Sunday, May 22, 2011

ಚಿತ್ರದುರ್ಗ - ಬಾಲೇನಹಳ್ಳಿ ಪ್ರಸಂಗ

ಕಾಂತ, ಮಲ್ಲಿಕಾರ್ಜುನ ಹಾಗು ನಾನು ಏಪ್ರಿಲ್ ೨೧ ನೇಯ ರಾತ್ರಿ ಬಹಳ ಹೊತ್ತಿನ ವರೆಗೆ ದುರ್ಗಕ್ಕೆ ಹೋಗುವ ಸ್ಲೋ ಪ್ಯಾಸೆಂಜರ್ (ಅದರ ಹೆಸರು, ಹೊಸಪೇಟೆ ಫಾಸ್ಟ್ ಪ್ಯಾಸೆಂಜರ್ - ಆದರೆ ಅದು ಎಷ್ಟು ಫಾಸ್ಟ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ನೆ) ಗಾಡಿಗಾಗಿ ಕಾಯುತ್ತ ನಿಂತಿದ್ದೆವು. ಮಾರನೆಯ ದಿನ ವಿವೇಕನ ಅಣ್ಣ ವಿನಯನ ಮದುವೆಗೆ ಮಹೂರ್ತಕ್ಕೆ ಸರಿಯಾಗಿ ಸೇರಬೇಕು ಅನ್ನುವುದು ನಮ್ಮ ಉದ್ದೇಶವಾಗಿತ್ತು. ಮಳೆ ಸ್ವಲ್ಪ ಜೋರಾಗಿಯೇ ಬೀಳುತ್ತಿತ್ತು. ವಾರದ ಅಂತ್ಯ ಅನ್ನೋ ಕಾರಣದಿಂದ ಪ್ಲ್ಯಾಟ್ಫಾರಂ ಜನರಿಂದ ತುಂಬಿ ಕಿಕ್ಕಿರಿಯುತ್ತಿತ್ತು. ಸಿಕ್ಕ ಸ್ವಲ್ಪ ಜಾಗದಲ್ಲಿ ನಾನು ಹಾಗು ಮಲ್ಲಿಕಾರ್ಜುನ ನಿಂತುಕೊಂಡು ಬಿಸಿ ಕಾಫಿ ಸವೆಯುತ್ತಿರಲು, ಎಲ್ಲೆಡೆ ಹಸಿ-ಹಸಿ ಇದ್ದ ಕಾರಣ ಕಾಂತ ಸ್ವಲ್ಪ ದೂರದಲ್ಲಿ ನಿಂತಿದ್ದ. ಕೊನೆಗೂ ರೈಲು ಗಾಡಿ ಬಂದಾಗ ಸಮಯ ರಾತ್ರಿಯ ೧೧.೩೦. ನಿಧಾನವಾಗಿಯೇ ನಮ್ಮ ಬೋಗಿಯೊಳಗೆ ಹತ್ತಿದ್ದಾಯಿತು. ಎಂದಿನಂತೆ ಮಲ್ಲಿ-ಕಾಂತ ರ ಕಾಲುಗಳಿಗೆ ಗಾಲಿಗಳು ಅಂಟಿರುವುದರಿಂದ ಮಳೆ ಇದ್ದರೂ ಸಹ ಹೊರಗೆ ಜೋತಾಡಿ ಒಳಗೆ ಬಂದರು. ನನ್ನದು ಕೆಳಗಿನ ಸೀಟು, ಅದರ ಎದುರಿನ ಸೀಟು ಬೇರೊಬ್ಬನದ್ದು, ಅದರ ಮೇಲಿನ ಎರಡು ಸೀಟುಗಳು ಮಲ್ಲಿ-ಕಾಂತನದ್ದು ಆಗಿದ್ದುವು. ಇನ್ನೂ ಕಸ ತಗೆಯೋ ಬಾಯಿ ಬಂದಿಲ್ಲದಿದ್ದ ಕಾರಣ ಮಾತನಾಡುತ್ತ ಕುಳಿತಿದ್ದೆವು. ಮುಂದಿನ ಸೀಟಿನಲ್ಲಿ ಕುಳಿತಿದ್ದ ಪೋರ ನೀರು ಕುಡಿಯುತ್ತಿದ್ದಾಗ ಅವನ ಕೈ ಜಾರಿ ಬಾಟಲಿ ಕೆಳಗೆ ಬೀಳುತ್ತಿದ್ದಂತೆಯೇ ನನಗೆ ಚಿಮ್ಮುತ್ತಿರುವ ನೀರಿನಲ್ಲಿ ಮೂರನೇಯ ಬಾರಿ ಸ್ನಾನವಾಯ್ತು (ಮೊದಲನೇಯ ಬಾರಿ ಮನೆಯಲ್ಲಿ, ಎರಡನೇಯದ್ದು ಮಳೆಯಲ್ಲಿ). ಸಿಟ್ಟನ್ನು ಹತೋಟಿಯಲ್ಲಿಟ್ಟುಕೊಂಡು ಪೋರನ ಸಣ್ಣನೆಯ ಕ್ಷಮಾ ಯಾಚನೆಯನ್ನು ಗಮನಿಸದೇ ನೀರನ್ನು ಒರೆಸಿಕೊಂಡೆ. ಕೀಟಲೆ ಮಾಡುತಿದ್ದ ಮಲ್ಲಿಯನ್ನು ಚಚ್ಚುವ ಅತೀವ್ರವಾದ ಆಸೆಯನ್ನೂ ಬದಿಗೊತ್ತಿ (ಪ್ರಯೋಜನವಿಲ್ಲ ನೋಡಿ, ಅರ್ಥ ಆಗುವವರಿಗೆ ಬಿಡಿಸಿ ಹೇಳಬಹುದು) ತೆಪ್ಪಗೆ ಮಲಗಿಕೊಂಡೆ. ಸುಸ್ತಾಗಿದ್ದ ಕಾರಣ ಯಾರು ಏನು ವೋದರಿಕೊಂಡ್ರೋ ಗೊತ್ತಾಗ್ಲಿಲ್ಲ - ನಿದ್ದೆ ಅಂತು ಚೆನ್ನಾಗಿ ಹತ್ತಿತು.
ಎಚ್ಚರವಾದಾಗ ಬೆಳಗಿನ ಜಾವ ೬.೦೦ ಘಂಟೆ ಆಗಿತ್ತು. ಎದ್ದು ಫೋನು ತೆಗೆದು ಸಮಯ ನೋಡಿ ಎಷ್ಟು ದೂರ ಬಂದಿದ್ದೇವೆ ಎಂದು ನೋಡಿದರೆ ಇನ್ನೂ ಚಿಕ್ಕಜಾಜೂರು ಸಹ ಬಂದಿಲ್ಲ ಎಂದು ಬೇಸರವಾಯಿತು. ಮತ್ತೆ ಮಲಗಿಕೊಂಡೆ. ೭.೩೦ ಯ ಸುಮಾರು ಎಚ್ಚರವಾದಾಗ ಚಿಕ್ಕಜಾಜೂರು ದಾಟಿದ್ದೆವು. ಮಲ್ಲಿಕಾರ್ಜುನನನ್ನು ಎಬ್ಬಿಸಲು ಹೋದೆ...
"ಲೇ ಮಲ್ಲಿ ಎದ್ದೇಳೋ!"
"ಊ ಊ ಅಂ ಅಂ..." (ನಿದ್ದೆಯಲ್ಲಿ ಕನವರಿಸುವುದು)
"ಎದ್ದೇಳೋ ಮಲ್ಲಿಕಾರ್ಜುನ!"
"... ಊ ಊ ಊ ... ದುರ್ಗಾ ಬಂತಾ??" (ಮುಸುಕು ಎತ್ತದೆಯೇ)
"ಇಲ್ಲ.. ಇನ್ನೊಂದು ಘಂಟೆಯಲ್ಲಿ ಬರಬಹುದೇನೋ"
"ಬಂದಾಗ್ಲಾಸಿ ಎಬ್ಸು!"
