Wednesday, May 7, 2008

ಭಿಕ್ಷೆ - ೧

ಇದು ನನ್ನ ಕಾಲೇಜು ದಿನಗಳಲ್ಲಿ ನಡೆದ ಘಟನೆ. ನಾನು ಮೊದಲನೇಯ ಸೆಮಿಸ್ಟರ್ ಇಂಜಿನಿಯರಿಂಗ್ ಮಾಡುತ್ತಿರುವ ಸಮಯ. ಪ್ರತಿ ದಿನದಂತೆ ನನ್ನ ಜೊತೆ ನನ್ನ ತಮ್ಮ ಹಾಗು ನಮ್ಮ ಮಿತ್ರ ( ಹಾಗು 'ಸೀನಿಯರ್') ಮುದಸ್ಸರ್, ಅಲಿಯಾಸ್ 'ಮುದ್ದು' ಕೂಡಿ ಮನೆಯಿಂದ ನಡೆದು ಬಸ್ ಸ್ಟಾಪಿನೆಡೆಗೆ ನಡೆದೆವು; ಮಾತನಾಡುತ್ತ, ಅತ್ತ-ಇತ್ತ ನೋಡುತ್ತ ಹತ್ತು ನಿಮಿಷಗಳಲ್ಲಿ ಸ್ಟಾಪಿನಲ್ಲಿದ್ದೆವು. ನೇರವಾಗಿ ನಮ್ಮ ಕಾಲೇಜಿಗೆ ಹೋಗುವುದಕ್ಕೆ ಒಂದೇ ಒಂದು ಸಿಟಿ ಬಸ್ಸು - ಅದು ನಮ್ಮ ಹಾಗು ಪಕ್ಕದ ಬಿ.ಡಿ.ಟಿ. ಕಾಲೇಜಿನ ಹುಡುಗರೇ ಹಿಂದೊಮ್ಮೆ ಗಲಾಟೆ ಮಾಡಿ ಬಿಡಿಸಿಕೊಂಡದ್ದು ಎಂದು ಸುದ್ದಿ. ಎಷ್ಟು ನಿಜವೆಂದು ಗೊತ್ತಿಲ್ಲವಾದರು ಮುದ್ದು ಈ ಮಾತನ್ನು ಹೇಳುವಾಗ ಸುಮ್ಮನೆ ಕೇಳುತ್ತ ಹುಡುಗಿಯರು ಮೋರಲ್ ಸಪೋರ್ಟ್ ಕೊಟ್ಟಿದ್ದಿರಬಹುದೆಂದು ಊಹಿಸಿದೆ.

ಆ ಬಸ್ಸು ನಮ್ಮ ಕಾಲೇಜಿನ (ಬಿ.ಐ.ಈ.ಟಿ ಕಾಲೇಜು) ದ್ದಷ್ಟೇ ಅಲ್ಲದೆ ಅನ್ಯ ಹಲವಾರು ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಣ ನಿಂತು, ಜೋತಾಡುತ್ತ ಕಾಲೇಜಿಗೆ ಹೋಗೋದು ಸರ್ವೇಸಾಮಾನ್ಯವಾದ ವಿಷಯ. ಅಂದು ಬಸ್ಸು ಇನ್ನು ಬಂದಿಲ್ಲವಾದ ಕಾರಣ ನಾವು ಹರಟುತ್ತ ನಿಂತಿದ್ದೆವು. ಅಷ್ಟರಲ್ಲಿ ಒಬ್ಬ ಹಳ್ಳಿಯ ಯುವಕ ನಮ್ಮೆಡೆಗೆ ನಡೆಯುತ್ತ ಬಂದ. ಬೆಳಗಿನ ಜಾವ ಹಳ್ಳಿಯವರು ತರಕಾರಿಯನ್ನು ಹೊತ್ತು ಹರಿಹರದಿಂದ ಬೇರೆಯ ಹಳ್ಳಿಗಳಿಗೆ ಹೋಗುವುದು ಮಾಮೂಲು; ಆದ್ರೆ ಬರಿಗಯ್ಯಲ್ಲಿ ನಮ್ಮೆಡೆಗೆ ಬರುತ್ತಿದ್ದ ಇವನನ್ನು ನೋಡಿ ಮುದ್ದುಗೆ ಸಂಶಯ ಬಂತು. ಹಳ್ಳಿಯವನು ಬಂದವನೇ ಶುರು ಮಾಡಿದ,"ಸರ್, ನಾನು ಬೇರೆಯ ಹಳ್ಳಿಯಿಂದ ಬಂದಿದ್ದೀನಿ. ನನ್ನ ಜೊತೆ ನನ್ನ ಮಕ್ಕಳಿಬ್ಬರು ಇದ್ದಾರೆ. ಯಾರೋ ನನ್ನಲ್ಲಿದ್ದ ದುಡ್ಡನ್ನೆಲ್ಲ ನಾನು ಮಲಗಿದ್ದಾಗ ತಗೆದುಕೊಂಡು ಹೋದರು - ಈಗ ಊರಿಗೆ ವಾಪಸ್ ಹೋಗಲು, ಮಕ್ಕಳಿಗೆ ಹೊಟ್ಟೆಗೆ ಹಾಕಲು ದುಡ್ಡಿಲ್ಲ. ಸ್ವಲ್ಪ ಸಹಾಯ ಮಾಡಿ". ಣನ್ನನ್ನೇ ನೋಡಿ ಹೇಳುತ್ತಿದ್ದ ಅವನನ್ನು ಗಮನಿಸಿದ ಮುದ್ದು ನನ್ನತ್ತ ನೋಡಿ ಹೇಳಿದ - "ಸುಮ್ನೆ ಹೇಳ್ತಿದ್ದಾನೆ-ಅವನಿಗೆ ಏನನ್ನು ಕೊಡೊಕ್ಕೆ ಹೋಗಬ್ಯಾಡ!". ನಾನು ಸಾಮಾನ್ಯವಾಗಿ ಯಾರಿಗೂ ದಾನ ಮಾಡುವುದಾಗಲಿ, ಭಿಕ್ಷೆ ಕೊದುವುದಾಗಲಿ ಮಾದುವುದಿಲ್ಲ; ಸ್ವಲ್ಪ ಸಮಯ ಯೋಚಿಸಿದೆ. ಯಾಕೋ ಕೊಡಬೇಕೆನಿಸಿ ೫ ರೂಪಾಯಿ ತಗೆದು ಕೊಟ್ಟೆಬಿಟ್ಟೆ. ಇದಾದ ಮೇಲೆ ನಡೆದದ್ದು ನನಗೆ ದಿಗ್ಭ್ರಮೆಯನ್ನುಂಟು ಮಾಡಿತು!

