Monday, February 7, 2011

ಕವನ - ವರ್ಣನೆ

ಬರೆದದ್ದು ಪ್ರಥಮ ವರ್ಷ, ಪದವಿ ಪೂರ್ವ ಕಾಲೇಜಿನಲ್ಲಿದಾಗ. ಕೇವಲ ಕಾಲ್ಪನಿಕ! ಪ್ರಶ್ನೆಗಳನ್ನು ಕೇಳಬೇಡಿ - ನನ್ನ ಹತ್ತಿರ ಉತ್ತರಗಳಿಲ್ಲ. ಆಗ ಇದನ್ನು ಬರೆದಾಗ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಿದ್ದೆ - ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು - ಆ ಪುಟಗಳನ್ನು ಮತ್ತೆ ತಿರುವಿ ಹಾಕಿದಾಗ ಇದನ್ನು ಇಲ್ಲಿ ಬರೆಯಬೇಕೆನಿಸಿತು...

ಕವನ : ~

ಆ ನಿನ್ನ ಚಂಚಲತೆಗೆ ಸೋತೆ ನಾನು
ನಿನ್ನನ್ನು ತಡೆಯಲು ಇಲ್ಲವಲ್ಲ ಯಾವ ಕಾನೂನು
ನಿನ್ನ-ನನ್ನ ಸಂಬಂಧ ಬಿಡಿಸಲಾಗ ನಂಟು
ಬ್ರಹ್ಮನೂ ತಲೆ-ಕೆಡಿಸಿಕೊಂಡ ಜಟಿಲ ಗಂಟು

ನಿನ್ನ ಮೃದು ತನುವ ಹಾಡಿ ಹೊಗಳಲೆ
ನನ್ನ ಬಿಟ್ಟು ತೊಲಗು ನೀನೀಗಲೆ
ಆ ನಿನ್ನ ಬಳುಕು ನಡೆಗೆ ಸೋತೆ ನಾನು
ಜನರೆಲ್ಲ ನಕ್ಕರೂ ಏಕೆ ಬಿಡಲೊಲ್ಲೆ ನೀನು

ನೀನು ತೆಳು - ಬಿಳುಪು ಮಿಶ್ರಿತ ರನ್ನ
ಕರೆತಂದೆಯಲ್ಲ ಜೊತೆಗೆ ನಿನ್ನ ಅಣ - ತಮ್ಮಂದಿರನ್ನ
ಬಂದು, ಬೇಗನೆ ಹೋಗದವರನ್ನೆಲ್ಲ
ಅದ್ಹೇಗೆ ತಿಳಿ ಹೇಳುವುದು, ನನಗೆ ಗೊತ್ತಿಲ್ಲ

ನೀನೊಬ್ಬಳೇ ಬಂದರೆ ಪರ್ವಾಗಿಲ್ಲ
ಜೊತೆಗೆ ತರುತೀಯಲ್ಲ ತಲೆನೋವನ್ನೆಲ್ಲ
ನೀನು ಚಪಲತೆಯಿಂದ ಕೂಡಿದಾಗ ಮಾತ್ರ
ನನ್ನ ಸಿಟ್ಟಿಗೆ ನೀನೇ ಪಾತ್ರ

ಅಂದು ಕೇಳಿದ್ರು ಡಾಕ್ಟರು ನಿನ್ನ
ನಾನೆಂದೆ, ನನ್ನ-ನಿನ್ನದು ಅಮರ ಪ್ರೇಮ
ನಿನ್ನೊಂದಿಗೆ ನಾನು-ನನ್ನೊಂದಿಗೆ ನೀನು, ಜೊತೆಯಲ್ಲಿ
ನಮ್ಮೀ ಐಕ್ಯಕ್ಕೆ, ಅಯ್ಯೋ, ಆಕೆ ಬರಲಿಲ್ಲ ಕಲಿ?

ನಿನ್ನ ಪ್ರಯತ್ನಗಳನ್ನೆಲ್ಲ ಮಾಡಲು ವಿಫಲ
ವೈದ್ಯ ಮಹಾಶಯರು ಬಳಸಿದರು ತಮ್ಮ ತಪೋಬಲ
ಅವಳ ಮನದಲ್ಲೆದ್ದಿತೊಂದು ಬಲವಾದ ಶಂಕೆ
ವೈದ್ಯರ ವಿಷ ಬೀಜ ಹೊಡೆಯಲಿಲ್ಲ ಮೊಳಕೆ

ನಾ ಹೇಳಿದೆ ನಿನ್ನ ಆಗಮನದಿಂದ ಬೇಸರಗೊಳ್ಳಲಿಲ್ಲ ಚಿನ್ನ
ಆದರೆ ಆ ನಿನ್ನ ಚಪಲತೆ, ಹಾಕಿತು ನಿನ್ನ ನೀಯತ್ತಿಗೆ ಕನ್ನ
ಮರುದಿನದ ಆ ನಿನ್ನ ಜಟಿಲತೆ, ಕಾಡಿಸಿ ಕೈಬಿಟ್ಟಿತು ನನ್ನ
ಅಯ್ಯೋ, ಹೇಗೆ ತಡೆಯಲಿ ನಿನ್ನ ಕೆಲಸಗಳನ್ನ

ಸಕಲ ಅಸ್ತ್ರಗಳ ಬಳಕೆಯಾಯಿತು
’ಲೋಕಲ್’ - ಲಗಾಟಿ ಹೊಡೆಯಿತು
’ಹರ್ಬಲ್’ - ಶೆಟೆದು ಹೋಯಿತು
’ರಾಯಲ್’ - ಜೇಬಿಗೆ ತೂತು ಹೊಡೆಯಿತು

ನಿನ್ನ ಆ ಗಲಭೆಗೆ ಕೆಟ್ಟಿತು ಈ ತಲೆ
ಇನ್ನೇನಾದರು ಮಾಡಬೇಕೆನ್ನುವಷ್ಟರಲ್ಲೆ
ಹೊರಟು ಹೋದರು ನಿನ್ನ ಜೊತೆಯವರು
ಕೊನೆಗೂ ಕಡಿಮೆಯಾಯಿತು ನಿನ್ನ ಜೋರು

ಅಂದಹಾಗೆ, ದುಃಖಿಸಬೇಡ ಪ್ರಿಯೆ
ಅಡೆತಡೆ ಇಲ್ಲದೆ, ನಿರಂತರವಾಗಿ ನಡೆಸು ನಿನ್ನ ಕ್ರಿಯೆ
ಮೂಗಿನೊಳ ರಂಧ್ರದೊಳಗೆ ಮುತ್ತಿನಂತೆ ನೀನು ಹೊಳೆಯುತ್ತಿರುವೆ
ನೆಗಡಿ ಬಂದಾಗ ಮಾತ್ರ, ಎಲ್ಲರ ಮನದೊಳಗೆ ನೀ ಕೊಳೆಯುತ್ತಿರುವೆ

1 comment: