Monday, September 7, 2009

ಮಾದರಿ ಬೈಗುಳಗಳು

ಇದು ನಡೆದದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ ಹರಿಹರದ ನಮ್ಮ ಮನೆಯ ಪಕ್ಕ. ಅದೊಂದು ರವಿವಾರ; ಮಧ್ಯಾಹ್ನದ ೨ ಘಂಟೆಗೆ ಮಾಡಲು ಏನು ಕೆಲಸವಿಲ್ಲದೆ ಮಲಗಲು ಅಣಿಯಾದಾಗ ಯಾರೋ ಹೊರಗಡೆ ಜಗಳವಾಡುತ್ತಿರುವುದು ಕೇಳಿಸಿತು. ಸಾಮಾನ್ಯವಾಗಿ ರಸ್ತೆಯೆ ಮೇಲೆ ನಡೆಯುವ ಇಂತಹ ಸಾಮಾನ್ಯ ವಿಷಯಗಳನ್ನ ಒಂದು ಕಿವಿ ಇಂದ ಕೇಳಿ ಇನ್ನೊಂದರಿಂದ ಹೊರ ಬಿಡುವುದು ನನ್ನ ಅಭ್ಯಾಸ... ಆದರೆ ಅಂದು ನನಗೆ ಬೇರೆಯ ಕೆಲಸವಿರದಿದ್ದ ಕಾರಣ ಈ ಜಗಳ-ಮಾತು ಕಥೆಯನ್ನು ಕೇಳತೊಡಗಿದೆ.

"ಕೊಡಲೇ!...", ಎಂದನೊಬ್ಬ.

ಕಥೆ ಮುಂದುವರೆಸುವ ಮುನ್ನ ಪಾತ್ರಧಾರಿಗಳ ಬಗ್ಗೆ ತಮಗೆಲ್ಲ ಗೊತ್ತುಮಾಡಿಕೊಡಬೇಕೆನಿಸುತ್ತಿದೆ.
ಜಗಳವಾಡುತ್ತಿದ್ದದ್ದು ನಮ್ಮ ಪಕ್ಕದ ಮನೆಯ ಹುಡುಗರು - ಸುಮಾರು ೧೦ ವರುಷ ವಯಸ್ಸು ಇಬ್ಬರದ್ದು. ಒಬ್ಬನ ಹೆಸರು ರವಿ; ಇನ್ನೊಬ್ಬ ಹರ್ಷ.
ಹರ್ಷ ಸ್ವಲ್ಪ ಚಿಕ್ಕವನು - ಅವನ ಮನೆ ಎರಡು ಓಣಿಗಳಾಚೆ ಇದೆ; ಆದರೆ ಇಲ್ಲಿ ತನ್ನ ಅತ್ತೆ ಮಗ (ಅಂದರೆ ರವಿ) ಜೊತೆ ಆಟ ಆಡಲು (ಜಗಳ ಮಾಡಲು??)ಬರುತ್ತಿರುತ್ತಾನೆ.

ಪಕ್ಕದ ಮನೆಯಲ್ಲಿ ಒಂದು ಮಾವಿನ ಮರವಿದೆ - ಅದು ಎಡವಟ್ಟು ;ಸಮಯವಿಲ್ಲದ ಸಮಯಕ್ಕೆ ಅದಕ್ಕೆ ಮಾವಿನ ಮಿಡಿಗಳು ಬಿಡುತ್ತವೆ - ಮಳೆ-ಗಾಳಿಗೆ ಉದುರಿ ಸಹ ಹೋಗುತ್ತವೆ...

"ಇಲ್ಲಾ ಹೋಗಲೇ!... ಅತ್ತೀ... ಅತ್ತೀ... ನೋಡಿಲ್ಲಿ ರವಿ ನಂಗೆ ಹೊಡಿತಾನೆ..." ... ಇಬ್ಬರೂ ಜೋರಾಗಿ ಹೊಡದಾಡತೊಡಗಿದರು. ಅಪರೂಪಕ್ಕೆ ಒಂದು ದೊಡ್ಡ (ಹುಳಿ) ಮಾವಿನ ಹಣ್ಣು ಬಿದ್ದಿದ್ದು, ಅದು ಹರ್ಷನಿಗೆ ಸಿಕ್ಕಿತ್ತು - ಅದನ್ನು ರವಿ ನೋಡಿ ಬಿಟ್ಟಿದ್ದ. ಜಗಳ ಆಗಲೇ ಬೇಕಿತ್ತು... ಆದರೆ...

