Monday, August 16, 2010

ಸವಿ ನುಡಿ

ಕಾಲೇಜಿನ ಮೊದಲ ದಿನ, ನಾನು ಕಾಲೇಜು ತಲುಪಿದಾಗ ಮೊದಲ ಪೀರಿಯಡ್ ಶುರುವಾಗಿತ್ತು. ಯಾವ ತರಗತಿ, ಎಲ್ಲಿ ಕೂಡ್ಬೇಕು, ಯಾವ ಸಬ್ಜೆಕ್ಟ್... ಇವೇನೂ ಗೊತ್ತಿರಲಿಲ್ಲ. ನನ್ನ ತಮ್ಮ ಹಾಗು ಮಿತ್ರರೊಡನೆ ಕಾಲೇಜಿನ ಕಾಂಪೌಂಡನ್ನು ದಾಟಿ ಒಳಗೆ ಬಂದಾಗ ಜನಜಾತ್ರೆಯನ್ನು ನೋಡಿ ಕೆಲಕಾಲ ಏನು ಮಾಡಬೇಕೆಂದು ತೋಚಲಿಲ್ಲ - ಬಹಳ ಜನರನ್ನು ಕಂಡರೆ ಮೊದಲೇ ನನಗಾಗುತ್ತಿರಲಿಲ್ಲ. ಒಂದೆಡೆ ಹುಡುಗರು ನೋಟಿಸ್-ಬೋರ್ಡನ್ನು ಮುತ್ತಿಗೆ ಹಾಕಿಕೊಂಡು ನಿಂತಿರುವುದನ್ನು ಕಂಡು ಅದರತ್ತ ನಾವೂ ಸಹ ಹೋಗಿ ನಿಂತೆವು - ಅಲ್ಲಿ, ಯಾವ ತರಗತಿಗಳಿಗೆ ಯಾವ ವಿದ್ಯಾಥಿಗಳು ಹೋಗಬೇಕೆಂಬ ವಿವರ ಬರೆಯಲಾಗಿತ್ತು. ನಮ್ಮದು ಫಿಸಿಕ್ಸ್ ಸೈಕಲ್ ಎಂದು ನಮಗೆ ಮೊದಲೇ ತಿಳಿದಿದ್ದರಿಂದಾಗಿ ನೇರವಾಗಿ ನಮ್ಮ ಹೆಸರುಗಳನ್ನು ಆ ಸೂಚಿಯಲ್ಲಿ ನೋಡತೊಡಗಿದೆವು. ನನ್ನ ತಮ್ಮನಿಗೆ ತನ್ನ ತರಗತಿಯಾವುದೆಂದು ತಿಳಿದು ಅವನು ಹೋಗಲು ಅಣಿಯಾದ. ನಾನು ನನ್ನ ತರಗತಿಯನ್ನು ಹುಡುಕಿಕೊಂದು ಅಲ್ಲಿ ಹೋಗುವುದಾಗಿ, ಅವನನ್ನು ಊಟದ ಸಮಯಕ್ಕೆ ಸಿಗುವುದಾಗಿ ಹೇಳಿ ಬೀಳ್ಕೊಟ್ಟೆ.