ಇನ್ನೇನು ಎಬ್ಬಿಸೋ ಪ್ರಯತ್ನಗಳೆಲ್ಲ ವಿಫಲ ಅಂತ, ಹಲ್ಲುಜ್ಜುತ್ತಿರುವ ಅನ್ಯರನ್ನು ನೋಡುತ್ತಾ ತೆರೆದ ಬಾಗಿಲಿಗೆ ಜೋತು ಬಿದ್ದು ಮಳೆಯಿಂದ ಹಸಿಯಾದ ಮಣ್ಣಿನ ಸುವಾಸನೆಯನ್ನು ಹೀರುತ್ತ, ಹಸಿರನ್ನ ಕಣ್ಣಿನಲ್ಲಿ ಸೆರೆ ಹಿಡಿಯುತ್ತ ಇನ್ನೊಂದು ಘಂಟೆ ಕಳೆದೆ. ಚಿತ್ರದುರ್ಗ ಬರುವ ಸನ್ನೆಗಳು ಕಾಣಿಸುತ್ತಿರಲಿಲ್ಲ. ಆದರು, ಚಾದರ್ ಮಡಿಚಿ, ಕನ್ನಡಕ ಏರಿಸಿಕೊಂಡು ತಯಾರಾಗಿ ಕುಳಿತೆ. ಸುಮಾರು ಒಂಭತ್ತು ಘಂಟೆಗೆ ರೈಲು ಚಿತ್ರದುರ್ಗ ಮುಟ್ಟಿತು. ಅದರ ಅರಿವಾಗಲು ನನಗೆ ಕೆಲ ನಿಮಿಷಗಳು ಬೇಕಾಯಿತು. ಮಲ್ಲಿಯನ್ನು ಎಬ್ಬಿಸಿದೆ. ಕಾಂತನನ್ನು ಎಬ್ಬಿಸಿದೆ. ಇಬ್ಬರು ಗೊಣಗುತ್ತ ಕಣ್ಣು ತಿಕ್ಕಿಕೊಳ್ಳುತ್ತ ಮೆಲ್ಲನೆ ಇಳಿಯಲಾರಂಭಿಸಿದರು. ಮಲ್ಲಿಕಾರ್ಜುನ ಅಷ್ಟರಲ್ಲಿ ತನ್ನ ದೂರವಾಣಿ ಯಂತ್ರವನ್ನು ಕಿವಿಗದುಮಿಕೊಂಡು ಚಿತ್ರದುರ್ಗ ಬಂದಿರುವ ಪರಿವೆ ಇಲ್ಲದೆ ನಡೆಯತೊಡಗಿದ. ಅಲ್ಲಿಯೇ ಇದ್ದ ಒಬ್ಬರಿಗೆ ನಾನು ಕೇಳಿ ಇದೇ ಚಿತ್ರದುರ್ಗ ಎಂದು ಖಾತ್ರಿ ಪಡಿಸಿಕೊಂಡಾಗ ಮಲ್ಲಿ ಎಚ್ಚೆತ್ತ. ಬೇಗನೆ ತನ್ನ ಬ್ಯಾಗನ್ನು ಇಳಿಸಿಕೊಂಡ. ನಾನು ನನ್ನ ಬ್ಯಾಗೊಂದನ್ನು ಇಳಿಸಿ ಚಂದ್ರಕಾಂತನ ಬ್ಯಾಗನ್ನು ತಂದೆ. ಆದರೆ ಕಾಂತ ಎಲ್ಲಿ? ಬೋಗಿಯಲ್ಲಿನ ಶೌಚಾಲಯದ ಬಾಗಿಲು ಬಡಿದು ಕರೆ ನೀಡಿದ ಮೇಲೆ ಆಸಾಮಿ ಹೊರಬಂದ. ೫ ನಿಮಿಷದ ಮೇಲೆ ನಿಂತಿದ್ದ ರೈಲು ಅಷ್ಟರಲ್ಲಿ ಮತ್ತೆ ಹೊರಟಿತು. ಇನ್ನೇನು ರೈಲು ಸ್ಟೇಷನ್ ಬಿಡ್ತು ಅನ್ನೋ ಅಷ್ಟರಲ್ಲಿ
"ಓಹೋ, ಅಮ್ಮ ಕೊಟ್ಟು ಕಳುಹಿಸಿದ ಬ್ಯಾಗು ಬೋಗಿಯಲ್ಲಿಯೇ ಉಳಿಯಿತು!" ಅಂತ ನಾನು ಉಸುರಿದೆ.
