Monday, May 5, 2008

ಟ್ರೇನಾಯಣ - ೧

ರೈಲು ಪ್ರಯಾಣ ಒಂದು ರೀತಿಯಲ್ಲಿ ವಿಶಿಷ್ಟವಾದುದು - ಬಹಳಷ್ಟು ಮಂದಿ ಸಿಗ್ತಾರೆ. ಇನ್ನು ರಾತ್ರೆಯ ಪ್ರಯಾಣ ಅಂದ್ರಂತು ನನಗೆ ಅಭ್ಯಾಸವಾಗಿ ಹೋಗಿದೆ. ಇಂತಹ ಒಂದು ಅನುಭವ ಇಲ್ಲಿಟ್ಟಿದ್ದೇನೆ.

ಬೆಂಗಳೂರಿಗೆ ಬಂದ ಹೊಸದು; ಇಲ್ಲಿನ ಜನ-ಜಾತ್ರೆ, ಗಲಿಬಿಲಿ ಹಾಗು ಟ್ರಾಫಿಕ್ ನೋಡಿ ಬೇಸರ ಬಂದು ಹೋಗಿತ್ತು. ವಾರಾಂತ್ಯ (ವೀಕೆಂಡ್) ಆಗಿದ್ದರಿಂದ ನಾನು ಹಾಗು ನನ್ನ ತಮ್ಮ ವಿಜಯ್ ಊರಿಗೆ ಹೋಗಲು ಸಜ್ಜಾಗಿದ್ದೆವು. ಸುಮಾರು ೧ ಘಂಟೆ ಟ್ರಾಫಿಕಿನಲ್ಲಿ ಬಳಲಿ, ಸುಸ್ತಾಗಿ, ಕೊನೆಗೂ ರೈಲು ನಿಲ್ದಾಣ ಸೇರಿದಾಗ ಗೊತ್ತಾಯಿತು ರೈಲು ತಡವಾಗಿ ಬರಲಿದೆ ಎಂದು. ಬೆಂಗಳೂರಿಂದ ಎಷ್ಟು ಬೇಗ ದೂರ ಹೋಗಬೇಕೆಂದುಕೊಂಡಿದ್ದನೊ ಅಷ್ಟೇ ತಡವಾಗುತಿದ್ದನ್ನು ನೋಡಿ ಸಿಟ್ಟು ಬರುತ್ತಿತ್ತು - ಆದರೆ ಏನೂ ಮಾಡುವಂತಿರಲಿಲ್ಲ.

