಷ್ಟೆ. ಇನ್ನೊಂದು ವಿಭಾಗದ ಮುಖ್ಯಸ್ಥರಿಗೂ ಹೇಳಿದ್ದಾಯಿತು - ಏನೋ ಹೊರಡಲಿಲ್ಲ.

ಕೊಠಡಿಯಲ್ಲಿ ಕೂತು ಇನ್ನೊಂದು ಘಂಟೆಯಾಗಿತ್ತು. ಬಂದರು ಮಹಾಶಯರು. ಆವರೋಡನೆ ವಿಭಾಗಗಳ ಮುಖ್ಯಸ್ಥರಿಬ್ಬರು ಬಂದಿದ್ದರು. ನಾನು ಹೇಳಿದ ಹಾಗೆಯೇ ಆಯಿತು! ಅವನು ತಾರ ಮಂಡಲ, ವಿಜ್ಞಾನ ಎಂದೆಲ್ಲ ಮಾತನಾಡಿದ. ಪ್ರಶ್ಣೆಗಳನ್ನು ಕೇಳಿದ ಹಾಗು ಕೆಲ ವಿದ್ಯಾರ್ಥಿಗಳನ್ನೂ ಆರಿಸಿಕೊಂಡ. ದೆಹಲಿಯಲ್ಲಿ ನಡೆಯುವ ಯಾವುದೋ ಕಾರ್ಯಕ್ರಮಕ್ಕೆ ಇದು ಆಯ್ಕೆ ಎಂದು ನಂಬಿಸಲು ಪ್ರಯತ್ನಿಸಿದ. ಆಯ್ದ ವಿದ್ಯಾರ್ಥಿಗಳು ಇವನೊಡನೆ ಹೋಗಬೇಕಂತೆ ದೆಹಲಿಗೆ! ಮತ್ತೆ ಬರುವುದಾಗಿಯು, ನಾವುಗಳು ಅವನೊಡನೆ ಬರಲು ಸಿದ್ಧರೋ ಇಲ್ಲವೋ ಎಂಬುದನ್ನು ತಿಳಿಸಬೇಕೆಂದು ಹೇಳಿ ಹೋಗಿಬಿಟ್ಟ. ಅಯ್ಯೊ ದೇವರೆ, ಒಂದು ಕ್ಯಾಮರಾನಾದರು ಇದ್ದಿದ್ದರೆ "ವಾಂಟೆಡ್" ಅಂತ ಹಾಕಿಸಿಬಿಡಬಹುದಾಗಿತ್ತಲ್ಲ ಅಂತ ಒಳಒಳಗೆ ಕಳಾವಳವುಂಟಾಯಿತಾದರು ಮುಖ್ಯಸ್ಥರನ್ನು ನಂಬಿ ಸುಮ್ಮನಾಗಿದ್ದೆ. ತಪ್ಪು ಮಾಡಿಬಿಟ್ಟೆ!

(ಸಾರಾಂಶ: ಭಯ-ಆಲಸ್ಯಗಳನ್ನು ಬಿಟ್ಟು ಕಣ್ಣಿಗೆ ಕಾಣುವ ಅನ್ಯಾಯ-ಮೋಸ-ವಂಚನೆಯನ್ನು ಮಾಡುವ ನೀಚರನ್ನು ಸುಮ್ಮನೆ ಬಿಡಬಾರದು. ಅದು ಅವರಿಗೆ ಪ್ರೋತ್ಸಾಹವಾಗಿ ಪರಿಣಮಿಸುತ್ತದೆ.)

Sunday, May 11, 2008

ತಾರಾಯಣ - ೧

ಇದು ನಡೆದದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ಎಂಟನೇಯ ತರಗತಿಯಲ್ಲಿದ್ದಿದ್ದಿರಬೇಕು ನಾನು. ತರಗತಿಯಲ್ಲಿ ಕುಳಿತು ಓದುವುದನ್ನು ಬಿಟ್ಟರೆ ಆಟಾ ಆಡೋದರ ಬಗ್ಗೆ ಹಗಲುಗನಸನ್ನು ಕಾಣೋದು ನನ್ನ ಇಷ್ಟವಾದ ಕೆಲಸಗಳಲ್ಲಿ ಒಂದಾಗಿತ್ತು. ಇಂತಹ ಒಂದು ದಿನ ಬೆಳಗಿನ ಜಾವ ನಮ್ಮ ಕ್ಲಾಸ್ ಟೀಚರ್ ತರಗತಿಗೆ ಬಂದವರೇ ಇಸ್ರೋ ಸಂಸ್ಥೆಯಿಂದ ಒಬ್ಬ ವಿಜ್ನಾನಿ ಬಂದಿರುವುದಾಗಿಯು, ತಾರಾಮಂಡಲವನ್ನು ಕುರಿತು ನಮಗೆ ಮಾಹಿತಿಯನ್ನು ನೀಡುವುದಾಗಿತು ಹೇಳಿದರು. ಆವರ ಹಿಂದೆ ನಿಂತಿದ್ದ ವಿಜ್ನಾನಿ ಮುಂದೆ ಬಂದು ನಮ್ಮನ್ನು ಕುರಿತು ಮಾತನಾಡಹತ್ತಿದರು. ತಮ್ಮೊಡನೆ ಅವರು ಬಹಳಷ್ಟು ಚಿತ್ರಪಟಗಳನ್ನು ಹಾಗು ಇಸ್ರೋದ ಬಗ್ಗೆ ಲೇಖನಗಳನ್ನು ತಂದಿದ್ದು, ಅದನ್ನು ನಮಗೆಲ್ಲ ವಿಸ್ತಾರವಾಗಿ ವಿವರಿಸಿದರು. ಅವರ ಭಾಶೆ ಸಾಮನ್ಯ ಹಾಗು ಉತ್ಸಾಹಪೂರ್ಣವಾಗಿದ್ದರಿಂದಾಗಿ ಅರ್ಥವಾಗೋದು ಕಷ್ಟವಾಗಿರಲಿಲ್ಲ; ಹುಡುಗರೆಲ್ಲ ಆಸಕ್ತಿಯಿಂದ ಕೇಳಿದರು. ಇಸ್ರೋವಿನ ವಿಜ್ನಾನಿ ಅಂತ ನಂಬೋದು ನನಗೇಕೊ ಸ್ವಲ್ಪ ಕಷ್ಟವಾಗುತ್ತಿತ್ತು - ಜೀನ್ಸ್ ಪ್ಯಾಂಟು, ಟೀ ಶರ್ಟು ಹಾಗು ಬಾಯಲ್ಲಿ ಏನೋ ಅಗೆಯುತ್ತಿರುವುದನ್ನು ಗಮನಿಸಿ ನನ್ನ ಮನಸ್ಸಿನಲ್ಲಿದ್ದ ವಿಜ್ನಾನಿಯ ಚಿತ್ರಕ್ಕೆ ಈ ಮಹಾಶಯನನ್ನು ಹೋಲಿಸಿ, ವಿರೋಧಾಭಾಸವಾಗಿ ಸ್ವಲ್ಪ ಸಮಯ ಸುಮ್ಮನೆ ಕುಳಿತು ಬಿಟ್ಟಿದ್ದೆ.

ಅಷ್ಟರಲ್ಲಿ ವಿಜ್ನಾನಿಗಳು ತಮ್ಮ ಮಾತುಗಳನ್ನು ಮುಗಿಸಿ ಆಗಿತ್ತು. ಅವರು ನಮ್ಮ ಮೇಷ್ಟ್ರೊಡನೆ ಏನೋ ಮಾತನಾಡಿ ಅಲ್ಲಿಂದ ಹೊರಟು ಹೋದರು. ಮೇಷ್ಟ್ರು ತರಗತಿಗೆ ಹಿಂತಿರುಗಿ, ವಿಜ್ನಾನಿಗಳು ನಮಗೆಲ್ಲ ಟೆಲಿಸ್ಕೋಪ್ ಮಾಡುವುದನ್ನು ತೋರಿಸಿಕೊದುವುದಾಗಿಯು, ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಕೋಡಬೇಕಾಗಿಯು ಹೇಳಿದರು. ಟೆಲಿಸ್ಕೋಪ್ ತಯಾರಿಸಲು ಬೇಕಾದ ಸಾಮಗ್ರಿಗಳ ಪಟ್ಟಿಯನ್ನು ನಮಗೆ ಹೇಳಲಾಯಿತು. ಎರಡು-ಮೂರು ಮಂದಿ ಕೂಡಿ ಸಹ ಒಂದು ಟೆಲಿಸ್ಕೋಪ್ ಮಾಡಬಹುದು ಎಂದು ಹೇಳಿದರು. ಇಂತಹುದರಲ್ಲೆಲ್ಲ ನನಗೆ ಆಸಕ್ತಿ ಕಡಿಮೆ ಇದ್ದುದ್ದರಿಂದ ಸುಮ್ಮನಿದ್ದೆ. ಆದರೆ ನನ್ನ ಪಕ್ಕಕ್ಕೆ ಕುಳಿತಿದ್ದ ನನ್ನ ಮಿತ್ರನೋಬ್ಬ ( ದೀಪಕ್ ಅಲಿಯಾಸ್ ದೀಪು ) ನಾವು ಕೂಡಿ ಮಾಡೋಣವೆಂದು ಕುಳಿತುಬಿಟ್ಟ! ಸರಿ, ಇನ್ನೇನು ಎಂದು ಒಪ್ಪಿಕೊಂಡೆ.

