Monday, May 24, 2010

ನಮ್ಮೂರ ನೆನಪುಗಳು - ೧

ಈ ಬಾರಿ ಹರಿಹರಕ್ಕೆ ಹೋದಾಗ ಶಾಲೆ ಹಾಗು ಕಾಲೇಜು ದಿನಗಳಲ್ಲಿ ಕಳೆದ ಸವಿ ನೆನಪುಗಳು ಮನಸ್ಸಿನಲ್ಲಿ ಮರುಕಳಿಸಿ ಬಹಳ ಸಂತಸವೆನಿಸಿತು. ಕೆಲ ನನಪುಗಳನ್ನು ಇಲ್ಲಿ ಬರೆದಿದ್ದೇನೆ; ಓದಿ ಆನಂದಿಸಿ -

ಬೆಳಗಿನ ಜಾವ ಬಸ್ಸನ್ನೇರುವ ಸರ್ಕ್ ಸ್:
ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುತ್ತಿದ್ದ ಪ್ರತಿ ದಿನದ ಸಾಹಸದ ಕೆಲಸ ಇದು! ನಮ್ಮೂರಿನಿಂದ (ಅಂದರೆ, ಹರಿಹರ) ಕಾಲೇಜಿಗೆ ನೇರವಾಗಿ ಹೋಗುವ ಒಂದು ಬಸ್ಸು ಇತ್ತು (ಈಗ ಸಹ ಇದೆ ಎಂದು ನನಗೆ ಕೇಳಿ ಬಂದಿದೆ). ಈ ಬಸ್ಸು ಬೆಳಗಿನ ಜಾವ ೭ - ೭.೧೫ರ ಒಳಗಡೆ ಹರಿಹರ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಈ ಒಂದು ಬಸ್ಸನ್ನು ಅವಲಂಬಿಸಿದ್ದವರು ಹಲವಾರು ವಿದ್ಯಾರ್ಥಿಗಳು - ಪೀ.ಯೂ. ಕಾಲೇಜಿನಿಂದ ಹಿಡಿದು ಅನೇಕ ಡಿಗ್ರೀ ಕಾಲೇಜಿನ ಜನ ಇದನ್ನು ಹತ್ತೋರು. ಜನರ ಸಂಖ್ಯೆ ೩ ಬಸ್ಸುಗಳಿದ್ದರೂ ಸಾಕಾಗದಷ್ಟು ಇರುತ್ತಿತ್ತು. ಸೀಟು ಸಿಗುವ ವಿಷಯ ಆಚೆಯಿರಲಿ, ನಿಲ್ಲಲು ಜಾಗ ಸಿಗುವುದೇ ಒಂದು ದೊಡ್ಡ ಸಾಹಸವಾಗಿರುತ್ತಿತ್ತು. ಬಸ್ಸು ಹತ್ತಿರದ ಒಂದು ಹಳ್ಳಿಯೊಂದರಿಂದ ಬರುತ್ತಿದ್ದರಿಂದ ಅದರಲ್ಲಿ ಮೋತೀವೀರಪ್ಪ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ತುಂಬಿರುತ್ತಿದ್ದರು. ಉಳಿದ ಕೆಲವೇ ಸೀಟುಗಳಿಗಾಗಿ ನೂಕುನುಗ್ಗಲಾಟವಾಗುತ್ತಿತ್ತು. ಬಸ್ಸು ದೂರದಿಂದಲೇ ಬರುವುದನ್ನು ಗಮನಿಸಿ ಹುಡುಗರು ಬಸ್ಸಿನೋಡನೆ ಓಡಿ ಅದನ್ನೇರಲು ಸಜ್ಜಾಗುತ್ತಿದ್ದರು. ಬಸ್ಸು ಹತ್ತಿರ ಬಂತು ಅಂದಾಕ್ಷಣ ಅದರಲ್ಲಿಂದ ಇಳಿಯುವ ಜನರನ್ನು ಗಮನಿಸದೆ ನುಗ್ಗುತ್ತಿದ್ದರು. ಆ ಬಸ್ಸೋ ಒಂದು ಚಕ್ಕಡಿಗಾಡಿಗಿಂತಲೂ ಮೆಲ್ಲಗೆ ಚಲಿಸುತ್ತಿತ್ತು. ೧೨೦ ಕ್ಕೂ ಹೆಚ್ಚು ಜನರನ್ನು ಆ ಹಳೆಯ ಗಾಡಿ ಹೊತ್ತುಕೊಂಡು ಸಾಗುವಂತೆ ಮಾಡುತ್ತಿದ್ದ ಚಾಲಕನು ನಿಜವಾಗಿಯೂ ಚೆನ್ನಾಗಿ ಬಸ್ಸನ್ನು ಓಡಿಸುತ್ತಿದ್ದನೆನ್ನಬೇಕು.