ಹೇಗೋ ಮಾಡಿ ಕಾಲ ಕಳೆದದ್ದಾಯಿತು. ರೈಲು ಬಂದು ನಿಂತಾಗ ಸ್ವಲ್ಪ ಸಂತೋಷವಾಯಿತು; ಇನ್ನೆನು ಸುಖ ನಿದ್ರೆ ಮಾಡಬಹುದು ಅಂತ ಅಂದುಕೊಳ್ಳುತ್ತ ಬೋಗಿಯನ್ನು ಹತ್ತಿ ನನ್ನ ಜಾಗದಲ್ಲಿ ಕುಳಿತುಕೊಂಡೆ.ರೈಲು ಕೊನೆಗೂ ನಿಲ್ದಾಣವನ್ನು ಬಿಟ್ಟು ಹೊರ ಹೊರಟಾಗ ಮಧ್ಯರಾತ್ರಿ ೧೨ ಘಂಟೆ. ನನ್ನದು ಕೆಳಗಿನ ಬರ್ತ್ (ಮಲಗುವ ಜಾಗ) ಇದ್ದುದ್ದರಿಂದ ಬಹಳ ಆಯಾಸವಿಲ್ಲದೆ ಹಾಸಿಕೊಂಡು, ದಿಂಬನ್ನು ಗಾಳಿಯಿಂದ ಬಲೂನಿನಂತೆ ಉಬ್ಬಿಸಿ ತಲೆಯ ಅಡಿಯಲ್ಲಿ ಅದನ್ನು ಸಿಗಿಸಿಕೊಂಡು, ಜೊತೆಗೆ ತಂದ ಚಾದರನ್ನು ಹೊದ್ದುಕೊಂದು ತುಟಿ ಪಿಟಕ್ಕನ್ನದೆ ಸುಮ್ಮನೆ ಬಿದ್ದುಕೊಂಡೆ. ಬೆಳಗಿನ ಜಾವದ ನಾಲ್ಕು ಹೊಡೆದಿರಬೇಕು, ಏನೋ ತಣ್ಣನೆಯ ಮ್ರುದುವಾದ ವಸ್ತುವೊಂದು ತಲೆಗೆ ಸೋಕಿದಂತಾಗಿ, ಕನಸಿನಲ್ಲಿ ತಂಪಾದ ಕರ್ಚೀಪಿನಿಂದ ವೊರೆಸಿದಂತಾಯಿತು. ಅರೆ! ರೈಲಿನಲ್ಲಿ ಕಿಟಕಿ ಮುಚ್ಚಿದ್ದು ಹಸಿ ಬಟ್ಟೆಯೊಂದು ಬರಲು ಹೇಗೆ ಸಾಧ್ಯ ಎಂದು ದಿಗಿಲಾಯಿತಾದರು ಧಡಬಡಿಸದೆ ಎದ್ದು ಕತ್ತಲಿನಲ್ಲಿಯೆ ನೋಡಿದೆ; ಮೇಲಿನ ಬರ್ತ್ನ್ ಇಂದ ಪಾಪುವೊಂದರ ಹಸಿಯಾಗಿದ್ದ ಚಡ್ಡಿ ಎಂದು ಗೊತ್ತಾಗಲು ಬಹಳ ಸಮಯ ಹಿಡಿಯಲಿಲ್ಲ. "ದೇವರೇ! ನನ್ನ ಮೇಲೆ ನಿನಗೇನಪ್ಪ ದ್ವೇಷ" ಅಂತ ಅನಿಸಿತು; ಆ ಹಸಿ ನಿಕ್ಕರ್ ಪಕ್ಕ ಸರೆಸಿ ( ತಲೆಯ ಮೇಲೆ ಬಿದ್ದ ಮೇಲೆ ಮತ್ತೇನು ಉಪಾಯವಿರಲಿಲ್ಲ ನೋಡಿ ) ಸುಮ್ಮನೆ ಮಲಗಲು ಪ್ರಯತ್ನಿಸಿದೆ. ನಿದ್ದೆ ಆಗಲೆ ಹಾರಿ ಹೋಗಿದ್ದರಿಂದಲೋ ಏನೊ, ಸುಮ್ಮನಿರದ ನನ್ನ ತಲೆಯಲ್ಲಿ ವಿಚಾರಗಳು ಹೊರಡಲಾರಂಭಿಸಿದುವು. "ಅಲ್ಲ, ಆ ಪಾಪುವಿನ ತಾಯಿ ಹಾಗೆ ಬೆರೆಯವರ ಮೇಲೆ ನಿಕ್ಕರ್ ಬೀಳಿಸಬಹುದಾ? ಅದು ನನ್ನ ತಲೆಯ ಮೇಲೆ ಯಾಕೆ ಬೀಳುವ ಹಾಗೆ ಇಡಬೇಕು?..." ಇತ್ಯಾದಿ.

ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ; ಎದ್ದಾಗ ಬೆಳಕು ಹರಿದಿತ್ತು. ನಾನು ಎದ್ದು ಕುಳಿತೆ - ಅನ್ಯರೆಲ್ಲ ಮೆಲ್ಲಗೆ ಏಳಹತ್ತಿದ್ದರು. ಮಲಗುವ ವ್ಯವಸ್ಥೆಯನ್ನೆಲ್ಲ ತಗೆದು ಕೂಡಲು ಅಣಿಯಾದೆವು. ಇನ್ನು ಹಿಂದಿನ ರಾತ್ರೆಯ ವಿಚಾರವನ್ನೇ ಮಾಡುತ್ತಿದ್ದ ನಾನು, ಪಾಪುವಿನ ತಾಯಿಯ ಮುಖವನ್ನೇ ದಿಟ್ಟಿಸಿ ನೋದುತ್ತಿದ್ದೆ; ಇಷ್ಟು ಹೊತ್ತಿಗಾಗಲೆ ಆ ನಿಕ್ಕರ್ ನೆಲದ ಮೇಲೆ ಬಿದ್ದು ಸಾಕಷ್ಟು ಮಣ್ಣನ್ನು ಮೆತ್ತಿಕೊಂಡಿತ್ತು. ಪಾಪುವನ್ನ ಎಬ್ಬಿಸುವ ಗುಂಗಿನಲ್ಲಿದ್ದ ಅವಳಿಗೆ ಕಳೆದು ಹೋದ ವಸ್ತುವಿನ ಬಗ್ಗೆ ಹೆಚ್ಚು ಗಮನ ಇದ್ದ ಹಾಗೆ ಕಾಣಲಿಲ್ಲ. ಇನ್ನೇನು ಬಂತು ಸ್ಟೇಷನ್ನು ಅನ್ನುವಷ್ಟರಲ್ಲಿ ಏನೋ ಅಮೂಲ್ಯವಾದದ್ದನ್ನು ಕಳೆದು ಕೊಂಡವಳಂತೆ ಅತ್ತ-ಇತ್ತ ಹುಡುಕಾಡತೊಡಗಿದಳು; ನಾನಿನ್ನು ಆ ಮಣ್ಣು ಮೆತ್ತಿದುದನ್ನ ದುರುಗುಟ್ಟಿ ನೋಡುತ್ತಿರುವಾಗ ಅವಳ ಗಮನ ಆ ಬದಿಗೆ ಹಾದು, ನಾನು ನೋಡುತ್ತಿದ್ದೇನೆ ಎಂದೋ ಏನೊ, ಭಾವರಹಿತವಾದ ಮುಖದಿಂದ ಅದನ್ನು ಎತ್ತಿ,ಕೊಡವಿ ಚೀಲದಲ್ಲಿ ತೂರಿಸಿಕೊಂಡು ಗಂಡ-ಮಗುವಿನೊಡನೆ ರೈಲು ಇಳಿದು ಹೋದಳು.

(ಸಾರಾಂಶ : ರೈಲಿನಲ್ಲಿ ಮಕ್ಕಳಿರುತ್ತಾರೆ ಎಚ್ಚರಿಕೆ! ವಿಶೇಷವಾಗಿ, ರಾತ್ರಿ ಮಲಗುವಾಗ ಮೇಲಿನ ಸೀಟಿನಲ್ಲಿ ಮಕ್ಕಳಿಲ್ಲದಿರುವುದನ್ನು ಖಾತ್ರಿ ಮಾಡಿಕೊಳ್ಳಿರಿ. ಇದ್ದ ಪಕ್ಷದಲ್ಲಿ, ದಯವಿತ್ತು ಅವರಿಗೆ ಕೆಳಗಿನ ಸೀಟನ್ನು ಬಿಟ್ಟು ಕೊಡಿ. ಮಕ್ಕಳನ್ನು ಅಷ್ಟು ಹಗುರವಾಗಿ ತಗೆದುಕೊಳ್ಳುವ ತಪ್ಪನ್ನು ಮಾಡದಿರಿ)

2 comments:

  1. ಮಗು, ಕಾಗೆ, ಎಲ್ರಿಗೂ ನಿನ್ ಕಂಡ್ರೆ ತುಂಬ ಪ್ರೀತಿ ನೋಡು.. ಅದ್ಕೇ ನಿಂಗೇ ಹಂಗಾಗುತ್ತೆ :)

    ಅಂತೂ ನೀನು ಬ್ಲಾಗ್ ಬರೆದೆ ಅನ್ನು...

    ReplyDelete
  2. ಒಳ್ಳೇ ಕತೆಯಿಂದಲೇ ಪ್ರಾರಂಭಿಸಿದೀಯ. ಹೀಗೇ ಸಾಗಲಿ, ರೈಲು!;)

    ReplyDelete