Monday, January 24, 2011

ಮೇಡಂನ ಬೆಚ್ಚಿ-ಬೀಳಿಸಿದ ಪ್ರಸಂಗ

ಮೇಡಂ ನ ಬೆಚ್ಚಿ-ಬೀಳಿಸಿದ ಪ್ರಸಂಗ

ಬಿ.ಈ. ತರಗತಿಗಳಲ್ಲಿ ಮಾಡಿದ ಹಲವಾರು ’ಅತಿ’ ಜಾಣ್ಮೆಯ ಕೆಲಸಗಳಲ್ಲಿ ನನಗಿಂದು ನೆನಪಿಗೆ ಬಂದದ್ದು ಈ ಸನ್ನಿವೆಷ.

ಸಾಯಂಕಾಲದ ೩ ಘಂಟೆಯಾಗಿದೆ. ಕಾಲೇಜಿನ ಎರಡನೇಯ ಅಂತಸ್ತಿನ ಕೊಠಡಿಗಳು ಸೂರ್ಯನ ಶಾಖಕ್ಕೆ ಸುಡುವ ಕಾವಲಿಯಂತೆ ಕಾದು, ಊಟ ಮಾಡಿ ಪಾಠ ಕೇಳಲು ಕುಳಿತ ವಿದ್ಯಾರ್ಥಿಗಳು ತೂಕಡಿಸುವಂತೆ ಮಾಡಿತ್ತು. ತೆರೆದ ಕಿಟಕಿಗಳು (ತೆರೆಯುವುದಿನ್ನೇನಿದೆ - ಗಾಜಿನ ಕಿಟಕಿಗಳಿಗೆ ಗಾಜೇ ಇಲ್ಲ), ಕಿಟಕಿಗಳಿಂದ ಒಳಚಿಮ್ಮುತ್ತಿದ್ದ ಸೂರ್ಯನ ಕಿರಣಗಳು, ಹಳೇಯ (ಆದರೆ ಗಟ್ಟಿಮುಟ್ಟಾದ) ಬೆಂಚುಗಳು, ದೂರದಲ್ಲಿ ಪೋಡಿಯಂ ಮೇಲೆ ತರಗತಿಯತ್ತ ಬೆನ್ನು ಮಾಡಿ ಬೋರ್ಡಿನ ಮೇಲೆ ,ಮಗ್ನವಾಗಿ, ಚಾಕ್ ಬಳಸಿ ಬರೆಯುತ್ತಿದ್ದ ಮೇಡಂ, ಇತ್ಯಾದಿ, ಇತ್ಯಾದಿ... ಇವೆಲ್ಲವನ್ನು ನೋಡುತ್ತ, ಪಾಠದೆಡೆ ಗಮನ ನೀಡದೆ ಅತೃಪ್ತನಂತೆ ಹೊರ ಹೋಗಲು ಕಾಯುತ್ತಿದ್ದೆ. ನನ್ನ ಜೊತೆ ಸೂರಿ; ಇಬ್ಬರೂ ಸೇರಿ ನಮ್ಮ ಡಿಪಾರ್ಟಮೆಂಟಿನ ಫೋರಂ ಕೆಲಸದ ನಿಮಿತ್ತ ಹೊರಹೋಗಬೇಕಿತ್ತು; ಆದರೆ ಹೋಗುವುದು ಹೇಗೆ? ೩.೩೦ ಗೆ ನಾವು ಹೋಗಬೇಕು - ತರಗತಿ ಶುರುವಾಗುತ್ತಿದ್ದಂತೆಯೆ ಮೇಡಂನ್ ಜೊತೆ ನಾವಿಬ್ಬರು ಇದರ ಕುರಿತು ಮಾತನಾಡಿದ್ದೆವು - ೩.೩೦ಗೆ ನಾವು ಹೊರ ಹೋಗುವುದಾಗಿ ತಿಳಿಸಿದ್ದೆವು; ಆದರೆ ಸಮಯ ಈಗ ೩.೪೦ ಆಗಿ ಹೋಗಿದೆ! ಮೇಡಂ ಇತ್ತ ತಿರುಗುತ್ತಿಲ್ಲವೇಕೆ? ನಮ್ಮನ್ನು ಹೋಗಲು ಹೇಳುತ್ತಿಲ್ಲ - ಏಕೆ? ತಲೆಯಲ್ಲಿ ಹಲವಾರು ಇಂತಹ ವಿಚಾರಗಳ ಸರಮಾಲೆಯೇ ಸುತ್ತುತಿವೆ.