"ಲೆ ಮಿಂ****! ಕೊಡೋ!...", ಅಂದ ರವಿ. ಹರ್ಷ-ರವಿ ಒಬ್ಬರು-ಇನ್ನೊಬ್ಬರನ್ನು ಫುಟ್ಬಾಲಿನಂತೆ ಒದ್ದು , ರವಿ ಹರ್ಷನಿಗೆ ಮಣ್ಣು ತಿನ್ನಿಸಿ, ಹರ್ಷ ರವಿಯ ತಲೆಯನ್ನು ಗೋಡೆಗೆ ಜಜ್ಜಿ ಜಗಳ ಮುಂದೆ ವರಿಯಿತು. ಇದು ಹೊಸತೇನಲ್ಲ ಅಂದು ನಾನು ಸುಮ್ಮನಿದ್ದೆ - ಆದರೆ ಅವರ ಮಾತುಗಳನ್ನ ಅಂದೆ ನಾನು ಪದ ಬಿಡದೆ ಆಲಿಸುತ್ತಿದ್ದುದು.
ಹರ್ಷ ರವಿಗಿಂತ ಸ್ವಲ್ಪ ಚಿಕ್ಕವನು ಹಾಗು ಜಗಳದಲ್ಲಿ ಸಾಮಾನ್ಯ ವಾಗಿ ಹೊಡೆತ ತಿನ್ನುವುದು ಜಾಸ್ತಿ... ರವಿಯ ಪ್ರತಿಯೊಂದು ಹೊಡೆತಕ್ಕೆ ಪ್ರತ್ಯುತ್ತರವಾಗಿ ಹರ್ಷ ಒಂದು ಬೈಗುಳವನ್ನು ಉದುರಿಸುತ್ತಿದ್ದ...
"ತಾಯ್***!"... ಅಂದ ಹರ್ಷ, ರವಿ ಹರ್ಷನ ಬೆನ್ನಿಗೆ ಎರಡು ಗುದ್ದು ನೀಡಿದಾಗ...
"ಬೇವ**!"... ರವಿ ಹರ್ಷನ ಕಾಲನ್ನು ಹಿಡಿದು ಎಳೆದಾಡುತ್ತಿದ್ದಾಗ...
"ನಿಮ್ಮ*ನ!"...
...
...

ಇನ್ನು ಸುಮಾರಿಷ್ಟು ಇದ್ದುವು ಆದರೆ ಈಗ ನೆನಪಿಲ್ಲ ಬಿಡಿ. ಆಲಿಸಿದ ಆ ಹದಿನೈದು ನಿಮಿಷಗಳಲ್ಲಿ ಕನ್ನಡದ ಬಹುತೇಕ ಎಲ್ಲ ಬೈಗುಳಗಳನ್ನು ಕೇಳಿಬಿಟ್ಟೆನನಿಸುತ್ತದೆ. ಕೆಲವು ಪದಗಳಿಗೆ ಅರ್ಥ ನನಗೆ ಆಗಲಿನ್ನು ಗೊತ್ತೂ ಸಹ ಇರಲಿಲ್ಲ! ಛೆ! ಹೀಗೆಲ್ಲ ಮಕ್ಕಳು ತಮ್ಮ ತಮ್ಮಲ್ಲಿ ಬೈದುಕೊಳ್ಳುವುದೇ? ಬೇಜಾರಾಯಿತು... ಅಷ್ಟರಲ್ಲಿ ರವಿಯ ತಾಯಿ ಅಡುಗೆಯ ಮನೆಯಿಂದ ಹೊರಗೆ ಬಂದು ಅಟ್ಟದ ಮೇಲೆ ಜಗಳವಾಡುತ್ತಿದ್ದ ಇಬ್ಬರನ್ನು ಕುರಿತು...
"ಮಿಂಡ್ರಿಘುಟ್ದೋರಾ! ಬನ್ರೊ ಕೆಳಗೆ!... ಹರ್ಷ! ಹೋಗೊ ನಿನ್ ಮನೆಗೆ - ನಿಮ್ಮಪ್ಪಂಗೆ ಹೇಳ್ತಿನಿ ತಡಿ! ಏ -ರವೀ! ನಡಿ ಓದಕ್ಕೆ... ಬೇವರ್ಸಿಗಳು... !", ಎಂದು ಹಿತವಚನಗಳನ್ನು ನುಡಿದು ಒಳನಡೆದಳು!
ಕಿವಿಗಳು ಪಾವನವಾದುವು.

ಮಕ್ಕಳ ತಪ್ಪೇನು ಬಿಡಿ - ಹಿರಿಯರು ಅರ್ಥ ತಿಳಿದುಕೊಳ್ಳದೆ , ಊಟಕ್ಕೆ ಅನ್ನ-ಸಾರು ಬಳಸಿದಂತೆ, ಮಾತಿನಲ್ಲಿ ಬೈಗುಳಗಳನ್ನು ಬಳಸಿದರೆ ಕಿರಿಯರಿಗೆ ಅದೇ ಮಾದರಿ!

ಅಂದ ಹಾಗೆ, ಇದೆಲ್ಲ ನನಗೆ ನೆನಪು ಬಂದದ್ದು ನೆನ್ನೆಯ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹದಿನಾರನೇಯ ಪುಟದಲ್ಲಿ ಮುದ್ರಿತವಾದ ಈ ವಾಕ್ಯವನ್ನು ಓದಿ...
"Life's disappointments are harder to take when you don't know any swear words" - Calvin & Hobbes

ಈ ವಾಕ್ಯಕ್ಕೆ ಇನ್ನೊಂದು ವಾಕ್ಯ ಸೇರಿಸಬೇಕಾಗಿತ್ತು...
"Even if you know them, think before you use them on your near and dear ones!"

No comments:

Post a Comment