Monday, March 30, 2009

ಮಾತಿನ ಚಕಮಕಿ

ಹೂವು
-----
ಅವಳಂದಳು -
ಪ್ರಿಯ, ನೋಡು ಆ ಮುದ್ದಾದ ಮಲ್ಲಿಗೆಯ ಹೂವನ್ನ,
ಕೊಟ್ಟೆಯ ಎಂದಾದರು ನೀನು ನನಗದನ್ನ?

ಆದಕ್ಕವನೆಂದನು -
ಚಿಕ್ಕ ಚಿಕ್ಕ ಹೂಗಳ ಮೇಲೆ ಆಸೆ ಏತಕೆ ಚಿನ್ನ,
ಕೊಡಲಿಲ್ಲವೆ ನಾನಂದು ದೊಡ್ಡ ಹೂಕೋಸನ್ನ?

ಚಿನ್ನ
---
ಅವಳಂದಳು -
ಓ ನನ್ನ ಮುತ್ತು, ರತ್ನ, ಚಿನ್ನ,
ಬಿಟ್ಟು ಇರಲಾರೆ ನಿಮ್ಮನ್ನ.

ಆದಕ್ಕವನೆಂದನು -
ಪ್ರಿಯೆ, ಅರಿತೆ ನಿನ್ನ ಇಂಗಿತವನ್ನ,
ಆದರೆ, ತೀರಿಸುವವರಾರು ಅದರ ಮೇಲಿನ ಸಾಲವನ್ನ?

ಸಿನೆಮಾ
------

ಅವಳಂದಳು -
ಇಂದಿನ ಈ ಸಿನೆಮಾ ಮಂದಿರದಲ್ಲಿ,
ನಮ್ಮೆದುರಿನ ಆ ಸೀಟಿನಲ್ಲಿ,
ಕುಳಿತವರ ಮೇಲೆ ನಿಮ್ಮ ಕಣ್ಣುಗಳು ಹಾದ ಪಕ್ಷದಲ್ಲಿ,
ಕಿತ್ತು ಕೊಡುವೆ ಅವುಗಳನ್ನ ನಿಮ್ಮ ಕೈಗಳಲ್ಲಿ.

ಆದಕ್ಕವನೆಂದನು -
ಈ ಚಿತ್ರ ಶುರುವಾದ ಸ್ವಲ್ಪ ಸಮಯದಲ್ಲಿ,
ಪರದೆಯ ಮೇಲೆ ಚೆಲುವೆ ಮೂಡಿಬಂದಲ್ಲಿ,
ಮರೆಯದಿರು ಹಾಕಲು ಪೊಪ್ಕಾರ್ನ್,
ನನ್ನ ಉದ್ದಗಲಕ್ಕೆ ತೆರೆದ ಬಾಯಲ್ಲಿ.

ಹೆಸರು
-----

ಅವನಂದನು-
ಒ ತಾವರೆಯ ಚೆಲುವನ್ನು ಮೀರಿಸುವ ಚೆಲುವೆ,
ಕೊಡಲೆ ನಿನಗೊಂದು ಹೆಸರ?

ಅದಕ್ಕವಳೆಂದಳು-
ಕೆರಳಸದಿರು ನನ್ನನು ಲೆ ತರಲೆ,
ನುಣುಪಾದ ನಿನ್ನ ಕೆನ್ನೆಗೆ ಎರಡು ಬಿಡಲೆ?

Monday, January 26, 2009

ಅಮ್ಮನ ಮಾತು ಕೇಳಿದ್ದಿದ್ದರೆ ಹೀಗಾಗ್ತಿತ್ತಾ?

ಅದು ಸೋಮವಾರವೇ ಇದ್ದಿರಬೇಕು - ಮನಸ್ಸಿಲ್ಲದ ಮನಸ್ಸಿನಿಂದ ಆಫೀಸಿಗೆ ಹೋಗಬೇಕಲ್ಲ ಅಂತ ಬೆಳಗಿನ ಜಾವ ೯ ಘಂಟೆಗೆ ಎದ್ದುಬಿಟ್ಟಿದ್ದೆ. ಬಹಳ ಹೊತ್ತಾಯಿತು ಎಂದು ಗೊತ್ತಿದ್ದರೂ, ಸ್ನಾನ ಮಾಡದೆ ಹೋಗೋದು ಸರಿಯಲ್ಲ ಎಂದು ನೀರನ್ನು ಕಾಯಲು ಹಾಕಿ ಸಮಾಚಾರ ಪತ್ರಿಕೆಯ ಪುಟಗಳನ್ನು ತಿರುವಿಹಾಕತೊಡಗಿದೆ. ಅಷ್ಟರಲ್ಲಿ ನೆನಪಾಯಿತು - ಹಿಂದಿನ ದಿನ ಉಡುಪಿಗೆ ಹೋದಾಗ ತಗೆದುಕೊಂಡು ಹೋದ "ಪಿಯರ್ಸ್" ಸೋಪೊಂದು ನನ್ನ ಬಳಿ ಇದೆ ಎಂದು. ಪ್ರತಿ ದಿನ ಬಳಸುತ್ತಿದ್ದ "ಲಿರಿಲ್" ಸೋಪನ್ನು ಬದಿಗೊತ್ತಿ, ಇಂದು ನಲವತ್ತೊಂಬತ್ತು ರೂಪಾಯಿ ತೆತ್ತು ತಂದ ಈ ಬಿಲ್ಲೆಯನ್ನು ಬಳಸಿಯೇ ಬಿಡೋಣವೆನಿಸಿ ಅದನ್ನು ತಂದು ಬಾತ್ ರೂಮಿನಲ್ಲಿ ಇಟ್ಟೆ - ಅಷ್ಟರಲ್ಲಿ ನೀರು ಬಿಸಿಯಾಗಿದ್ದರಿಂದ ಪತ್ರಿಕೆಯನ್ನು ಬೇಗನೆ ಓದಿ ಮುಗಿಸಿ ಸ್ನಾನಕ್ಕೆ ಅಣಿಯಾದೆ.
ಎಂದಿನಂತೆ ಇಂದೂ ಸಹ ಈ ವಿಶಾಲವಾದ ಅಟ್ಯಾಚ್ಡ್ ಬಾತ್ ರೂಮನ್ನು ಹೊಕ್ಕಾಗ ಅದರಲ್ಲಿದ್ದ ಟಾಯ್ಲೆಟ್ ಗೆ ಒಂದು ಫ್ಲಶ್ ವ್ಯವಸ್ಥೆಯನ್ನು ಮನೆಯನ್ನು ಕಟ್ಟಿಸಿದವರು ಯಾಕೆ ಮಾಡಿಸಲಿಲ್ಲ ಎನಿಸಿತು. ಹಾಳಾಗಿ ಹೋಗ್ಲಿ ಎಂದು ಬಕೀಟಿನಲ್ಲಿದ್ದ ಬಿಸಿ ನೀರನ್ನು ತಲೆಯ ಮೇಲೆ ಸುರಿದು ಹೊಸ ಸಾಬೂನಿನ ಬಿಲ್ಲೆಯನ್ನು ಬೇಗೆಬೇಗನೆ ತಲೆಗೆ ಉಜ್ಜಲಾರಂಭಿಸಿದೆ - ಇಂದು ಆಫೀಸಿನಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೆ... ಅಷ್ಟರಲ್ಲಿ ಆಗಬಾರದ್ದು ಆಗೇ ಬಿಟ್ಟಿತು! ಕೈಯಲ್ಲಿದ್ದ ಬಿಲ್ಲೆ ಚೆಂಗನೆ ನೆಗೆಯಿತು. ಅಪರೂಪಕ್ಕೆ ತಂದ ಸಾಬೂನು ನೆಲಕ್ಕೆ ಬಿದ್ದರೆ ಆಕಾರ ವಿಕಾರವಾದೀತು ಅಂತ ಕ್ಷಣಾರ್ಧದಲ್ಲಿ ನನ್ನ ಕೈ ಬಿಲ್ಲೆಯ ಬೆನ್ನನ್ನಟ್ಟಿತು. ಹಿಡಿದು ಬಿಟ್ಟೆ ಎನ್ನುವಷ್ಟರಲ್ಲಿ ಅದು ಇನ್ನೊಮ್ಮೆ ಮೇಲಕ್ಕೆ ಚಿಮ್ಮಿತು. ಈ ಬಾರಿ ನನ್ನ ಎರಡೂ ಕೈಗಳು ಅದನ್ನು ಹಿಡಿಯಲೆತ್ನಿಸಿದುವು - ಹಿಂದಿನ ಬಾರಿಗಿಂತ ಇನ್ನೂ ಹೆಚ್ಚು ಆತ್ಮವಿಶ್ವಾಸದಿಂದ ಸೋಪು ದೂರಕ್ಕೆ ಹಾರಿತು. ಅಸಹಾಯಕತೆಯಿಂದ ನನ್ನ ಕಣ್ಣುಗಳು ಆ ಬಿಲ್ಲೆಯ ಕೊನೆಯ ಹಾರಾಟವನ್ನು ನೋಡಿ ಮುಗಿಸುತ್ತಿದಂತೆ ಅದು ಟಾಯ್ಲೆಟ್ ಇನ ಗುಂಡಿಯಲ್ಲಿ ಇಳಿದುಬಿಟ್ಟಿತು. ಇನ್ನೇನು ನಾನು ಕಣ್ಣು ಮಿಟಿಕಿಸುವಷ್ಟರಲ್ಲಿ ಅದು "ಗುಳುಂ" ಆಗಲ್ಪಟ್ಟಿತ್ತು - ಫ್ಲಶ್ ಮಾಡುವ ಮುನ್ನವೇ ನಾಪತ್ತೆಯಾಗಿತ್ತು. ನಿರಾಸೆಯಿಂದ "ಲಿರಿಲ್" ನತ್ತ ನನ್ನ ಕೈಯನ್ನೊಡ್ಡಿ ಸ್ನಾನ ಮುಗಿಸಿದೆ. ಆಮ್ಮ ಹೇಳಿದ ಮಾತು ನೆನಪಿಗೆ ಬಂತು - "ಮಾಡುವ ಕೆಲಸದ ಮೇಲೆ ಗಮನವಿರಲಿ ಮಗನೆ". ಚರಂಡಿ ಪಾಲಾದ ಸಾಬೋನನ್ನು ಮರೆತು ಆಫೀಸಿಗೆ ತೆರಳಿದೆ.

