Friday, February 4, 2011

ಅಲೆ

ಹಿತವಾದ ತಂಗಾಳಿ ಸಮುದ್ರದ ಅಲೆಯೊಡನೆ ದಡದತ್ತ ಬೀಸುತಲಿತ್ತು. ಸಮುದ್ರದ ಮಧುರ ಘರ್ಜನೆಯ ಹೊರತು ಬೇರೆ ಯಾವುದೇ ಸಪ್ಪಳವಿರಲಿಲ್ಲ. ಸಾಯಂಕಾಲದ ಸಮಯ; ಅವರಿಬ್ಬರು ಹಸಿ ಮರಳಿನಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಮಾತನಾಡದೆ ನಡೆಯುತ್ತಿರಲು, ಕೆಂಪಾದ ಸೂರ್ಯನು ಇವರಿಬ್ಬರ ನೆರಳನ್ನು ಸಮುದ್ರ ದಂಡೆಯ ಮೇಲೆ ಬೃಹದಾಕೃತಿಯ ರೂಪದಲ್ಲಿ ಮೂಡಿಸುತ್ತ ದೂರ-ದೂರದ ವರೆಗೆ ಹಬ್ಬಿದ್ದ ಸಮುದ್ರದ ಹಿಂದೆ ಮೆಲ್ಲನೆ ಮರೆಯಾಗಲಾರಂಭಿಸದ್ದನು. ಅವನು-ಅವಳ ಉತ್ಸಾಹ ಭರಿತ ಆ ನಡಿಗೆಯಲ್ಲಿ ಮಾತನ್ನು ಯಾರೂ ಪ್ರಾರಂಭಿಸಿರದಿದ್ದರೂ, ಕಣ್ಣುಗಳ ನೋಟದಲ್ಲಿಯೇ ಸಾವಿರಾರು ಪ್ರಶ್ನೆಗಳನ್ನು ಕೇಳಿ ಉತ್ತರಿಸಿಯೂ ಆಗಿತ್ತು! ಸಂತಸ ಕೂಡಿದ ಮಂದಹಾಸ ಅವಳ ಮುಖದಲ್ಲಿ ತುಂಬಿದ್ದರೆ, ಅವನ ನಯನಗಳಲ್ಲಿ ಅವಳ ಪ್ರತಿಬಿಂಬವೇ ಹೊರತು ಬೇರಿನ್ನಿಲ್ಲ... ಆಕಾಶ್ ಹಾಗು ಅನ್ವಿತ ಈ ಸಮುದ್ರ ದಂಡೆಯ ಮೇಲೆ ಹಲವಾರು ಬಾರಿ ನಡೆದಿದ್ದರು, ಆದರೆ ಇಂದು ಅವರಿಗೆ ಒಂದು ವಿಶೇಷವಾದ ದಿನ...

ಅವಳಂದಳು, "ಇಂದು ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ ಅಂತ ನೆನೆಸಿಕೊಂಡ್ರೆ ನಂಬೊಕ್ಕೆ ಆಗ್ತಿಲ್ಲ! ನಾವು ಮೊದಲ ಬಾರಿ ಇಲ್ಲಿಗೆ ಬಂದಾಗ ನನ್ನನೇ ನೋಡುತ್ತ ನೀವು ಆ ತಂಗಿನ ಮರಕ್ಕೆ ಡಿಕ್ಕಿ ಹೊಡೆದದ್ದು ನನಗಿನ್ನೂ ನೆನಪಿದೆ...".
ಮುಖ ಕೆಂಪೇರಿದ ಅಕಾಶ್, "ಒಹ್! ಅದು ನಿನ್ನನ್ನು ನೋಡುತ್ತ ಅಲ್ಲ, ನಿನ್ನ ಜೊತೆಗಿದ್ದ ನಿನ್ನ ಗೆಳತಿ ಪ್ರಿಯಾ ನ ನೋಡಿ!", ಎಂದು ಅನ್ವಿತಾಳನ್ನು ರೇಗಿಸಿ ಅವಳ ಮೃದು ಕೈಗಳ ಪುಟ್ಟ ಗುದ್ದುಗಳಿಂದ ತಪ್ಪಿಸಿಕೊಳ್ಳುತ್ತ ಪ್ರೀತಿಯಿಂದ ಅವಳ ಕೈಗಳನ್ನು ಹಿಡಿದನು.
"ಅನ್ವಿತಾ, ನೀನೇ ನನ್ನ ದಾರಿ ತಪ್ಪಿಸಿದ್ದು! ಇನ್ನು ನಿನ್ನ ಹಾಗು ನನ್ನ ದಾರಿ ಒಂದೇ ಆದ ಮೇಲೆ ನಾನು ನೀನು ಹೇಳಿದ ಹಾಗೆಯೇ ಕೇಳಬೇಕಲ್ಲವೇ?", ಎಂದು ಸ್ವಲ್ಪ-ಸ್ವಲ್ಪವಾಗಿಯೇ ಬೆಂಕಿಗೆ ತುಪ್ಪ ಹಾಕಿದನು.
ಅನ್ವಿತಳ ಹುಸಿ ಮುನಿಸನ್ನು ಹೋಗಲಾಡಿಸಲು ಹಣೆಯೆ ಮುತ್ತೊಂದನ್ನು ಇತ್ತು ಕ್ಷಮೆಯನ್ನು ಯಾಚಿಸಿದನು. ಇಬ್ಬರೂ ದಡದ ಮೇಲೆ ಒಂದೆಡೆ ಕುಳಿತು ಮರಳಿನ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದರು.

