Monday, December 14, 2009

ಅವನು ನಿನಗೆ ಗೊತ್ತಾ??

ನವೆಂಬೆರ್ - ಡಿಸೆಂಬರ್ ೨೦೦೭ ಇರಬೇಕು ಅದು... ಸರಿಯಾಗಿ ನೆನಪಿಲ್ಲ ಆದರೆ ರಜೆ ಇದ್ದ ಕಾರಣ ಮನೆಗೆ ಹೋಗುತ್ತಿದ್ದದ್ದು ನೆನಪಿದೆ. ಇಬ್ಬರು ಸಹಪಾಠಿಗಳು, ವಿಜಯ ಹಾಗು ನಾನು ಬೆಂಗಳೂರಿನ ಬಸ್ ತಂಗುದಾಣದಲ್ಲಿ ನಮ್ಮ ಬಸ್ಸು ಬರುವ ಹಾದಿಯನ್ನು ಕಾಯುತ್ತ ಕುಳಿತಿದ್ದೆವು. ಎಂದಿನಂತೆ, ಜನ ತುಂಬಿ ತುಳುಕಾಡುತ್ತಿದ್ದ ಆ ಜಾಗ ನನ್ನ ಕಣ್ಣುಗಳಿಗೆ ಏನು ಹೊಸತನ್ನು ತಂದಿರಲಿಲ್ಲ. ಅಷ್ಟರಲ್ಲಿ ನಮ್ಮ ಬಸ್ಸು ಬಂದೇ ಬಿಟ್ಟಿತು. ಬೇಸರ ಕಳೆದು ಈಗ ಸುಮ್ಮನೆ ಮಲಗಬಹುದು ಅಂದುಕೊಂಡು ಬಸ್ಸು ಹತ್ತಲು ಅಣಿಯಾದೆ. ಅಷ್ಟರಲ್ಲಿ ನಡೆದ ಈ ಘಟನೆ ನನಗೆ ಅಚ್ಕಾರಿಯನ್ನು ಮೂಡಿಸಿತು.

ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...
ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#& ಅಲ್ಲ?"
ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."
ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "
"ನಾನು *&%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."
"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"
"ಹೌದು... ನೀವು?"
.....
ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"
ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?
ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"
ಅವಳು, "ಇಲ್ಲಪ್ಪ... ಅವನು ಅಷ್ಟು ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.

ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...

2 comments:

  1. I would too .. but if I recognise the face and not the name .. I would simply do what ur friend did :D

    ReplyDelete
  2. hmmm... that explains my lack of social interaction :) lol

    ReplyDelete