Saturday, December 26, 2009

ಅವಳು ಸಂತೋಷ ಪಡುವಳೇ?

ಬುದ್ಧಿವಂತ ಹುಡುಗ. ಒಳ್ಳೆಯ ಕೆಲಸ; ಅಪ್ಪ-ಅಮ್ಮನಿಂದ ದೂರದೂರಿನಲ್ಲಿ ಕೆಲಸ. ಆದರೆ, ಕನಿಷ್ಠ ತಿಂಗಳಿಗೊಮ್ಮೆ ಮನೆಗೆ ಹೋಗಿ ತಂದೆ-ತಾಯಿಯೊಡನೆ ಸಮಯ ಕಳೆದು ಮುಂಬರುವ ತಿಂಗಳ ಮನೆಯ ಪ್ರಯಾಣವನ್ನು ಕಾತರದಿಂದ ಕಾಯುತ್ತಿದ್ದ. ಕೆಲಸಕ್ಕೆ ಸೇರಿದಂದಿನಿಂದಲೂ ಪ್ರತಿ ದಿನ ಕತ್ತೆ ದುಡಿದಂತೆ ದುಡಿಯುತ್ತಿದ್ದ - ಜಗತ್ತಿನಲ್ಲಿ ಬದುಕಲು ಅಗತ್ಯವಾದ ಕಪಟ ಅವನು ಅರಿಯನು. ಜೀವನ ಒಂದು ಚಕ್ರದಂತೆ ಏನು ಬದಲಾವಣೆ ಇಲ್ಲದೆ ಹಾಗೆಯೇ ಸಾಗಿತ್ತು.

ಕೆಲಸಕ್ಕೆ ಸೇರಿ ೧ ವರ್ಷವಾಗಿತ್ತು - ಕೆಲಸ ತಕ್ಕ ಮಟ್ಟಿಗೆ ನಡೆಯುತ್ತಿತ್ತು. ಒಂದು ಒಳ್ಳೆಯ ಹುಡುಗಿಯನ್ನು ನೋಡಿದ್ದಾನೆ - ಅಪ್ಪ-ಅಮ್ಮಂಗೆ ಇಷ್ಟಾ ಆಗ್ತಾಳೆ ಅಂತ ಅವನಿಗೆ ಗೊತ್ತು - ಆದರೂ ಒಂದು ತೆರನೆಯ ಭಯ. ಭಯಕ್ಕೆ ಆಧಾರವಿಲ್ಲ - ಆದರೂ ಭಯ. ಸರಿಯಾದ ಸಮಯ ಬರಲೆಂದು ಕಾಯುತ್ತಿದ್ದ ಈ ವಿಷಯವನ್ನು ಅವರಿಗೆ ತಿಳಿಸುವುದಕ್ಕೆ! ಅಪ್ಪ-ಅಮ್ಮ ಖುಷಿಯಾಗಿರಬೇಕು ಅನ್ನುವ ಹರ-ಸಾಹಸ ಮಾಡುತ್ತಿದ್ದ ಹುಡುಗ - ವಿಶಿಷ್ಟ ಸಾಮಾನುಗಳ ಸುರಿಮಳೆಯೇ ಮಾಡುತ್ತಿದ್ದ. ಅಪ್ಪ-ಅಮ್ಮನ್ನ ದೇಶ-ವಿದೇಶ ತಿರುಗಾಡಿಸಿದ. ಆದರೆ ಅವನು ಹಲವಾರು ಬಾರಿ ಕೆಲಸದ ಮೇಲೆ ದೂರ ಪ್ರದೇಶಗಳಿಗೆ ಹೋಗುತ್ತಿದ್ದ - ಬಹಳ ಬಾರಿ ದೂರವಾಣಿಯ ಮೂಲಕ ಸಹ ಮಾತನಾಡಲಾಗುತ್ತಿರಲಿಲ್ಲ ಅವನಿಗೆ. ಬಹಳ ದಿನಗಳ ನಂತರ ಒಂದು ದಿನ ಅವನು ಮನೆಗೆ ಬಂದಿದ್ದ. ಮನೆಯಿಂದ ಕೆಲಸ ಮಾಡುವ ಸೌಲಭ್ಯ ಇದ್ದ ಕಾರಣ ಕೆಲಸವನ್ನು ಜೋತೆಗೆತ್ತಿಕೊಂಡು ಬಂದಿದ್ದ. ರಜೆಯ ದಿನವೂ ಕೆಲಸ ಮಾಡುತ್ತ ಅವನಿಗೆ ಅಪ್ಪ-ಅಮ್ಮನೊಡನೆ ಸರಿಯಾಗಿ ಮಾತನಾಡಲು ಸಹ ಆಗಲಿಲ್ಲ; ಇನ್ನೇನು ಇನ್ನೊಂದು ಘಂಟೆಯಲ್ಲಿ ತಿರುಗಿ ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಅವನೊಡನೆ ಮಾತನಾಡಲು ಬಂದಳು... ಮಾತು-ಕಥೆ ನಡೆದದ್ದು ಹೀಗೆ...