ಅಷ್ಟರಲ್ಲಿ ಸೂರಿ ನನ್ನನ್ನು ಕುರಿತು ಸಣ್ಣ ದನಿಯಲ್ಲಿ ಪಿಸುಗುಟ್ಟುತ್ತಾನೆ,
"ವಿನಿ! ಅವಿನಾಶ್ ಸರ್ ಕರೆದಿದ್ರಲ್ಲ ಫೋರಂ ಕೆಲಸಕ್ಕೆ? ಹೋಗೋಣ? ಮೇಡಂನ್ ಕೇಳು!"
ನಾನು, "ಸರಿ - ಸ್ವಲ್ಪ ಕಾಯೋಣ" ಅಂದೆ. ಮನಸ್ಸಿನಲ್ಲಿ ಕಾಯುವ ಇಷ್ಟ ಕಿಂಚಿತ್ತೂ ಇಲ್ಲ - ಆದರೆ ಮೇಡಂ ಯಾಕೆ ತಿರ್ಗ್ತಿಲ್ಲಾ ಗೋಡೆ ಬಿಟ್ಟು?

ಅಟೆಂಡರ್ ಒಬ್ಬರು ಬಂದರು ತರಗತಿಯೊಳಗೆ. ಅವಿನಾಶ್ ಸರ್ ಕರೆ ಕಳುಹಿಸಿರಬೇಕು ಅಂತ ಅಂದುಕೊಂಡು ಖುಶಿಯಾಯಿತು. ಅವರು ಒಳಬಂದವರೇ ಸೀದಾ ಮೇಡಂನ ಡೆಸ್ಕಿಗೆ ಹೋಗಿ ಮೇಡಂಗೆ ಕರೆ ನೀಡಿದರು. ಮೇಡಂ, ಅಟೆಂಡರ್ ತಂದ ಕಾಗದದ ಮೇಲೆ ಸಹಿ ಹಾಕಿ ಕಳುಹಿಸಿಬಿಟ್ಟರು... ಅರೆ! ನಮ್ಮನ್ನು ಕರೆಯಲು ಯಾರೂ ಬರಲಿಲ್ಲವೆ? ಛೆ! ಸಮಯ ೪ ಘಂಟೆ!

ಇನ್ನು ತಡೆಯುವುದರಲ್ಲಿ ಅರ್ಥವಿರಲಿಲ್ಲ. ಅಷರಲ್ಲಿ ಸೂರಿ ಮತ್ತೊಮ್ಮೆ ಕೇಳಿದ,
"ವಿನಿ, ಇಗ ಕೇಳೋಣ?"
ನಾನು,"ಸರಿ, ಮೇಡಂನ ಕೇಳ್ತಿನಿ", ಅಂದೆ.

ಮೇಡಂ ಇನ್ನೂ ಬೋರ್ಡಿನತ್ತ ಮುಖ ಮಾಡಿ ಬರೆಯುತ್ತಲೇ ಇದ್ದಾರೆ. ನಾನು ನನ್ನ ಜಾಗದಿಂದ ಎದ್ದು ಮೇಡಂನತ್ತ ಸದ್ದು ಮಾಡದೆ ಧಾವಿಸತೊಡಗಿದೆ. ತಪ್ಪನ್ನೇನು ಮಾಡಿರದಿದ್ದರೂ, ತರಗತಿಯನ್ನು ತಪ್ಪಿಸಿ ಹೋಗಲು ಅನುಮತಿ ಕೇಳಲು ಹೊರಟಾಗ, ಮನಸ್ಸಿನಲ್ಲಿ ಒಂದು ತೆರನೇಯ ದುಗುಡ - ಆತಂಕ. ನಾನು ಇನ್ನೇನು ಪೋಡಿಯಂ ಹತ್ತಿರ ಬಂದೆ ಎನ್ನುವಷ್ಟರಲ್ಲಿ ಎಲ್ಲರ ಗಮನ ನನ್ನತ್ತ; ಆದರೆ ಮೇಡಂ ಮಾತ್ರ ತಿರುಗುವ ಮನಸ್ಸನ್ನು ಇನ್ನು ಮಾಡಿಲ್ಲ. ಎಂತಹ ವಿಪರ್ಯಾಸ! ಮೆಲ್ಲನೆ ಮೇಡಂನ ಕರೆದೆ. ಆದರೆ ಅವರಿಂದ ಉತ್ತರ ಬರಲಿಲ್ಲ. ಬೋರ್ಡಿನ ಮೇಲೆ ಚಾಕ್ ಕೆರೆಯುವ ಸದ್ದು ಹುಡುಗರ ಗುಜುಗುಜುವಿನೊಡನೆ ಬೆರೆತು ಹೊಮ್ಮುತ್ತಿದೆ. ಮೇಡಂ ಮಾತ್ರ - ಊಹುಂ - ಆಲಿಸುತ್ತಿಲ್ಲ. ಅವರ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ.

ಸದ್ದು ಮಾಡುವ ಇಷ್ಟ ನನಗಿರಲಿಲ್ಲ (ತಪ್ಪು ಮಾಡಲು ಮೂಲ ಕಾರಣ!). ಮೆಲ್ಲನೆ ಪೋಡಿಯಂ ಹತ್ತಿದೆ. ಮೇಡಂನ ಪಕ್ಕ ಬಂದು ನಿಂತೆ. ಕೈ ಚಾಚಿದರೆ ಮುಟ್ಟುವಷ್ಟು ದೂರ. ಮೇಡಂ ನನ್ನನ್ನು ಇನ್ನೂ ಗಮನಿಸಿಲ್ಲ... ಇದನ್ನು ನಾನೂ ಗಮನಿಸಿಲ್ಲ.