ಅಷ್ಟು ಹೊತ್ತಿಗಾಗಲೇ ಎಲ್ಲರೂ ಎದ್ದಿದ್ದರು. ಮಲ್ಲಿಕಾರ್ಜುನ ರೈಲು ಸಿಬ್ಬಂದಿಗೆ ಕೇಳು ಅಂತ ನನಗೆ ಹೇಳಿದ. ಹಾಗೆಯೇ ಮಾಡಿದೆ - ಅಲ್ಲಿಯೇ ನಿಂತಿದ್ದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಹಾಗು ಅನ್ಯ ಸಿಬ್ಬಂದಿಗೆ ಆದ ವಿಷಯವನ್ನ ಹೇಳಿದೆ. ಅವರು ಸ್ಟೇಷನ್ ಮಾಸ್ಟರ್ ಅವರನ್ನು ಬೇಗ ಭೆಟ್ಟಿಯಾಗಿ ತಿಳಿಸಲು ಹೇಳಿದರು. ಮುಂದಿನ ಸ್ಟೇಷನ್ ಅಲ್ಲಿ ಬ್ಯಾಗ್ ಸಿಕ್ರೆ ಇಳಿಸಿಕೊಳ್ಳಬಹುದು ಅಂದ್ರು. ನಾನು ಬೇಗನೆ ಹೋಗಿ ಅಲ್ಲಿಯೇ ಇದ್ದ ಸ್ಟೇಷನ್ ಮಾಸ್ಟರ್ ಅವರನ್ನು ಕಂಡೆ.
"ಸರ್, ಟ್ರೈನಲ್ಲಿ ನಾನು ಒಂದು ಬ್ಯಾಗ್ ಬಿಟ್ಟಿದ್ದೀನಿ... ಇಳೀಬೇಕಾದ್ರೆ ಲಕ್ಷ್ಯಕ್ಕೆ ಬರ್ಲಿಲ್ಲ..."
"ಅಲ್ಲ ಅದು ಹೇಗೆ ಬಿಟ್ರಿ? ಬ್ಯಾಗ್ ಅಲ್ಲೇ ಇದ್ರೆ ಸಿಗಬಹುದು - ಇಲ್ಲ ಅಂದ್ರೆ ಏನು ಮಾಡೋಕ್ಕಾಗೋಲ್ಲ...
ಯಾವ್ ಬೋಗಿ, ಸೀಟ್ ನಂಬರ್ ಏನು?..."
"ಎಸ್ ೨, ಸೀಟ್ ನಂಬರ್ ೬೦..."
"ಯಾವ ಬ್ಯಾಗ್? ಬಣ್ಣ ಏನಿತ್ತು?"
"ದೊಡ್ಡ ಏರ್ ಬ್ಯಾಗ್... ಕರಿ ಬಣ್ಣ... ಆ ಸೀಟ್ ಕೆಳಗೆ ಇತ್ತು... ಸಿಕ್ರೆ ನೆಕಸ್ಟ್ ಸ್ಟೇಷನ್ ಅಲ್ಲಿ ಇಳ್ಸಕ್ಕೆ ಹೇಳ್ರಿ... ಅಲ್ಲಿ ಹೋಗಿ ತಗೋತೀವಿ..."