ಅಮ್ಮ,"ಮಗಾ... ಯಾಕೋ ನಿಂಜೊತೆ ಇ ಸಲ ಮಾತಾಡ್ಲಿಕ್ಕೆ ಆಗ್ಲೇ ಇಲ್ಲ ನೋಡು... ಅಷ್ಟು ಕೆಲ್ಸಾನಾ? "

ಮಗ,"ಹೂನಮ್ಮ... ಬಹಳ ಕೆಲ್ಸಾ. ಮುಗಿಯೋದೇ ಇಲ್ಲ ಅನ್ನೋ ಅಷ್ಟು ಇದೆ."

ಅಮ್ಮ, ಕಸಿವಿಸಿಯಾಗಿ ನುಡಿದಳು,"ಈ ಕೆಲಸ ಮುಗಿಸಿಕೊಂಡೆ ಬರಬಹುದಿತ್ತಲ್ಲ? ಮನೆಗೆ ಬಂದಿದ್ದಿಯ - ಸ್ವಲ್ಪ ಸುಧಾರಿಸಿಕೊಳ್ಳಲೂ ಆಗಲಿಲ್ಲ ನಿನಗೆ ಈ ಬಾರಿ. ಹೋದ ಬಾರಿಯೂ ಹೀಗೆ ಹೇಳಿದ್ದೆ ನೀನು..."

ಮಗ,"ಕಂಪನಿಯವರು ಕೊಟ್ಟ ಕಾಸಿಗೆ ತಕ್ಕಂತೆ ದುಡಿಸಿಕೊಳ್ಳುತ್ತಾರೆ..."

ಅಮ್ಮ,"ದುಡಿಯಬೇಕು ನಿಜ... ಆದರೆ, ನಿನ್ನ ಅನ್ಯ ಮುಖ್ಯ ಕೆಲಸಗಳಿಗೇ ನಿನಗೆ ಸಮಯ ಸಿಗದಂತಾದರೆ ಅದೆಂತಹ ಕೆಲಸ ಮಗಾ?"

ಮಗ,"ನೀನು ಹೇಳುತ್ತಿರುವುದು ಸರಿಯಮ್ಮಾ. ಆದರೆ, ನಾವು ನಮ್ಮ ಇಂದಿನ ಬದುಕುವ ಶೈಲಿಗೆ ಅನುಗುಣವಾಗಿ ನಮ್ಮ ಖರ್ಚು-ವೆಚ್ಚಗಳು ಹೆಚ್ಚಿವೆ. ತಕ್ಕಂತೆ, ಅದನ್ನು ನಿಭಾಯಿಸಲು ಹೆಚ್ಚು ಕೆಲಸ ಮಾಡಬೇಕು."

ಅಮ್ಮ,"ನೆಮ್ಮದಿ ಇಲ್ಲದೆ, ದೇಹವನ್ನು ಅತಿವ್ರವಾಗಿ ದಂಡಿಸಿಕೊಳ್ಳುವುದರಿಂದ ನಿನ್ನ ಆರೋಗ್ಯ ಹದಗೆಟ್ಟಿ ಹೋಗುವುದು... ಯಾರ ಸಂತೋಷಕ್ಕಾಗಿ ಇದು?"

ಮಗ,"ನಿನ್ನ ಹಾಗು ಅಪ್ಪನಿಗಾಗಿ, ಅಮ್ಮ. ನೀನು-ಅಪ್ಪ ಇನ್ನಷ್ಟು ಜಗತ್ತನ್ನು ಸುತ್ತಿ ಆನಂದಿಸಬೇಕು; ಇರುವ ಹೊಸ ತಂತ್ರಜ್ಞಾನವನ್ನು ಸವಿಯಬೇಕು ಅನ್ನೋದು ನನ್ನ ಬಯಕೆ... ಯಾಕೆ, ನಿನಗೆ ಇದು ಸರಿ ಅನ್ಸಲ್ವಾ ಅಮ್ಮ?"