ಹುಡುಕುತ್ತ, ಹುಡುಕುತ್ತ ಕೊನೆಗೆ ನನ್ನ ಹೆಸರು ಕಂಡಾಗ ಕ್ಲಾಸ್ ಶುರುವಾಗಿ ಅರ್ಧ ಘಂಟೆ ಆಗಿ ಹೋಗಿತ್ತು. ನನ್ನೊಡನೆ ಸೂರಿ ಸಹ ಇದ್ದ - ಆಗಿನ್ನು ನಮ್ಮದು ಹೊಸ ಪರಿಚಯ - ಅವನೂ ಹರಿಹರದವನು ಅನ್ನುವುದೊಂದೇ ತಿಳಿದಿತ್ತು ನನಗೆ. ಗಡಿಬಿಡಿಯಲ್ಲಿ ಕ್ಲಾಸಿನತ್ತ ಧಾವಿಸತೊಡಗಿದೆವು. ಅಷ್ಟರಲ್ಲಿ ಹಿಂದಿನಿಂದ ಹುಡುಗಿಯೊಬ್ಬಳು ತನ್ನ ತಂದೆಯನ್ನು ಕುರಿತು ತಾನು ತರಗತಿಗೆ ಹೋಗುವುದಾಗಿಯು, ಚಿಂತಿಸಬಾರದೆಂದು ಹೇಳಿ ತಂದೆಯನ್ನು ಬೀಳ್ಕೊಟ್ಟು ನಮ್ಮ ತರಗತಿಯತ್ತ ಬರುವುದನ್ನು ಆಲಿಸಿದೆ - ನನ್ನ ಮನೆ ಹಾಗು ಸಂಭಂದಿಕರ ಹೊರತಾಗಿ ನನಗೆ ಅರ್ಥವಾಗುವ ರೀತಿಯಲ್ಲಿ ಕೊಂಕಣಿಯಲ್ಲಿ ಮಾತನಾಡಿದ್ದನ್ನು ನಾನು ಕೇಳಿದ್ದು ಅದು ಮೊದಲನೇಯ ಬಾರಿಯಾಗಿತ್ತು. ಒಂದು ಬಗೆಯ ಸಂತಸವಾಯಿತು - ಏಕೆಂದು ಗೊತ್ತಿಲ್ಲವಾದರು, ನೂರಾರು ಅಪರಚಿತರಲ್ಲಿ ಒಂದು ಪರಿಚಿತ ಸವಿ ನುಡಿಯನ್ನು ಕೇಳಿ ಈ ಅಪರಿಚಿತೆಯನ್ನು ಒಮ್ಮೆ ನನ್ನ ಮಾತೃಭಾಷೆಯಲ್ಲಿ ಮಾತನಾಡಿಸಬೇಕೆಂದುಕೊಂಡೆ ಆದರೆ ತಿರುಗಿ ಯಾರವಳಾಕೆ ಎಂದು ನೋಡಲು ಮನಸ್ಸಾಗಲಿಲ್ಲ.

ಇತ್ತ ಫಿಸಿಕ್ಸ್ ಮೇಷ್ಟ್ರು ಬುಲೆಟ್ ಟ್ರೇನಿನ ವೇಗದಲ್ಲಿ ಪಾಠವನ್ನು ಮಾಡುತ್ತಿದ್ದರು - ನಾವು ಅವರ ಕ್ಲಾಸನ್ನು ಹೊಕ್ಕು ಹಿಂದಿನ ಬೆಂಚಿನಲ್ಲಿ ಸಿಕ್ಕ ಜಾಗದಲ್ಲಿ ತುರುಕಿ ಕುಳಿತುಕೊಂಡೆವು. ಅಂದು ಪಾಠ ತಲೆಗೆ ಹತ್ತುವುದು ಅಷ್ಟರಲ್ಲಿಯೇಇತ್ತು - ನನ್ನ ಧ್ಯಾನ ಡೋರಿನತ್ತಕ್ಕೆ ಮಿಸ್ಕಾಡದ ಹಾಗೆ ಭದ್ರವಾಗಿ ನಾಟಿತ್ತು. ನನಗರಿವಾಗದಂತೆಯೇ ಓಳ ಬರುತ್ತಿದ್ದ ಪ್ರತಿಯೊಬ್ಬರನ್ನೂ ಕಣ್ಣಿನಿಂದಲೇ ಅಳೆಯಲಾರಂಭಿಸಿದ್ದೆ. ಅಂದಿನ ದಿನ ಈನ್ನೂ ಹಲವಾರು ಘಟನೆಗಳು ನಡೆದುವು - ಸೂರಿ ರುದ್ರಪ್ಪ ಸರ್ ಕೈಲಿ ಬೈಸಿಕೊಂಡ; ಕೆಲವು ತರಗತಿಗಳು ನಡೆದುವು ಆದರೆ ಅವುಗಳಲ್ಲೇನು ವಿಷೇಶವಾದುದ್ದೇನು ನಡೆಯಲಿಲ್ಲ ಅಂದರೆ ತಪ್ಪೇನಾಗದು.