ನಾವೆಲ್ಲ ಸೇರಿ ಸಾಮಗ್ರಿಗಳ ಪಟ್ಟಿಯನ್ನು ಗಮನಿಸಿ ನೋಡಿದಾಗ ಅದರಲ್ಲಿ ಕೇವಲ ಒಂದು ಕನ್ನಡಿ ಹಾಗು ಒಂದು ಲೆನ್ಸ್ ಇದ್ದುದ್ದನ್ನು ಕಂಡು ಅಚ್ಚರಿಯಾಯಿತು - ಯಾಕೋ ಇದು ಸರಿ ಅಲ್ಲ ಅನ್ನಿಸಿತಾದರು ನಮ್ಮ ಮೇಷ್ಟ್ರೇ ಇದಕ್ಕೆ ಚಕಾರವೆತ್ತಿಲ್ಲವಾದ್ದರಿಂದ ನಾವು ಸುಮ್ಮನಾದೆವು. ಎಲ್ಲ ಸಾಮಗ್ರಿಗಳು ಕೊಂಡದ್ದಯಿತು; ಮುಂದಿನ ರವಿವಾರ ಅದನ್ನೆಲ್ಲ ಎತ್ತಿಕೊಂಡು ನಮ್ಮ ಶಾಲೆಯನ್ನು ನಡೆಸುವ ಸಂಸ್ಥೆಯ ಇನ್ನೊಂದು ಶಾಲೆಗೆ ಹೋದೆವು. ಅಲ್ಲಿ ನಮ್ಮಂತೆ ಬಹಳಷ್ಟು ಹುಡುಗರು ಆಗಲೆ ಬಂದು ನಿಂತಿದ್ದರು. ನಮ್ಮ ಮೇಷ್ಟ್ರು ಕಾಣಾದಿದ್ದ ಕಾರಣ ನಾನು ಅಲ್ಲಿಯ ಶಿಕ್ಷಕರ ಕೊಠಡಿಗೆ ಹೋಗಿ ಅಲ್ಲಿ ವಿಚಾರಿಸುತ್ತಿರುವಾಗ ನನ್ನ ಕಣ್ಣಿಗೆ ಆ ವಿಜ್ನಾನಿಗಳು ಬಿದ್ದರು; ಬಾಯಲ್ಲಿ ಪಾನ್/ಗುಟುಖ ಹಾಕಿ ಜಗೆಯುತ್ತ ಕಿವಿಗೆ ವಾಕ್ ಮ್ಯಾನ್ ಹಾಕಿಕೊಂದಿದ್ದರು; ಕಣ್ಣು ಮುಚ್ಚಿ ಸಂಗೀತ ಕೇಳುವುದರಲ್ಲಿ ಮಗ್ನರಾಗಿದ್ದರು. ಸಿಗರೇಟು ಊದಿ ತೆಗ್ಗು ಬಿದ್ದ ಗಲ್ಲ; ಹರಿದ ಜೀನ್ಸ್ ಪ್ಯಾಂಟು ನೋಡಿ ನನಗೆ ಇವನು ಮೋಸಗಾರನಾಗಿರಬಾರದೇಕೆ ಎಂಬ ಬಲವಾದ ಶಂಕೆ ಮನಸ್ಸಿನ್ನಲ್ಲಿ ಮೂಡಿತಾದರು ಅದನ್ನು ನಿಜವೆಂದು ಸಾಧಿಸಲು ಯಾವ ಸಾಧನವೂ ಇರಲಿಲ್ಲ. ಅಷ್ಟರಲ್ಲಿ ನಮ್ಮ ಮೇಷ್ಟ್ರು ನನ್ನ ಕಣ್ಣೀಗೆ ಬಿದ್ದಿದ್ದರಿಂದಾಗಿ ಅವರಿಗ ಮಾತನಾಡಿಸಲು ಹೋದೆ.

ಟೆಲಿಸ್ಕೋಪ್ ನಿರ್ಮಾಣ ಶುರುವಾಯಿತು; ಶಾಲೆಯ ತುಂಬ ಮಕ್ಕಳು ಪೈಪಿನ ತುಂಡುಗಳು ಹಾಗು ಫೆವಿಕಾಲಿನ ಬಾಟ್ಲಿಗಳನ್ನ ಹಿಡಿದು ಕುಳಿತಿದ್ದರು. ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಲೆನ್ಸುಗಳ ನೆನಪಾಯಿತು - ಅದಿಲ್ಲದೆ ಈ ಸಾಧನ ಅಪೂರ್ಣ. ಶಿಕ್ಷಕರು ಹಾಗು ವಿಜ್ನಾನಿಯಲ್ಲಿ ಏನು ಮಾತಾಯಿತೊ ಗೊತ್ತಿಲ್ಲ; ನಾವೆಲ್ಲ ಲೆನ್ಸಿಗೆಂದು ನಲವತ್ತು ರೂಪಾಯಿ ಕೊಡಬೇಕೆಂದು ಸುದ್ದಿ ಬಂದಿತು. ಮಿತ್ರನೊಬ್ಬನಿಗೆ ಇನ್ನು ಒಳ್ಳೆಯ ಲೆನ್ಸು ತರುವುದಾಗಿ ವಿಜ್ನಾನಿ ಹೇಳಿದ್ದರಿಂದ ಅವನು ಎಂಭತ್ತು ರೂಪಾಯಿ ಕೊಡಲು ಸಿದ್ಧನಾಗಿದ್ದನು. ಲೆನ್ಸು ಇನ್ನೆರಡು ದಿನಗಳಲ್ಲಿ ಕಳುಹಿಸುವುದಾಗಿ ಹೇಳಿ ದುಡ್ಡನ್ನೆಲ್ಲ ಕೂಡಿಸಿಕೊಂಡು ಹೋದ ಆಸಾಮಿ ನಾಪತ್ತೆ!