ಮುಂದಿನ ಸ್ಟೇಷನ್ ಫೋನಾಯಿಸಿದ ಸ್ಟೇಷನ್ ಮಾಸ್ಟರ್,"ಸಾರ್, ಇಲ್ಲಿ ಒಬ್ರು ಪ್ಯಾಸೆಂಜರ್ ತಮ್ಮ ಬ್ಯಾಗನ್ನ ಬೋಗಿಯಲ್ಲೇ ಬಿಟ್ಟಿದ್ದಾರೆ... ಟ್ರೈನ್ ಅಲ್ಲಿ ಸೇರಿದಾಗ ಬ್ಯಾಗ್ ಸಿಕ್ರೆ ಇಳಿಸಿ ಇಟ್ಕೊಳ್ಳಿ. ಬರ್ಕೊಳ್ಳಿ... ಎಸ್ ೨, ಸೀಟ್ ನಂಬರ್ ೬೦, ಕರಿ ಬಣ್ಣದ ಏರ್ ಬ್ಯಾಗ ಅಂತೆ... ಅಲ್ಲಿ ಸೀಟ್ ಕೆಳಗೆ ಬಿಟ್ಟಿದ್ದಾರೆ... ಓಕೆ ಸಾರ್..."
"ಸಾರ್, ಬ್ಯಾಗ್....", ನಾನು ಉಸುರಿದೆ.
"ಇನ್ನೊಂದು ೧೫ ನಿಮಿಷಗಳಲ್ಲಿ ಟ್ರೈನ್ ಬಾಲೇನಹಳ್ಳಿ ರಿಚ್ ಆಗೊತ್ತೆ... ಆಮೇಲೆ ಸಿಕ್ರೆ ತಿಳಸ್ತಾರೆ... ಆಗ ಅಲ್ಲಿ ಹೋಗಿ ಬ್ಯಾಗ ತಗೊಳ್ಳಿ..."
ಸ್ಟೇಷನ್ ಮಾಸ್ಟರ್ ಅನ್ನು ಮಾತನಾಡಿಸಿ ಹೊರಬಂದ್ದದ್ದಾಯ್ತು. ಅಲ್ಲಿ ಇದ್ದ ರೈಲ್ವೆ ಸಿಬ್ಬಂದಿಯೊಬ್ಬರು ನನ್ನನ್ನು ಮಾತನಾಡಿಸಿ ಯಾರು, ಏನು, ಎಂತು ಎಂದೆಲ್ಲ ವಿಚಾರಿಸಿ ತಮ್ಮ ಒಬ್ಬ ಸೀನಿಯರ್ ಅದೇ ಟ್ರೈನ್ ಅಲ್ಲಿ ಹೋಗುತ್ತಿರುವುದಾಗಿಯೂ, ಅವರಿಗೆ ಫೋನಾಯಿಸಲು ಹೇಳಿದರು. ಮಾಡಿದೆ. ಅವರಿಗೆ ನನ್ನ ಬ್ಯಾಗಿನ ಬಗ್ಗೆ ಹೇಳಿದೆ - ಅವರು ಅದನ್ನು ಹುಡುಕಿದರು. ಬ್ಯಾಗು ಅವರಿಗೆ ಸಿಕ್ಕಿತು. ಮುಂದಿನ ಸ್ಟೇಷನ್ ಅಲ್ಲಿ ಇಳಿಸುವುದಾಗಿ ಹೇಳಿದರು.
ಇದಾದ ಮೇಲೆ ರೈಲ್ವೆ ಸಿಬ್ಬಂದಿಯವರು ತಮ್ಮ ಮಗ ಬೀ.ಐ.ಈ.ಟೀ ಅಲ್ಲಿ ಓದುತ್ತಿರುವುದಾಗಿಯು ಅವನ ಕ್ಯಾಂಪಸ್ ಪ್ಲೆಸಮೆಂಟ್ ಬಗ್ಗೆ ಮಾತನಾಡತೊಡಗಿದರು, ತಾವು ಹರಿಹರಕ್ಕೆ ಟ್ರಾನ್ಸ್ಫರ್ ಆಗುವುದಾಗಿಯೂ, ಅಲ್ಲಿ ಮನೆ ಸಿಗುವುದೇ ಎಂದೆಲ್ಲ ವಿಚಾರಿಸಿಕೊಂಡರು. ನಾನು ನನ್ನ ಕೈಲಾದಷ್ಟು ವಿವರಿಸಿದೆ. ಅಷ್ಟರಲ್ಲಿ ರೈಲು ಬಾಲೇನಹಳ್ಳಿ ಸೇರಿ, ಬ್ಯಾಗನ್ನು ಅಲ್ಲಿ ಇಳಿಸಲಾಗಿದೆ ಅಂತ ಸುದ್ದಿ ಬಂದಿತು.
