Friday, December 4, 2009

ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!

ಹಬ್ಬದ ಸಮಯದಲ್ಲಿ ಕರ್ನಾಟಕ ಸಾರಿಗೆಯಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಿ ಆ ಆಸನಗಳಲ್ಲಿ ಸುಖವಾಗಿ ಕೂತು ನೀವು ಹೋಗುವುದಾಗಿ ಕನಸು ಕಾಣುತಿದ್ದ ಪಕ್ಷದಲ್ಲಿ, ಎದ್ದೇಳಿ!

೧೬-ನವಂಬರ್-೨೦೦೯-ದೀಪಾವಳಿ ಹಬ್ಬದ ಸಮಯ. ವಿಜಯ ಹಾಗು ನಾನು ಹರಿಹರಕ್ಕೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು - ಎಲ್ಲೆಡೆ ಜನಜಾತ್ರೆ. ನಮ್ಮನ್ನು ಹರಿಹರಕ್ಕೆ ಕರೆದೊಯ್ಯುವ ಕರ್ನಾಟಕ ಸಾರಿಗೆ ಬಸ್ಸು ಸುಮಾರು ೧ ಘಂಟೆ ತಡವಾಗಿ ಬಂದಿತು. ಮುಂಚಿತವಾಗಿ ಎರಡು ಆಸನಗಳನ್ನು ನಾವು ಕಾಯ್ದಿರಿಸಿದ್ದರಿಂದ ನಮ್ಮ ಪ್ರಯಾಣ ಸುಗಮವಾಗಿ ಆಗುವುದೆಂಬ ನಂಬಿಕೆ ನನ್ನದಾಗಿತ್ತು. ಬಸ್ಸು ತನ್ನ ಸಾಮಾನ್ಯ ಜಾಗಕ್ಕೆ ಹೋಗಿ ನಿಲ್ಲದೆ, ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಅದನ್ನು ಗುರುತಿಸಿ ಹತ್ತುವುದು ತುಸು ಕಷ್ಟವೇ ಆಯಿತು. ಹೇಗೋ ಮಾಡಿ ಬಸ್ಸನ್ನು ಹತ್ತಿದೆವು - ಶುರುವಾಯಿತು ನಮ್ಮ ಕಠಿಣಪರೀಕ್ಷೆ.

ಪೂರ್ತಿಯಾಗಿ ಕಾಯ್ದಿರಿಸಲ್ಪಟ್ಟ ಈ ಬಸ್ಸು ಆಗ ತಾನೆ ಬಂದಿದ್ದು, ತುಂಬಿ ತುಳುಕಾಡುತ್ತಿದ್ದನ್ನು ಕಂಡು ನನಗೆ ಸ್ವಲ್ಪ ಆಶ್ಚರ್ಯವಾಯಿತು. ಟಿಕೇಟನ್ನು ತಗೆದು ಸೀಟ್ ನಂಬರ್ ಹುಡುಕತೊಡಗಿದ ವಿಜಯನಿಗೆ ಇನ್ನೊಂದು ಅಚ್ಚರಿ ಕಾದಿತ್ತು - ಆ ಬಸ್ಸಿನಲ್ಲಿ ಇದ್ದ ಸೀಟುಗಳ ವಿನ್ಯಾಸ ನಾವು ಕಾಯ್ದಿರಿಸಿದ್ದ ವಿನ್ಯಾಸಕ್ಕೆ ಹೋಲುತ್ತಿರಲಿಲ್ಲ. ಅದರ ಪರಿಣಾಮವಾಗಿ ಹಲವಾರು ಮುಂಗಡ ಸೀಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ (ವಿಶೇಷವಾಗಿ ಆಜು-ಬಾಜು ಸೀಟು ಪಡೆಯಬೇಕಾದವರಿಗೆ - ನಮ್ಮನೂ ಸೇರಿಸಿ) ತೊಂದರೆ ಖಚಿತವಾಗಿತ್ತು. ಆದರೂ ಇಷ್ಟು ಜನ ಆ ಬಸ್ಸಿನಲ್ಲಿ ಇದ್ದದ್ದನ್ನು ನೋಡಿ ಸ್ವಲ್ಪ ದಿಗಿಲೇ ಆಯಿತು.

ದೀಪಾವಳಿಯ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ನಾನು ಹಾಗು ವಿಜಯ ಒಂದು ತಿಂಗಳು ಮೊದಲೇ ವಿಚಾರ ಮಾಡಿದ್ದರೂ, ಪ್ರಯಾಣಕ್ಕೆ ಬೇಕಾದ ಟಿಕೆಟ್ ಗಳನ್ನ ಮುಂಚಿತವಾಗಿ ಕಾಯ್ದಿರಿಸುವುದನ್ನು ಮರೆತಿದ್ದೆವು (ಮರೆತಿದ್ದೆವು ಅನ್ನುವುದಕ್ಕಿಂತ, ಆಲಸ್ಯದಿಂದ "ಮಾಡಿದರಾಯಿತು ಬಿಡು!" ಎಂದು ಸುಮ್ಮನಿದ್ದೆವು). ಏರಾವತ, ರಾಜಹಂಸ ಬಸ್ಸುಗಳು ಸಿಗದೆ, ಇದ್ದ ಕೆಲವೇ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೀಟನ್ನು ಕಾಯ್ದಿರಿಸಿದ್ದೆವು.