Thursday, January 8, 2009

ಒಂದುವರೆ ವರ್ಷದಲ್ಲಿ ಏನೇನು ಕಲಿತೆ...

ಜನವರಿ ೧ ನೆ ತಾರೀಖಿಗೆ ಐ.ಟಿ. ಜಗತ್ತಿಗೆ ಬಂದು ೧.೫ ವರ್ಷಗಳಾದುವು. ಹಿಂದಿರುಗಿ ನೋಡಿದಾಗ, ಈ ಕಾಲಾವಧಿಯಲ್ಲಿ ಏನೇನು ಮಾಡಿದೆ ಅನ್ನೋದನ್ನು ಪಟ್ಟಿ ಮಾಡೋ ಆಸೆ...
ಹಂ... ದೊಡ್ಡ ಸಾಧನೆಗಳೇನಲ್ಲವಾದರು, ನನಗೆ ಸಂತೋಷ ನೀಡಿದಂತಹ ವಿಷಯಗಳೆನ್ನಬಹುದು...
೧. ಹೊಂಡಾ ದ್ವಿಚಕ್ರ ವಾಹನವನ್ನು ಕೊಂಡು ಅದನ್ನು ಬೆಂಗಳೂರಿನಲ್ಲಿ ಓಡಿಸಲು ಕಲಿತು ಬೀಳಿಸಿದ್ದೂ ಆಯಿತು ( ಸರಿ, ರಾಷ್ಟ್ರೀಯ ಹೆದ್ದಾರಿ-೪ ರ ಮೇಲೆ ಬೀಳಿಸಿದ್ದೂ ಆಯಿತು - ದೇವರ ದಯೆಯಿಂದ ಏನು ಆಗಲಿಲ್ಲ). ಎಲ್ಲಾದರು ಹೋಗಿ ಬರ್ತೆನೇ ಅಂದ್ರೆ ಅಮ್ಮ ಇನ್ನೂ ಚಿಂತಿಸುತ್ತಾಳೆ.

೨. ಅಪ್ಪ-ಅಮ್ಮನ್ನ ಬಿಟ್ಟು ದೂರದ ಈ ಊರಿನಲ್ಲಿ ತಮ್ಮ ಹಾಗು ಮಿತ್ರನೊಡನೆ ಮನೆ ಮಾಡಿಕೊಂಡು ಇದ್ದೇನೆ ( ಹಾಸ್ಟೆಲ್ಲಿನಲ್ಲಿ ಇರದವನಿಗೆ ಇದು ಒಂದು ಹೊಸ ಅನುಭವ - ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಜೊತೆಗೆ ಕಳೆದಿದ್ದೇವೆ - ಇಂದಿಗೂ ಪ್ರತಿ ದಿನ ಮನೆಗೆ ಕೆಲಸದಿಂದ ಹಿಂದಿರುಗಿದಾಗ ಒಬ್ಬರನ್ನೊಬ್ಬರು ಮಾತನಾಡಿಸಿದಾಗ ಆಗುವ ಸಂತಸವೇ ಬೇರೆ; ಬೆಳೆದಿರುವ ಆತ್ಮೀಯತೆಯ ಲತೆಯು ನಮ್ಮೆಲ್ಲರನ್ನು ಜೊತೆಗಿಟ್ಟಿದೆ. )

೩. ಮತ್ತೆ ಓದಬೇಕೆಂಬ ಹಂಬಲ... ಮತ್ತೆ ಲೆಕ್ಚರ್ ಹಾಲಿನಲ್ಲಿ ಕೂರಬೇಕೆಂಬ ಆಸೆ. ಸಧ್ಯಕ್ಕೆ ನನಸಾಗಿದೆ ಅಂದರೆ ತಪ್ಪಗಲಾರದು - ಮಣೀಪಾಲ್ ಯೂನಿವರ್ಸಿಟಿಯವರ ಸ್ನಾತಕೋತ್ತರ ಪದವಿಗೆ ಪ್ರತಿ ರವಿವಾರ ತರಗತಿಗಳು ಇದ್ದು, ಅವುಗಳಿಗೆ ತಮ್ಮನೋಡನೆ ಹೋಗಿ ಆಲಿಸುವುದು ಸಂತಸವನ್ನು ನೀಡುತ್ತಿದೆ.

೪. ಹಿಂದೆ ಎಂದೂ ಹೋಗದಷ್ಟು ಜಾಗಗಳಿಗೆ ಹೋಗಿ, ತಿರುಗಾಡಿದ್ದಾಯಿತು. ಗಾಳಿಯಲ್ಲಿ ತೇಲಾಡಿ, ಗುಡ್ಡಗಳನ್ನು ಏರಿ, ಟ್ರೇನಿನಿಂದ ಜಿಗಿದು ದಂಡ ಕಟ್ಟಿ, ಸಂತಸ ಪಟ್ಟದ್ದಾಯಿತು. ಇನ್ನು ಬಹಳ ತಿರುಗಾಡುವ ಆಸೆ ಇದೆ.

೫. ಬಹಳಷ್ಟು ಪುಸ್ತಕಗಳನ್ನು ( ತಾಂತ್ರಿಕವಲ್ಲದಂತಹ ) ಓದಿ ಆನಂದಿಸಿದ್ದೇನೆ - ಸಣ್ಣ ನೀತಿ ಕಥೆಗಳನ್ನು ಬಹಳವಾಗಿ ಇಷ್ಟಪಟ್ಟು ಪುಸ್ತಕಗಳನ್ನು ಕೊಂಡು ತಂದು ಓದಿದ್ದೇನೆ.

೬. ಮನೆಯಲ್ಲಿ ಇರುವುದರಿಂದಾಗಿ ಹಾಗು ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದರಿಂದಾಗಿ ಪ್ರತಿ ದಿನ ಏನಾದರೊಂದು ಹೋಸರುಚಿಯನ್ನು ಬೇಯಿಸುತ್ತೇವೆ ( ಹಲವಾರು ಬಾರಿ ಉದ್ದೆಷಪೂರ್ವಕವಲ್ಲವಾದರೂ, ಹಳೆರುಚಿಗಳೇ ಹೊಸರುಚಿಗಳಾಗಿ ಮಾರ್ಪಟ್ಟಿರುತ್ತವೆ. ಇದೆಲ್ಲವನ್ನು "ಸರಿಯಾಗಿಲ್ಲ" ಅಂತ ಗೊಣಗುತ್ತಲಾದರು ಪೂರ್ತಿಯಾಗಿ ತಿಂದು ತೇಗುವ ಮಿತ್ರ ಜೋತೆಗಿರುವುದರಿಂದಾಗಿ ಎಲ್ಲರಿಗೂ ಸಮಾಧಾನ ).

೭. ಬೆಂಗಳೂರಿಗೆ ಬಂದ ಹೊಸತರಲ್ಲಿ ಹಲವಾರು ಬಾರಿ ಮೋಸ ಹೋಗಿದ್ದೇನೆ - ಬಹಳಷ್ಟು ಬಾರಿ ನನ್ನ ಮುಟ್ಠಾಳತನದಿಂದ ಹಾಗೆ ಆಗಿದೆ ಅಂತ ಮಿತ್ರರು ನನಗೆ ಮನವರಿಕೆ ಮಾಡಿಸಿದ್ದಾರೆ. ಸಾಮಾಜಿಕ ವಿಚಾರಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ನಾನು, ಸುತ್ತಮುತ್ತಲಿನ ಜನ-ಅವರ ನಡೆ-ನುಡಿಗಳ ಬಗ್ಗೆ ವಿಶೇಷ ಗಮನ ನೀಡುತ್ತಿದ್ದೇನೆ. (ಬಲಿಪಶು ಎಂದು ತೋರಿಸಿಕೊಂಡರೆ, ತಲೆ ಕಡಿಯಲು ಬಹಳ ಜನ ಮುಂದಾಗುತ್ತಾರೆ - ಅಂತಹವರಿಂದ ದೂರವಿರುವುದನ್ನು ಕಲಿಯುತ್ತಿದ್ದೇನೆ)

೮. ಗುಂಡನ (ಇನ್ನೊಬ್ಬ ಮಿತ್ರ ) ಜೊತೆ, ಪ್ರಾಣಭಯ ಬಿಟ್ಟು ತಲಕಾಡಿಗೆ ಅವನ ಕಾರಿನಲ್ಲಿ ಹೋಗಿದ್ದೇನೆ. ( ಹಲವಾರು ಗುಡ್ಡ-ಬೆಟ್ಟಗಳನ್ನು ಹತ್ತಿದ್ದರೂ ಇದು ಸ್ವಲ್ಪ ವಿಶೇಷವಾದದ್ದು )

೯. ಮೊಬೈಲ್ ಫೋನಿನ ಮಿತ ಬಳಕೆ ಮಾಡಲು ಕಲಿತದ್ದು; ಇಂದು ಟಾಕ್ ಟೈಮ್ ಸಾಕಷ್ಟಿದ್ದರೂ, ಮಾತನಾಡುವುದು ಅವಷ್ಯಕತೆ ಇದ್ದರೆ ಮಾತ್ರ...