ಸುಮಾರು ನಾಲ್ಕೈದು ಸಾವಿರ ದುಡಿದುಕೋಡಿದ್ದಿರಬೇಕು ಅವನು. ಆದರೆ ಬೇಸರದ ಸಂಗತಿ ಏನೆಂದರೆ ನಮ್ಮ ಮೇಷ್ಟ್ರು ಈ ವಿಷಯವನ್ನು ನಮಗೆ ಹೇಳದೇ ಇದ್ದದ್ದು. ಯಾರು ಎಷ್ಟೇ ದೊಡ್ಡವರಾಗಿದ್ದರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಇದ್ದಿದ್ದರೆ ಎಷ್ಟು ಚೆನ್ನಗಿರ್ತಿತ್ತು ಅಂತ ನನಗೆ ಹಲವಾರು ಬಾರಿ ಅನಿಸಿದೆ; ನೆಟ್ಟಗೆ ಜನರನ್ನು ಅಳೆಯಲು ಬಾರದ ೮ ನೆಯ ತರಗತಿಯ ಬಾಲಕರಿಗೇ ಸಂಶಯ ಬಂದಾಗ ಜಗತ್ತು ನೋಡಿದ, ವಿವೇಚನೆಯುಳ್ಳ ಮೇಷ್ಟ್ರು ವಿಜ್ನಾನಿಯ ಬಗೆಗಾಗಿ ವಿಚಾರಣೆಯನ್ನು ಮೊದಲೇ ನಡೆಸಿ, ವ್ಯಕ್ತಿ ಇಸ್ರೋದವನೇ ಎಂದು ಖಾತ್ರಿ ಪಡೆಸಬಹುದಿತ್ತಲ್ಲವೆ?

(ಸಾರಾಂಶ: ಅಪರಿಚಿತರಲ್ಲಿ ಏಕೆ?ಏನು?ಹೇಗೆ?ಯಾರು? ಎಂದೆಲ್ಲ ಪ್ರಶ್ನೆಗಳನ್ನು ಕೇಳುವುದು, ಪರಿಚಯದವರಿಂದ ಅವರ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಮೇಲೆ ನಡೆದಂತಹ ಮೂರ್ಖತನವನ್ನು ತಡೆಯಲು. ನಮ್ಮ ಮೂರ್ಖತನದಿಂದಲೇ ತಮ್ಮ ಕಿಸೆಯನ್ನು ತುಂಬಿಸಿಕೊಳ್ಳೋರು ಹಲವಾರು ಜನ. ಯಾರೇ ಇರಲಿ, ಪ್ರತ್ಯಕ್ಷ ಕಂಡರು ಪ್ರಂಮಾಣಿಸಿ ನೋಡು!)

Wednesday, May 7, 2008

ಭಿಕ್ಷೆ - ೧

ಇದು ನನ್ನ ಕಾಲೇಜು ದಿನಗಳಲ್ಲಿ ನಡೆದ ಘಟನೆ. ನಾನು ಮೊದಲನೇಯ ಸೆಮಿಸ್ಟರ್ ಇಂಜಿನಿಯರಿಂಗ್ ಮಾಡುತ್ತಿರುವ ಸಮಯ. ಪ್ರತಿ ದಿನದಂತೆ ನನ್ನ ಜೊತೆ ನನ್ನ ತಮ್ಮ ಹಾಗು ನಮ್ಮ ಮಿತ್ರ ( ಹಾಗು 'ಸೀನಿಯರ್') ಮುದಸ್ಸರ್, ಅಲಿಯಾಸ್ 'ಮುದ್ದು' ಕೂಡಿ ಮನೆಯಿಂದ ನಡೆದು ಬಸ್ ಸ್ಟಾಪಿನೆಡೆಗೆ ನಡೆದೆವು; ಮಾತನಾಡುತ್ತ, ಅತ್ತ-ಇತ್ತ ನೋಡುತ್ತ ಹತ್ತು ನಿಮಿಷಗಳಲ್ಲಿ ಸ್ಟಾಪಿನಲ್ಲಿದ್ದೆವು. ನೇರವಾಗಿ ನಮ್ಮ ಕಾಲೇಜಿಗೆ ಹೋಗುವುದಕ್ಕೆ ಒಂದೇ ಒಂದು ಸಿಟಿ ಬಸ್ಸು - ಅದು ನಮ್ಮ ಹಾಗು ಪಕ್ಕದ ಬಿ.ಡಿ.ಟಿ. ಕಾಲೇಜಿನ ಹುಡುಗರೇ ಹಿಂದೊಮ್ಮೆ ಗಲಾಟೆ ಮಾಡಿ ಬಿಡಿಸಿಕೊಂಡದ್ದು ಎಂದು ಸುದ್ದಿ. ಎಷ್ಟು ನಿಜವೆಂದು ಗೊತ್ತಿಲ್ಲವಾದರು ಮುದ್ದು ಈ ಮಾತನ್ನು ಹೇಳುವಾಗ ಸುಮ್ಮನೆ ಕೇಳುತ್ತ ಹುಡುಗಿಯರು ಮೋರಲ್ ಸಪೋರ್ಟ್ ಕೊಟ್ಟಿದ್ದಿರಬಹುದೆಂದು ಊಹಿಸಿದೆ.