ಕಂಡಕ್ಟರ್ ಸಾಹೇಬರು ನಮ್ಮ ಟಿಕೇಟನ್ನು ಪರಿಶೀಲಿಸಿ ನಮ್ಮನು ನಮ್ಮ 'ಹೊಸ' ಆಸನಗಳತ್ತ ಕೂರಲು ಹೇಳಿದನು. ಕೂತುಕೊಂಡದ್ದಾಯಿತು. ಆದರೆ ನಮ್ಮ ಸಾಮಾನನ್ನು ಇಡುವುದು ಎಲ್ಲಿ? ಕಣ್ಣನ್ನು ಮೇಲೆ ಹಾಯಿಸಿದರೆ ಎಲ್ಲೂ ಜಾಗ ಕಾಣುತ್ತಿಲ್ಲ! ಅಲ್ಲಿ-ಇಲ್ಲಿ ಎಂದು ಸ್ವಲ್ಪ ಜಾಗ ಮಾಡಿ ಸಾಮಾನು ತುರುಕಿದ್ದಾಯಿತು. ಇನ್ನೇನು ಮಲಗುವುದು ಅನ್ನುವಷ್ಟರಲ್ಲಿ ಗೊತ್ತಾಯಿತು - ಬಸ್ಸು ತುಂಬಿತ್ತು ಆದರೆ ಆದರಿಲ್ಲಿ ಇದ್ದ ಅರ್ಧಕ್ಕರ್ಧ ಜನ ಕಾಯ್ದಿರಿಸಿದ ಆಸನಗಳ ಮೇಲೆ ಕಾಯ್ದಿರಿಸಿದ ತಿಕೆಟಿಲ್ಲದೆ ಕೂತಿದ್ದರು. ಸರಿಯಾದ ಟಿಕೇಟು ಉಳ್ಳವರು ಬಸ್ಸು ಹತ್ತಲು ಹೊಡೆದಾಡುತ್ತಿದ್ದರು! ಸ್ವಲ್ಪ ಸಮಯದಲ್ಲಿ ಬಸ್ಸು ಜನರಿಂದ ತುಂಬಿ ಹೋಯಿತು. ನನಗೆ ಕೂರಲು ಸಹ ಕಷ್ಟವಾಗಿತ್ತು. ಜನರು ಮೈಗೆ ಮೈ ತಿಕ್ಕಿ, ನಿರಂತರವಾಗಿ ಅಲುಗಾಡುತ್ತಿದ್ದುದರಿಂದ ನಿದ್ದೆ ಎಂಬುದು ಕನಸಾಗಿ ಬಿಟ್ಟಿತ್ತು. ಕಂಡಕ್ಟರ್ ಹಾಗು ಜನರ ಮಾತು-ಕಥೆ ಹೀಗೆ ನಡೆಯಿತು (ಇಲ್ಲಿ ಸರಿಯಾದ ಮುಂಗಡ ಟಿಕೇಟು ಪಡೆದ ಪ್ರಯಾಣಿಕರನ್ನು 'ಸ-ಪ್ರಯಾಣಿಕ' ಹಾಗು ಅನ್ಯ ಪ್ರಯಾಣಿಕರನ್ನು 'ತ-ಪ್ರಯಾಣಿಕ' ಎಂದು ಕರೆದಿದ್ದೇನೆ) :