ಆ ಹುಡುಗಿಯನ್ನು ಗುರುತಿಸಿದ್ದೇನೋ ಸರಿ ಆದರೆ ಅವಳನ್ನು ಮಾತನಾಡಿಸಿದ್ದು, ಇಡೀ ದಿಗ್ರೀ ಸಮಯದಲ್ಲಿ, ಕೇವಲ ೨-೩ ಬಾರಿ ಇರಬೇಕು. ಅದು ಇಂಗ್ಲೀಷಲ್ಲಿ. ನನ್ನ ತರಗತಿಯಲ್ಲಿ ನನ್ನೊಡನೆ ಓದುತ್ತಿದ್ದ ಪ್ರತಿ ಮುಖವನ್ನು ಗುರುತಿಸಲು ನನಗೆ ಏನಿಲ್ಲವೆಂದರೂ ಸುಮಾರು ಒಂದು ಸೆಮಿಸ್ಟರ್ ಬೇಕಾಯಿತು. ಇನ್ನು ಅವರ ಹೆಸರುಗಳು ತಿಳಿದು ಮಿತ್ರರು ಆಗುವಷರಲ್ಲಿ ಒಂದು ವರ್ಷವೇ ಆಗಿ ಹೋಗಿತ್ತು.

ಎರಡನೇಯ ವರ್ಷಕ್ಕೆ ಕಾಲಿಡುತ್ತಿದ್ದಂತೆಯೆ ನಮ್ಮ ತರಗತಿಗಳು ಬದಲಾದುವು. ಹೊಸ ಮಿತ್ರರು, ನಮ್ಮದೇ ಆದ ವಿಭಾಗ, ಎಲ್ಲ ಚೆನ್ನಾಗಿತ್ತು. ಜೀವನದ ಹಲವಾರು ಮರೆಯಲಾಗದ ನೆನಪುಗಳನ್ನು ಇಲ್ಲಿ ಪಡೆದೆ. ನಮ್ಮ ಲೋಕವೇ ಬೇರೆಯಾಗಿತ್ತು; ಬೆಳಗಾದರೆ ಓಡಿ ಪ್ರಾಣಭಯವಿಲ್ಲದೆ ಮುರುಕಲು ಉಕ್ಕಡಗಾತ್ರಿ-ದಾವಣಗೆರೆ ಬಸ್ಸಿನಲ್ಲಿ ಜೋತು ಬಿದ್ದು ಕಾಲೇಜು ಸೇರುವುದೆಂದರೆ ಒಂದು ತೆರನೇಯ ಮೋಜು - ಸಂತಸ. ಓದು, ಆಟ, ಮಿತ್ರರೊಡನೆ ತಿರುಗಾಟ - ಬೆಳಗಿನ ಜಾವ ಎದ್ದೇಳಲು ಕೇವಲ ಅಮ್ಮನ ಒಂದು ಸ್ಪರ್ಶವೇ ಸಾಕಾಗಿತ್ತು! ಉಪನ್ಯಾಸಕರ ಸಹಕಾರ ಹಾಗು ತಾಳ್ಮೆ ನಮ್ಮಲ್ಲಿನ ಆತ್ಮವಿಶ್ವಾಸವನ್ನು ಮುಗಿಲಿಗೇರಿಸಿತ್ತು. ನೋಡುನೋಡುತ್ತ ಸಮಯ ಕಳೆದದ್ದೇ ಗೊತ್ತಾಗಲಿಲ್ಲ - ಕಾಲೇಜು ಮುಗಿಯಲು ಕೆಲವೇ ದಿನಗಳು ಇದ್ದುವು.