ಕಾಸನ್ನು ತಗೆದುಕೊಳ್ಳುವ ವರೆಗೆ ಮುಗ್ಧತೆಯನ್ನೇ ಬಿಂಬಿಸುತ್ತಿದ್ದ ಅವನ ಮುಖ, ಹಣ ಕೈಗೆ ಬಂದಾಕ್ಸಣ ಕುಹಕು ನಗುವನ್ನು ಒಳಗೂಡಿ "ನೀನು ಮೋಸ ಹೋದೆ" ಎಂದು ಮೂದಲಿಸಿ ಹೇಳುವಂತೆ ಕಾಣುತ್ತಿತ್ತು. ಒಮ್ಮೆಲೆ ಅವನ ಭಾವ-ಭಂಗಿ ಬದಲಾಯಿತು. ಸರಸರನೆ ನಡೆದು ಅವನು ಹತ್ತಿರದಲ್ಲಿಯೇ ನಿಂತಿದ್ದ ಒಬ್ಬನಿಂದ ನಾನು ಕೊಟ್ಟ ದುಡ್ಡಿನಿಂದ ಸಿಗರೇಟೊಂದನ್ನು ಕೊಂಡುಕೊಂಡ - ಅದನ್ನು ಹೊತ್ತಿಸಿ, ಸೇದಿ, ಹೊಗೆಯನ್ನು ಸುರುಳಿ ಸುರುಳಿಯಾಗಿ ಬಿಡುತ್ತ ನಮ್ಮತ್ತ ನೋಡುತ್ತಿದ್ದ. ನನ್ನ ಮುಟ್ಠಾಳತನಕ್ಕೆ ನನಗೆ ನಾಚಿಕಯೊಡನೆ ದುಃಖವು ಆಗುತ್ತಿದ್ದರು ತಲೆಯಲ್ಲಿ ಬೇರೆಯ ವಿಚಾರಗಳು ಹೊರಡುತ್ತಿದ್ದುವು - ವಿಚಾರ ಮಾಡದೆ ಕೆಲಸಗಳನ್ನು ಮಾಡಬಾರದೆಂಬ ಪಾಠವನ್ನು ಕಲೆತಿದ್ದೆನಲ್ಲ! ಮುದ್ದು ಹೇಳಿದ ಹಾಗೆ ಸುಮ್ಮನಿದ್ದಿದ್ದರೆ...

(ಸಾರಾಂಶ : ಜನ ಒಳ್ಳೆಯವರೇ ( ನಾನೂ ಅವರಲ್ಲೊಬ್ಬನು ); ಕಾಲ ಯಾರಿಂದ ಏನನ್ನು ಮಾಡಿಸುತ್ತದೆ ಎಂಬುದು ಊಹಿಸುವುದು ಕಷ್ಟ. ಹೊಟ್ಟೆ ಪಾಡಿಗೋ, ಹತ್ತಿಸಿಕೊಂದ ಚಟಕ್ಕೋ ಅವರು ಏನನ್ನಾದರು ಮಾಡಲು ಹಿಂಜರಿಯರು; ಎಚ್ಚರಿಕೆಯಿಂದ ಇರುವುದು ನಮ್ಮ ಕರ್ತವ್ಯ. )

No comments:

Post a Comment