ಅಕಾಶ್ - ಅನ್ವಿತ, ಒಬ್ಬರನ್ನೊಬ್ಬರು ನೋಡಿದ್ದು ಸುಮಾರು ೨ ವರ್ಷಗಳ ಹಿಂದೆ. ಅಂದಿನಿಂದಲೂ ಒಬ್ಬರನ್ನೊಬ್ಬರು ಅರಿತು, ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರೂ ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಅದೆಂತಹುದ್ದೋ ಕೂತು ಕೀಳಿ-ಮಣೆ ವೊತ್ತೋ ಕೆಲಸವಂತೆ, ಸಾಫ್ಟ್-ವೇರ್ ಅಂತಾರಲ್ಲ, ಅದನ್ನ ಮಾಡೋದು. ತಮ್ಮ ತವರೂರಾದ ಮಂಗಳೂರಿಗೆ ಬಂದಾಗಲೊಮ್ಮೆ ಸಮುದ್ರ ದರ್ಶನ ಮಾಡಿಯೇ ಹೋಗೋದು ಇವರು. ಇನ್ನು, ಕಥೆಗೆ ಮರಳೋಣ!

"ಆಕಾಶ್, ನಿನಗ್ಯಾವ ಮಗು ಇಷ್ಟ?", ಎಂದು ಅನ್ವಿತ ಪ್ರಶ್ನಿಸಿದಾಗ ಆಕಾಶ್, "ನನಗೆ ಗಂಡು, ಹೆಣ್ಣು ಮಗು - ಯಾವುದೇ ಆದರೂ ಪರ್ವಾಗಿಲ್ಲ; ಆದರೆ ಮಗು ಮೈ ಮೇಲೆ ಸುಸ್ಸು ಮಾಡುವುದನ್ನ ನಿಲ್ಲಿಸಿ ಸೂರ್ಯಕಾಂತಿಯಂತಹ ಬೊಜ್ಜು-ಬಾಯಿ ತುಂಬ ನಗು ಬೀರಿದರೆ ಅದು ನನಗಿಷ್ಟ!", ಎಂದು ಸುತ್ತು-ಬಳಸಿ, ಒಂದೇ ಮಾತಿನಲ್ಲಿ ಎರಡು ಪ್ರಶ್ನೆಗಳಿಗೆ (ಒಂದು ಕೇಳಿದ್ದು - ಇನ್ನೊಂದು ಕೇಳದೇ ಇದ್ದಿದ್ದು) ಉತ್ತರ ನೀಡಿದ. ಅನ್ವಿತಾ ಆಕಾಶನಿಗೆ ತಲೆಯ ಮೇಲೆ ನೀಡಿದ ಮೊಟಕು ಅವನ ಬಾಯಿ ಮುಚ್ಚಿಸಿತು!

"ಅದು ಸರಿ, ಒಂದು ಲಾಂಗ್-ಡ್ರೈವ್ ಗೆ ಹೋಗೋಣವೇ?", ಎಂದು ಅಕಾಶ್ ಉಸುರಿದಾಗ, "ಹುಂ! ಆ ನಿಮ್ಮ ಮುರುಕಲು ಬೈಕಿನ ಮೇಲೆ ಕುಳಿತಾ? ನಾನ್ ಬರಲ್ಲಾ!", ಎಂದು ಕಿಡಿ ಕಾರಿದಳು.

ಆಕಾಶ್, ಬೇಸರಿಸದೆ, "ಹಾಗಿದ್ದರೆ, ಒಂದು ಐಸ್ ಕ್ರೀಮ್?", ಎಂದಾಕ್ಷಣ ಅನ್ವಿತ, "ಖಂಡಿತ!", ಎಂದು ತಯಾರಾದಳು.

ಐಸ್ ಕ್ರೀಮ್ ನೆಕ್ಕುತ್ತ, ಮರಳಿನ ಮನೆಯನ್ನು ಅದರ ಪಾಡಿಗೆ ಬಿಟ್ಟು ಒಬ್ಬರನ್ನೊಬ್ಬರು ಛೇಡಿಸುತ್ತ, ಚಿಕ್ಕ ಮಕ್ಕಳಂತೆ ಜಗಳಾವಾಡುತ್ತ, ಮುದ್ದಾಡುತ್ತ ಮನೆಯತ್ತ ನಡೆದರು... ಅಮ್ಮನು ರಾತ್ರಿಗೆಂದು ಮಾಡಿದ್ದ ಸಾರಿನ ಸುವಾಸನೆ ಮರಿಗಳನ್ನು ಬಿಲಕ್ಕೆ ಸೇರುವಂತೆ ಸಂದೇಶವನ್ನು ನೀಡಿತ್ತು. ತಂಪಾದ ಗಾಳಿ ಬೀಸುತ್ತಲಿತ್ತು... ನೀರಿನ ಕೆನೆತ ಮುಗಿಲಿಗೇರಹತ್ತಿತ್ತು.

1 comment:

  1. ಏನಪ್ಪಾ... Romantic ಅಲೆ ಏಳಿಸ್ತಿದ್ದೀಯಾ... ;)
    ಕೇಳದೇ ಇದ್ದ ಎರಡನೇ ಪ್ರಶ್ನೆ ಯಾವ್ದು ಅಂತ ಅರ್ಥ ಆಗ್ಲಿಲ್ಲ...
    ಚೆನ್ನಾಗಿ ಬಂದಿದೆ...

    ReplyDelete