ಬಾಯಿ ತೆರೆದೆ, "ಮೇಡಂ...."

ತರಗತಿಯಲ್ಲೆಲ್ಲೆಡೆ ಮಂದ ಗುಜುಗುಜು ಮಿಶ್ರಿತ ನಗು ತೇಲುತಿದೆ...

ಮೇಡಂ ನಾನು ಕರೆದಾಕ್ಷಣ ಬೆಚ್ಚಿ ಬಿದ್ದು, ಹೆದರಿಕೆಯಿಂದ ಕೂಡಿದ ಕಣ್ಣುಗಳಿಂದ ನನ್ನನು ನೋಡಿ ಚಾಕ್ ಇಲ್ಲದ ಕೈಯನ್ನು ತಮ್ಮ ಎದೆಗವಚಿ ತಮ್ಮ ಜೀವನದಲ್ಲಾದ ಈ ವಿಚಿತ್ರ ಶಾಕ್ನ್ ನಿಂದ ಹೊರ ಬರಲು ಯತ್ನಿಸಿದರು. ಯಶಸ್ಸನ್ನು ಕಂಡರೆನ್ನಿಸುತ್ತದೆ. ಅಷ್ಟರಲ್ಲಿ ನಾನು, "ನಾನು ಹಾಗು ಸುರೇಶ್ ಅವಿನಾಶ್ ಸರ್ ಅನ್ನು ಫೋರಂ ವಿಶಯವಾಗಿ ಈಗ ಭೆಟ್ಟಿಯಾಗಬೇಕು - ನಾವು ತರಗತಿಯಿಂದಾಚೆ ಹೋಗಬಹುದೆ?", ಎಂದು ಉಸುರಿಯಾಗಿತ್ತು.

ಮೇಡಂ ಇನ್ನು ಶಾಕ್ ನಲ್ಲಿ, ತಮ್ಮ ಗೋಣನ್ನು "ನನಗೆ ಸಮ್ಮತಿ ಇದೆ" ಎನ್ನುವ ರೀತಿಯಲ್ಲಿ ಅಲುಗಾಡಿಸಿದ್ದೇ ತಡ, ಅವರಿಗೆ ಧನ್ಯವಾದಗಳನ್ನರ್ಪಿಸಿ, ನಾನು ಮಾಡಿದ ಅವಾಂತರ ನೆನೆದುಕೊಳ್ಳುತ್ತ, ಸೂರಿಯೊಡನೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ನಮ್ಮೋಡನೆ ಕೊನೇಯ ಬೆಂಚಿನಲ್ಲಿ ಕುಳಿತಿದ್ದ ಸಹಪಾಠಿಗಳು ತಾವೂ ತರಗತಿಯಿಂದ ಹೊರ ಬರುವುದು ಹೇಗೆ ಎಂದು ಕೇಳಿದರಾದರೂ, ನಾನು ನನ್ನ ಈ ವರ್ತನೆಯಿಂದ ಪ್ರಭಾವಿತನಾಗಿದ್ದು, ನನ್ನ ತಲೆಯನ್ನು ಕೆರೆಯುತ್ತ "ಫೋರಂ ಕೆಲಸ" ಎಂದು ಹೇಳಿ ಅಲ್ಲಿಂದ ಹೊರಟೆ. ಪಾಪ, ಮೇಡಂ. :)

3 comments:

 1. ಮಾಮ, ವರ್ಣನೆ ತುಂಬಾ ಚೆನ್ನಾಗಿ ಮೂಡಿಬಂದಿದೆ..

  ReplyDelete
 2. ವಿನಿ, ನೀನೂ ಇಂತವೆಲ್ಲಾ ಮಾಡಿದ್ಯಾ?!!!
  ಮೇಡಂ ಯಾರು ಅಂತ ಹೇಳ್ದಿದ್ರೂ ಅವರ ಅನುಭವ ಎಷ್ಟೆಂದು ಹೇಳಿದ್ದರೆ ಮಜ ಇರ್ತಿತ್ತು... :)
  ಅದ್ಸರಿ, ಆಚೆ ಹೋಗಿ ಫೋರಂ ಕೆಲ್ಸ ಮಾಡುದ್ಯಾ???

  ReplyDelete
 3. @ಚಂದ್ರಕಾಂತ, ಧನ್ಯವಾದಗಳು :)
  @ತೇಜು, ಮೇಡಂ ಈ ಘಟನೆ ನಡೆದಾಗ ಆಗಲೇ ಸೀನಿಯರ್ ಲೆಕ್ಚರರ್ ಆಗಿದ್ದರು ಅಂದುಕೊಂಡಿದ್ದೇನೆ. ಹೂನಪ್ಪ, ಫೋರಂ ಕೆಲಸ ಮಾಡಿದ್ದೆ - ಮಾಡಿ ಆನಂದಿಸಿದ್ದೆ :)

  ReplyDelete