ಆ ಬಸ್ಸು ನಮ್ಮ ಕಾಲೇಜಿನ (ಬಿ.ಐ.ಈ.ಟಿ ಕಾಲೇಜು) ದ್ದಷ್ಟೇ ಅಲ್ಲದೆ ಅನ್ಯ ಹಲವಾರು ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಣ ನಿಂತು, ಜೋತಾಡುತ್ತ ಕಾಲೇಜಿಗೆ ಹೋಗೋದು ಸರ್ವೇಸಾಮಾನ್ಯವಾದ ವಿಷಯ. ಅಂದು ಬಸ್ಸು ಇನ್ನು ಬಂದಿಲ್ಲವಾದ ಕಾರಣ ನಾವು ಹರಟುತ್ತ ನಿಂತಿದ್ದೆವು. ಅಷ್ಟರಲ್ಲಿ ಒಬ್ಬ ಹಳ್ಳಿಯ ಯುವಕ ನಮ್ಮೆಡೆಗೆ ನಡೆಯುತ್ತ ಬಂದ. ಬೆಳಗಿನ ಜಾವ ಹಳ್ಳಿಯವರು ತರಕಾರಿಯನ್ನು ಹೊತ್ತು ಹರಿಹರದಿಂದ ಬೇರೆಯ ಹಳ್ಳಿಗಳಿಗೆ ಹೋಗುವುದು ಮಾಮೂಲು; ಆದ್ರೆ ಬರಿಗಯ್ಯಲ್ಲಿ ನಮ್ಮೆಡೆಗೆ ಬರುತ್ತಿದ್ದ ಇವನನ್ನು ನೋಡಿ ಮುದ್ದುಗೆ ಸಂಶಯ ಬಂತು. ಹಳ್ಳಿಯವನು ಬಂದವನೇ ಶುರು ಮಾಡಿದ,"ಸರ್, ನಾನು ಬೇರೆಯ ಹಳ್ಳಿಯಿಂದ ಬಂದಿದ್ದೀನಿ. ನನ್ನ ಜೊತೆ ನನ್ನ ಮಕ್ಕಳಿಬ್ಬರು ಇದ್ದಾರೆ. ಯಾರೋ ನನ್ನಲ್ಲಿದ್ದ ದುಡ್ಡನ್ನೆಲ್ಲ ನಾನು ಮಲಗಿದ್ದಾಗ ತಗೆದುಕೊಂಡು ಹೋದರು - ಈಗ ಊರಿಗೆ ವಾಪಸ್ ಹೋಗಲು, ಮಕ್ಕಳಿಗೆ ಹೊಟ್ಟೆಗೆ ಹಾಕಲು ದುಡ್ಡಿಲ್ಲ. ಸ್ವಲ್ಪ ಸಹಾಯ ಮಾಡಿ". ಣನ್ನನ್ನೇ ನೋಡಿ ಹೇಳುತ್ತಿದ್ದ ಅವನನ್ನು ಗಮನಿಸಿದ ಮುದ್ದು ನನ್ನತ್ತ ನೋಡಿ ಹೇಳಿದ - "ಸುಮ್ನೆ ಹೇಳ್ತಿದ್ದಾನೆ-ಅವನಿಗೆ ಏನನ್ನು ಕೊಡೊಕ್ಕೆ ಹೋಗಬ್ಯಾಡ!". ನಾನು ಸಾಮಾನ್ಯವಾಗಿ ಯಾರಿಗೂ ದಾನ ಮಾಡುವುದಾಗಲಿ, ಭಿಕ್ಷೆ ಕೊದುವುದಾಗಲಿ ಮಾದುವುದಿಲ್ಲ; ಸ್ವಲ್ಪ ಸಮಯ ಯೋಚಿಸಿದೆ. ಯಾಕೋ ಕೊಡಬೇಕೆನಿಸಿ ೫ ರೂಪಾಯಿ ತಗೆದು ಕೊಟ್ಟೆಬಿಟ್ಟೆ. ಇದಾದ ಮೇಲೆ ನಡೆದದ್ದು ನನಗೆ ದಿಗ್ಭ್ರಮೆಯನ್ನುಂಟು ಮಾಡಿತು!