ಹೀಗೊಂದು ದಿನ, ರವಿವಾರವಿರಬೇಕು, ದಾವಣಗೆರೆಗೆ ರೈಲ್ವೇ ಸ್ಟೇಶನ್ ಗೆ ಟಿಕೇಟೊಂದನ್ನು ಕೊಂಡುಕೊಳ್ಳಲು ನಾನು ಬಂದಿದ್ದೆ. ರಷ್ ಇದ್ದುದ್ದರಿಂದ ಕೆಲ ಕಾಲ ಕೂತುಕೊಂಡೆ - ಟಿಕೇಟನ್ನು ಪಡೆದೆ. ಆಷ್ಟರಲ್ಲಿ ನನ್ನ ಸಹಪಾಠಿಯೊಬ್ಬನು ಬೆಂಗಳೂರಿಗೆ ಹೋಗಲು ಟಿಕೇಟು ಕೊಂಡುಕೊಳ್ಳಲು ಬಂದಿದ್ದ; ಅವನೊಡನೆ ನಾನು ಕಾಲೇಜಿನ ಮೊದಲ ದಿನ ಮಾತನಾಡಲು ಬಯಸಿದ ಆ ಹುಡುಗಿಯೂ ಇದ್ದಳು. ಇಬ್ಬರನ್ನು ಮುಗುಳ್ನಕ್ಕು ಗುರುತಿಸಿದೆ. ಹಿಂದೆಂದೂ ಕೊಂಕಣಿಯಲ್ಲಿ ಅನ್ಯರನ್ನು ಮಾತನಾಡಿಸಿರಲಿಲ್ಲ - ಮಾತನಾಡಿಸುವ ಪ್ರಮಯವೂ ಬಂದಿರಲಿಲ್ಲ - ಬಂದಿದ್ದರೂ ನಾನು ಕನ್ನಡದಲ್ಲಿ ಅಥವ ಇಂಗ್ಲೀಷಿನಲ್ಲಿ ಮಾತನಾಡಿಸಿ ಮುಗಿಸಿದ್ದೆ. ಮೊದಲ ಬಾರಿ ನನ್ನ ಭಾಷೆಯನ್ನು ನನ್ನವರಲ್ಲದವರೊಡನೆ ಮಾತನಾಡಿದೆ. "ನೀನು ಎಲ್ಲಿಗೆ ಹೋಗ್ತಿದ್ದೀಯ?", ಅನ್ನೋ ಅರ್ಥದಲ್ಲಿ ಅವಳನ್ನು ಕುರಿತು ಒಂದು ಪ್ರಶ್ನೆಯನ್ನು ಕೇಳಿದೆ; ಮಾತಿನ ವಿಷಯದಲ್ಲಿ, ಮೊದಲ ಬಾರಿ, ಕೂಪಮಂಡೂಕನಾಗದಿರಲು ಮನಸ್ಸು ಮಾಡಿದ್ದೆ.

ಒಂದು ಕ್ಷಣ ಅವಳ ಮುಖದಲ್ಲಿ ದೊಡ್ಡ ಪ್ರಷ್ನಾಚಿನ್ಹೆಯನ್ನು ಕಂಡೆ - "ಇವನಿಗೆ ನನ್ನ ಭಾಷೆ ಹೇಗೆ ಗೊತ್ತು?", ಅನ್ನುವ ಭಾವದಲ್ಲಿ ಆ ಕಣ್ಣುಗಳು ನನ್ನನ್ನು ನೋಡಿದುವು. ಇದು ನಡೆದದ್ದು ಕ್ಷಣಾರ್ಧದಲ್ಲಿ. ನಾನು ಒಂದು ಶಾಕ್ ಕೊಟ್ಟ ಹಾಗೆ ಆಗಿದ್ದರಿಂದ ಆವಳು, ಸ್ವಲ್ಪ ಸುಧಾರಿಸಿಕೊಂಡು, "ಒಹ್! ನಿನಗೆ ಕೊಂಕಣಿ ಬರುತ್ತದೆಯಾ? ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ - ಕಂಪನಿಯವರು ಮೆಡಿಕಲ್ ಚೆಕಪ್ ಗೆ ಕರೆದಿದ್ದಾರೆ", ಎಂದು ಕೊಂಕಣಿಯಲ್ಲಿ ಉತ್ತರಿಸಿದಳು. ಆಷ್ಟರಲ್ಲಿ ಅವರಿಬ್ಬರು ಟಿಕೇಟನ್ನು ಕೋಂಡುಕೊಳುವ ಸರದಿ ಬಂದಿತ್ತು. ನಾನು ಅವರಿಬ್ಬರನ್ನು ಬೀಳ್ಕೊಟ್ಟು ಹರಿಹರದ ಬಸ್ಸನ್ನು ಹತ್ತಿದೆ. ನಾನು ಹಾಗೆ ಮಾತನಾಡಿ ಬಂದಿದ್ದೆ ಎಂಬುದು ನನಗೆ ಬಹಳ ಸಂತಸವನ್ನು ನೀಡಿತ್ತು; ಹುಡುಗಿಯನ್ನು ಮಾತನಾಡಿ ಬಂದೆನೆಂಬುದಕ್ಕಲ್ಲ - ಮುಕ್ತವಾಗಿ, ಬರುವ ಭಾಷೆಯಲ್ಲಿ ಭಯವಿಲ್ಲದೆ ಮಾತನಾಡಿ ಒಬ್ಬ ಮಿತ್ರನನ್ನು ಮಾಡಿಕೊಂಡೆನೆಂಬ ಕಾರಣದಿಂದಾಗಿ. ಮನೆ ತಲುಪುವ ತನಕ, ದಾರಿಯುದ್ದಕ್ಕೂ "ನಾನು ಮೊದಲಿನಿಂದ ಎಲ್ಲರೊಡನೆ ಇನ್ನೂ ಚೆನ್ನಾಗಿ ಬೆರೆತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು!" ಅಂತ ಹಗಲುಗನಸನ್ನು ಕಂಡದ್ದಾಯಿತು. ಆ ಅಧ್ಯಾಯ ಅಲ್ಲಿಗೇ ಮುಗಿಯಿತು; ಇದು ನಡೆದು ೩ ವರ್ಷಗಳಿಗೂ ಹೆಚ್ಚು ಸಮಯ ಕಳೆದು ಹೋಗಿದೆ.