ಒಬ್ಬ ಸ-ಪ್ರಯಾಣಿಕ ಕಂಡಕ್ಟರ್ ಅನ್ನು ಕುರಿತು, "ರೀ, ಕಂಡಕ್ಟರ್! ನಂಗೆ ಕೂಡೋಕ್ಕೆ ಆಗ್ತಿಲ್ಲ - ಸೀಟು ಮುರಿದು ಹೋಗಿದೆ!"
ಅದಕ್ಕೆ ಕಂಡಕ್ಟರ್,"ಸಾರ್, ಡಿಪೋದವರು ಈ ಬಸ್ಸ ಬಿಟ್ಯಾರ್ ರೀ... ನಾ ಏನ್ ಮಾಡ್ಲಿ ? ಇದು ಎಕ್ಸ್-ಟ್ರಾ ಬಸ್ಸ ರೀ - ಆದ್ರೂ ಸಾಕಾಗಂಗಿಲ್ಲ ರೀ"
ಇನ್ನೊಬ್ಬ ಸ-ಪ್ರಯಾಣಿಕ,"ನೀವು ಅನ್-ರಿಜರ್ವಡ್ ಜನರನ್ನ ಯಾಕೆ ಒಳಗೆ ಬಿಟ್ಕೊಂಡ್ರಿ??"
ಕಂಡಕ್ಟರ್,"ಏನ್ ಮಾಡಲ್ ರೀ ನಾನು? ಜನಾ ಭಾಳ ಇದ್ದಾರೆ ಬಸ್ಸುಗಳು ಸಾಕಾಗ್ತಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್!"
ತ-ಪ್ರಯಾಣಿಕಳೊಬ್ಬಳು ಸಣ್ಣ ಮಗುವೊಂದನ್ನು ಹಿಡಿದುಕೊಂದು ಬಸ್ಸು ಬಿಡುವಸ್ಟರಲ್ಲಿ ಹತ್ತಿದ್ದಳು - ಕಂಡಕ್ಟರ್ ಸಾಹೇಬರು ಮೊದಲೇ "ಇಲ್ಲಿ ಸೀಟು ಇಲ್ಲ!" ಎಂದು ಹೇಳಿದ್ದರೂ, "ನೋಡಿ ಸ್ವಾಮಿ... ಮಗು ಇದೆ ಜೊತೆಯಲ್ಲಿ"... ಎಂದು ಆರ್ತನಾದ ಹಾಡತೊಡಗಿದಳು.
ಸ-ಪ್ರಯಾಣಿಕರೊಬ್ಬರು ತಮ್ಮ ಲಗೇಜು ಇಡಲು ಜಾಗವಿಲ್ಲದೆ ತ-ಪ್ರಯಾಣಿಕರೊಬ್ಬರ ಲಗೇಜನ್ನು ಸ್ವಲ್ಪ ಸರಿಸಲು ಹೋದಾಗ ತ-ಪ್ರಯಾಣಿಕರು ಕುಂಡಿ-ಕೊಯ್ದ ಹಂದಿಯಂತೆ ಅರಚಾಡಿದರು. ಕಂಡಕ್ಟರ್ ಮೂಕ ಪ್ರೇಕ್ಷಕರಾಗಿ ಉಳಿದು ಬಿಟ್ಟಿದ್ದರು.
ತ-ಪ್ರಯಾಣಿಕರಿಗೆ ಹೀಗೆ ಪ್ರಯಾಣ ಮಾಡಿ ಅಭ್ಯಾಸ ನೋಡಿ. ತಮ್ಮ ಕೈಲಿದ್ದ ಚೀನಾ ಮೊಬೈಲನ್ನು ಜೋರಾಗಿ ಬೇನಾಮಿ ಹಾಡೊಂದನ್ನು ಅರಚಲು ಬಿಟ್ಟು ಜೋರಾಗಿ ಲೋಕಾಭಿರಾಮದ ಮಾತುಗಳನ್ನು ಮಾತನಾಡಲು ಪ್ರಾರಂಭಿಸಿದರು.

ತ-ಪ್ರಯಾಣಿಕರಿಗೆ ತಾವು ಕಳೆದುಕೊಳ್ಳೋದು ಏನೂ ಇರಲಿಲ್ಲ. ಸ-ಪ್ರಯಾಣಿಕರಿಗೆ ಸರಿಯಾಗಿ ಸೀಟು ಸಿಗದೇ, ನಿದ್ದೆ ಇಲ್ಲದೆ ಹೆಚ್ಚು ದುಡ್ಡು ಕೊಟ್ಟು ಟಿಕೇಟು ಪಡೆದು ಹುಚ್ಚರಾದೆವು ಅನ್ನೋದು ಖಾತ್ರಿಯಾಯಿತು. ಕಂಡಕ್ಟರ್ ಸಾಹೇಬರು ನಿಂತು ಪ್ರಯಾಣ ಮಾಡಿದರು.

ಇದೆಲ್ಲ ಹೀಗೆ ಯಾಕಾಯಿತು ಅಂತ ಸ್ವಲ್ಪ ಸಮಯ ವಿಚಾರ ಮಾಡಿದೆ -
೧. ಬೆಂಗಳೂರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಇದ್ದಾರೆ
೨. ಜನರಿಗೆ 'ನಾನು-ಇವನ-ತಲೆ-ತುಳಿದರು-ಪರವಾಗಿಲ್ಲ" ಅನ್ನೋ ಭಾವನೆ
೩. ಸರಿಯಾದ ಸಮಯಕ್ಕೆ ಟಿಕೇಟು ಪಡೆಯದ ನಮ್ಮಂತಹ ಪ್ರಯಾಣಿಕರು

ಏನೇ ಹೇಳಿ, ಕರ್ನಾಟ ಸಾರಿಗೆ ಬಸ್ಸಿನಲ್ಲಿ ಹಬ್ಬದ ಸಮಯದಲ್ಲಿ ರಾತ್ರಿಯ ಪ್ರಯಾಣ ನರಕವಾಗೋದು ಬಹುತೇಕ ಸತ್ಯ!

No comments:

Post a Comment