ಕಾಸನ್ನು ತಗೆದುಕೊಳ್ಳುವ ವರೆಗೆ ಮುಗ್ಧತೆಯನ್ನೇ ಬಿಂಬಿಸುತ್ತಿದ್ದ ಅವನ ಮುಖ, ಹಣ ಕೈಗೆ ಬಂದಾಕ್ಸಣ ಕುಹಕು ನಗುವನ್ನು ಒಳಗೂಡಿ "ನೀನು ಮೋಸ ಹೋದೆ" ಎಂದು ಮೂದಲಿಸಿ ಹೇಳುವಂತೆ ಕಾಣುತ್ತಿತ್ತು. ಒಮ್ಮೆಲೆ ಅವನ ಭಾವ-ಭಂಗಿ ಬದಲಾಯಿತು. ಸರಸರನೆ ನಡೆದು ಅವನು ಹತ್ತಿರದಲ್ಲಿಯೇ ನಿಂತಿದ್ದ ಒಬ್ಬನಿಂದ ನಾನು ಕೊಟ್ಟ ದುಡ್ಡಿನಿಂದ ಸಿಗರೇಟೊಂದನ್ನು ಕೊಂಡುಕೊಂಡ - ಅದನ್ನು ಹೊತ್ತಿಸಿ, ಸೇದಿ, ಹೊಗೆಯನ್ನು ಸುರುಳಿ ಸುರುಳಿಯಾಗಿ ಬಿಡುತ್ತ ನಮ್ಮತ್ತ ನೋಡುತ್ತಿದ್ದ. ನನ್ನ ಮುಟ್ಠಾಳತನಕ್ಕೆ ನನಗೆ ನಾಚಿಕಯೊಡನೆ ದುಃಖವು ಆಗುತ್ತಿದ್ದರು ತಲೆಯಲ್ಲಿ ಬೇರೆಯ ವಿಚಾರಗಳು ಹೊರಡುತ್ತಿದ್ದುವು - ವಿಚಾರ ಮಾಡದೆ ಕೆಲಸಗಳನ್ನು ಮಾಡಬಾರದೆಂಬ ಪಾಠವನ್ನು ಕಲೆತಿದ್ದೆನಲ್ಲ! ಮುದ್ದು ಹೇಳಿದ ಹಾಗೆ ಸುಮ್ಮನಿದ್ದಿದ್ದರೆ...

(ಸಾರಾಂಶ : ಜನ ಒಳ್ಳೆಯವರೇ ( ನಾನೂ ಅವರಲ್ಲೊಬ್ಬನು ); ಕಾಲ ಯಾರಿಂದ ಏನನ್ನು ಮಾಡಿಸುತ್ತದೆ ಎಂಬುದು ಊಹಿಸುವುದು ಕಷ್ಟ. ಹೊಟ್ಟೆ ಪಾಡಿಗೋ, ಹತ್ತಿಸಿಕೊಂದ ಚಟಕ್ಕೋ ಅವರು ಏನನ್ನಾದರು ಮಾಡಲು ಹಿಂಜರಿಯರು; ಎಚ್ಚರಿಕೆಯಿಂದ ಇರುವುದು ನಮ್ಮ ಕರ್ತವ್ಯ. )

Monday, May 5, 2008

ಟ್ರೇನಾಯಣ - ೧

ರೈಲು ಪ್ರಯಾಣ ಒಂದು ರೀತಿಯಲ್ಲಿ ವಿಶಿಷ್ಟವಾದುದು - ಬಹಳಷ್ಟು ಮಂದಿ ಸಿಗ್ತಾರೆ. ಇನ್ನು ರಾತ್ರೆಯ ಪ್ರಯಾಣ ಅಂದ್ರಂತು ನನಗೆ ಅಭ್ಯಾಸವಾಗಿ ಹೋಗಿದೆ. ಇಂತಹ ಒಂದು ಅನುಭವ ಇಲ್ಲಿಟ್ಟಿದ್ದೇನೆ.