ಈಗ, ಮಧ್ಯರಾತ್ರಿ ಕೂತು ಕೀಲಿಮಣೆಯನ್ನು ಕುಟಿಯುತ್ತಿರುವಾಗ, ನಾನು ಹಾಗೆ ಮಾಡಿದ್ದು ನನಗೆ ಎಷ್ಟು ಒಳ್ಳೆಯದನ್ನು ಮಾಡಿದೆ ಎಂದು ನೆನೆಯುತ್ತಿದ್ದೇನೆ. ಸಹೋದ್ಯೋಗಿಯೊಬ್ಬನು, "ನೀನು ಚೆನ್ನಾಗಿ ಹಿಂದಿಯಲ್ಲಿ ಮಾತನಾಡುತ್ತೀಯ! ಅನ್ನಿಸುವುದೇ ಇಲ್ಲ ನೀನು ದಕ್ಷಿಣ ಭಾರತದವ", ಎಂದಾಗ ನನಗೆ ಖುಶಿಯಾಗುವುದೇಕೆಂದರೆ ಸಮಯ ಬಂದಾಗ ಬರುವ ಭಾಷೆಯಲ್ಲಿ, ತಿಳಿದ ರೀತಿಯಲ್ಲಿ ನನ್ನ ವಿಚಾರಗಳನ್ನು ಅನ್ಯರೊಡನೆ ಹಂಚಿಕೊಳ್ಳುವ ಮನೋವೃತ್ತಿಯನ್ನು ನಾನು ಬೆಳೇಸಿಕೊಂಡಿದ್ದೇನೆ ಎಂದು. ಕನ್ನಡದಲ್ಲಿ ಮಾತನಾಡುವ ಸಂತಸ ಮನೆಯಲ್ಲಿ ಮಿತ್ರರೊಡನೆ ಮಾತನಾಡಿ ಪಡೆದರೆ, ಆಫೀಸಿನಲ್ಲಿ ಕನ್ನಡವನ್ನು ಸೇರಿಸಿ, ಅನ್ಯ ಭಾಷೆಗಳಲ್ಲಿ ಮಾತನಾಡಿ ಅದರ ಸ್ವಾರಸ್ಯವನ್ನು ಸವಿಯುತ್ತೇನೆ :)

3 comments:

  1. ಚೆನ್ನಾಗಿ ಬರೆದಿದ್ದೀಯ. ಆದರೆ ನೀನು ಇದರ ಬಗ್ಗೆ ಯಾವಾಗಲೂ ಹೆಳಿರಲಿಲ್ಲ... ಆಮೇಲೆ ವಿಚಾರಿಸ್ಕೋತೀನಿ ;)

    ReplyDelete
  2. Tumba chennagi bardidiya....ee tarah chikka chikka vishyagalu yavaglo neniskondaga tumba kushi agutee :-)

    ReplyDelete
  3. @ವಿಜಯ್, ಈ ವಿಶಯ ನನಗೆ ನೆನಪು ಬಂದಿದ್ದು ಕೆಲ ದಿನಗಳ ಹಿಂದೆ - ಹಾಗಾಗಿ ಈಗ ಬರೆದಿದ್ದೇನೆ. @ದೀಪಿಕಾ, ಧನ್ಯವಾದಗಳು.

    ReplyDelete