ರೈಲಿನಿಂದ ಇಳಿದು ಈ ಕೊನೆಯ ಸುದ್ದಿ ಸಿಗುವುದರ ವರೆಗೆ ಆದ ಘಟನೆಗಳೆಲ್ಲ ೧೫ ನಿಮಿಷಗಳಲ್ಲಿ ಜರುಗಿದ್ದುವು!
ಈಗ ಆ ಸ್ಟೇಷನ್ ಗೆ ಹೋಗೋದು ಹೇಗೆ ಅನ್ನೋದೇ ಪ್ರಶ್ನೆ... ಮಲ್ಲಿ ವಿವೇಕನಿಗೆ ಫೋನಾಯಿಸಿ ಬೈಕ್ ಸಿಗುತ್ತಾ ಅಂತ ವಿಚಾರಿಸಿದ... ಮದುವೆಯ ಕೆಲಸದ ಮೇರೆಗೆ ಎಲ್ಲ ಗಾಡಿಗಳು ಉಪಯೋಗದಲ್ಲಿದ್ದವು. ಆಗ ನೆನಪಾದದ್ದು ನಮ್ಮ ಮಂಜು (ಅಲಿಯಾಸ್ "ಸ್ಪೂನ್ ಮಂಜ"). ಮಲ್ಲಿ ಅವನಿಗೆ ಫೋನಾಯಿಸಿ ಗಾಡಿ ಬೇಕಿತ್ತು ಎಂದು ವಿಚಾರಿಸಿದ; ಕಾರು ಸಿಕ್ಕರೆ ನಾವೇ ಓಡಿಸಿಕೊಂಡು ಹೋಗ್ತಿವಿ ಅಂದ. ಮಂಜ ಹಳೆಯ ಚೇತಕ್ ನಡೀಬಹುದ ಅನ್ನೋ ಪ್ರಶ್ನೆಗೆ ಹೂ ಅಂದಿದ್ದ ಮಲ್ಲಿ. ರೈಲ್ವೆ ಸ್ಟೇಷನ್ ಇಂದ ಹೊರ ಬಂದು ಕಾಂತನನ್ನ ವಿವೇಕನು ಕಾಯಿದಿರಿಸಿದ್ದ ಹೋಟಲ್ ರೂಂಗೆ ಆಟೋ ಹತ್ತಿಸಿ ಕಳುಹಿಸಿದೆವು. ನಾವು ಮಂಜು ಮಾವನ ಮನೆಗೆ ಆಟೋ ಹತ್ತಿದೆವು.
ಅಲ್ಲಿ ಮಂಜು ಅವರ ಮಾವ, ಹೆಂಡತಿ, ಭಾವ ಅವರನ್ನು ಭೆಟ್ಟಿಯಾಗಿ ಮಂಜು, ಅವರ ಭಾವ, ಮಾವ ಅವರ ಜೊತೆ ಅವರ ಕಾರಿನಲ್ಲಿ ನಾನು ಹಾಗು ಮಲ್ಲಿ ಹೊರಟೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದೆವು. ಬಾಲೇನಹಳ್ಳಿ - ಚಿತ್ರದುರ್ಗದಿಂದ ೨೩ ಕಿಲೋಮೀಟರು; ೨೦ ಕಿಲೋಮೀಟರ್ ವರೆಗೆ ಒಳ್ಳೆಯ ರಸ್ತೆ ಇದೆ. ಅದರ ಮುಂದೆ ಸ್ವಲ್ಪ ಕಚ್ಚಾ ರಸ್ತೆ ಎಂದು ರೈಲ್ವೆ ಸಿಬ್ಬಂದಿ ಹೇಳಿದ್ದರು. ಹಾಗೆಯೇ ಇತ್ತು. ಮೊದಲ ೨೦ ಕಿಲೋಮೀಟರ್ ಸುಗಮವಾಗಿ ಸಾಗಿದೆ ಪಯಣ ಆನಂತರ ಸ್ವಲ್ಪ ಕಷ್ಟಕರವಾಗಿತ್ತು. ಹೆಚ್ಚು-ಕಡಿಮೆ ಅಸ್ತೆ ಅನ್ನೋದು ಇರಲೇ ಇಲ್ಲ! ಅದರಲ್ಲಿ, ನಾವೆಲ್ಲಾ ಅಲ್ಲಿ ಮೊದಲನೇಯ ಬಾರಿ ಹೋಗುತ್ತಿದ್ದೆವು - ದಾರಿ ಯಾರಿಗೂ ಗೊತ್ತಿರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದ ಒಬ್ಬನನ್ನು ನಿಲ್ಲಿಸಿ ಇಲ್ಲಿ ರೈಲ್ವೆ ಸ್ಟೇಷನ್ ಎಲ್ಲಿದೆ (ಇದೆಯಾ?) ಎಂದು ಕೇಳಿದಾಗ ಅವನು, "ಹೀಗೆ ಮುಂದೆ ಹೋದ್ರೆ ಸಿಗೊತ್ತೆ", ಅಂತ ಹೇಳಿದ... ಆದ್ರೆ ಅಲ್ಲಿ ರಸ್ತೆ ಇದ್ದರಲ್ಲ ಹೋಗೋಕ್ಕೆ! ಸುಮಾರು ೧.೫ ಕಿಲೋಮೀಟರ್ ಹೇಗೋ ಒಳಗಡೆಯವರೆಗೆ ಕಾರು ಹೋಯಿತು. ಅದಕ್ಕಿಂತ ಮುಂದೆ ಹೋದ್ರೆ ಕೊಚ್ಚೆಯಲ್ಲಿ ಗಾಲಿಗಳು ಸಿಕ್ಕಿಕೊಂಡು ಕಷ್ಟ ಆಗಬಹುದು ಅಂತ ನಾನು ಹಾಗು ಮಲ್ಲಿ ಇಳಿದು ಮುಂದಿನ ೧.೫ ಕಿಲೋಮೀಟರು ನಡೆಯುವುದಾಗಿ ನಿರ್ಧರಿಸಿ ಉಳಿದವರನ್ನ ಅಲ್ಲಿಯೇ ಇರಲು ಹೇಳಿ ನಡೆಯಲಾರಂಭಿಸಿದೆವು. ಮಳೆ ಬಿದ್ದು ಹೋಗಿದ್ದರಿಂದ ಆ ಮಣ್ಣಿನ ರಸ್ತೆ ಗದ್ದೆಯಂತೆ ಕೊಚ್ಚೆಯಿಂದ ಕೂಡಿತ್ತು. ಸುಮಾರು ೧.೫ ಕಿಲೋಮೀಟರು ನಡೆದ ಮೇಲೆ ಒಂದು ರೈಲು ಹಳಿ ಕಾಣಸ್ತು. ಆ ರೈಲು ಹಳಿಯ ಪಕ್ಕ ಒಂದು ಮುರುಕಲು ಗುಡಿಸಿಲು ದೂರದಿಂದ ಸ್ಟೇಷನ್ ಅನ್ನಿಸಿದ್ದು ಈಗ ಹಾಳು ಬಿದ್ದ ಕೊಠಡಿ ಅಂತ ತಿಳಿದು ಸ್ವಲ್ಪ ಬೇಸರವೇ ಆಯಿತು. ಆದರೆ ಮಾಡುವುದೇನು?

"ಇಲ್ಲೇ ಎಲ್ಲಾದರು ಇರಲೇಬೇಕು - ಹಳಿ ಹತ್ತಿ ನೋಡೋಣ", ಅಂದ ಮಲ್ಲಿಕಾರ್ಜುನ.