೧೦. ಇನ್ನು ಐ.ಟಿ. ಜಗತ್ತಿನಲ್ಲಿ ಏನು ಮಾಡಿದೆ ಅಂತ ನೋಡೋಣ.... ಅಯ್ಯೋ...ಏನು ನೆನಪಿಗೆ ಬರ್ತಿಲ್ವೆ.... :)

Sunday, November 16, 2008

ಐ ಹೇಟ್ ಹರ್ ಟು ದ ಕೋರ್!

ಕಾಲೇಜಿನ ಕೊನೆಯ ಸೆಮಿಸ್ಟರ್ ನಡೆಯುತ್ತಿರುವ ಸಮಯ... ಅದೊಂದು ಶನಿವಾರ...
ವಿದ್ಯಾರ್ಥಿಗಳು ಕಾಲೇಜಿನ ಮುಖವನ್ನು ನೋಡುವುದು ಅಪರೂಪವೆಂದು ತಿಳಿದಿದ್ದ ಪ್ರಾದ್ಥ್ಯಾಪಕರು ಬೆರಳೆಣಿಕೆಯಷ್ಟು ಹುಡುಗರು ಬಂದರೂ ತರಗತಿ ನಡೆಸುವುದಾಗಿ ಹೇಳಿದ್ದರು...ಪಾಠ ಕೇಳುವ ಆಸಕ್ತಿ ಇನ್ನೂ ಇದ್ದಿದ್ದರಿಂದ ತರಗತಿಗೆ ಹಾಜರಾಗಿದ್ದೆ ಆದರೆ ತರಗತಿಯ ಅಕ್ಕ-ಪಕ್ಕ ಸಹ ಯಾರೂ ಕಾಣುತ್ತಿಲ್ಲ.
ಎಲ್ಲ ಕೊಠಡಿಗಳಲ್ಲಿ ಇಣುಕಿ ನೋಡಿದ್ದಾಯಿತು. ದಿನದ ಎರಡು ಘಂಟೆಗಳು ಪ್ರಯಾಣದಲ್ಲಿ ವಿನಾಕಾರಣ ವ್ಯಯವಾದವಲ್ಲ ಅಂತ ಬೇಸರಿಸುತ್ತ ಪ್ರಾದ್ಥ್ಯಾಪಕರ ಅಪ್ಪಣೆ ಪಡೆದು ಕಾಲೇಜಿನ ಹಿಂಬದಿಯ ಗೇಟಿನಿಂದ ಹೊರಬಂದು ಸಿಟಿ ಬಸ್ಸಿಗಾಗಿ ಕಾಯುತ್ತ ನಿಂತುಬಿಟ್ಟೆ. ಮಾತನಾಡಲು ಯಾರು ಇಲ್ಲದೆ ಇದ್ದ ಕಾರಣ ಕಿರಿಕಿರಿಯಾಗಿತ್ತು - ಬಸ್ಸು ಬಂದರೆ ಸಾಕು, ಹತ್ತಿ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುವುದು ಎಂದು ಲೆಕ್ಕಾಚಾರ ಮನಸ್ಸಿನಲ್ಲೇ ಹಾಕುತ್ತಿರಲು ಸಿಟಿ ಬಸ್ಸು ಬಂದೇ ಬಿಟ್ಟಿತು. ಹಿಂದಿನ ಬಲಮೋಲೆಯ ಸೀಟಿನಲ್ಲಿ ನೆಲೆಸಿದ್ದಾಯಿತು. ಕಂಡಕ್ಟರ್ಗೆ ೨ ರೂಪಾಯಿ ನಾಣ್ಯ ನೀಡಿ ಕಿಟಕಿಯಿಂದ ಹೊರ ನೋಡುವ ಕಾರ್ಯದಲ್ಲಿ ಮಗ್ನನಾದೆ.

೫ ನಿಮಿಷಗಳಾದರೂ ಪರಿಚಯದ ಒಂದೂ ಮುಖ ಕಾಣುತ್ತಿಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ಒಬ್ಬ ಕಂಡೇಬಿಟ್ಟ. ವಾಟರ್ ಟ್ಯಾಂಕ್ ಸ್ಟಾಪಿನಲ್ಲಿ ಹತ್ತಿದವನು ನನ್ನ ಪಕ್ಕ ಬಂದು ಕುಳಿತವನ ಕೈಯಲ್ಲಿ ಒಂದು ದೊಡ್ದ ಬ್ಯಾಗು ಇತ್ತು. ಅವನ ಬೀರಿದ ಕಿರುನಗೆಯ ಪ್ರತಿಯಾಗಿ ನಾನೂ ಸಹ ನನ್ನ ಮುಖಚರ್ಯೆಯಲ್ಲಿ ಬದಲಾವಣೆಯನ್ನು ತಂದು ನಮಸ್ಕಾರವನ್ನು ಸೂಚಿಸಿದೆ. ಇನ್ನೆರಡು ನಿಮಿಷ ಮೌನ ಆವರಿಸಿತ್ತು.
ಅವನ ಬ್ಯಾಗನ್ನೇ ನೋಡುತ್ತಿದ್ದ ನಾನು ಮಾತನಾಡಲು ಪ್ರಾರಂಭಿಸಿದೆ..."ಎಲ್ಲಿ ಹೋಗ್ತಿದ್ದೀಯ?"
"ನಾನು ಊರಿಗೆ ಹೋಗ್ತಿದ್ದೀನಿ..."
"ಮತ್ತೆ, ಕ್ಲಾಸ್ ಇಲ್ವಾ ನಿಮಗೆ?"
"ಇದೆ... ಆದ್ರೆ ಯಾರೂ ಬರ್ತಿಲ್ಲ; ಭಾಳಾ ದಿನಾನು ಆಯ್ತು ಊರಿಗೆ ಹೋಗಿ ಅದಕ್ಕೆ ಹೋಗ್ತಿದ್ದೀನಿ... ನೆನ್ನೆಯ ನಿಮ್ಮ ಜೂಸ್ ಪಾರ್ಟಿ ಚೆನ್ನಗಿತ್ತು; ನೀವೆಲ್ಲ ಇಷ್ಟೆಲ್ಲ ಕ್ಲೋಸಾಗಿ ಇದ್ದು ಎಂಜಾಯ್ ಮಾಡ್ತೀರ ಅನ್ನೊದು ನನಗೆ ಗೋತ್ತೇ ಇರ್ಲಿಲ್ಲ - ನೋಡಿ ಖುಷಿಯಾಯ್ತು!"
"ಹಂ... ಥ್ಯಾಂಕ್ಸ್..."
"ಮುಂದೇನು ಮಾಡ್ಬೇಕಂತ ಇದ್ದೀಯ? ಕ್ಯಾಂಪಸ್ ಸೆಲೆಕ್ಶನ್ ಆಗಿದೆಯಲ್ಲವ - ಅಲ್ಲೇ ಕೆಲಸಕ್ಕೆ ಹೋಗ್ತಿಯ?"
"ಸಧ್ಯಕ್ಕೆ ಬೇರೆಯ ವಿಚಾರಗಳೇನೂ ಇಲ್ಲ - ಕಲಸಕ್ಕೆ ಹೋಗ್ತೀನಿ. ನೀನೇನ್ ಮಾಡ್ಬೇಕಂತಿದ್ದೀಯ?"
"ಎಮ್.ಎಸ್. ಮಾಡೋಣ ಅಂತ ಇದ್ದೀನಿ - ಫಾರಿನ್ ಯೂನಿವರ್ಸಿಟಿಗಳಿಗೆ ಅಪ್ಪಲಯ್ ಮಾಡಿದ್ದೀನಿ..."