ಅಮ್ಮ,"ನನ್ನ ಕಂದಾ, ನಮಗಾಗಿ ನೀನು ಇಷ್ಟು ಕಷ್ಟ ಪಟ್ಟರೆ ನಮ್ಮಗೇ ನೆಮ್ಮದಿ ಸಿಗುವುದೇ? ಇಲ್ಲ... ಬದುಕಲು ನಾವು ಮಾಡಿಟ್ಟ ಸವಲತ್ತುಗಳು ತಕ್ಕ ಮಟ್ಟಿಗೆ ಇವೆ. ಆದರೆ ನಮಗೆ ನಿಜವಾದ ಸಂತೋಷ ನಿನ್ನನ್ನು ಕಂಡಾಗ, ನಿನ್ನೊಡನೆ ಮಾತನಾಡಿದಾಗ ಆಗೊತ್ತೆ. ಬೇರೆ ಯಾವುದು ಸಹ ನಮಗೆ ಬೇಡ. ಬೇಕಾಗಿರುವುದು ನಿನ್ನ ಸಾಮೀಪ್ಯ - ಇದು ಸಾಧ್ಯವಾಗದ ಪಕ್ಷದಲ್ಲಿ, ನಿನ್ನ ದನಿಯನ್ನಾದರು ಕೇಳಿಸು - ಅದನ್ನು ಕೇಳಿದರೆ ನನಗೆ ಒಂದು ತೆರನೆಯ ಸಮಾಧಾನ ಆಗುತ್ತದಪ್ಪ."

ಮಗ ಮಾತನಾಡಲಿಲ್ಲ. ಎನೆನ್ನಬೇಕೆಂದು ಅವನಿಗೆ ತೋಚಲಿಲ್ಲ.

ಅಮ್ಮ ಮಾತನ್ನು ಮುಂದೆ ವರೆಸಿದಳು,"ನಿನ್ನ ಮದುವೆಯ ವಿಷಯ ಮಾತನಾಡಬೇಕಿತ್ತು. ಯಾವುದಾದರು ಹುಡುಗಿಯನ್ನು ನೋಡಿದ್ದೀಯಾ?"

ಮತ್ತೆ ಮೌನ ಆವರಿಸಿತು. ಮಗ, ತನ್ನ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಹದಿನೈದು ನಿಮಿಷಗಳಾಗಿದ್ದವು.

ಅಮ್ಮ ಮಾತನ್ನು ಬೆಳೆಸಿದಳು,"ಹುಡುಗಿ ಹೇಗಿದ್ದಾಳೆ ನೋಡೋಕ್ಕೆ?"

ಮಗ,"ಅವಳ ಹೆಸರು ಅನನ್ಯಾ... ನನ್ನ ಸಹೋದ್ಯೋಗಿ. ಒಳ್ಳೆಯ ಹುಡುಗಿ. ಇದನ್ನು ನಿಮಗೆ ಸರಿಯಾದ ಸಮಯಕ್ಕೆ ಹೇಳೋಣ ಅಂತ ಕಾಯ್ತಿದ್ದೆ..."

ಅಮ್ಮ,"ಚೆನ್ನಾಗಿದೆ ಹೆಸರು... ನಾವು ಅವಳನ್ನು ನೋಡಬೇಕಲ್ಲ"

ಮಗನ ಮುಖ ಸಂತಸದಿಂದ ಅರಳಿತು.

6 comments:

 1. Superb vinay - conversation explained beautifully. Guess its your own story ;)

  ReplyDelete
 2. No... it is a work of fiction. Again, inspired by people around me...

  ReplyDelete
 3. Nice one :) But, I didn't understand the connection between the post title and content!

  ReplyDelete
 4. hmmm - that is bad.lol. It is supposed to reflect the boy's thoughts on mom's happiness - would she be happy with what ever he is doing.

  ReplyDelete
 5. Oh. Culture difference :( We don't call our mom "Avalu" (Singular), we call "Avaru" (plural).

  ReplyDelete
 6. ah...! I understand. The title is written more from a first person perspective than a third person perspective (where, generally, respect is conveyed while talking about elders). Also, this explains my cleavage from the regular way of expressing things - My consideration that mom is more of a friend than a mom, and, my affinity to Hubballi kannada :)

  ReplyDelete