ಹೇಗೆ ಆಗಲಿ, ಒಮ್ಮೆ ಸಹಾಯ ಮಾಡಿದ ಆ ರೈಲ್ವೆ ಸಿಬ್ಬಂದಿಯವರನ್ನ ಮಾತನಾಡಿಸಿ ಕೇಳೋಣ ಎಂದುಕೊಂಡು ಫೋನಾಯಿಸಿದೆ. ಅವರು,"ರೈಲ್ವೆ ಸ್ಟೇಷನ್ ಅಲ್ಲಿಯೇ ಹತ್ತಿರದಲ್ಲಿ ಇರಬೇಕು", ಅಂದರು. ಮಲ್ಲಿ ಹಳಿ ಹತ್ತಿ ಸುಮಾರು ಅರ್ಧ ಕಿಲೋಮೀಟರು ದೂರದಲ್ಲಿ ಸ್ಟೇಷನ್ ಹೆಸರಿನ ಬೋರ್ಡ್ ಅನ್ನು ಕಂಡು ನನ್ನನ್ನು ಬರಲು ಹೇಳಿದ. ಇಬ್ಬರು ಹಳಿಯ ಗುಂಟ ನಡೆದು ಸ್ಟೇಷನ್ ತಲುಪಿದೆವು. ನೆನಪಿಗಾಗಿ ಫೋಟೋ ಕ್ಲಿಕ್ಕಿಸಿ ಆಮೇಲೆ ಸ್ಟೇಷನ್ ಹೊಕ್ಕೆವು. ಸ್ಟೇಷನ್ ಅಚ್ಚುಕಟ್ಟಾಗಿತ್ತು. ಆದರೆ, ಎಲ್ಲೊ ಕಾಡಿನ ಮಧ್ಯ ಇದ್ದ ಹಾಗಿತ್ತು. ಅಲ್ಲಿ ೩ ಮಂದಿ ಸಿಬ್ಬಂದಿಗಳು ಕುಳಿತಿದ್ದರು. ಅವರಿಗೆ ನಾವು ಬ್ಯಾಗಿಗಾಗಿ ಬಂದಿರುವುದಾಗಿ ತಿಳಿಸಿದೆವು. ಅವರು ನಮ್ಮ ಬ್ಯಾಗನ್ನು ನಮಗೆ ಒಪ್ಪಿಸಿದರು. ನಾನು ಸ್ವಲ್ಪ ಹಣವನ್ನೂ ಅವರಿಗೆ ನೀಡಲು ಹೋದಾಗ ಬೇಡ ಅಂದವರು ನಮ್ಮ ಧನ್ಯವಾದಗಳಿಗೆ,"ಇರ್ಲಿ ಸಾರ್. ದುಡ್ಡು ಬ್ಯಾಡ. ಏನೋ ನೀಮ್ಮ ಬ್ಯಾಗ ಸಿಗ್ತಲ್ಲ ಅಷ್ಟು ಸಾಕು", ಎಂದರು. ನಾವು ಮತ್ತೆ ಹಳಿಯನ್ನು ಹತ್ತಿ ಹೋಗೋದು ಬೆಡವೆಂದುಕೊಂಡು ಅಲ್ಲಿಯ ಸಿಬ್ಬಂದಿಗೆ ದಾರಿ ಕೇಳಿ ಬೀಳ್ಕೊಟ್ಟೆವು. ಬ್ಯಾಗಿನೊಂದಿಗೆ ಸ್ವಲ್ಪ ದೂರ ನಡೆದು ಉಳಿದವರನ್ನು ಸೇರಿದೆವು. ಕಾರನ್ನು ಹತ್ತಿ ಚಿತ್ರದುರ್ಗ ಸೇರಿಕೊಂಡೆವು. ಕಾಂತ ಆಗಲೆ ಮದುವೆ ಮಂಟಪವನ್ನು ಸೇರಿದ್ದ. ನಾವು ಹೋಟೆಲ್ ಹೋಗಿ, ಮಂಜು ಹಾಗು ಅವರ ಮಾವನವರಿಗೆ ಧನ್ಯಾವದಗಳನ್ನು ತಿಳಿಸಿ - ಬೀಳ್ಕೊಟ್ಟು, ಅಲ್ಲಿಂದ ಮಂಟಪದತ್ತ ಧಾವಿಸಿದೆವು - ಮಹೂರತಕ್ಕೆ ಸರಿಯಾಗಿ.

No comments:

Post a Comment