ಬೆಂಗಳೂರಿಗೆ ಬಂದ ಹೊಸದು; ಇಲ್ಲಿನ ಜನ-ಜಾತ್ರೆ, ಗಲಿಬಿಲಿ ಹಾಗು ಟ್ರಾಫಿಕ್ ನೋಡಿ ಬೇಸರ ಬಂದು ಹೋಗಿತ್ತು. ವಾರಾಂತ್ಯ (ವೀಕೆಂಡ್) ಆಗಿದ್ದರಿಂದ ನಾನು ಹಾಗು ನನ್ನ ತಮ್ಮ ವಿಜಯ್ ಊರಿಗೆ ಹೋಗಲು ಸಜ್ಜಾಗಿದ್ದೆವು. ಸುಮಾರು ೧ ಘಂಟೆ ಟ್ರಾಫಿಕಿನಲ್ಲಿ ಬಳಲಿ, ಸುಸ್ತಾಗಿ, ಕೊನೆಗೂ ರೈಲು ನಿಲ್ದಾಣ ಸೇರಿದಾಗ ಗೊತ್ತಾಯಿತು ರೈಲು ತಡವಾಗಿ ಬರಲಿದೆ ಎಂದು. ಬೆಂಗಳೂರಿಂದ ಎಷ್ಟು ಬೇಗ ದೂರ ಹೋಗಬೇಕೆಂದುಕೊಂಡಿದ್ದನೊ ಅಷ್ಟೇ ತಡವಾಗುತಿದ್ದನ್ನು ನೋಡಿ ಸಿಟ್ಟು ಬರುತ್ತಿತ್ತು - ಆದರೆ ಏನೂ ಮಾಡುವಂತಿರಲಿಲ್ಲ.

ಹೇಗೋ ಮಾಡಿ ಕಾಲ ಕಳೆದದ್ದಾಯಿತು. ರೈಲು ಬಂದು ನಿಂತಾಗ ಸ್ವಲ್ಪ ಸಂತೋಷವಾಯಿತು; ಇನ್ನೆನು ಸುಖ ನಿದ್ರೆ ಮಾಡಬಹುದು ಅಂತ ಅಂದುಕೊಳ್ಳುತ್ತ ಬೋಗಿಯನ್ನು ಹತ್ತಿ ನನ್ನ ಜಾಗದಲ್ಲಿ ಕುಳಿತುಕೊಂಡೆ.ರೈಲು ಕೊನೆಗೂ ನಿಲ್ದಾಣವನ್ನು ಬಿಟ್ಟು ಹೊರ ಹೊರಟಾಗ ಮಧ್ಯರಾತ್ರಿ ೧೨ ಘಂಟೆ. ನನ್ನದು ಕೆಳಗಿನ ಬರ್ತ್ (ಮಲಗುವ ಜಾಗ) ಇದ್ದುದ್ದರಿಂದ ಬಹಳ ಆಯಾಸವಿಲ್ಲದೆ ಹಾಸಿಕೊಂಡು, ದಿಂಬನ್ನು ಗಾಳಿಯಿಂದ ಬಲೂನಿನಂತೆ ಉಬ್ಬಿಸಿ ತಲೆಯ ಅಡಿಯಲ್ಲಿ ಅದನ್ನು ಸಿಗಿಸಿಕೊಂಡು, ಜೊತೆಗೆ ತಂದ ಚಾದರನ್ನು ಹೊದ್ದುಕೊಂದು ತುಟಿ ಪಿಟಕ್ಕನ್ನದೆ ಸುಮ್ಮನೆ ಬಿದ್ದುಕೊಂಡೆ. ಬೆಳಗಿನ ಜಾವದ ನಾಲ್ಕು ಹೊಡೆದಿರಬೇಕು, ಏನೋ ತಣ್ಣನೆಯ ಮ್ರುದುವಾದ ವಸ್ತುವೊಂದು ತಲೆಗೆ ಸೋಕಿದಂತಾಗಿ, ಕನಸಿನಲ್ಲಿ ತಂಪಾದ ಕರ್ಚೀಪಿನಿಂದ ವೊರೆಸಿದಂತಾಯಿತು. ಅರೆ! ರೈಲಿನಲ್ಲಿ ಕಿಟಕಿ ಮುಚ್ಚಿದ್ದು ಹಸಿ ಬಟ್ಟೆಯೊಂದು ಬರಲು ಹೇಗೆ ಸಾಧ್ಯ ಎಂದು ದಿಗಿಲಾಯಿತಾದರು ಧಡಬಡಿಸದೆ ಎದ್ದು ಕತ್ತಲಿನಲ್ಲಿಯೆ ನೋಡಿದೆ; ಮೇಲಿನ ಬರ್ತ್ನ್ ಇಂದ ಪಾಪುವೊಂದರ ಹಸಿಯಾಗಿದ್ದ ಚಡ್ಡಿ ಎಂದು ಗೊತ್ತಾಗಲು ಬಹಳ ಸಮಯ ಹಿಡಿಯಲಿಲ್ಲ. "ದೇವರೇ! ನನ್ನ ಮೇಲೆ ನಿನಗೇನಪ್ಪ ದ್ವೇಷ" ಅಂತ ಅನಿಸಿತು; ಆ ಹಸಿ ನಿಕ್ಕರ್ ಪಕ್ಕ ಸರೆಸಿ ( ತಲೆಯ ಮೇಲೆ ಬಿದ್ದ ಮೇಲೆ ಮತ್ತೇನು ಉಪಾಯವಿರಲಿಲ್ಲ ನೋಡಿ ) ಸುಮ್ಮನೆ ಮಲಗಲು ಪ್ರಯತ್ನಿಸಿದೆ. ನಿದ್ದೆ ಆಗಲೆ ಹಾರಿ ಹೋಗಿದ್ದರಿಂದಲೋ ಏನೊ, ಸುಮ್ಮನಿರದ ನನ್ನ ತಲೆಯಲ್ಲಿ ವಿಚಾರಗಳು ಹೊರಡಲಾರಂಭಿಸಿದುವು. "ಅಲ್ಲ, ಆ ಪಾಪುವಿನ ತಾಯಿ ಹಾಗೆ ಬೆರೆಯವರ ಮೇಲೆ ನಿಕ್ಕರ್ ಬೀಳಿಸಬಹುದಾ? ಅದು ನನ್ನ ತಲೆಯ ಮೇಲೆ ಯಾಕೆ ಬೀಳುವ ಹಾಗೆ ಇಡಬೇಕು?..." ಇತ್ಯಾದಿ.

ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ; ಎದ್ದಾಗ ಬೆಳಕು ಹರಿದಿತ್ತು. ನಾನು ಎದ್ದು ಕುಳಿತೆ - ಅನ್ಯರೆಲ್ಲ ಮೆಲ್ಲಗೆ ಏಳಹತ್ತಿದ್ದರು. ಮಲಗುವ ವ್ಯವಸ್ಥೆಯನ್ನೆಲ್ಲ ತಗೆದು ಕೂಡಲು ಅಣಿಯಾದೆವು. ಇನ್ನು ಹಿಂದಿನ ರಾತ್ರೆಯ ವಿಚಾರವನ್ನೇ ಮಾಡುತ್ತಿದ್ದ ನಾನು, ಪಾಪುವಿನ ತಾಯಿಯ ಮುಖವನ್ನೇ ದಿಟ್ಟಿಸಿ ನೋದುತ್ತಿದ್ದೆ; ಇಷ್ಟು ಹೊತ್ತಿಗಾಗಲೆ ಆ ನಿಕ್ಕರ್ ನೆಲದ ಮೇಲೆ ಬಿದ್ದು ಸಾಕಷ್ಟು ಮಣ್ಣನ್ನು ಮೆತ್ತಿಕೊಂಡಿತ್ತು. ಪಾಪುವನ್ನ ಎಬ್ಬಿಸುವ ಗುಂಗಿನಲ್ಲಿದ್ದ ಅವಳಿಗೆ ಕಳೆದು ಹೋದ ವಸ್ತುವಿನ ಬಗ್ಗೆ ಹೆಚ್ಚು ಗಮನ ಇದ್ದ ಹಾಗೆ ಕಾಣಲಿಲ್ಲ. ಇನ್ನೇನು ಬಂತು ಸ್ಟೇಷನ್ನು ಅನ್ನುವಷ್ಟರಲ್ಲಿ ಏನೋ ಅಮೂಲ್ಯವಾದದ್ದನ್ನು ಕಳೆದು ಕೊಂಡವಳಂತೆ ಅತ್ತ-ಇತ್ತ ಹುಡುಕಾಡತೊಡಗಿದಳು; ನಾನಿನ್ನು ಆ ಮಣ್ಣು ಮೆತ್ತಿದುದನ್ನ ದುರುಗುಟ್ಟಿ ನೋಡುತ್ತಿರುವಾಗ ಅವಳ ಗಮನ ಆ ಬದಿಗೆ ಹಾದು, ನಾನು ನೋಡುತ್ತಿದ್ದೇನೆ ಎಂದೋ ಏನೊ, ಭಾವರಹಿತವಾದ ಮುಖದಿಂದ ಅದನ್ನು ಎತ್ತಿ,ಕೊಡವಿ ಚೀಲದಲ್ಲಿ ತೂರಿಸಿಕೊಂಡು ಗಂಡ-ಮಗುವಿನೊಡನೆ ರೈಲು ಇಳಿದು ಹೋದಳು.

(ಸಾರಾಂಶ : ರೈಲಿನಲ್ಲಿ ಮಕ್ಕಳಿರುತ್ತಾರೆ ಎಚ್ಚರಿಕೆ! ವಿಶೇಷವಾಗಿ, ರಾತ್ರಿ ಮಲಗುವಾಗ ಮೇಲಿನ ಸೀಟಿನಲ್ಲಿ ಮಕ್ಕಳಿಲ್ಲದಿರುವುದನ್ನು ಖಾತ್ರಿ ಮಾಡಿಕೊಳ್ಳಿರಿ. ಇದ್ದ ಪಕ್ಷದಲ್ಲಿ, ದಯವಿತ್ತು ಅವರಿಗೆ ಕೆಳಗಿನ ಸೀಟನ್ನು ಬಿಟ್ಟು ಕೊಡಿ. ಮಕ್ಕಳನ್ನು ಅಷ್ಟು ಹಗುರವಾಗಿ ತಗೆದುಕೊಳ್ಳುವ ತಪ್ಪನ್ನು ಮಾಡದಿರಿ)