ಬಸ್ಸನ್ನು ಏರುವುದು ಒಂದು ಸಾಹಸವಾದರೆ, ಅದರಲ್ಲಿ ನಿಲ್ಲುವುದು ಇನ್ನೊಂದು ಸಾಹಸ. ಒಬ್ಬರಿಗೊಬ್ಬರು ಮೈಯನ್ನು ಅಂಟಿಸಿ ನಿಲ್ಲದೆ ಬೇರೆಯ ವಿಧಿಯೇ ಇರಲಿಲ್ಲ. ಗಾಳಿಯಾಡದೆ, ಎಲ್ಲ ಬೆವೆತ ಮೈಗಳಿಂದ ಎಲ್ಲರ ಅಂಗಿಗಳು ಹಸಿ. ಬಸ್ಸಿನ ಸ್ಥಿತಿಯು ಅಷ್ಟೇನು ಚೆನ್ನಾಗಿರಲಿಲ್ಲ - ಮುರಿದು ಹೋದ ಕಿಟಕಿಗಳು, ಮುರಿದು ಬೀಳುವ ಅಂಚಿನಲ್ಲಿದ್ದ ಫೂಟ್-ರೆಸ್ಟ್, ತುಂಡಾಗಿದ್ದ ಬಸ್ಸಿನ ಮೇಲ್ಭಾಗ. ಇಷ್ಟೆಲ್ಲವಿದ್ದರೂ ಜನರು ಪ್ರತಿ ದಿನ ಈ ಬಸ್ಸಿಗಾಗಿ ಕಾಯುತ್ತಿದ್ದರು!

ಇಷ್ಟೆಲ್ಲ ಕಷ್ಟ ಪಡುವುದು ಬೇಕಿತ್ತೆ? ಸುಮ್ಮನೆ ದಾವಣಗೆರೆಗೆ ನೇರವಾಗಿ ಹೋಗಲು ಸೌಕರ್ಯವಿರಲಿಲ್ಲವೆ ಎಂದು ನಿಮಗೆ ಅನ್ನಿಸಿರಬಹುದು. ನಿಜ, ಬಸ್ಸುಗಳು ಸಾಕಷ್ಟು ಇದ್ದುವಾದರು, ನೇರವಾಗಿ ಕೇವಲ ಬಸ್ ಪಾಸನ್ನು ತೋರಿಸಿ ಕಾಲೇಜಿನವರೆಗೆ ಹೋಗಬಹುದಾದಂತಹ ಬಸ್ಸು ಇದು ಏಕಮಾತ್ರವಾಗಿತ್ತು. ೩ ರೂಪಾಯಿ ಉಳಿತಾಯವಾಗುತ್ತಿತ್ತು! ಒಂದು ವಾರ್ಷಿಕ ಪಾಸು ಸುಮಾರು ೭೦೦ ರೂಪಾಯಿಗಳಿಗೆ ಬಂದು ಬಿಡುತ್ತಿತ್ತು.

ಈಗ, ಮನಸ್ಸು ಬಂದಾಗ ಅಂತರ್ಜಾಲದಲ್ಲಿ ವಾಲ್ವೋ ಬಸ್ಸಿನ ಟಿಕೇಟನ್ನು, ೭೦೦ ರೂಪಾಯಿ ಕೊಟ್ಟು, ಕೊಂಡು ಪಯಣಿಸುತ್ತೇವೆ ಆದರೆ ಮುರುಕಲು ಬಸ್ಸಿನ ಮೇಲೆ ಮಿತ್ರರೊಡನೆ ಹರಟುತ್ತ ಸಾಗುವಾಗ ಸಿಗುತ್ತಿದ್ದ ಆನಂದ ಈಗ ವಿರಳ...

1 comment:

  1. ಆ 'ಸುಂದರ' ಬಸ್ಸಿನ ಬಗ್ಗೆ ನೆನಪಿಸಿದ್ದಕ್ಕೆ thanks :)
    internals ಸಮಯದಲ್ಲಿ ಮಾತ್ರ ಶಾಂತವಾಗಿರುತ್ತಿದ್ದ ಬಸ್ಸು , ಉಳಿದ ದಿನಗಳಲ್ಲಿ, ಹುಡುಗರ comments , ಮೊಬೈಲ್ ಹಾಡುಗಳು, ಮಾತು, ಜಗಳ ಕಿತ್ತಾಟಗಳಿಗೆ ಸಾಕ್ಷಿ ಯಾಗಿತ್ತು!
    ಈಗ ಪಾಸು ದರ ೧೫೦೦ ಆಗಿದೆ, ಜನ ಹೆಚ್ಚುತ್ತಲೇ ಇದ್ದಾರೆ, ಆಗೊಮ್ಮೆ ಈಗೊಮ್ಮೆ ೨ ಬಸ್ಸುಗಳನ್ನು ಕಳಿಸುತ್ತಾರೆ. ಆದರೂ ಆ ನೂಕು ನುಗ್ಗಲ , ಡಕೋಟ ಬಸ್ಸೇ ಎಲ್ಲರಿಗು ಪ್ರಿಯ :)

    ReplyDelete