ಹುಡುಗನ ಮುಂದಾಲೋಚನೆಯನ್ನು ಕೇಳಿ ಸಂತೋಷವಾಯಿತು. ಸ್ವಲ್ಪ ವಿರಾಮದ ನಂತರ ನಾನು ಮತ್ತೆ ಮಾತನ್ನು ಬೇಳೆಸಿದೆ

"... ಯಾವ ಊರು ನಿಂದು?"
"xxxx"
"ಒಹ್! ಹಾಗಿದ್ದರೆ ನಿನ್ಗೆ xxx ಗೊತ್ತಿರ್ಬೇಕಲ್ಲ? ಅವಳು ಅಲ್ಲಿಯವಳೆ"
"ಹಂ... ಗೊತ್ತು... ನಾವು ಜೋತೆಗೆ ಓದಿಲ್ಲ ಆದ್ರೆ ಡಿಸ್ಕಶ್ಯನ್ ಕ್ಲಾಸ್ ಅಲ್ಲಿ ನೋಡಿದ್ದೆ - ಬಹಳ ಸೊಕ್ಕು ತುಂಬಿದೆ ಅವಳಿಗೆ!"

ನಾನು ಸುಮ್ಮನಿದ್ದೆ... ನನ್ನ ಕಿವಿಗಳಿಗೆ ಇದು ಹೋಸ ಸುದ್ದಿಯಾಗಿತ್ತು...ಮುಖದ ಮೇಲ ಆಶ್ಚರ್ಯದ ಕಳೆಯನ್ನು ಮೂಡಿಸಿದೆಯೇ ವಿನಹ ಯಾವ ಪ್ರತಿಯುತ್ತರವನೂ ಕೋಡಲಿಲ್ಲ. ಇದ್ದಿದ್ದರೂ ಇರಬಹುದು. ಆದರೆ, ನನಗೆ ಈಗ ಗೊತ್ತಿರುವ ಆ ಗೆಳತಿ ಹಾಗಿರಲಿಲ್ಲ. ಎಂದಿಗೂ ನಗುತ್ತ, ಸಂತಸದಿಂದ ಕೂಡಿದ, ಎಲ್ಲರೊಡನೆ ಸಲೀಸಾಗಿ ಬೆರೆಯುವ ಅವಳನ್ನು ನಾನು ಕಂಡಿದ್ದೇನೆ.

ಅವನು ಮುಂದು ವರೆಸಿದ,"ಇಗೋ ಬಹಳ ಅವಳಿಗೆ - ಐ ಹೇಟ್ ಹರ್ ಟು ದ ಕೋರ್!"... ಇದನ್ನೇ ಹಲವಾರು ಬಾರಿ ಪುನರಾವರ್ತಿಸಿದ.

ಅಷ್ಟು ಬಲವಾದ ದ್ವೇಷ!? ನನಗೆಂದೂ ಇಂತಹ ಅತೀವ್ರ ದ್ವೇಷ ಭಾವನೆ ಬಂದೇ ಇರಲಿಲ್ಲವೆ. ಹಂ... ನಾನು ಸುಮ್ಮನೆ ಇದ್ದೆ. ಈ ಬಾರಿ, ನನ್ನ ಮುಖದ ಮೇಲೆ ಯಾವ ಭಾವನೆಗಳನ್ನೂ ತೋರ್ಕೊಡದೆ.
ಇಷ್ಟಾಗುವಷ್ಟರಲ್ಲಿ ಸಿಟಿ ಬಸ್ಸು ಹಳೆ ಬಸ್ ಸ್ಟ್ಯಾಂಡಿನ ಹತ್ತಿರ ಬಂದು ನಿಂತುಕೊಂಡಿತ್ತು. ಅವನನ್ನು ಬೀಳ್ಕೊಟ್ಟು ನಾನು ಇಳಿದುಕೊಂಡೆ - ಹರಿಹರದ ಬಸ್ಸೊಂದನ್ನು ಹತ್ತಿ ಕುಳಿತು ಅವನ ಕೊನೆಯ ವಾಕ್ಯವನ್ನು ಮೆಲುಕು ಹಾಕಿದೆ... ಕೊನೆಗೆ ಮನೆ ಸೇರಿ ಇದನ್ನು ಮರೆತು ಸಹ ಆಯಿತು.

ಹಲವಾರು ಕಾರಣಗಳಿಂದ ಅಂದು ಅವನಲ್ಲಿ ಕಂಡ ಆ ಬಲವಾದ ದ್ವೇಷ, ಆಗಾಗ ನಾನು ನನ್ನಲ್ಲಿ ಕಾಣುತ್ತೇನೆ; ಬೇಸರವಾಗುತ್ತದೆ.
ಆದರೆ "ಸೊಕ್ಕಿನವಳ" ಆ ಬದಲಾವಣೆ ನನಗೆ ಪ್ರೇರಣೆಯಾಗಿದೆ - ಮಿತ್ರರೊಡನೆ ಮಾತನಾಡಿದಾಗ ಮನಸ್ಸಿನಲ್ಲಿನ ಅಸಮಾಧಾನ ದೂರವಾಗುತ್ತದೆ.

Tuesday, October 21, 2008

ಜಯಮಹಲ್ ಅಲ್ಲಿ ಅವಳನ್ನು ಭೇಟಿಯಾದಾಗ...

ಆಗಸ್ಟ್ ೨೦೦೭, ನಾನು ಬೆಂಗಳೂರಿಗೆ ಬಂದು ಸುಮಾರು ೨ ತಿಂಗಳು ಆಗಿತ್ತು-ಇಲ್ಲಿ ಬಂದೊಡನೆ ಜಯಮಹಲ್ ಅಲ್ಲಿ ಒಂದು ಪಿ.ಜಿ. ಹುಡುಕಿ ನನ್ನೆಲ್ಲ ಸಾಮಾನುಗಳನ್ನು ಅಲ್ಲಿ ಸಾಗಿಸಿದ್ದೆ. ನನ್ನ ತಮ್ಮ ವಿಜಯ್ ಕೆಲವು ದಿನಗಳಲ್ಲಿ ನನ್ನೊಡನೆ ಇರಲು ಬರುವವನಿದ್ದ, ಮಿತ್ರ ಚಂದ್ರಕಾಂತ ನೌಕರಿಯನ್ನು ಸೇರಿ ಒಂದೆರಡು ದಿನಗಳಾಗಿದ್ದವು - ಮನೆ ಹುಡುಕುತ್ತಿದ್ದರಿಂದ ಅವನು ನನ್ನೊಡನ ಇದ್ದ . ಸಾಯಂಕಾಲದ ಸಮಯ... ಅಪರೂಪಕ್ಕೆ ನಾನು ಮತ್ತು ಚಂದ್ರಕಾಂತ ಮಸಾಲೆ ದೋಸೆ ತಿನ್ನೋಣವೆಂದು ಮನೆಯ ಹತ್ತಿರವಿದ್ದ ಸಾಯಿ ಉಪಹಾರಕ್ಕೆ ಮೆಲ್ಲನ ನಡೆಯುತ್ತ, ಮಾತನಾಡುತ್ತ ಸಾಗಿದೆವು. ಇನ್ನೇನು ಬಂದೇ ಬಿಟ್ಟಿತು ದೋಸೆ ಅಂಗಡಿ ಅನ್ನುವಷ್ಟರಲ್ಲಿ ಕಾಂತ ನನ್ನನ್ನು ತಡೆದು, "ಲೆ ವಿನಯ್, ಅಲ್ಲಿ ನಡ್ಕೊಂಡು ಹೋಗ್ತಿರೋದು **** ಅಲ್ಲವಾ?" ಎಂದು ನನ್ನ ಗಮನವನ್ನು ಅವಳತ್ತ ಸೇಳೆದ. ಸಾಮಾನ್ಯವಾಗಿ ನನ್ನ ಗಮನ ರಸ್ತೆಯ ಮೇಲೆ ಇರುತ್ತದೆ - ರಸ್ತೆಯ ಮೇಲೆ ನಡೆಯುವವರ ಮೇಲೆಲ್ಲ ಅಲ್ಲ; ಆದರೆ, ಬೆಂಗಳೂರಿನಲ್ಲಿ, ಅದು ನನ್ನ ಪಿ.ಜಿ.ಯ ಹತ್ತಿರ ಪರಿಚಯದವರೊಬ್ಬರನ್ನು ಕಂಡು ಬಹಳ ಸಂತೋಷವಾಯಿತು. ಇಬ್ರೂ ಸೇರಿ ಜೋರಾಗಿಯೆ ಅವಳ ಹೇಸರನ್ನು ಕೂಗಿದೆವು - ಸುಲಭದಲ್ಲಿ ಅವಳು ತಿರುಗೋದಿಲ್ಲ ಅನ್ನುವುದು ನಮ್ಮಿಬ್ಬರಿಗೆ ಚೆನ್ನಾಗಿ ಗೊತ್ತು. ಇನ್ನೆರಡು ಬಾರಿ ಕೂಗಿದ ಮೇಲೆ ಅವಳು ತಿರುಗಿ ನಮ್ಮನ್ನು ಗುತುತಿಸಿದಳು - ಇನ್ನೇನು, ನಾವು ಅವಳ ಪಕ್ಕದಲ್ಲೇ ನಿಂತಿದ್ದೆವು. ಸಾಯಿ ದರ್ಶಿನಿಯು ಇನ್ನೆರಡು ಹೆಜ್ಜೆಗಳಲ್ಲಿ ನಮ್ಮೆದುರಿನಲ್ಲಿತ್ತು.

ನಾನೆ ಶುರು ಮಾಡಿದೆ,"ಹೇಗಿದ್ದಿರ ****? ಭಾಳಾ ದಿನಗಳಾದ್ವು ನಿಮ್ಮನ್ನ ನೋಡಿ. ಇಲ್ಲಿ ಹೇಗೆ? ಬನ್ನಿ - ದೋಸೆ ತಿನ್ನೋಣ!". ಕಾಂತ, ಎಂದಿನಂತೆ ಮೂಕ ಪ್ರಾಣಿಯಂತೆ ತೆಪ್ಪಗಿದ್ದ. ನಾನು ಮೂರು ದೋಸೆ ಆರ್ಡರ್ ಮಾಡಿದೆ.
ಮುಖವನ್ನು ಅರಳಿಸಿ, ಮಂದಹಾಸವನ್ನು ಬೀರುತ್ತ ಅವಳೆಂದಳು,"ಓಹ್, ನೀವು ಇಲ್ಲಿ ಕಾಣಸ್ತೀರ ಅಂದ್ಕೊಂಡಿರಲಿಲ್ಲ - ಹೇಗಿದ್ದೀರಾ? ಕೆಲಸ ಇಲ್ಲವಲ್ಲ - ಅದಕ್ಕೆ ಇಲ್ಲಿ ಪಕ್ಕದಲ್ಲೇ ಒಂದು ಕಂಪ್ಯೂಟರ್ ಕೋರ್ಸ ಸೇರಿಕೊಂಡಿದ್ದಿನಿ. ನೀವು ಇಲ್ಲೇ ಇರೋದಾ? ಎಲ್ಲಿ ಆಫೀಸು?".
ನಾನು ಹಾಗು ಕಾಂತ ಅದಕ್ಕೆ ಉತ್ತರ ನೀಡಿದ್ದೆವಷ್ಟೆ, ದೋಸೆ ತಯಾರಾಗಿತ್ತು. ಮೂರೂ ದೋಸೆಗಳನ್ನ ಅವರವರ ಮುಂದೆ ತಂದು ಇಟ್ಟದ್ದಯಿತು; ಕಾಂತ ಪ್ರಾರಂಭಿಸಿದ,"ಎಲ್ಲಿ ಇರೋದು ನೀವು?".
ಅವಳು ಅದಕ್ಕೆ ಉತ್ತರಿಸಿದಳು - ಹೀಗೆ ದೋಸೆ ತಿನ್ನುತ್ತ ಸಂಭಾಷಣೆ ನಡೆಯುತ್ತಿರಲು ನನ್ನ ತಲೆಯಲ್ಲಿ ವಿಚಾರಗಳು ಬರಲಾರಂಭಿಸಿದವು. ಮೂರು ವರ್ಷ ಜೋತೆಗೆ ಓದಿದ್ದೆವು - ಬಹಳ ಕಷ್ಟ ಪಟ್ಟು ಓದುತ್ತಿದಳು ಅವಳು; ಒಳ್ಳೆಯ ಅಂಕಗಳನ್ನೇ ಗಳಿಸಿದ್ದಳು - ದೃಷ್ಟಿ ಹಾಗು ಶ್ರವಣ ಶಕ್ತಿ ನಮ್ಮಷ್ಟು ಚೆನ್ನಾಗಿಲ್ಲದಿದ್ದರೂ ಕೂಡ ಧೃತಿಗೆಡದೆ ವಿದ್ಯಾಭ್ಯಾಸ ಮುಂದು ವರೆಸಿದ್ದಳು. ನನಗೆ ಹಲವಾರು ಗೆಳೆಯರಿದ್ದರೂ ಇವರಿಗೆ ಹೆಚ್ಚಿನ ಗೌರವ ಸಲ್ಲಿಸುತ್ತಿದ್ದೆ; ಆದರೆ ಎಂತಹ ವಿಪರ್ಯಾಸ - ನನ್ನ ಕೈಯಲ್ಲಿ ಏನು ಮಾಡಲಾಗದು.... ನನ್ನ ಮೇಲೆ ನನಗೇ ಬೇಜಾರು.

ಅರ್ಧ ದೋಸೆ ಹೊಟ್ಟೆಯನ್ನು ಸೇರಿ ಆಗಿತ್ತು, ಅವಳು ಮಾತನ್ನು ಮುಂದೆ ವರಿಸಿದಳು,"ಈ ಕೋರ್ಸ್ ಮುಗಿಸಿದ ಮೇಲೆ ಜಾಬ್ ಪ್ಲೇಸ್ಮೆಂಟ್ ಗೆ ಸಹಾಯ ಮಾಡುತ್ತಾರಂತೆ; ಈ ಕೋರ್ಸನ್ನೂ ಸಹ ಡಿಗ್ರಿಯಲ್ಲಿ ಮಾಡಿದಂತೆ ಲೋನ್ ತಗೊಂಡು ಮಾಡ್ತಿದ್ದಿನಿ. ಕೆಲಸ ಸಿಕ್ಕಾಗ ಎಲ್ಲ ತೀರಿಸ್ತೀನಿ. ಆಕ್ಕ ಬಿ.ಎ. ಮಾಡಿದ್ದಾರೆ - ಕೆಲಸ ಹುಡುಕುತ್ತಿದ್ದಾಳೆ, ತಮ್ಮ ಇನ್ನು ಓದುತ್ತಿದ್ದಾನೆ. ನಮ್ಮ ಮನೇಲಿ ನಾನು ಓದುತ್ತೀನಿ ಅಂದಿದ್ದಕ್ಕೆ ಬೆಂಗಳೂರಿನಲ್ಲಿ ಮನೆ ಮಾಡಿದ್ರು ಅಪ್ಪ - ಅವರ ಆರೋಗ್ಯ ನು ಚೆನ್ನಗಿಲ್ಲ; ಆದರೆ ಈ ಕೋರ್ಸ್ನ ಮುಗಿದ ಮೇಲೆ ನನಗೊಂದು ಕೆಲಸ ಸಿಕ್ಕಾಗ.....". ಅವಳ ಆ ಕಣ್ಣುಳಲ್ಲಿ ಕನಸುಗಳ ಸರಮಾಲೆಯನ್ನು ಕಂಡು ಒಂದೆಡೆ ಖುಷಿಯಾದರೆ, ಇಷ್ಟೆಲ್ಲ ಕರ್ತವ್ಯಗಳನ್ನು ಹೇಗೆ ನಿಭಾಯಿಸಿಯಾಳು ಎಂದು ದಿಗಿಲು ಸಹ ಆಯಿತು.

ದೋಸೆ ಸಂಪೂರ್ಣವಾಗಿ ಹೋಟ್ಟೆಯನ್ನು ಸೇರಿಯಾಗಿತ್ತು. ನನ್ನ ಮೊಬೈಲ್ ನಂಬರ್ ಕೇಳಿ ಪಡೆದುಕೊಂಡಳು. ಪಕ್ಕದಲ್ಲೇ ಇದ್ದ ಬಸ್ ಸ್ಟಾಪಿನಲ್ಲಿ ಅವಳನ್ನು ಬೀಳ್ಕೊಟ್ಟು ನಾನು ಮತ್ತು ಕಾಂತ ಮನೆಯತ್ತ ಪಾದಗಳನ್ನು ಬೆಳೆಸಿದೆವು - ಆ ಸಂಜೆ ನಮ್ಮಿಬ್ಬರಿಗೂ ಗೆಳತಿಯೊಬ್ಬಳನ್ನು ಭೇಟಿಯಾದ ಸಂತಸವನ್ನು ತಂದಿತ್ತು.

ಆವಳನ್ನು ಕಂಡು ೧ ವರ್ಷದ ಮೇಲೆ ಕಳೆದಿದೆ. ಇಂದಿಗೂ ಆಗೊಮ್ಮೆ, ಈಗೊಮ್ಮೆ ಸ್.ಎಮ್.ಸ್ ಕಳುಹಿಸುತ್ತಿರುತ್ತಾಳವಳು - ತಪ್ಪದೆ ಉತ್ತರವನ್ನು ಕಳುಹಿಸುತ್ತೆನೆ....

Thursday, May 22, 2008

ತಾರಾಯಣ - ೨

'ಇಸ್ರೋ'ದವನು ಎಂದು ಬಂದು, ಎಲ್ಲರಿಗೂ ಮೋಸ ಮಾಡಿ, ಆ ವ್ಯಕ್ತಿ ಓಡಿಹೋಗಿ ೮ ವರ್ಷಗಳೇ ಕಳೆದು ಹೋಗಿದ್ದವು; ನಾನು ಆರನೇಯ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದೆ.

ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳು ಹತ್ತಿರ ಬರುತ್ತಿದ್ದುವು. ಹುಡುಗರು ತರಗತಿಗಳಿಗೆ ಬರುವುದನ್ನು ಕಡಿಮೆ ಮಾಡಿ ತಮ್ಮ ತಮ್ಮ ಮನೆ ಅಥವ ಹಾಸ್ಟೆಲ್ ರೂಮುಗಳಲ್ಲಿ ಕುಳಿತು ಓದುವುದನ್ನು ಶುರು ಮಾಡಿದ್ದರು. ಇಂತಹ ಒಂದು ದಿನ ನಾನು ನನ್ನ ತರಗತಿಯಲ್ಲಿ ಕುಳಿತಿದ್ದೆ; ನಮ್ಮ ವಿಭಾಗದಿಂದ ಉತ್ತಮ ಅಂಕಗಳನ್ನು ಗಳಿಸಿದ ೧೦ ಮಂದಿ ವಿದ್ಯಾರ್ಥಿಗಳನ್ನು ಕೂಡಲೆ ಪ್ರಾಂಶುಪಾಲರ ಕೊಠಡಿಯ ಹತ್ತಿರ ಬರಬೀಕಾಗಿ ಬುಲಾವು ಬಂದಿತು. ಸರಿ, ಏಕೆ ಕರೆದಿದ್ದಾರೆ ಎಂದು ಗೊತ್ತಿರಲಿಲ್ಲವಾದರೂ ಅಟೆಂಡರುಗಳಿಗೆ ವಿಷಯವೇನೆಂದು ಕೇಳಿ ತಿಳಿದುಕೊಂಡೆವು. ಆಫೀಸಿನ ಮುಂದೆ ಇದ್ದ ಆಸನಗಳಲ್ಲಿ ಕುಳಿತುಕೊಂಡೆವು - ಮೆಕ್ಯಾನಿಕಲ್ ವಿಭಾಗದಿಂದ ಹುಡುಗರು ಇಸ್ತ್ರಿ ಮಾಡಿದ ಶರ್ಟು, ಟೈ ಹಾಕಿಕೊಂಡು ಬಂದಿದ್ದನ್ನು ಕಂಡು ನನಗೆ ಒಳಒಳಗೆ ವ್ಯಂಗ ನಗೆ ಉಕ್ಕಿ ಬರುತ್ತಿತ್ತು - ತಡೆದುಕೊಂಡು ಸುಮ್ಮನೆ ಕುಳಿತಿದ್ದೆ; ಅಲ್ಲಾ, ಬರುತ್ತಿರುವ ಒಬ್ಬ ವಿಜ್ಞಾನಿಯನ್ನು ನೋಡಲು ಸಿಂಗರಿಸಿಕೊಂಡು ಬರುವ ಅವಶ್ಯಕತೆಯಾದರೂ ಏನಿತ್ತು ಎನ್ನುವುದು ನನ್ನ ವಾದ! ಆದರೆ ನನಗೆ ಸಂಭಂದವಿಲ್ಲದ ವಿಷಯ ಅಂತಾ ಸುಮ್ಮನಾದೆ. ಹದಿನೈದು ನಿಮಿಷ ಎಂದು ಹೋದವರು ಒಂದು ಘಂಟೆಯಾದರು ಯಾವ ನರಪಿಳ್ಳೆಯು ನಮ್ಮೆಡೆಗೆ ತಿರುಗಿ ನೋಡುತಿಲ್ಲವಾದ್ದರಿಂದ ಬೇಸರವಾಗುತ್ತಿತ್ತು - ಸುಮ್ಮನೆ ತರಗತಿಯಲ್ಲಿ ಕುಳಿತು ಪಾಠವನ್ನಾದರೂ ಕೇಳುತಿದ್ದೆನಲ್ಲ ಎಂದು ಮನಸ್ಸಿನಲ್ಲಿಯೇ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಿಗೆ ಹಿಡಿ ಶಾಪ ಹಾಕುತ್ತ ಕುಳಿತಿದ್ದೆ.

ಆಫೀಸು ಅಂದರೆ ಜನ ಹೋಗೋದು-ಬರೋದು ಇದ್ದೆ ಇರುತ್ತದೆ. ಜನರನ್ನು ನೋಡುತ್ತ ಗುಣಾಕಾರ-ಭಾಗಾಕಾರ ಹಾಕುತ್ತ, ಗೆಳೆಯರೊಡನೆ ಮಾತನಾಡುತ್ತ ಕುಳ್ತಿದ್ದೆ. ಅಷ್ಟರಲ್ಲಿ ಒಂದು ಪರಿಚಿತ ಮುಖ ಕಂಡಂತಾಯಿತು - "ಅರೆ! ನಮಗೆಲ್ಲ ಮೋಸ ಮಾಡಿದ 'ಇಸ್ರೊ ವಿಜ್ಞಾನಿ'! ಆದರೆ ಏಕೋ ಅನುಮಾನ... ಇವನೇಕೆ ಇಲ್ಲಿಗೆ ಬಂದಿದ್ದಾನೆ? ಇವನೇ ಅವನೋ?ಇರಲೇಬೇಕು - ಸಿಗರೇಟು ಊದಿ ಚಪ್ಪಟೆಯಾದ ಮುಖ, ಟೀ-ಶರ್ಟು ಜೀನ್ಸು... ಹಂ... ವಿಜಯ ( ನನ್ನ ತಮ್ಮ ) ನಿಗೆ ಕೇಳಿ ನೋಡಬೇಕು. ಅವನು ಇವನೇ ಆಗಿದ್ದರೆ ನಾಲ್ಕು ತದಕಿ ನಮ್ಮ ದುಡ್ಡನ್ನು ಹಿಂತಗೆದುಕೊಳ್ಳಬೇಕು. ದುಡ್ಡು ಬೆಡ - ಆದರೆ ಮೋಸಗಾರನನ್ನು ಬಿಡಬಾರದು!", ಎಂದು ಅಂದುಕೊಂಡೆ. ಆ ವಿಜ್ಞಾನಿ ನೆಟ್ಟಗೆ ಪ್ರಾಂಶುಪಾಲರ ಕೊಠಡಿಯನ್ನು ಹೊಕ್ಕ - ನನಗೆ ತಿಳಿದು ಹೋಗಿತ್ತು. ಮತ್ತೆ ಮೋಸ ಮಾಡಲು ಬಂದಿದ್ದ ಮಹಾಶಯ! ಕಳ್ಳನನ್ನು ಹಿಡಿದುಬಿಟ್ಟೆ ಎಂಬ ಸಂತೋಷ ತುಂಬಿ ತುಳುಕುತ್ತಿತ್ತು - ಹಿಡಿದಿರಲಿಲ್ಲ; ಅದು ಬೇರೆಯ ಮಾತು ಆದರೆ ಇಷ್ಟು ವರ್ಷಗಳ ನಂತರ ಅವನನ್ನು ಗುರುತು ಹಿಡಿದಿದ್ದೆನಲ್ಲ? ಪಕ್ಕದಲ್ಲೆ ಇದ್ದ ತಮ್ಮನನ್ನು ವಿಚಾರಿಸಿದೆ - ಅವನಿಗೆ ನೆನಪೇ ಇರಲಿಲ್ಲ :( ಆದರೆ ನಾನು ಬಿಡಬೇಕಲ್ಲ?! ಅವನಿಗೆ ನೆನಪಿಸಿದೆ.

ಆಗಲೆ ಮಧ್ಯಾಹ್ನದ ೧ ಘಂಟೆಯಾಗಿದ್ದರಿಂದ ಊಟದ ನಂತರ ಕಾಲೇಜಿನಲ್ಲಿ ಸೇರುವುದಾಗಿ ಸುದ್ದಿ ಬಂತು. ಊಟವಾದ ಮೇಲೆ ನೋಡಿಕೊಳ್ಳೊದು ಇವನನ್ನ ಎಂದುಕೊಂಡು ನಮ್ಮ ಮಾಮೂಲಿ ತಾಣವಾದ 'ಕೆ.ಬಿ. ಮೆಸ್'ಗೆ ನಡೆದೆವು. ಊಟ ಮಾಡುತ್ತ ಸಹ ಅವನ ವಿಚಾರವೇ ನನ್ನೆ ತಲೆಯಲ್ಲಿ. ಹಿಂದಿರುಗಿ ಹೋದ ಮೇಲೆ ಅವನನ್ನು ಹಿಡಿದು ಬಡೆಯುವ ಮಹದಾಸೆ! ಬೇಗನೆ ಊಟ ಮುಗಿಸಿ ದಾರಿಯಲ್ಲಿ ಸಿಕ್ಕ ಎಲ್ಲ ಮಿತ್ರರಿಗೆ 'ತಾರಾಯಣ - ೧' ವಿವರಿಸಿ ಕಾಲೇಜಿಗ ಬಂದದ್ದಾಯಿತು. ನಮ್ಮ ವಿಭಾಗದ ಒಂದು ಕೊಠಡಿಯಲ್ಲಿ ಕೂಡಲು ವ್ಯವಸ್ಥೆಯನ್ನು ಮಾಡಲಾಗಿತ್ತು. ನಮ್ಮ ವಿಭಾಗದ ಮುಖ್ಯಸ್ಥರು ಮ್ರುದು ಸ್ವಭಾವದವರು - ನಾನು ಅವರಲ್ಲಿ ಹೋಗಿ,"ಸರ್... ಈ ವ್ಯಕ್ತಿಯ ಮೇಲೆ ನನಗ್ಯಾಕೋ ಅನುಮಾನ! ಹಿಂದೊಮ್ಮೆ ನಮ್ಮ ಶಾಲೆಗೆ ಬಂದು ಹುಡುಗರಿಗೆಲ್ಲ ಮೋಸ ಮಾಡಿದ್ದ. ಒಮ್ಮೆ ಇವರ ಬಗ್ಗೆ ವಿಚಾರಿಸಿ ಖಾತ್ರಿ ಪಡೆಸಿ", ಎಂದು ಕೇಳಿಕೊಂಡೆ. ಅವರು ನನ್ನ ಮಾತಿಗೆ ಬೆಲೆ ಕೊಟ್ಟ ಹಾಗೆ ಕಾಣಲಿಲ್ಲ - "ನೋಡೋಣ" ಎಂದರಷ್ಟೆ. ಇನ್ನೊಂದು ವಿಭಾಗದ ಮುಖ್ಯಸ್ಥರಿಗೂ ಹೇಳಿದ್ದಾಯಿತು - ಏನೋ ಹೊರಡಲಿಲ್ಲ.

ಕೊಠಡಿಯಲ್ಲಿ ಕೂತು ಇನ್ನೊಂದು ಘಂಟೆಯಾಗಿತ್ತು. ಬಂದರು ಮಹಾಶಯರು. ಆವರೋಡನೆ ವಿಭಾಗಗಳ ಮುಖ್ಯಸ್ಥರಿಬ್ಬರು ಬಂದಿದ್ದರು. ನಾನು ಹೇಳಿದ ಹಾಗೆಯೇ ಆಯಿತು! ಅವನು ತಾರ ಮಂಡಲ, ವಿಜ್ಞಾನ ಎಂದೆಲ್ಲ ಮಾತನಾಡಿದ. ಪ್ರಶ್ಣೆಗಳನ್ನು ಕೇಳಿದ ಹಾಗು ಕೆಲ ವಿದ್ಯಾರ್ಥಿಗಳನ್ನೂ ಆರಿಸಿಕೊಂಡ. ದೆಹಲಿಯಲ್ಲಿ ನಡೆಯುವ ಯಾವುದೋ ಕಾರ್ಯಕ್ರಮಕ್ಕೆ ಇದು ಆಯ್ಕೆ ಎಂದು ನಂಬಿಸಲು ಪ್ರಯತ್ನಿಸಿದ. ಆಯ್ದ ವಿದ್ಯಾರ್ಥಿಗಳು ಇವನೊಡನೆ ಹೋಗಬೇಕಂತೆ ದೆಹಲಿಗೆ! ಮತ್ತೆ ಬರುವುದಾಗಿಯು, ನಾವುಗಳು ಅವನೊಡನೆ ಬರಲು ಸಿದ್ಧರೋ ಇಲ್ಲವೋ ಎಂಬುದನ್ನು ತಿಳಿಸಬೇಕೆಂದು ಹೇಳಿ ಹೋಗಿಬಿಟ್ಟ. ಅಯ್ಯೊ ದೇವರೆ, ಒಂದು ಕ್ಯಾಮರಾನಾದರು ಇದ್ದಿದ್ದರೆ "ವಾಂಟೆಡ್" ಅಂತ ಹಾಕಿಸಿಬಿಡಬಹುದಾಗಿತ್ತಲ್ಲ ಅಂತ ಒಳಒಳಗೆ ಕಳಾವಳವುಂಟಾಯಿತಾದರು ಮುಖ್ಯಸ್ಥರನ್ನು ನಂಬಿ ಸುಮ್ಮನಾಗಿದ್ದೆ. ತಪ್ಪು ಮಾಡಿಬಿಟ್ಟೆ!

(ಸಾರಾಂಶ: ಭಯ-ಆಲಸ್ಯಗಳನ್ನು ಬಿಟ್ಟು ಕಣ್ಣಿಗೆ ಕಾಣುವ ಅನ್ಯಾಯ-ಮೋಸ-ವಂಚನೆಯನ್ನು ಮಾಡುವ ನೀಚರನ್ನು ಸುಮ್ಮನೆ ಬಿಡಬಾರದು. ಅದು ಅವರಿಗೆ ಪ್ರೋತ್ಸಾಹವಾಗಿ ಪರಿಣಮಿಸುತ್ತದೆ.)

Sunday, May 11, 2008

ತಾರಾಯಣ - ೧

ಇದು ನಡೆದದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ಎಂಟನೇಯ ತರಗತಿಯಲ್ಲಿದ್ದಿದ್ದಿರಬೇಕು ನಾನು. ತರಗತಿಯಲ್ಲಿ ಕುಳಿತು ಓದುವುದನ್ನು ಬಿಟ್ಟರೆ ಆಟಾ ಆಡೋದರ ಬಗ್ಗೆ ಹಗಲುಗನಸನ್ನು ಕಾಣೋದು ನನ್ನ ಇಷ್ಟವಾದ ಕೆಲಸಗಳಲ್ಲಿ ಒಂದಾಗಿತ್ತು. ಇಂತಹ ಒಂದು ದಿನ ಬೆಳಗಿನ ಜಾವ ನಮ್ಮ ಕ್ಲಾಸ್ ಟೀಚರ್ ತರಗತಿಗೆ ಬಂದವರೇ ಇಸ್ರೋ ಸಂಸ್ಥೆಯಿಂದ ಒಬ್ಬ ವಿಜ್ನಾನಿ ಬಂದಿರುವುದಾಗಿಯು, ತಾರಾಮಂಡಲವನ್ನು ಕುರಿತು ನಮಗೆ ಮಾಹಿತಿಯನ್ನು ನೀಡುವುದಾಗಿತು ಹೇಳಿದರು. ಆವರ ಹಿಂದೆ ನಿಂತಿದ್ದ ವಿಜ್ನಾನಿ ಮುಂದೆ ಬಂದು ನಮ್ಮನ್ನು ಕುರಿತು ಮಾತನಾಡಹತ್ತಿದರು. ತಮ್ಮೊಡನೆ ಅವರು ಬಹಳಷ್ಟು ಚಿತ್ರಪಟಗಳನ್ನು ಹಾಗು ಇಸ್ರೋದ ಬಗ್ಗೆ ಲೇಖನಗಳನ್ನು ತಂದಿದ್ದು, ಅದನ್ನು ನಮಗೆಲ್ಲ ವಿಸ್ತಾರವಾಗಿ ವಿವರಿಸಿದರು. ಅವರ ಭಾಶೆ ಸಾಮನ್ಯ ಹಾಗು ಉತ್ಸಾಹಪೂರ್ಣವಾಗಿದ್ದರಿಂದಾಗಿ ಅರ್ಥವಾಗೋದು ಕಷ್ಟವಾಗಿರಲಿಲ್ಲ; ಹುಡುಗರೆಲ್ಲ ಆಸಕ್ತಿಯಿಂದ ಕೇಳಿದರು. ಇಸ್ರೋವಿನ ವಿಜ್ನಾನಿ ಅಂತ ನಂಬೋದು ನನಗೇಕೊ ಸ್ವಲ್ಪ ಕಷ್ಟವಾಗುತ್ತಿತ್ತು - ಜೀನ್ಸ್ ಪ್ಯಾಂಟು, ಟೀ ಶರ್ಟು ಹಾಗು ಬಾಯಲ್ಲಿ ಏನೋ ಅಗೆಯುತ್ತಿರುವುದನ್ನು ಗಮನಿಸಿ ನನ್ನ ಮನಸ್ಸಿನಲ್ಲಿದ್ದ ವಿಜ್ನಾನಿಯ ಚಿತ್ರಕ್ಕೆ ಈ ಮಹಾಶಯನನ್ನು ಹೋಲಿಸಿ, ವಿರೋಧಾಭಾಸವಾಗಿ ಸ್ವಲ್ಪ ಸಮಯ ಸುಮ್ಮನೆ ಕುಳಿತು ಬಿಟ್ಟಿದ್ದೆ.

ಅಷ್ಟರಲ್ಲಿ ವಿಜ್ನಾನಿಗಳು ತಮ್ಮ ಮಾತುಗಳನ್ನು ಮುಗಿಸಿ ಆಗಿತ್ತು. ಅವರು ನಮ್ಮ ಮೇಷ್ಟ್ರೊಡನೆ ಏನೋ ಮಾತನಾಡಿ ಅಲ್ಲಿಂದ ಹೊರಟು ಹೋದರು. ಮೇಷ್ಟ್ರು ತರಗತಿಗೆ ಹಿಂತಿರುಗಿ, ವಿಜ್ನಾನಿಗಳು ನಮಗೆಲ್ಲ ಟೆಲಿಸ್ಕೋಪ್ ಮಾಡುವುದನ್ನು ತೋರಿಸಿಕೊದುವುದಾಗಿಯು, ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಕೋಡಬೇಕಾಗಿಯು ಹೇಳಿದರು. ಟೆಲಿಸ್ಕೋಪ್ ತಯಾರಿಸಲು ಬೇಕಾದ ಸಾಮಗ್ರಿಗಳ ಪಟ್ಟಿಯನ್ನು ನಮಗೆ ಹೇಳಲಾಯಿತು. ಎರಡು-ಮೂರು ಮಂದಿ ಕೂಡಿ ಸಹ ಒಂದು ಟೆಲಿಸ್ಕೋಪ್ ಮಾಡಬಹುದು ಎಂದು ಹೇಳಿದರು. ಇಂತಹುದರಲ್ಲೆಲ್ಲ ನನಗೆ ಆಸಕ್ತಿ ಕಡಿಮೆ ಇದ್ದುದ್ದರಿಂದ ಸುಮ್ಮನಿದ್ದೆ. ಆದರೆ ನನ್ನ ಪಕ್ಕಕ್ಕೆ ಕುಳಿತಿದ್ದ ನನ್ನ ಮಿತ್ರನೋಬ್ಬ ( ದೀಪಕ್ ಅಲಿಯಾಸ್ ದೀಪು ) ನಾವು ಕೂಡಿ ಮಾಡೋಣವೆಂದು ಕುಳಿತುಬಿಟ್ಟ! ಸರಿ, ಇನ್ನೇನು ಎಂದು ಒಪ್ಪಿಕೊಂಡೆ.

ನಾವೆಲ್ಲ ಸೇರಿ ಸಾಮಗ್ರಿಗಳ ಪಟ್ಟಿಯನ್ನು ಗಮನಿಸಿ ನೋಡಿದಾಗ ಅದರಲ್ಲಿ ಕೇವಲ ಒಂದು ಕನ್ನಡಿ ಹಾಗು ಒಂದು ಲೆನ್ಸ್ ಇದ್ದುದ್ದನ್ನು ಕಂಡು ಅಚ್ಚರಿಯಾಯಿತು - ಯಾಕೋ ಇದು ಸರಿ ಅಲ್ಲ ಅನ್ನಿಸಿತಾದರು ನಮ್ಮ ಮೇಷ್ಟ್ರೇ ಇದಕ್ಕೆ ಚಕಾರವೆತ್ತಿಲ್ಲವಾದ್ದರಿಂದ ನಾವು ಸುಮ್ಮನಾದೆವು. ಎಲ್ಲ ಸಾಮಗ್ರಿಗಳು ಕೊಂಡದ್ದಯಿತು; ಮುಂದಿನ ರವಿವಾರ ಅದನ್ನೆಲ್ಲ ಎತ್ತಿಕೊಂಡು ನಮ್ಮ ಶಾಲೆಯನ್ನು ನಡೆಸುವ ಸಂಸ್ಥೆಯ ಇನ್ನೊಂದು ಶಾಲೆಗೆ ಹೋದೆವು. ಅಲ್ಲಿ ನಮ್ಮಂತೆ ಬಹಳಷ್ಟು ಹುಡುಗರು ಆಗಲೆ ಬಂದು ನಿಂತಿದ್ದರು. ನಮ್ಮ ಮೇಷ್ಟ್ರು ಕಾಣಾದಿದ್ದ ಕಾರಣ ನಾನು ಅಲ್ಲಿಯ ಶಿಕ್ಷಕರ ಕೊಠಡಿಗೆ ಹೋಗಿ ಅಲ್ಲಿ ವಿಚಾರಿಸುತ್ತಿರುವಾಗ ನನ್ನ ಕಣ್ಣಿಗೆ ಆ ವಿಜ್ನಾನಿಗಳು ಬಿದ್ದರು; ಬಾಯಲ್ಲಿ ಪಾನ್/ಗುಟುಖ ಹಾಕಿ ಜಗೆಯುತ್ತ ಕಿವಿಗೆ ವಾಕ್ ಮ್ಯಾನ್ ಹಾಕಿಕೊಂದಿದ್ದರು; ಕಣ್ಣು ಮುಚ್ಚಿ ಸಂಗೀತ ಕೇಳುವುದರಲ್ಲಿ ಮಗ್ನರಾಗಿದ್ದರು. ಸಿಗರೇಟು ಊದಿ ತೆಗ್ಗು ಬಿದ್ದ ಗಲ್ಲ; ಹರಿದ ಜೀನ್ಸ್ ಪ್ಯಾಂಟು ನೋಡಿ ನನಗೆ ಇವನು ಮೋಸಗಾರನಾಗಿರಬಾರದೇಕೆ ಎಂಬ ಬಲವಾದ ಶಂಕೆ ಮನಸ್ಸಿನ್ನಲ್ಲಿ ಮೂಡಿತಾದರು ಅದನ್ನು ನಿಜವೆಂದು ಸಾಧಿಸಲು ಯಾವ ಸಾಧನವೂ ಇರಲಿಲ್ಲ. ಅಷ್ಟರಲ್ಲಿ ನಮ್ಮ ಮೇಷ್ಟ್ರು ನನ್ನ ಕಣ್ಣೀಗೆ ಬಿದ್ದಿದ್ದರಿಂದಾಗಿ ಅವರಿಗ ಮಾತನಾಡಿಸಲು ಹೋದೆ.

ಟೆಲಿಸ್ಕೋಪ್ ನಿರ್ಮಾಣ ಶುರುವಾಯಿತು; ಶಾಲೆಯ ತುಂಬ ಮಕ್ಕಳು ಪೈಪಿನ ತುಂಡುಗಳು ಹಾಗು ಫೆವಿಕಾಲಿನ ಬಾಟ್ಲಿಗಳನ್ನ ಹಿಡಿದು ಕುಳಿತಿದ್ದರು. ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಲೆನ್ಸುಗಳ ನೆನಪಾಯಿತು - ಅದಿಲ್ಲದೆ ಈ ಸಾಧನ ಅಪೂರ್ಣ. ಶಿಕ್ಷಕರು ಹಾಗು ವಿಜ್ನಾನಿಯಲ್ಲಿ ಏನು ಮಾತಾಯಿತೊ ಗೊತ್ತಿಲ್ಲ; ನಾವೆಲ್ಲ ಲೆನ್ಸಿಗೆಂದು ನಲವತ್ತು ರೂಪಾಯಿ ಕೊಡಬೇಕೆಂದು ಸುದ್ದಿ ಬಂದಿತು. ಮಿತ್ರನೊಬ್ಬನಿಗೆ ಇನ್ನು ಒಳ್ಳೆಯ ಲೆನ್ಸು ತರುವುದಾಗಿ ವಿಜ್ನಾನಿ ಹೇಳಿದ್ದರಿಂದ ಅವನು ಎಂಭತ್ತು ರೂಪಾಯಿ ಕೊಡಲು ಸಿದ್ಧನಾಗಿದ್ದನು. ಲೆನ್ಸು ಇನ್ನೆರಡು ದಿನಗಳಲ್ಲಿ ಕಳುಹಿಸುವುದಾಗಿ ಹೇಳಿ ದುಡ್ಡನ್ನೆಲ್ಲ ಕೂಡಿಸಿಕೊಂಡು ಹೋದ ಆಸಾಮಿ ನಾಪತ್ತೆ!

ಸುಮಾರು ನಾಲ್ಕೈದು ಸಾವಿರ ದುಡಿದುಕೋಡಿದ್ದಿರಬೇಕು ಅವನು. ಆದರೆ ಬೇಸರದ ಸಂಗತಿ ಏನೆಂದರೆ ನಮ್ಮ ಮೇಷ್ಟ್ರು ಈ ವಿಷಯವನ್ನು ನಮಗೆ ಹೇಳದೇ ಇದ್ದದ್ದು. ಯಾರು ಎಷ್ಟೇ ದೊಡ್ಡವರಾಗಿದ್ದರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಇದ್ದಿದ್ದರೆ ಎಷ್ಟು ಚೆನ್ನಗಿರ್ತಿತ್ತು ಅಂತ ನನಗೆ ಹಲವಾರು ಬಾರಿ ಅನಿಸಿದೆ; ನೆಟ್ಟಗೆ ಜನರನ್ನು ಅಳೆಯಲು ಬಾರದ ೮ ನೆಯ ತರಗತಿಯ ಬಾಲಕರಿಗೇ ಸಂಶಯ ಬಂದಾಗ ಜಗತ್ತು ನೋಡಿದ, ವಿವೇಚನೆಯುಳ್ಳ ಮೇಷ್ಟ್ರು ವಿಜ್ನಾನಿಯ ಬಗೆಗಾಗಿ ವಿಚಾರಣೆಯನ್ನು ಮೊದಲೇ ನಡೆಸಿ, ವ್ಯಕ್ತಿ ಇಸ್ರೋದವನೇ ಎಂದು ಖಾತ್ರಿ ಪಡೆಸಬಹುದಿತ್ತಲ್ಲವೆ?

(ಸಾರಾಂಶ: ಅಪರಿಚಿತರಲ್ಲಿ ಏಕೆ?ಏನು?ಹೇಗೆ?ಯಾರು? ಎಂದೆಲ್ಲ ಪ್ರಶ್ನೆಗಳನ್ನು ಕೇಳುವುದು, ಪರಿಚಯದವರಿಂದ ಅವರ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಮೇಲೆ ನಡೆದಂತಹ ಮೂರ್ಖತನವನ್ನು ತಡೆಯಲು. ನಮ್ಮ ಮೂರ್ಖತನದಿಂದಲೇ ತಮ್ಮ ಕಿಸೆಯನ್ನು ತುಂಬಿಸಿಕೊಳ್ಳೋರು ಹಲವಾರು ಜನ. ಯಾರೇ ಇರಲಿ, ಪ್ರತ್ಯಕ್ಷ ಕಂಡರು ಪ್ರಂಮಾಣಿಸಿ ನೋಡು!)